Click here to Download MyLang App

ಕತ್ತಲ ಕೈ - ಬರೆದವರು : ಹರೀಶ ಕೃಷ್ಣಪ್ಪ | ಹಾರರ್

ತಡರಾತ್ರಿಯ ಕೆಲಸ ಮುಗಿಸಿಕೊಂಡು ಆತ ಕ್ಯಾಬಿನಲ್ಲಿ ಮನೆಗೆ ಬರುತ್ತಿದ್ದಾನೆ, ಆಗ ಅವನಿಗೆ ಹೆಂಡತಿಯಿಂದ ಕರೆ ಬಂತು. ರಾತ್ರಿ ಹನ್ನೊಂದು ಗಂಟೆಯಾದರೂ ಬರದೇ ಇದ್ದುದು ಮತ್ತೆ ಅಂದು ಅಮಾವಾಸ್ಯೆ ಬೇರೆ, ಎಲ್ಲಾ ಸೇರಿ ಆಕೆಗೆ ಆತಂಕ ಮೂಡಿಸಿತ್ತು. ಮಗಳು ಬೇರೆ ತಂದೆ ಬಂದ ನಂತರವೇ ನಿದ್ದೆ ಮಾಡುವುದೆಂದು ಹಠ ಹಿಡಿದಿದ್ದಳು.ಪರಿಸ್ಥಿತಿಯನ್ನು ಅರಿತ ಆತ ಇನ್ನು ಸ್ವಲ್ಪ ಸಮಯದಲ್ಲೇ ಮನೆಗೆ ಬರುವುದಾಗಿ ಹೆಂಡತಿಗೂ ಹಾಗೂ ಮಗಳಿಗೂ ಸಮಾಧಾನ ಮಾಡಿ ಡ್ರೈವರನಿಗೆ ಸ್ವಲ್ಪ ಬೇಗ ಕಾರನ್ನು ಓಡಿಸುವಂತೆ ಸೂಚಿಸಿ, ಹಾಗೆಯೇ ಕಾರಿನ ಕಿಟಕಿಗೆ ಒರಗಿ ನಿದ್ದೆಗೆ ಜಾರಿದ.


ಸ್ವಲ್ಪ ಸಮಯದ ನಂತರ ಯಾರೋ ಕರೆದಂತಾಗಿ ನೋಡಿದರೆ!.. ಡ್ರೈವರ್
ಸರ್ !!! ಮನೆ ಬಳಿ ಬಂದಿದ್ದೇವೆ ಎಂದನು.
ಕಾರಿನಿಂದಿಳಿದು ಅಪಾರ್ಟ್ಮೆಂಟ್ ಕಡೆ ನಡೆದ, ಗೇಟಿನ ಬಳಿ ಸೆಕ್ಯೂರಿಟಿ ಗಾರ್ಡ್ ಇರಲಿಲ್ಲ. ಸಿಗರೇಟ್ ಸೇದಲು ಎಲ್ಲಿಗೋ ಹೋಗಿರಬಹುದೆಂದು. ಮನೆ ಕಡೆ ನಡೆದನು, ನಡೆಯುತ್ತಿದ್ದಂತೆ ಬೀದಿದೀಪಗಳು ಒಮ್ಮೆಲೇ ಆರಿ ಹೋದವು. ಎಲ್ಲೆಡೆ ಕಗ್ಗತ್ತಲು ಮೂಲೆಯಲ್ಲೆಲ್ಲೋ ನಾಯಿಗಳು ಬೊಗಳುವ ಶಬ್ಧ,ಇದ್ದಕಿದ್ದಂತೆ ತಣ್ಣನೆ ಗಾಳಿ ಬಿರುಸಾಗಿ ಬೀಸತೊಡಗಿತ್ತು. ನಿರ್ಜನವಾದ ಪ್ರದೇಶ ಬರೀ ಕತ್ತಲು ಮೊಬೈಲಿನ ಟಾರ್ಚ್ ಬೆಳಕಿನಲ್ಲಿ,ಆತ ನಿಧಾನವಾಗಿ ನಡೆಯುತ್ತಾ ಮುಂದೆ ಹೋಗುತ್ತಿದ್ದಂತೆ, ಯಾರೋ ಹಿಂದೆ ಬಂದಂತಾಯಿತು. ತಿರುಗಿ ನೋಡಿದರೇ ಯಾರೂ ಇಲ್ಲ. ಒಂದೆರಡು ಹೆಜ್ಜೆಗಳ ನಂತರ ಯಾರೋ ಪಕ್ಕದಲ್ಲೇ ನಡೆದಂತೆ ಅನುಭವ.ಆದರೆ ಯಾರೂ ಕಾಣಲಿಲ್ಲ.ಆತನ ಮೈ ಸಣ್ಣಗೆ ಬೆವತಿತ್ತು. ತನ್ನ ನಡಿಗೆಯ ವೇಗ ಹೆಚ್ಚಿಸಿದ.ಅವನ ಮನೆ ಇದ್ದದ್ದು ಹದಿನಾಲ್ಕನೇ ಮಹಡಿಯಲ್ಲಿ ಕರೆಂಟ್ ಇಲ್ಲದ ಕಾರಣ ಮೆಟ್ಟಿಲುಗಳನ್ನು ಹತ್ತಿಕೊಂಡೇ ಹೋಗಬೇಕಾಯಿತು. ಮತ್ತದೇ ಶಬ್ದ ಯಾರೋ ಬಳಿ ಬಂದಂತಾಯಿತು. ಈ ಬಾರಿ ಭಯವಾದರೂ ಧೈರ್ಯಮಾಡಿ ಹಿಂದಿರುಗಿದ.

ಸರ್!!, ನಾನು ಸೆಕ್ಯೂರಿಟಿ ಗಾರ್ಡ್. ನಿಮ್ಮಿಂದ ಒಂದು ಸಹಾಯ ಬೇಕಿತ್ತು ಎಂದು ಅಳುಕುತ್ತಲೇ ಹೇಳಿದ.
ಏನದು?
ಅದು . ಅದೂ..ನನ್ನ ಬಳಿ ಟಾರ್ಚ್ ಇಲ್ಲ. ದಯವಿಟ್ಟು ನನ್ನ ಜೊತೆ ಬಂದರೆ, ಎಲೆಕ್ಟ್ರಿಕ್ ಬೋರ್ಡಿನಲ್ಲಿ ಟ್ರಿಪ್ ಆಗಿರುವುದು ಸರಿ ಮಾಡಿದರೆ , ಕರೆಂಟ್ ಬರುತ್ತದೆ. ನೀವು ಲಿಫ್ಟಿನಲ್ಲಿ ಹೋಗಬಹುದೆಂದ. ಸೆಕ್ಯೂರಿಟಿಯವನ ಸಲಹೆ ಸರಿಯಾಗಿದೆ. ಇಲ್ಲದಿದ್ದರೆ ಹದಿನಾಲ್ಕು ಮಹಡಿ ಮೆಟ್ಟಿಲುಗಳನ್ನು ಹತ್ತ ಬೇಕಿತ್ತು. ಎಲೆಕ್ಟ್ರಿಕ್ ಬೋರ್ಡಿನಲ್ಲೊಂದು ಬಟನ್ ಒತ್ತಿದಾಗ ಕರೆಂಟ್ ಬಂದು, ಬೀದಿ ದೀಪಗಳೆಲ್ಲ ಮತ್ತೆ ಬಂದವು.

ಸರ್ !!ನೀವು ಈಗ ಲಿಫ್ಟ್ಅಲ್ಲಿ ಹೋಗಬಹುದು. ತೊಂದರೆಗೆ ದಯವಿಟ್ಟು ಕ್ಷಮಿಸಿ ಎಂದು ನಗುತ್ತಾ ಹೇಳಿದ. ಮಾತನಾಡುತ್ತಾ ಬರುತ್ತಿದ್ದ ಸೆಕ್ಯೂರಿಟಿಯವನ ಮಾತು ಒಮ್ಮೆಲೇ ನಿಂತು ಹೋಯಿತು. ಏನೆಂದು ನೋಡಲು ಅಲ್ಲಿ ಯಾರೂ ಇರಲಿಲ್ಲ. ಏನಾಶ್ಚರ್ಯ !!ಈಗತಾನೆ ಇದ್ದವನು ಎಲ್ಲಿ ಹೇಗೆ ಮಾಯವಾದ.


ಆತ ದೈರ್ಯವಂತನಾದರೂ ಸ್ವಲ್ಪವೇ ಭಯ ಆವರಿಸಿತು ,ಲಗುಬಗೆಯಿಂದ ಲಿಫ್ಟನ್ನು ಸೇರಿಕೊಂಡ ೧೪ನೇ ನಂಬರ್ ಒತ್ತಿದ ಲಿಫ್ಟ್ ಅತಿವೇಗದಿಂದ ಮೇಲಕ್ಕೇರಿದ್ದು, ಮೇಲಕ್ಕೆ ಇನ್ನೇನು ೧೪ನೇ ಮಹಡಿ ಹೋಗುವಷ್ಟರಲ್ಲಿ ಹದಿಮೂರನೇ ಮಹಡಿಯಲ್ಲಿಯೇ ನಿಂತುಹೋಯಿತು. ಅದೃಷ್ಟವಶಾತ್ ಅದು ಮ್ಯಾನುಯೆಲ್ ಆಪರೇಟರ್ ಲಿಫ್ಟ್ ಆದ್ದರಿಂದ, ಹೊರಬಂದು ಮೆಟ್ಟಿಲುಗಳನ್ನು ಬಳಸಿ ತನ್ನ ಅಪಾರ್ಟ್ಮೆಂಟ್ ಕಡೆ ಹೊರಟ.ಹೋಗುತ್ತಿದ್ದಾಗ ಮತ್ತೆ ಸೆಕ್ಯೂರಿಟಿ ಗಾರ್ಡ್ ಪ್ರತ್ಯಕ್ಷನಾದ.
ಮತ್ತೆ ..
ಸರ್! ಎಷ್ಟು ಕರೆದರೂ ಕೇಳಿಸಿಕೊಳ್ಳದೆ ಈ ಲಿಫ್ಟಿನಲ್ಲಿ ಏತಕ್ಕೆ ಬಂದಿರಿ ? ಇದು ಕೆಟ್ಟುಹೋಗಿತ್ತು. ಇನ್ನೊಂದು ಲಿಫ್ಟನ್ನು ಬಳಸಬೇಕಿತ್ತು ಎಂದು ಹೇಳುವಷ್ಟರಲ್ಲಿ ನೀವು ಕಾಣಿಸಲಿಲ್ಲ. ನಿಮಗೆ ತೊಂದರೆ ಆಗದಿರಲಿ ಎಂದು ಓಡಿ ಬಂದೆ. ಸರಿ ಸರ್!! ನಾನಿನ್ನು ಬರುತ್ತೇನೆಂದು ಹೇಳಿ ಹೊರಟುಹೋದನು.
ತನ್ನ ಅಪಾರ್ಟ್ಮೆಂಟ್ ಬಾಗಿಲ ಬಳಿ ಬಂದು ಬೆಲ್ ಒತ್ತಲು ಮತ್ತೆ ಕರೆಂಟು ಹೋಯಿತು, ಕರೆಂಟ್ ಇಲ್ಲದ ಕಾರಣ ಬಾಗಿಲನ್ನು ಬಡಿದನು.

ಹೆಂಡತಿ ಬಾಗಿಲು ತೆರೆದಳು, ಅಷ್ಟರಲ್ಲಿ ಕರೆಂಟ್ ಮತ್ತೆ ಬಂತು. ಮಗಳು ಓಡಿ ಬಂದು ಆತನನ್ನು ತಬ್ಬಿಕೊಂಡಳು. ಹೆಂಡತಿಯಿಂದ ಸಹಸ್ರನಾಮಾರ್ಚನೆಯಾಯಿತು. ಆತ ಮಗಳೊಂದಿಗೆ ಸ್ವಲ್ಪ ಆಟವಾಡಿ ಮಲಗುವ ಮುನ್ನ ಒಂದು ಕತೆ ಹೇಳಿ ತಾನು ನಿದ್ರೆಗೆ ಜಾರಿದ.

ಸುಮಾರು ರಾತ್ರಿ ಒಂದು ಗಂಟೆಯಾಗಿರಬಹುದು. ಯಾರೋ ಆತನ ಕೈ ಹಿಡಿದೆಳೆದಂತಾಯಿತು. ನೋಡಿದರೆ ಅಲ್ಲಿ ಯಾರೂ ಇಲ್ಲ, ಹೆಂಡತಿಯನ್ನು ಕರೆದರೆ ಮಾತೇ ಬರುತ್ತಿಲ್ಲ. ಹಿಡಿತ ಮತ್ತೂ ಹೆಚ್ಚಾಯಿತು , ನೋಡಿದರೆ ಕತ್ತಲೆಯಲ್ಲಿ ಭಾರೀ ಗಾತ್ರದ ಬರೀ ಕೈ ಮಾತ್ರ ಆತನ ಎಡ ತೋಳನ್ನು ಹಿಡಿದಿದೆ, ದೇಹವಿಲ್ಲ. ಹಿಡಿತ ಮತ್ತೂ ಬಿಗಿಯಾಗಿ, ಕದಲಲೂ ಆಗುತ್ತಿಲ್ಲ. ತಕ್ಷಣ ಎದುರಿಗೇ ಯಾವುದೋ ವಿಚಿತ್ರ ಮುಖ ಕಾಣಿಸಿತು. ಅವನನ್ನು ನೋಡಿ ನಗುತಿತ್ತು. ಎಡಗೈ ಚಲನೆಯಿಲ್ಲ , ಬಲಗೈನಲ್ಲೇ ಎದುರಿಗಿದ್ದ ಮುಖಕ್ಕೆ ಬಲವಾಗಿ ಹೊಡೆದ. ಮುಖ ವಿಕಾರವಾಯಿತು. ನಗು ಹೋಗಿ ಕರ್ಕಶ ಧ್ವನಿಯಾಯಿತು.ಇದ್ದ ಬದ್ದ ಬಲವನ್ನೆಲ್ಲ ಹೊಡೆತಗಳನ್ನು ಕೊಡುತ್ತಲೇ ಇದ್ದ. ಮುಖ ಮತ್ತು ಕತ್ತಲ ಕೈ ಎರಡೂ ಒಮ್ಮೆಲೇ ಮಾಯವಾಯಿತು. ಬಹಳ ಪ್ರಯತ್ನ ಪಟ್ಟು ಧಗ್ಗನೇ ಎದ್ದು ಕುಳಿತ. ಸುತ್ತಲೂ ನೋಡಿದ ಹೆಂಡತಿ ಹಾಗು ಮಗಳು ಶಾಂತವಾಗಿ ನಿದ್ರಿಸುತ್ತಿದ್ದಾರೆ.

ಪಡಸಾಲೆಗೆ ಬಂದು ನೋಡಿದ! ಮನೆ ಬಾಗಿಲು ತೆರೆದಿದೆ. ಯಾರೋ ಮನೆಯೊಳಗೇ ಬಂತಂತಾಗಿದೆ. ಎಲ್ಲಾ ಕಡೆ ಹುಡುಕಿದ.ಬಾಗಿಲನ್ನು ಮುಚ್ಚಿ ಬಂದು ಮಲಗಿದ.
ಮತ್ತದೇ ಕತ್ತಲ ಕೈ ಮತ್ತು ವಿಚಿತ್ರ ಮುಖ. ಈ ಬಾರಿ ಪ್ರಯಾಸದಿಂದ ಎದ್ದು ಹೆಂಡತಿಯ ಬಳಿ ನಡೆದು, ಅವಳನ್ನು ಎಬ್ಬಿಸಿದ. ಅವಳು ಏಳುತ್ತಿಲ್ಲ. ಸತತ ಪ್ರಯತ್ನದ ನಂತರ ಅವಳೆದ್ದಳು. ಗಂಡನ ಹಿಂದಿದ್ದ ವಿಕಾರವಾಧ ಮುಖವನ್ನು ನೋಡಿ ಒಮ್ಮೆಲೇ ಕಣ್ಣು ಮುಚ್ಚಿ ಕಿರುಚಿಕೊಂಡಳು. ಕಣ್ಣು ಬಿಟ್ಟರೆ. ಹೆಂಡತಿ ,ಮಗಳು ಹಾಯಾಗಿ ನಿದ್ದೆ ಮಾಡುತಿದ್ದಾರೆ.

ಆತ ಹೆಂಡತಿಯನ್ನು ಎಬ್ಬಿಸಿ , ತನಗಾದ ಅನುಭವನ್ನು ಹೇಳಿಕೊಂಡ.
ಸರಿ!! ನೀರು ತರುತ್ತೇನೆಂದು ಮಲಗುವ ಕೋಣೆಯಿಂದ ಹೊರ ಬಂದಳು.
ಆದರೆ...
ಗಾಬರಿಯಿಂದ ಗಂಡನನ್ನು ಕೂಗಿ ಕರೆದಳು.
ಅರೇ !! ಈಗ ತಾನೇ ಹಾಕಿದ ಬಾಗಿಲು ಮತ್ತೆ ತೆರೆದಿದೆ.ನೋಡು ನೋಡುತ್ತಿದ್ದಂತೆ ಬಾಗಿಲಿಂದ ಸೆಕ್ಯೂರಿಟಿ ಗಾರ್ಡ್ ಒಳಗೆ ಬಂದ. ಏನಾದರೂ ತೊಂದರೆಯೇ? ಎಂದನು.
ಅಷ್ಟರಲ್ಲಿ ಹೆಂಡತಿ ಕಿರುಚಿಕೊಂಡಳು. ನಡುಗುವ ದ್ವನಿಯಲ್ಲಿ ಗಂಡನಿಗೆ
ಈತ ಇಂದು ಮುಂಜಾನೆಯ ಅಪಘಾತದಲ್ಲಿ ತೀರಿಕೊಂಡ. ಅದು ಹೇಗೆ ಇಲ್ಲಿ ಬಂದಿದ್ದಾನೆ.?
ಆತನಿಗೂ ಆಶ್ಚರ್ಯ ಮತ್ತು ಭಯ ಎರಡೂ ಒಟ್ಟಿಗೇ ಆಯಿತು. ಅಂದರೆ ಈತ ಎಂದು ಇಬ್ಬರು ಮುಖ ನೋಡಿಕೊಳ್ಳುವಷ್ಟರಲ್ಲಿ. ಸೆಕ್ಯೂರಿಟಿ ಗಾರ್ಡ್ ಜಾಗದಲ್ಲಿ ಅದೇ ವಿಕಾರವಾದ ಮುಖ , ಕತ್ತಲೆ ಕೈ, ನೋಡು ನೋಡುತ್ತಿದ್ದಂತೆ, ಕರ್ಕಶವಾದ ನಗು , ನಗುವಿನೊಂದಿಗೆ ಎಲ್ಲವು ಮಾಯ.

ಮರುಕ್ಷಣ, ಮಲಗುವ ಕೋಣೆಯಿಂದ ಮಗಳ ಅಳು ಕಿರುಚಾಟ ಕೇಳಿಸಿತು. ಅಲ್ಲಿ ನೋಡಿದರೆ ಮಗಳು ಧಡಕ್ಕನೇ ಎದ್ದು ಕುಳಿತು ಅಳಲು ಶುರುಮಾಡಿದಳು. ಅದೇ ವಿಕಾರ ಮುಖ ಕತ್ತಲೆ ಕೈ, ಅವಳನ್ನು ಸುತ್ತಿವರೆದಿತ್ತು. ಇಬ್ಬರೂ ಓಡಿ ಮಗಳನ್ನು ಎತ್ತಿಕೊಂಡು ಹೊರ ಬಂದರು. ಓಡುತ್ತಲೇ ಮೆಟ್ಟಿಲುಗಳನ್ನು ಬಳಸಿ ಕೆಳಗಿಳಿದರು , ಪಾರ್ಕಿಂಗಿನಲ್ಲಿದ್ದ ತಮ್ಮ ಕಾರಿನ ಹಿಂದಿನ ಸೀಟಿನಲ್ಲಿ ಮಗಳನ್ನು ಕೂಡಿಸಿ , ತಾವು ಮುಂದಿನ ಸೀಟಲ್ಲಿ ಕುಳಿತು. ಕಾರನ್ನು ಸ್ಟಾರ್ಟ್ ಮಾಡಿದರು,ಆದರೆ ಅದು ಸ್ಟಾರ್ಟ್ ಆಗುತ್ತಿಲ್ಲ, ಹಿಂದಿನಿಂದ ಕತ್ತಲೆ ಕೈ ವೇಗವಾಗಿ ಬರುತ್ತಿದೆ. ಮತ್ತೂ ಪ್ರಯತ್ನಿಸಿದರೂ, ಹ್ಮ್ !! ಆಗುತ್ತಿಲ್ಲ. ಸತತ ಪ್ರಯತ್ನದ ನಂತರ ಕಾರ್ ಸ್ಟಾರ್ಟ್ ಆಯಿತು. ವೇಗದಿಂದ ಅಪಾರ್ಟ್ಮೆಂಟಿನ ಹೊರಗೆ ಬಂದರು.
ಅಮಾವಾಸೆಯಂದು ಬೇಗ ಬಂದಿದ್ದರೇ ಇಷ್ಟು ಅವಾಂತರ ಆಗುತಿರಲಿಲ್ಲ ಎಂದು ಗೊಣಗುತಿದ್ದಳು ಹೆಂಡತಿ . ಅಷ್ಟರಲ್ಲಿ ಗೇಟ್ ದಾಟಿ ಇನ್ನೆನೂ ರಸ್ತೆ ತಲುಪಬೇಕು ...
,ಅದೇ ವೇಳೆ ಎಲ್ಲಿಂದಲೂ ಮತ್ತೆ ಸೆಕ್ಯೂರಿಟಿ ಗಾರ್ಡ್ ಓಡಿಬಂದು ಕಾರಿಗೆ ಅಡ್ಡವಾಗಿ ನಿಂತ . ಕಣ್ಣು ಮುಚ್ಚಿ ಬ್ರೇಕ್ ಹಾಕಿದ ಅಷ್ಟೇ. ...


ಯಾರೋ ಕರೆದಂತಾಗಿ ನೋಡಿದರೆ ಡ್ರೈವರ್ ಸರ್ ಮನೆ ಬಳಿ ಬಂದಿದ್ದೇವೆ ಎಂದನು.ಅಂದರೆ ಈಗ ನಡೆದದೆಲ್ಲಾ ಕನಸು. ಮತ್ತೆ ನೋಡಿದರೆ ಹೆಂಡತಿಯಿಂದ ಮತ್ತೆ ಕರೆ, ಎರಡು ನಿಮಿಷದಲ್ಲಿ ಬರುವೆನೆಂದು ಉತ್ತರಿಸಿ. ಕಾರಿನಿಂದಿಳಿದು ಅಪಾರ್ಟ್ಮೆಂಟ್ ಕಡೆ ನಡೆದ, ಗೇಟಿನ ಬಳಿ ಸೆಕ್ಯೂರಿಟಿ ಗಾರ್ಡ್ ಇರಲಿಲ್ಲ. ಆಶ್ಚರ್ಯ ಪಡುತ್ತಾ ಮನೆ ಕಡೆ ನಡೆದನು, ನಡೆಯುತ್ತಿದ್ದಂತೆ ಬೀದಿದೀಪಗಳು ಒಮ್ಮೆಲೇ ಆರಿ ಹೋದವು. ಎಲ್ಲೆಡೆ ಕಗ್ಗತ್ತಲು ಮೂಲೆಯಲ್ಲೆಲ್ಲೋ ನಾಯಿಗಳು ಬೊಗಳುವ ಶಬ್ಧ,ತಣ್ಣನೆ ಗಾಳಿ ಬಿರುಸಾಗಿ ಬೀಸತೊಡಗಿತ್ತು . ಅವನಲ್ಲಿ ಭಯ ಆವರಿಸಿತು.

ಮತ್ತೆ!!!!! ಅಂದರೆ!!! ಇದು!!!!!??? ಅತಿಮಾನುಷ ಶಕ್ತಿ?
***ಮುಗಿಯಿತು**"