Click here to Download MyLang App

ಕಥೆಯಲ್ಲ ಜೀವನ - ಬರೆದವರು : ಸುಮ ಆರ್

ನನ್ನ ಅನುಮಾನ ನಿಜವಾಗಿತ್ತು. ಪತ್ರಿಕೆಯ ಮೂಲೆಯಲ್ಲಿ ಆ ಸುದ್ದಿ ಪ್ರಕಟವಾಗಿತ್ತು. ಮಾರತಹಳ್ಳಿಯ ಪ್ರಕಾಶ್ ಗ್ಯಾಲಕ್ಸಿ ಅಪಾರ್ಟ್ಮೆಂಟಿನಲ್ಲಿ, 26ನೇ ಮಹಡಿಯಿಂದ ಆಕಸ್ಮಿಕವಾಗಿ ವೀಲ್ ಚೇರ್ ನಿಂದ ಬಿದ್ದು,
ಶ್ರೀ ರಮೇಶ್ ಪ್ರಭು ಎಂಬ 58 ವರ್ಷದ ವ್ಯಕ್ತಿ ಸಾವು ಎಂದು. ಜೊತೆಗಿದ್ದ ಭಾವಚಿತ್ರ ನೋಡಿದಾಗ ಖಾತ್ರಿಯಾಯಿತು ಅದು ಲೀಲಳ ಗಂಡನೇ ಎಂದು. ಮತ್ತೆ ಮತ್ತೆ ನೋಡಿ ಖಚಿತಪಡಿಸಿಕೊಂಡವಳಿಗೆ, ನಿನ್ನೆ ಅಷ್ಟೇ ಲೀಲಾ ಫೋನಿನಲ್ಲಿ ಮಾತನಾಡಿದ್ದೆಲ್ಲಾ ಸಿನೆಮಾ ರೀಲಿನಂತೆ ಸುತ್ತತೊಡಗಿತು.
ಬಾಲ್ಯದ ಗೆಳತಿಯರಾದ ನಾನು ಮತ್ತು ಲೀಲಾ, ಒಂದನೇ ತರಗತಿಯಿಂದ ಪದವಿಯವರೆಗೂ ಒಟ್ಟಿಗೆ ಓದಿದವರು. ಹಾಗಾಗಿಯೇ ಗಾಢವಾದ ಸ್ನೇಹ. ವಿದ್ಯಾಭ್ಯಾಸದಲ್ಲಿ ಮುಂದಿದ್ದ ನನಗೆ, ಪದವಿ ಮುಗಿದಾಕ್ಷಣವೇ ಸುಲಭದಲ್ಲಿ ಸರ್ಕಾರೀ ನೌಕರಿ ಸಿಕ್ಕಿತ್ತು. ಮರು ವರ್ಷವೇ ಮದುವೆ ಆಗಿ ಮೈಸೂರಿನಲ್ಲಿ ನೆಲೆ ನಿಂತೆ. ಸಾಧಾರಣ ಓದುತ್ತಿದ್ದ ಲೀಲಳಿಗೆ ಯಾವುದೇ ಕೆಲಸ ಸಿಗದೆ, ಪದವಿ ಮುಗಿದ ತಕ್ಷಣವೇ ಬೆಂಗಳೂರಿನ ವ್ಯಾಪಾರಸ್ಥರೊಬ್ಬರಿಗೆ ಮದುವೆ ಮಾಡಿಕೊಟ್ಟಿದ್ದರು ಅವಳ ಪೋಷಕರು. ಪ್ರೀತಿಯ ಸ್ನೇಹಿತೆಯರಾದರೂ ಮದುವೆಯ ನಂತರ, ಮೊಬೈಲು ಇರದ ಕಾಲದವರಾದ್ದರಿಂದ ನಮ್ಮಿಬ್ಬರ ನಡುವೆ ಸಂಪರ್ಕವೇ ತಪ್ಪಿ ಹೋಗಿತ್ತು. ನಾನು ಗಂಡ, ಮಗ, ಆಫೀಸು, ಮನೆ ಎಂದು ನನ್ನದೇ ಲೋಕದಲ್ಲಿ ಮುಳುಗಿ ಹೋಗಿದ್ದೆ. ಸುಮಾರು 18 ವರ್ಷಗಳ ನಂತರ ನಮ್ಮ ಪದವಿ ಗೆಳೆಯ ಗೆಳತಿಯರ ವಾಟ್ಸಪ್ ಗ್ರೂಪ್ ನಿನ್ನೆ ಶುರುವಾಗಿ, ಅದರಲ್ಲಿ ಲೀಲಾ ಸಿಕ್ಕಾಗ, ನನ್ನ ಆನಂದಕ್ಕೆ ಪಾರವೇ ಇರಲಿಲ್ಲ. ಮೊಬೈಲ್ ನಂಬರ್ ವಿನಿಮಯವಾಗಿದ್ದೇ ನನಗೆ ಫೋನಾಯಿಸಿದ್ದಳು ಲೀಲಾ. ನಾನು ಹಲೋ ಅನ್ನುತ್ತಿದ್ದಂತೆ, ಅವಳ ದುಃಖದ ಕಟ್ಟೆ ಒಡೆದು ಬಿಟ್ಟಿತ್ತು. ಬಹಳ ವರ್ಷಗಳ ನಂತರ ಆತ್ಮೀಯ ಗೆಳತಿಯೊಂದಿಗೆ ಮಾತನಾಡುತ್ತಿದ್ದೇನೆಂಬ ಸಂಭ್ರಮದಲ್ಲಿದ್ದ ನನಗೆ, ಅವಳ ಅಳು ಆಘಾತ ತಂದಿತ್ತು. ಸುಖಕ್ಕೆ ಮಾತು ಕಡಿಮೆ.. ದುಃಖಕ್ಕೆ ನಿಲ್ಲದ ಮಾತು. ಹಾಗಾಗಿ ನನಗೆ ನನ್ನ ಬಗ್ಗೆ ಹೆಚ್ಚಿಗೆ ಹೇಳಿಕೊಳ್ಳಲು ಏನಿರಲಿಲ್ಲವಾದರೂ, ಲೀಲಾಳ ದಯನೀಯ ಬದುಕಿಗೆ ಕೇಳುವ ಕಿವಿಯ ಕೊರತೆ ಇತ್ತು.
ಸುದೀರ್ಘ ಎರಡು ಗಂಟೆಗಳ ಕಾಲದ ನಮ್ಮ ಫೋನ್ ಸಂಭಾಷಣೆ ಮುಗಿಸಿ, ನಾನು ಮೊಬೈಲು ಕೆಳಗಿಡುವಾಗ, 18 ವರ್ಷಗಳ ಅವಳ ವೈವಾಹಿಕ ಬದುಕಿನ ನರಕವೆಲ್ಲಾ ಅವಳ ಬಾಯಿಂದ ನನ್ನ ತಲೆಗೆ ಸೇರಿ, ಕಣ್ಣೀರಾಗಿ ಹರಿಯತೊಡಗಿತ್ತು.

ದೇವನೇಕೆ ಇಷ್ಟು ನಿರ್ದಯಿ! ಅನ್ನಿಸಿಬಿಟ್ಟಿತ್ತು ನನಗೆ.
ವಿದ್ಯೆ, ಬುದ್ಧಿ , ರೂಪ ಎಲ್ಲ ಇದ್ದ ಲೀಲಳನ್ನು , ಕೇವಲ ಆಸ್ತಿ ನೋಡಿ ಮದುವೆ ಮಾಡಿ ಕೊಟ್ಟು ಎಂತಹ ನರಕಕ್ಕೆ ತಳ್ಳಿಬಿಟ್ಟರಲ್ಲಾ! ಎನ್ನುವ ಸಂಕಟ ಬಿಡದೆ ಕಾಡಿತ್ತು.
12 ವರ್ಷ ದೊಡ್ಡವನಾದ, ಯಾವ ರೀತಿಯಲ್ಲೂ ಜೋಡಿಯಾಗದ ರಮೇಶ್ ಪ್ರಭುವನ್ನು ಮದುವೆಯಾಗಿ, ಕೂಡುಕುಟುಂಬದ ಹಿರಿಯ ಸೊಸೆಯಾಗಿ ಹೋದ ಲೀಲಾ, ಅಕ್ಷರಶಃ ಮನೆಯ ಪರಿಚಾರಿಕೆಯಾದಳೇ ವಿನಃ, ಸೊಸೆ ಆಗಲೇ ಇಲ್ಲ. ನೂರೆಂಟು ಕಾಯಿಲೆಯ ಗೂಡಾದ ರಮೇಶ್ ಪ್ರಭು, ಮನೆಯ ಎಲ್ಲಾ ಅಧಿಕಾರದ ಕೀಲಿ ಕೈ ಹಿಡಿದ ದರ್ಪದ ಮಾವ, ಮಾನವೀಯತೆಯ ಅರ್ಥವೇ ತಿಳಿಯದ ಅತ್ತೆ, ಹುರಿದು ಮುಕ್ಕುವ ಅತ್ತಿಗೆ- ನಾದಿನಿಯರು, ವಿಕೃತ ಮನಸ್ಸಿನ ಮೈದುನ ಇವರೆಲ್ಲರ ದಾಸಿಯಾಗಿ, ಸೇವೆ ಮಾಡುತ್ತಾ , ಇಡೀ ಮನೆಯ ಎಲ್ಲಾ/ ಎಲ್ಲರ ಕೆಲಸಕ್ಕೊಂದು ಆಳಾಗಿ ಸತ್ತು ಬದುಕುತ್ತಿದ್ದಳು ಲೀಲಾ. ಸಾಲದೆಂಬಂತೆ, ಮದುವೆಯಾದ ವರ್ಷಕ್ಕೇ ಒಂದು ಗಂಡು ಮಗು ಬೇರೆ.. ಪ್ರೀತಿಗೆ ಹುಟ್ಟಿದ್ದಲ್ಲ..ನೆನಪಿರಲಿ. ಮಗುವಿಗೆ ತಾಯಿಯಾದ ಖುಷಿಯೆಲ್ಲಾ ಅದನ್ನು ಎತ್ತಿ ಮುದ್ದಾಡಲೂ ಪುರುಸೊತ್ತು ಕೊಡದ ಜೀತದಾಳಿನ ಕೆಲಸ ನುಂಗಿಬಿಟ್ಟಿತ್ತು. ಬೇಜವಾಬ್ದಾರಿಯ ಗಂಡನೆಂಬ ಕಾರಣಕ್ಕೆ ಮನೆಯ ಎಲ್ಲಾ ಪಾರುಪತ್ಯ ಮಾವನ ಹಿಡಿತದಲ್ಲಿತ್ತು. ಹೆಸರಿಗೆ 3 ಸ್ವಂತ ಫ್ಲಾಟ್ ಗಳು ಇದ್ದರೂ ಎಲ್ಲಾ ಅತ್ತಿಗೆ, ನಾದಿನಿ, ಅತ್ತೆ, ಮಾವ, ಮೈದುನನ ಜಂಟಿ ಹೆಸರಲ್ಲಿತ್ತು. ಲೀಲಾ ಮತ್ತವಳ ಗಂಡನಿಗೆ ಯಾವುದರ ಮೇಲೂ ಅಧಿಕಾರವಿರಲಿಲ್ಲ. ಒಳ ಉಡುಪಿಗೂ ಸಹ ಮಾವನ ಮುಂದೆ ಕೈ ಚಾಚಿ ನಿಲ್ಲುವ ದೈನೇಸಿ ಪರಿಸ್ಥಿತಿ ಅವಳದ್ದು. ಬರಗಾಲದಲ್ಲಿ ಅಧಿಕ ಮಾಸ ಎಂಬಂತೆ, ಬರಸಿಡಿಲಿನಂತೆ ಬಂದೆರಗಿದ್ದು, ಮದುವೆಯಾದ ಎರಡನೇ ವರ್ಷವೇ ರಮೇಶ್ ಪ್ರಭುವಿಗೆ ಆದ ಅಪಘಾತ. ತನ್ನೆರಡೂ ಕಾಲುಗಳ ಶಕ್ತಿಯ ಜೊತೆಗೆ ಸಂಸಾರದ ಶಕ್ತಿಯನ್ನೂ ಕಳೆದುಕೊಂಡು ಜೀವಂತ ಶವವಾದ ಗಂಡನನ್ನು ನೋಡಿ ಕುಸಿದು ಬಿದ್ದಿದ್ದಳು ಲೀಲಾ. ಹರಿದು ತಿನ್ನುವ ಮನೆಮಂದಿ, ಮೈ- ಮನ ಸತ್ತ ಗಂಡ, ಸಾಯಲೊಲ್ಲದ ಲೀಲಾಳ ನಿಗಿ ನಿಗಿ ಯೌವ್ವನ, ತನ್ನದೆನ್ನುವ ಒಂದು ಪೈಸೆಯೂ ಇರದ ಅವಳ ಭಿಕಾರಿ ಬದುಕು… ಸಾಯಲೂ ಬಾರದ ಧೈರ್ಯ.. ಲೀಲಾಳ ಬದುಕು ಅಕ್ಷರಶ: ತೂಫಾನಿಗೆ ಸಿಕ್ಕ ದೋಣಿಯಂತಾಗಿ ಬಿಟ್ಟಿತ್ತು. ಮಡಿಲಲ್ಲಿದ್ದ ಹಸು ಕಂದನ ನಗು ಒಂದೇ ಉಸಿರ ಉಳಿಸಿದ್ದು. ಅವಡುಗಚ್ಚಿ, ಬಾಯಿ ಬಿಗಿದು , ಹಾಸಿಗೆ ಹಿಡಿದ ಗಂಡನ ಅಂಗಡಿ ವ್ಯವಹಾರವನ್ನು ತನ್ನ ಕೈಗೆ ತೆಗೆದುಕೊಂಡ ಲೀಲಾ, ಹೆತ್ತ ಕುಡಿಗಾಗಿ, ತಲೆ ಬುಡ ಗೊತ್ತಿಲ್ಲದ ವ್ಯಾಪಾರಕ್ಕೆ ಅನಿವಾರ್ಯವಾಗಿ ಇಳಿಯಬೇಕಾಯಿತು. ಮನೆಯವರೆಲ್ಲರ ಕತ್ತೆ ಚಾಕರಿ ಮುಗಿಸಿ ಅಂಗಡಿಗೆ ಬಂದು ವ್ಯಾಪರಕ್ಕೆ ಕೂತರೆ, ತುತ್ತು ಊಟಕ್ಕೂ ಪುರುಸೊತ್ತಿರದ ಕೆಲಸ. ಎಲ್ಲಾ ಮುಗಿಸಿ ಮನೆಗೆ ಬರುತ್ತಲೇ , ಡಯಾಬಿಟಿಕ್ ಮಾವನಿಗೆ, ಮಲಗಿದಲ್ಲೇ ಇರುವ ಗಂಡನಿಗೆ, ಕಾಲು ಮೇಲೆ ಕಾಲು ಹಾಕಿ ಟಿವಿ ನೋಡುವ ಅತ್ತೆಗೆ, ತವರಿನ ಸುಖಕ್ಕೆ ಬಂದ ಅತ್ತಿಗೆ ನಾದಿನಿಯರಿಗೆ, ಮಾವನ ಮುದ್ದಿನ ಮೈದುನನಿಗೆ.. ಹೀಗೆ ಎಲ್ಲರಿಗೂ ಚಪಾತಿ ಲಟ್ಟಿಸಿ, ಬೇಯಿಸಿ ಕೊಡುವ ತರಾತುರಿ. ಲೀಲ ಫೋನಿನಲ್ಲಿ ಹೇಳುವುದನ್ನು ಕೇಳುತ್ತಾ ಕೇಳುತ್ತಾ ನನಗೆ ಗಂಟಲು ಬಿಗಿದು ಬಂದಿತ್ತು.
' ಉಮಿ, ನನಗೆ ದೇವರು ಕಷ್ಟ ಕೊಟ್ಟ ಅಂತ ಬೇಜಾರಿಲ್ಲ ಕಣೆ.. ನನ್ನ ಕಷ್ಟ ಹೇಳಿಕೊಂಡು ಅಳಲಿಕ್ಕು ಸಹ ಒಂದು ಆತ್ಮೀಯ ಜೀವದ ಜೊತೆ ಕೊಡಲಿಲ್ಲ ನೋಡು, ಅದು ನನ್ನ ದುರ್ದೈವ ಕಣೆ..ಅಂಗಡಿಯಿಂದ ದುಡಿದು ಹೈರಾಣಾಗಿ ಬಂದವಳಿಗೆ, ನೀರು ಕುಡಿಯಲೂ ಪುರುಸೊತ್ತು ಕೊಡದೆ ಕಣ್ಣಲ್ಲೇ ಗದರಿಸುವ ಮನೆ ಮಂದಿಯನ್ನು ನೋಡಿದಾಗ, ಅದೆಷ್ಟೋ ಬಾರಿ ಅನ್ನಿಸ್ತಿತ್ತು ನಂಗೆ .. ಛೆ ನನ್ನದೆಂತಹ ದೀನ ಬದುಕು! ನನಗಾಗಿ ಮಿಡಿವ ಒಂದು ಜೀವ ಇದ್ದಿದ್ದರೆ..ಹೆಗಲಿಗೊರಗಿ ನಿಡುಸುಯ್ದಾಗ .. ಸುಧಾರಿಸಿಕೋ.. ಆಮೇಲೆ ಚಪಾತಿ ಮಾಡಿದರಾಯ್ತು ಎನ್ನುವ ಒಂದು ಆಪ್ತತೆ ತೋರುವ ಹೃದಯ ಇದ್ದಿದ್ದರೆ.. ಪಟ್ಟ ಕಷ್ಟವೆಲ್ಲಾ ಮರೆಯುತ್ತಿದ್ದೆ ಕಣೆ. ದೊಡ್ಡ ಮನೆತನದ, ದೊಡ್ಡ ಸೊಸೆಯಾದ ತಪ್ಪಿಗೆ ಎಲ್ಲಾ ಕರ್ತವ್ಯಗಳು, ಜವಾಬ್ದಾರಿಗಳ ಮೂಟೆ ಹೊರಿಸುವವರೇ ವಿನಃ, ನಾನೂ ಮನುಷ್ಯಳೇ, ನನಗೂ ಭಾವನೆಗಳಿವೆ, ನನಗೂ ಆಸೆ ಆಕಾಂಕ್ಷೆಗಳಿವೆ ಎಂದು ಅರಿತುಕೊಳ್ಳುವವರೇ ಇಲ್ಲಿಲ್ಲ ನೋಡು..
ಮರ್ಯಾದೆಗಂಜಿ, ಕೆಟ್ಟ ಅತ್ತೆ, ದರ್ಪದ ಮಾವ, ಕುತಂತ್ರಿ ಅತ್ತಿಗೆ, ನಾದಿನಿಯರು, ದಾಹಿ ಮೈದುನ ಎಲ್ಲರನ್ನು ಹೇಗಾದರೂ ಸಹಿಸಿಯೇನು ಉಮಿ.. ಆದರೆ ಎಲ್ಲಾ ಸತ್ತ ಈ ನನ್ನ ಗಂಡ? ಉಹು .. ಪ್ರಪಂಚಕ್ಕೆಲ್ಲಾ ನನ್ನ ಗಂಡ ಅವನು ಅಷ್ಟೇ.. ಒಂದೇ ಒಂದು ದಿನವೂ ಮನವ ಆಳಲಿಲ್ಲ ನೋಡು.. ನನ್ನ ಕಣ್ಣೀರಿಗೆ ಕುರುಡ, ನನ್ನ ರೋದನಕ್ಕೆ ಕಿವುಡ, ನನ್ನ ಗೋಳಿಗೆ ಮೂಕ.. ಯಾರ ಬಳಿ ಹೇಳಿಕೊಂಡೇನು ಹೇಳು? ಈಗ ಮಗ ಬೆಳೆದಿದ್ದಾನೆ.. ನಾನು ಹೇಳದೆಯೂ ಎಲ್ಲಾ ಅರ್ಥವಾಗುತ್ತಿದೆ ಅವನಿಗೆ.. ..ನನ್ನನ್ನು ಇಂಜಿನಿಯರಿಂಗ್ ಗೆ ಹೇಗಾದರೂ ಸೇರಿಸು ಅಮ್ಮ.. ನಾಲ್ಕೇ ವರ್ಷ.. ನನಗೆ ಕೆಲಸ ಸಿಕ್ಕೇ ಸಿಗುತ್ತದೆ. ನಾನು ನೀನು, ಈ ಎಲ್ಲಾ ರಾಕ್ಷಸರನ್ನು ಬಿಟ್ಟು ದೂರ ಎಲ್ಲಾದರೂ ಹೋಗಿ, ಸುಖವಾಗಿ ಇದ್ದು ಬಿಡೋಣ ಅಮ್ಮ..ಅನ್ನುತ್ತಿದ್ದಾನೆ ಕಣೆ.. ಎಲ್ಲಿಂದ ತರಲಿ ದುಡ್ಡು? ಅಂಗಡಿ ವ್ಯಾಪಾರದ ದುಡ್ಡು ತಂದು ಮಾವನ ಕೈಗಿಟ್ಟು ಲೆಕ್ಕ ಒಪ್ಪಿಸುವುದಷ್ಟೇ ನನ್ನ ಕೆಲಸ. ಬಿಡಿಗಾಸಿಗೂ ಅವರ ಬಳಿ ಅಂಗಲಾಚುವಾಗ ಜೀವ ಹಿಡಿಯಾಗುತ್ತೆ ಕಣೆ ನಂಗೆ. ಹಾಗೆಂದು ಸಿಕ್ಕ ಇಂಜಿನಿಯರಿಂಗ್ ಸೀಟು ಬಿಟ್ಟರೆ , ನನ್ನ ಮಗನ ಭವಿಷ್ಯದ ಗತಿ ಏನು ಹೇಳು? ನನ್ನ ತವರಿನ ಬಾಗಿಲು ನನ್ನ ಮದುವೆಯ ಹಿಂದೆಯೇ ಮುಚ್ಚಿ ಹೋಗಿದೆ ನನ್ನ ಪಾಲಿಗೆ..ಇನ್ನಾರನ್ನು ಕೇಳಲಿ ಹೇಳು? ಉಪಯೋಗ ಇಲ್ಲ ಎಂದು ಗೊತ್ತಿದ್ದೂ ಗಂಡನೆಂಬ ಪ್ರಾಣಿಯ ಹತ್ತಿರ ಹೋಗಿ ನಿನ್ನೆ ಜೋರಾಗಿಯೇ ಕೇಳಿದೆ ನೋಡು. 'ಇಷ್ಟು ವರ್ಷ ಗಾಣದೆತ್ತಿನಂತೆ ಮನೆ, ಅಂಗಡಿ ಅಂತ ದುಡಿದಿದೀನಿ, ಅದಕ್ಕೆ ಬೆಲೆಯೇ ಇಲ್ಲವಾ ? ನಿಮ್ಮ ತಂದೆಯ ಹತ್ತಿರ ನಮ್ಮ ಮಗನನ್ನು ಓದಿಸಲು ಹಣ ಸಹಾಯ ಮಾಡಲು ಹೇಳಿ. ಸಾಲ ಎಂದಾದರೂ ಸರಿಯೇ. ಇದು ನಮ್ಮ ಮಗನ ಭವಿಷ್ಯದ ಪ್ರಶ್ನೆ . ಈಗಲಾದರೂ ಮಾತನಾಡಿ ಅಂದೆ ಮಹಾರಾಯ್ತಿ.. ಅವನು ಕೊಟ್ಟ ಉತ್ತರದಿಂದ ಅವನ ಮೇಲಿದ್ದ ಗಂಡ ಎಂಬ ಅಲ್ಪ ಅಭಿಮಾನವೂ ಸತ್ತು ಹೋಯ್ತು ಕಣೆ. ಆ ದೇವರೇ ಇವತ್ತು ನಿನ್ನ ಫೋನ್ ನಂಬರ್ ಸಿಗೋ ಹಾಗೆ ಮಾಡಿದ್ದೇನೋ ಉಮಿ. ಸತ್ಯ ಹೇಳ್ತೀನಿ ಕೇಳು, ಇಂತಹ ಅಂತರಂಗದ ವಿಷಯ ಹೇಳ್ಕೋಳೋಕೆ ನಿನ್ನಂತಹ ಗೆಳತಿನೇ ಬೇಕು ಕಣೆ. ಜಾಸ್ತಿ ಮಾತಾಡ್ತಿದೀನಿ.. 18 ವರ್ಷದ್ದು ಕಣೆ ಮಾತು.. ಎಲ್ಲಾ ಹೇಳ್ಕೋಬೇಕು ನಿನ್ನ ಹತ್ತಿರ.. ಬೇಜಾರು ಮಾಡ್ಕೋಬೇಡ.. 18 ವರ್ಷದ ನಂತರ ಸಿಕ್ಕವಳು, ಇದೇನು ಗೋಳು ತೋಡ್ಕೋತಾಳೆ ಅಂತ.. ನನಗಿವತ್ತು ಎಲ್ಲಾ ನಿನ್ನ ಹತ್ತಿರ ಹೇಳಿಕೊಂಡು ಹಗುರಾಗಬೇಕು ಕಣೆ.. ನಾಳಿನ ಪರಿಸ್ಥಿತಿ ಹೇಗೋ ಏನೋ ಗೊತ್ತಿಲ್ಲ.. ಅದಕ್ಕೆ.
ಗಂಡ ಎನಿಸಿಕೊಂಡವ ನಿನ್ನೆ ನನ್ನ ಪ್ರಶ್ನೆಗೆ ಕೊಟ್ಟ ಉತ್ತರ
ಏನ್ ಗೊತ್ತಾ ಉಮಿ.. ಥತ್ .. ಹೇಳೋಕೂ ಅಸಹ್ಯ ಆಗುತ್ತೆ ನಂಗೆ….. 'ನಿಂಗೆ ನನ್ನಿಂದ ಅಂತೂ ಸುಖ ಇಲ್ಲ, ಹೋಗು ಹೊರಗೆ.. ಸುಖ- ದುಡ್ಡು ಎರಡೂ ಸಿಗುತ್ತೆ.. ನನ್ನ ತಲೆ ತಿನ್ನಬೇಡ ಸುಮ್ಮನೆ' ಅಂತಂದ. ಮೈ ಮೇಲೆ ಮಾತಲ್ಲೇ ಬೆಂಕಿ ಸುರಿದು ಬಿಟ್ಟ ಕಣೆ. ಇನ್ನೇನು ಉಳಿಯಿತು ಹೇಳು ನನ್ನ ಬದುಕಲ್ಲಿ? ಆದರೆ ನಾನು ಸಾಯಲ್ಲ ಕಣೆ.. ಖಂಡಿತಾ ಆತ್ಮಹತ್ಯೆ ಮಾಡಿಕೊಳ್ಳಲ್ಲ.. ನನ್ನ ಮಗನನ್ನು ಹೇಗಾದರೂ ಮಾಡಿ ಇಂಜಿನಿಯರಿಂಗ್ ಓದಿಸಿಯೇ ಓದಿಸ್ತೀನಿ. ನನ್ನ ಗಂಡನ ಹೆಸರಿನಲ್ಲಿ ಯಾವ ಆಸ್ತಿಯೂ ಮಾಡಿಟ್ಟಿಲ್ಲ ನನ್ನ ಮಾವ.. ಅವರ ಹೆಸರಿನಲ್ಲಿ ಇರುವುದೆಂದರೆ 20 ಲಕ್ಷದ ಇನ್ಷುರೆನ್ಸ್ ಪಾಲಿಸಿ ಮಾತ್ರ.. ಇದ್ದೂ ಸತ್ತವರ ಜೊತೆ ಹೆಚ್ಚು ದಿನ ಬದುಕಲಾರೆ ಕಣೆ.. ಕೊಳೆತು ಹುಳ ಆಗುವ ಮುನ್ನ ಹುಗಿದು ಬಿಡಬೇಕು.. ನಿನ್ನ ಗೆಳತಿ ಮಾಡುತ್ತಿರುವುದು ತಪ್ಪು ಎನಿಸಿದರೆ, ನೀನು ನನ್ನನ್ನು ಬ್ಲಾಕ್ ಮಾಡಬಹುದು ಉಮಿ. ನೀನು ಸ್ವತಂತ್ರಳು. ನಾನು ಸರಿ ಅನಿಸಿದರೆ ನಾಳೆ ಸಂಜೆ ಕಾಲ್ ಮಾಡು' ಎಂದು ಫೋನಿಟ್ಟು ಬಿಟ್ಟಳು. ನನ್ನ ತಲೆಯೆಲ್ಲಾ ರಣರಂಗ.. ರಮೇಶ್ ಪ್ರಭು, ಲೀಲಾಳ ಅತ್ತೆ, ಮಾವ, ಅತ್ತಿಗೆ, ನಾದಿನಿ, ಮೈದುನ ಎಲ್ಲರನ್ನೂ ಸಿಗಿದು ಬಿಡುವಷ್ಟು ಕೋಪ.. ನಾನೇನೂ ಮಾಡಲಾಗದ ಅಸಹಾಯಕತೆ, ಅಳು ತರಿಸುತ್ತಿತ್ತು...ಲೀಲಾಳ ಅಸಹಾಯಕ ಪರಿಸ್ಥಿತಿ, ಮನವ ಹಿಂಡಿ ಹಿಪ್ಪೆ ಮಾಡಿಬಿಟ್ಟಿತ್ತು.. ನಿನ್ನೆ ರಾತ್ರಿಯಿಡೀ ನಿದ್ದೆ ಬರದೆ ಒದ್ದಾಡುತ್ತಿದ್ದ ನನ್ನ ನೋಡಿ ಯಜಮಾನರು, 'ಯಾವ ಕಾದಂಬರಿ ಓದಿ ಈ ರೀತಿ ಅಳುವೇ ಮಾರಾಯ್ತಿ? ಎಷ್ಟು ಸಲ ಹೇಳಿದೀನಿ ನಿಂಗೆ, ಸಹಿಸಿಕೊಳ್ಳಲು ಆಗಲ್ಲ ಅಂದಮೇಲೆ ಆ ಟ್ರಾಜಿಡಿ ಕಾದಂಬರಿ ಓದೋದು
ಯಾಕೆ ? ಅಳೋದು ಯಾಕೆ ? ಈ ತರಹ ಒದ್ದಾಡೋದು ಯಾಕೆ ಹೇಳು?' ಅಂದಾಗ .. ಇದು ಕಥೆ ಅಲ್ಲ ರೀ ಜೀವನ .. ಅನ್ನಬೇಕೆನಿಸಿತ್ತಾದರೂ, ಅದಕ್ಕೂ ಶಕ್ತಿ ಇಲ್ಲದೆ ಸೋತು ಒರಗಿದ್ದೆ.. ಲೀಲಾ ಅನುಭವಿಸಿದ ಕಷ್ಟವನ್ನು ಬಾಯಲ್ಲಿ ಹೇಳಲೂ ನನಗೆ ಕಷ್ಟವಾಯಿತು…. ಬೆಳಿಗ್ಗೆ ಎದ್ದು ಪತ್ರಿಕೆ ನೋಡಿದ ಮೇಲೆ ಮನಸೆಲ್ಲಾ ಹಗುರಾಗಿದೆ. ಇಂದು ಸಂಜೆ ಲೀಲಾಳಿಗೆ ಫೋನ್ ಮಾಡಬೇಕು.