Click here to Download MyLang App

ಕನಸಿನಾಳ - ಬರೆದವರು : ರಾಜು

ಆಕಾಶ ಮನೆಗೆ ಬಂದಾಗ ರಾತ್ರಿ 1 ಗಂಟೆ. ರಾತ್ರಿ ಊಟ ಹೊರಗಡೇನೆ ಆಗಿತ್ತು. ಯಾಕೋ ಸ್ವಲ್ಪ ಜಾಸ್ತಿ ತಿಂದೆ ಅನಿಸಿತ್ತು ಅವನಿಗೆ. ಒಂದು ನಿಂಬೆಹಣ್ಣನ್ನು ಕತ್ತರಿಸಿ. ಜ್ಯೂಸ್‌ ಮಾಡಿ ಕುಡಿದು ಹಾಸಿಗೆ ಸೇರಿದ. ಒಂದು ಅರ್ಧಗಂಟೆ ಮೊಬೈಲ್‌ ನೋಡಿ ತದನಂತರ ನಿದ್ದೆ ಮಾಡಲು ಹೋದ, ಯಾಕೋ ಕಣ್ಣಿಗೆ ನಿದ್ದೆ ಹತ್ತಲಿಲ್ಲ. ಹಾಸಿಗೆ ಮೇಲೆ ಹೊರಳಾಡಿದ. ಅವನ ಮನಸ್ಸು ಹಿಂದಿನ ರಾತ್ರಿ ಬಿದ್ದ ಕನಸಿನ ಬಗ್ಗೆ ಚಿಂತಿಸುತ್ತಿತ್ತು, ಆ ಕನಸು ಏನನ್ನೋ ಅಪೇಕ್ಷಿಸುತ್ತಿತ್ತು, ಯಾವುದೋ ಒಂದರ ಹುಡುಕಾಟವಿತ್ತು. ಅದು ಏನು ಅನ್ನೋದು ಸ್ಪಷ್ಟವಾಗಿ ಗೋಚರವಾಗಲಿಲ್ಲ.

ಬೆಳಿಗ್ಗೆ ಎದ್ದು, ತಿಂಡಿ ತಿಂದು ಕಛೇರಿಗೆ ಹೋದ, ಅಲ್ಲಿಯ ಕೆಲಸದ ಒತ್ತಡದಿಂದ ಅವನ ಹುಡುಕಾಟ ನಿಂತಿತ್ತು. ಮತ್ತೆ ಅದೇ ಸಂಜೆ ಅದೇ ರಾತ್ರಿ ಊಟ ಮುಗಿಸಿ ಮಗ್ಗಲು ಹೊರಳಿದ ಚೆನ್ನಾಗಿ ನಿದ್ದೆ ಹತ್ತಿತ್ತು.

ಇವನಿಗೆ ದಿನೇ ದಿನೇ ಒಂದು ಕನಸು ಕಾಡುತ್ತದೆ. ಆ ಕನಸಾದ್ರು ಏನು..? ಅವನ ಹುಡುಕಾಟವೇ..? ಅಥವಾ ಭ್ರಮೆಯೇ...?.

ಬೆಳಿಗ್ಗೆ ಎಚ್ಚರವಾದಾಗ ಏನೋ ಭಾರವಾದ ಮನಸ್ಸು. ಆದರೆ ಈಗ ಏಳಬೇಕೋ ಬೇಡವೋ ಎಂಬ ಅನಿಶ್ಚಿತ ಪ್ರಶ್ನೆ ಮಸುಕಾಗಿ ಮುಂದೆ ನಿಂತಿತು.

ಅದೇ ಭಾರವಾದ ಮನಸ್ಸಿನಿಂದ ಕನಸಿನ ಜಾಡು ಹಿಡಿದು ಹುಡುಕಾಟದಲ್ಲಿ, ಅದರ ಜೊತೆ ಜೊತೆಗೆ ದೈನಂದಿನ ಚಟುವಟಿಕೆಯಲ್ಲಿ ತೊಡಗಿದ.

ಮತ್ತೆ ಮತ್ತೆ ಏನೇನೋ ಕನಸಿನ ಒಂದೊಂದು ಎಳೆಯು ತಟ್ಟನೆ ನೆನಪಾಗುತ್ತಿತ್ತು. ಆದರೆ ಎಲ್ಲವೂ ಅಸ್ಪಷ್ಟ ಒಂದಕ್ಕೊಂದು ಸಂಬಂಧವೇ ಇಲ್ಲ. ಒಣ ಹೊಲದ ಬದುಗಳಂತೆ ಸುತ್ತಿ ಸುತ್ತಿ ಎಲ್ಲ ಯೋಚನೆಗಳು ಬಂದು ನಿಲ್ಲುತ್ತಿದ್ದವು.

ಮನಸ್ಸಿನಲ್ಲಿ ತಾನೇ ಅಂದುಕೊಂಡ, ಮನುಷ್ಯ ಬರೀ ಆಲೋಚನೆ ಮತ್ತು ಕನಸಿನಲ್ಲೆ ಇರಬಾರದು ಬದುಕೋದನ್ನು ಕೂಡ ನೋಡಬೇಕು. ಅಸ್ಪಷ್ಟ ಕನಸಿನಲ್ಲಿ ಅದೇನೇನು ಅಡಗಿದೆಯೋ.? ಎಂದು ಕೊಂಡು ಮತ್ತೆ ಕೆಲಸದಲ್ಲಿ ನಿರತ.

“ಸಮಯಕ್ಕೆ ಕಾದು ಅಭ್ಯಾಸವಿರಲಿಲ್ಲ. ಬೆಳಿಗ್ಗೆ 9.30 ಆಗಿತ್ತು. ಕಛೇರಿಗೆ ಹೊತ್ತು ಹಾಗಿತ್ತೆಂದು ತಿಂಡಿ ತಿನ್ನದೆ ಹೊರಟ. ಅಲ್ಲಿನ ಕೆಲಸದಲ್ಲಿ ನಿರತ. ಬರುವ ದಾರಿಯಲ್ಲೇ ತಿಂಡಿ ತಿಂದು ಮುಗಿಸಿ ಆಗಿತ್ತು. ಮತ್ತೆ ಮತ್ತೆ ನೆನಪು ಕಾಡತೊಡಗುವುದು. ಅಸ್ಪಷ್ಟ, ಅದು ಕನಸು ನೆನಪೇ ಇರೋದಿಲ್ಲ. ಆದರೆ ಕನಸು ಯಾವತ್ತೂ ಸ್ಪಷ್ಟವಾಗಿ ಅರ್ಥ ಅಗೋದೇ ಇಲ್ವಾ.? ಯಾರಿಗೆ ತಾನೇ ಅರ್ಥವಾಗಿದೆ.?

ಗೋಜಾಲಾದ ಮನಸ್ಸಿಗೆ ಏನು ಸರಿಯಾಗಿ ಕಾಣ್ತಿಲ್ಲ ಕಂಡರು ಅದರ ಒಳ ಅರ್ಥವಾಗಿಲ್ಲ.

ಸಂಜಯ ಬಂದ, ಯಾಕೆ ಆಕಾಶ್‌ ಏನಾಯ್ಡು ತುಂಬಾ ಗಾಢವಾಗಿ ಯೋಚನೆ ಮಾಡ್ದಾ ಇದ್ಯಾ. ಏನು ಇಲ್ಲ ಸಂಜಯ್‌ 2-3 ದಿನದಿಂದ ನನಗೆ ಕನಸು ಬೀಳ್ತಿದೆ ಆ ಕನಸಿಗೆ ನನಗೆ ಸಂಬಂಧ ಇಲ್ಲ ಅನ್ನಿಸುತ್ತದೆ, ಅದು ಸ್ಪಷ್ಟವಾಗಿ ಕೂಡ ಅರ್ಥ ಆಗ್ತಿಲ್ಲ ಒಂದು ವೇಳೆ ಸಂಬಂಧವಿರುವುದೇ ಆದರೆ ಯಾವುದು ನೆನಪಿಗೆ ಬರ್ತಿಲ್ಲ ಯಾಕೆ.?

ನೋಡು ಆಕಾಶ್‌ ಕನಸು ಅನ್ನೋದು ಒಂದು ಭ್ರಮೆ ಅಥವಾ ನಮ್ಮ ಕಲ್ಪನೆ ಅಷ್ಟೇ.

ಒಬ್ಬ ವ್ಯಕ್ತಿ ನಿದ್ರೆಯಲ್ಲಿ ಅನುಭವಿಸುವ ಕಥೆ, ಇದು ಕಾಲ್ಪನಿಕವಾಗಿರುತ್ತದೆಯಾದರೂ ನಿಜ ಜೀವನಕ್ಕೆ ಸಂಬಂಧಿಸಿರುತ್ತದೆ. ಕೆಲವು ಕನಸುಗಳು ಮನಸ್ಸಿಗೆ ಮುದವನ್ನು ನೀಡಿದರೆ ಕೆಲವು ಕಹಿ ಅನುಭವಗಳನ್ನು ಕೊಡುತ್ತವೆ. ಕೆಲವರಲ್ಲಿ ಇದು ಎಚ್ಚರವಾದ ನಂತರವೂ ಜ್ಞಾಪಕದಲ್ಲಿದ್ದರೆ, ಕೆಲವರಿಗೆ ಅರೆಬರೆ ಜ್ಞಾಪಕವಿರುತ್ತದೆ. ಒಂದು ಕನಸಿನ ಅವಧಿ ಸುಮಾರು 5 ರಿಂದ 50 ನಿಮಿಷವಿರಬಹುದು.

ಒಬ್ಬ ವ್ಯಕ್ತಿ ತನ್ನ ಜೀವನಾವಧಿಯಲ್ಲಿ ಸುಮಾರು 1 ಲಕ್ಷಕ್ಕೂ ಹೆಚ್ಚು ಕನಸುಗಳನ್ನು ಕಾಣುವನು. ಸ್ಪಷ್ಟ ಕನಸು ಎಂದರೆ, ಕನಸುಗಳು ಕಾಣುವಾಗ ಕನಸುಗಾರನಿಗೆ ತಾನು ಕನಸು ಕಾಣುತ್ತಿದ್ದೇನೆಂದು ಗೊತ್ತಿರುತ್ತದೆ. ಕನಸು ನಮಗೆ 2 ಕಾರಣಗಳಿಂದ ಬೀಳುತ್ತದೆ/ಬೀಳಬಹುದು.

ಒಂದು, ನಾವು ಯಾವ ವಿಷಯದ ಬಗ್ಗೆ ಹೆಚ್ಚು ಆಲೋಚಿಸುತ್ತೇವೆಯೋ ಅಥವಾ ಚಿಂತೆ ಮಾಡುತ್ತೇವೆಯೋ ಆ ವಿಷಯ ನಮಗೇ ತಿಳಿಯದಂತೆ ನಮ್ಮ ಮನಸ್ಸಿನ ಆಳದವರಗೆ ತಲುಪಿರುತ್ತದೆ. ಹಾಗಾಗಿ ಅದು ಕನಸ್ಸಿನಲ್ಲಿ ಕಾಣಬಹುದು.

ಎರಡು, ಕನಸು ವ್ಯಕ್ತಿಯ ಜೀವನದಲ್ಲಿ ಮುಂದೆ ನಡೆಯುವ ಕಾರ್ಯದ ಮುನ್ಸೂಚನೆಯೂ ಆಗಿರಬಹುದು.

ಚಿಂತೆ ಮಾಡಬೇಡ ಬರೀ ಕನಸು ತಾನೇ ಯಾಕೆ ಭಯ ಬೀಳ್ತೀಯಾ ಬಾ ಒಂದು ಕಾಫಿ ಕುಡಿದು ಬರೋಣ, ರಿಲ್ಯಾಕ್ಸ್‌ ಆಗುತ್ತೆ.

ಇಬ್ಬರು ಮೇಲಿರುವ ಕೆಫೆಟೇರಿಯದಲ್ಲಿ ಕಾಫಿ ಕುಡಿದು ಮತ್ತೆ ಕೆಲಸದಲ್ಲಿ ತೊಡಗಿದರು.

ಆಕಾಶ್‌ ಸಂಜೆ ಮನೆಗೆ ಬೇಗ ಬಂದ. ಯಾಕೋ ತಲೆನೋವು ಗಟ್ಟಿಯಾಗಿ ತಬ್ಬಿ ಹಿಡಿದಿತ್ತು. ಒಂದು ಚಹಾ ಮಾಡಿ ಕುಡಿದು ಸ್ವಲ್ಪ ವಿಶ್ರಮಿಸಿ ಎದ್ದು ಊಟ ಮಾಡಿ ಹಾಸಿಗೆ ಹಿಡಿದ. ತಲೆನೋವು ಸ್ವಲ್ಪ ಇಳಿದಂತಿತ್ತು ಮತ್ತೆ, ಬಂದ ಕನಸಿನ ಕೋಟೆಗೆ ಹಾರಿದ ಒಂದೊಂದೇ ಎಳೆಯು ನೆನಪಿನ ಜೋಳಿಗೆ ತುಂಬುತ್ತಿತ್ತು. ಈ ಕನಸು ನನ್ನದು, ಈ ಪ್ರಶ್ನೆಗಳು ನನ್ನವು, ನಾನೇ ಉತ್ತರ ಹುಡುಕಿಕೊಳ್ಳಬೇಕು. ಚಿಂತೆಯನ್ನು ಹರಿಯಲು ಬಿಡದೆ ನಿಶ್ಚಿಂತೆಯಲ್ಲಿ ನಿದ್ದೆ ಮಾಡಿದ. ಮತ್ತೆ ಕನಸು ಯಾವುದೇ ಮುಲಾಜು, ಹಂಗಿಲ್ಲದೆ ಅವನ ಯೋಚನೆಗಳ ಸ್ವರೂಪವನ್ನು ಪಡೆದು ಒಳಹೊಕ್ಕಿತು.

ಮಾರನೇ ದಿನವೇ ಕಛೇರಿಗೆ ರಜೆ ಹಾಕಿ ಮನಃಶಾಂತಿಯನ್ನು ಹುಡುಕಿ ಹೊರಟ. ದೇವಸ್ಥಾನದ ಗಂಟೆ ಬಾರಿಸುತ್ತಿದ್ದಂತೆ ಪ್ರಶ್ನೆಗಳು ಮೇಲೆದ್ದವು. ಪೂಜೆ ಮುಗಿದ ನಂತರ ಅಲ್ಲಿಯೇ ಒಂದು ಜಾಗದಲ್ಲಿ ಕುಳಿತುಕೊಂಡ. ಸಂಜಯ ಹೇಳಿದ ಮಾತುಗಳನ್ನು ತೀವ್ರವಾಗಿ ಯೋಚಿಸಿ ಅದರ ಒಳ ಅರ್ಥವನ್ನು ಹುಡುಕಲು ಮುಂದಾದ. ಹೌದು.

ಕನಸಿನ ಘಾತಗಳು ಭವಿಷ್ಯದ ಜೊತೆಗೆ ತಳುಕು ಹಾಕಿಕೊಂಡಿದ್ಯಾ.? ನಾವು ಯಾವ ವಿಷಯದ ಬಗ್ಗೆ ಹೆಚ್ಚು ಆಲೋಚಿಸುತ್ತೇವೆಯೋ ಅಥವಾ ಚಿಂತೆ ಮಾಡುತ್ತೇವೆಯೋ ಆ ವಿಷಯ ನಮಗೆ ತಿಳಿಯದಂತೆ ನಮ್ಮಮನಸ್ಸಿನ ಆಳದವರೆಗೆ ತಲುಪಿರುತ್ತದೆ. ನನಗೆ ಈಗ ಸ್ಪಷ್ಟವಾಗಿ ಅರಿವಾಗ್ತಿದೆ.

ಆ ಕನಸು ನನ್ನ ಹತಾಶೆ, ಜವಾಬ್ದಾರಿ, ಅದೊಂದು ಗುರಿ, ವಾಸ್ತವ, ಭವಿಷ್ಯ, ಕರ್ತವ್ಯ ಹೀಗೆ ಎಲ್ಲವೂ ಒಳಗೊಂಡ ಯೋಚನೆಗಳ ಸರಮಾಲೆ.

ನಾನು ಕೂಡ ಪ್ರತಿಬಾರಿ ನನ್ನ ಗುರಿ, ಆಸೆ, ಯಶಸ್ಸು, ಸಾಧನೆಯ ಬಗ್ಗೆ ಚಿಂತಿಸುತ್ತಿರುತ್ತೀನಿ ಅದಕ್ಕೆ ಈ ಬಾಲಿಶವಾದ ಕನಸುಗಳೇ ಯೋಚನೆಯ ಪ್ರತಿರೂಪ. ಯಾವಾಗಲೂ ದೀಪದ ಬುಡ ಕತ್ತಲು ಯಾಕೆ.? ಸ್ಪಷ್ಟ ಬೆಳಕಿಗೆ ಬೆಳಕಿನಲ್ಲಿ ಬೆಲೆಯಿಲ್ಲ ಆದರೆ, ಕತ್ತಲೆಯಲ್ಲಿ ಸಣ್ಣ ದೀಪಕ್ಕೂ ಹಿರಿದಾದ ಬೆಲೆಯಿದೆ. ಹಾಗೆ, ನಮ್ಮ ಯೋಚನೆಗಳು ಕನಸಿನಲ್ಲಿ ಅಸ್ತಿತ್ವ ಹುಡುಕುತ್ತವೆ. ಜೀವನದಲ್ಲಿ ಬರೀ ಕನಸುಗಳನ್ನೇ ಕಾಣ್ತಾ ಇದ್ರೆ ನನಸು ಮಾಡೋದು ಯಾವಾಗ.? ಕನಸು ಒಂದು ಕಲ್ಪನೆ, ಭ್ರಮೆಯಾಗಬಾರದು ಅದೊಂದು ಗುರಿಯ, ಸಾಧನೆಯ, ಒಳ್ಳೆಯ ಭವಿಷ್ಯದ ಬಗ್ಗೆ ಕನಸಾಗಬೇಕು. ಆ ಕನಸನ್ನು ನನಸು ಮಾಡುವ ಛಲ ಹೊಂದಬೇಕು.

ಆಕಾಶದಲ್ಲಿ ಹಕ್ಕಿ ತನ್ನ ರಕ್ಕೆ ಬಿಚ್ಚಿ ಹಾರುತಿರುವುದನ್ನು ಕಂಡು ಒಂದು ಕಿರು ನಗೆ ನಕ್ಕ. ನಿಶ್ಚಿಂತೆಯಿಂದ ನಿರಾಳವಾದ ಮನಸ್ಸಿನಿಂದ ಮನೆ ದಾರಿ ಹಿಡಿದ.

“ಕನಸು ಕಾಣುವ ಮುನ್ನ ಯೋಚಿಸಿ ಅದರ ಸಾಧನೆಗೆ ತುಂಬಾ ಇರುಳು ಹಗಲುಗಳ ನಿದ್ದೆಯ ಬಲಿ ಬೇಕಾಗುತ್ತದೆ”.