Click here to Download MyLang App

ಕಣ್ಣಿಗಬ್ಬದ ಕನಸು - ಬರೆದವರು : ವಿಜಯ ಮೋಹನ್ | ಸಾಮಾಜಿಕ

ರಾತ್ರಿ ರವರವನೆಂಬ ಸೆಕೆ, ದಿಕ್ಕು ದಿವಾಳಿಯಿಲ್ಲದ ಗಾಳಿಯೆಂಬೋದು. ನರವಿಲ್ಲದೆ, ಸ್ವರವಿಲ್ಲದೆ, ಒಂದು ಎಲೆಯನ್ನು ಅಲುಗಾಡಿಸದಂಗೆ.ಅದು ಎಲ್ಲಿ ದಿಮಾಕು ಮಾಡತಾ ಕುಂತಿತ್ತೊ? ಸರೋಜಮ್ಮನ ಎದೆಯ ಕತ್ತು ಕಂಕುಳವನ್ನೆಲ್ಲ, ಉಮ್ಮರದಿಂದ ಕುಚ್ಚಿ ಕುಚ್ಚಿ ಕಚ್ಚುತ್ತಿರುವ ಸೆಕೆ. ಅಂತ ಸೆಕೆಗಾಗಿ. ಒದ್ದಾಡುತ್ತಿದ್ದವಳ ಮನೆಯ ಮುಂದೆ. ಗಾಳಿಯೆಂಬ ಅಸ್ತ್ರಕ್ಕೆ. ಇರುವ ಗಿಡ ಗೆಂಟೆಗಳೆಲ್ಲ ಬಿಂಕವಾಗಿ ನಿಂತಿದ್ದವು.ಬಟಾ ಬಯಲೊಳಗಿದ್ದ ಅವಳ ಮನೆಯಲ್ಲಿ.ರವ ರವನೆಂದು ಕಚ್ಚುತ್ತಿದ್ದ ಸೆಕೆಯೆನ್ನುವುದು.ಸರೋಜಿಯನ್ನ ಆ ರಾತ್ರಿ ಮಲಗಸಲು ಇಲ್ಲ, ಕೂರುಸುಲು ಇಲ್ಲ, ಬೆಳಕರಿದರೆ ಊರು ನಾಡಿಗೆಲ್ಲ, ಹೊಸ ಸಮೇವು ಚೆಲ್ಲುವ. ಹೊಸವರುಷದ ಯುಗಾದಿ ಹಬ್ಬ, ಇದು ವರುಷಕ್ಕೊಂದೇಸಲ ಬರುವ ಬಹು ಮುಖ್ಯವಾದ ಹಬ್ಬ, ಹಿಂಗೆ ಎತ್ತ ಹೊರಳಾಡೀರು ಕಣ್ಣಿಗಬ್ಬದ ನಿದ್ದೆಯನ್ನ ನೆಚ್ಚಿಕೊಂಡು, ಇನ್ನು ಸುಖಾ ಸುಮ್ಮನೆ ಉಳ್ಳಾಡಿ ಪ್ರಯೋಜನವಿಲ್ಲವೆಂದ ಮ್ಯಾಲೆ. ನಿಗವಿಲ್ಲದ ಗಳಿಗೆಯನ್ನ ನುಂಗೋದ್ಯಾಕೆ? ಎಂದುಕೊಂಡ ಸರೋಜಮ್ಮ ಬಲಗಡೆ ಮೊಗ್ಗಲಿಗೆ ಎದ್ದವಳು, ಮೊದಲು ತಲೆಗೆ ನೀರೂಯಿಕೊಂಡು ಸ್ನಾನ ಮಾಡೀಳು, ಒಳಗೆ ಅಡುಗೆ ಮನೆಯಲ್ಲಿ. ಹೊಲೆ ಹೊತ್ತಿಸಿ ತಪ್ಪಲೆಯೊಳಗೆ ಬ್ಯಾಳೆ ಬೇಯಲಿಟ್ಟಳು, ಉಂಡೆ ಮಾಡುವ ಉನ್ನಾರಕ್ಕಾಗಿ ಮೈದಾಕಲಸಿ ಅದಾಮಾಡಿಟ್ಟಳು, ಹೋದ್ ಸಲ ಇದೇ ಹಬ್ಬದ ಹೊತ್ತಿಗೆ ಲಾಕ್ಡೌನಾಗಿ. ಊರು ಸೇರ್ದಂಗೆ, ಅವರವರು ನಂಬಿಹೋಗಿದ್ದ ನೆಲೆಯಲ್ಲಿ. ಇದ್ದ ಕಡೆಯು ಇಲ್ಲದಂಗೆ,ಯಾವುದೊ ಇಸ್ಕೂಲಿನಲ್ಲಿ ವನವಾಸ ಮಾಡಿದ್ದಾಯಿತು. ಅಂಗಂದುಕೊಂಡ ಗೆಪುತಿಯೊಳಗೆ.ಅವಳು ಹೊರಬಾಗದ ಹಟ್ಟಿ ಬಯಲು ಸಾರಿಸಿಬಂದಳು.ಅಡುಗೆ ಮನೆಯೊಳಗಿನ ಗುಂಡು ಬಂಡೆ ತೊಳಕೊಂಡಳು. ಸರೋಜಮ್ಮ ಈ ಮನೆಗೆ ವೊಸಿಲು ದಾಟಿ ಬಂದು. ಮೂವತ್ತು ವರುಷದಿಂದಲು. ಮೋಟು ಬೀಡಿ ಸೇದುತ್ತ ಸೇದುತ್ತ. ಬಾಯಲ್ಲಿ ಪುಸ ಪುಸನೆ ಕೆಮ್ಮುತ್ತಿರುವ ಗಂಡ ರಂಗಣ್ಣ. ನಿಗಿ ನಿಗಿ ಉರಿಯುತ್ತಿರುವ ಹೊಲೆಯನ್ನ, ಅಂಗೆ ನಿಗಾ ಮಾಡ್ತಾ ನೋಡುತ್ತಲೆ ಇದ್ದನು ಸುಮ್ಮನೆ ದೆವ್ವ ಮೆಟ್ಟಿದವನಂಗೆ ಕುಂತವನ ತಲೆಯಲ್ಲಿ, ಇದ್ಯಾವುದೊ ತಬ್ಬಲಿ ನನ್ ಮಗನ ಕಾಯಿಲೆ. ತಿರುಗಾ ವಕ್ರಸತೈತಂತೆ. ಯಾರಿಗೆ ಏನೇನ್ ಕಾದೈತೊ ಏನೊ? ಎಂದು ಲೆಕ್ಕಾಚಾರವಾಕತೊಡಗಿದ. ಕಳೆದ ವರ್ಷ ಹುಟ್ಟಿಕೊಂಡ ಹೊಸಕೊರೋನಕ್ಕೆ, ಯಾವುದ್ಯಾವುದೊ ದೇಶ್ದೊಳಗೆ, ದಿಕ್ಕಿಲ್ಲದಂಗೆ ಸಾಯ್ತಾ ಅವರಂತೆÀ, ಅಂತ ಕಾಯಿಲೆ, ನಮ್ ದೇಶಕ್ಕು ವಕ್ರ್ಸ್ತೈತೆ ಅಂತ. ಸರ್ಕಾರದವರು ಹೋದೊರುಷ ಇದೇ ಯುಗಾದಿ ಹಬ್ಬದೊತ್ತಿಗೆ ಏಕಾ ಏಕಿ ಲಾಕ್ಡೌನ್ ಮಾಡ್ಬುಟ್ರು. ಆ ಸಮೇವಿನೊಳಗೆ ನಮ್ಮೂರಿಗೆ ನಾವು ವಾಪಸ್ಬರ್ಬೇಕಾದರೆ. ಬೀಳ ಬಾರದ ಬಂಗ ಬಿದ್ದು ಬಂದಿದ್ದಾಯಿತೆಂದು. ಮಾತಾಡಲು ಬಾಯಿತೆರೆದ ರಂಗಣ್ಣ. ಕೆಮ್ಮಿನ ಜೊತೆ ಕಿತ್ತುಬಂದ ಗೂರಲು ಕಫವನ್ನು.ಹೊರಗಡೆ ಹೋಗಿ ಉಗುತು ಬಂದ, ಹೊಲೆಯ ಮೇಲೆ ಬೆಂದ ಬೇಳೆಯೆನ್ನುವವು. ಗುಂಡು ಬಂಡೆಯ ಮದ್ಯೆ ನುಜ್ಜುಗುಜ್ಜಾಗಿ, ನವಿರ ಹೂರಣವಾಗಿ, ಸರೋಜಿಯ ಬೆರಳಿಂದ ಬಟ್ಟಲು ತುಂಬುವಾಗ. ವರುಷಕ್ಕೊಂದು ಸಲ ಬಂದಿರುವ ಈ ಹೊಸಯುಗಾದಿ ಹಬ್ಬದಲ್ಲಿ. ಹೋಳಿಗೆಯ ಅಡಿಗೆ ಮಾಡಿ. ಸಂಪ್ರದಾಯವಾಗಿ ಅವಳ ಮನೆಯ ಹಿರೇರು ನಡೆಸಿರುವಂತೆ, ನಡೆದುಕೊಳ್ಳಲು ತಯಾರು ಮಾಡಿಕೊಳ್ಳುತ್ತಿರುವ ಈ ಗಳಿಗೆಯೊಳಗೆ.ಅವಳಿಗೆ ಹಳೆಯ ನೆನಪುಗಳು ಇನ್ನಿಲ್ಲದಂತೆ ಕಾಡ ತೊಡಗಿದವು. ಹೋದೊರುಷ ಯಾವ ಹಬ್ಬವು ಇಲ್ಲದೆ, ದಿಬ್ಬವು ಇಲ್ಲದೆ. ದೇಶ್ದೊಳಗಿನ ಲೆಕ್ಕವಿಲ್ಲದ ಜನ ಬೀದೀಲಿ ಬಿದ್ದಿದ್ದಾಯಿತು. ಎಂದುಕೊಂಡವಳ ಉಸಿರು, ಅವಳಿಗರಿವಿಲ್ಲದಂಗೆ ಬಸ ಬಸನೆ ಈಚೆ ನುಗ್ಗುತು.
ಭೂಮಿ ಮ್ಯಾಲೆ ಬದುಕು ಬಾಳೆಂದು ನೆಚ್ಚಿಕೊಂಡಿರುವ ಜನ, ದಿನಾ ಬೆಳಗೆದ್ದರೆ ಉಡುಬೇಕು, ಉಣ್ಣು ಬೇಕು, ಉಣ್ಣುದಿದ್ರೆ ಯಾರು ಉಳಿಯಲ್ಲವಲ್ಲ? ಹೊತ್ತಿಗೆ ಸರಿಯಾಗಿ ಮಳೆ ಮಾರುಯ್ಯದೆ, ಮನೇಲಿದ್ದ ದನಕರುಗಳಿಗೆ ಮೇವಿರುತಿರಲಿಲ್ಲ.ಇಕ್ಕುತ್ತಿದ ಬೆಳೆಯೆಲ್ಲ ಸೊರಗಿ ತಲೆ ನೆಲಕ್ಕೆ ಜೋಲಿಕ್ಕುತ್ತಿದ್ದವು. ಬೆಂಗಾಡ ಬಿಸಿಲೊಳಗೆ ಎಲ್ಲಿಂದ ಎಲ್ಲುಡುಕಿದರು, ನೆಟ್ಟಗೆ ತೊಟ್ಟು ನೀರಿರುತಿರಲಿಲ್ಲ, ಎಷ್ಟು ಕೂಲಿ ಮಾಡೀರು. ಉಣ್ಣುವ ಉಳಿವಿಗಾಗೆ ಒದ್ದಾಡ್ ಬೇಕಾಗಿತ್ತೇ ವಿನಃ, ದುಡ್ಡೆಂಬ ದೊಡ್ಡಸ್ತಿಕೆಗಾಗಿ ಮೀರಿ ಮುಂದುವರಿದರೆ. ವಾರದ ಸಂಘಗಳಲ್ಲಿ, ತಕ್ಕಳ್ಳುತ್ತಿದ್ದ ಸಾಲಗಳನ್ನ ತೀರ್ಸಾಕಾಗ್ತಿರಲಿಲ್ಲ. ಹೋದ್ ಸಲ ಕೆಳಗಳ ಕೇರಿ ಲಿಂಗಮ್ಮ, ಒಂದು ಲಕ್ಷ ಲೋನು ತಗಂಡು. ಆದುಡ್ಡುನ್ನ ತೀರ್ಸಾಕಾಗದೆ, ಮನೆ ಮಕ್ಕಳೆಲ್ಲ ಸೇರಿಕೊಂಡು ಊರೆ ಬಿಟ್ಟೋದರು. ಗಂಡ ಹೆಂಡತಿಯನ್ನ ಯಾವ ನೆಂಟರ ಮನೇಲಿ ಹುಡುಕೀರು ಸಿಗದಂಗಾದರು.ಇಂತ ಮಾನ ಅವಮಾನದ ಪಾಡು ಯಾರಿಗು ಬ್ಯಾಡಂತಲೆ? ಸರೋಜಿ ಮತ್ತು ಸರೋಜಳ ಗಂಡ,ಮನೆ ಮಕ್ಕಳನ್ನ, ಬಂದು ಬಳಗವನ್ನ, ನಾನು ನೀನೆಂಬೋರನ್ನೆಲ್ಲ ಬಿಟ್ಟು, ದಕ್ಕಿಸಿ ಕೊಳ್ಳ ಬೇಕಿರುವ ದಿಕ್ಕಿಲ್ಲದ ದುಡ್ಡಿಗಾಗಿ, ದುಡಿಮೆಯ ಬೆನ್ನು ಬಿದ್ದು, ಊರುಕೇರಿಯನ್ನೆಲ್ಲ ಬಿಟ್ಟು, ಅಲ್ಲಿ ಮೀನು ಹಿಡಿಯುವ, ಮೀನುಗಳನ್ನ ಹಿಂಗಡಿಸುವ, ಆ ಮೀನನ್ನೆಲ್ಲ ಬುಟ್ಟಿ ತುಂಬಿಸುವ. ಕೆಲಸಕ್ಕಾಗಿ. ಮಂಗಳೂರಿನ ಬೀಚಿಗೆ ಬಂದು ಬದುಕುವ ನೆಲೆಯನ್ನ ಕಚ್ಚಿಕೊಂಡಿದ್ದರು. ಇಂಗೆ ಅಂತ ಬದುಕಿನ ಭದ್ರತೆಗೆಂದು, ಹೋಗಿ ಏಳೆಂಟು ವರ್ಷವಾಗಿತ್ತು, ಅವರು ಉಡುವ ಬಟ್ಟೆ ಬರೆಗೆ, ಮಕ್ಕಳು ಓದುವ ಖರ್ಚಿಗೆ, ಸಂಘಗಳಲ್ಲಿ ತಕ್ಕಂಡಿದ್ದ ಸಾಲ ಸೋಲಕ್ಕೆಂದು. ಸಮವೆಂಬಂತಾಗಿತ್ತು. ಇಂಗೆ ಸಮಾದಾನದ ನಿಟ್ಟಿನೊಳಗೆ, ನೀಸೂರಾಗಿ ನಡಿಯುತ್ತಿದ್ದ, ಕೂಲಿ ನಾಲಿಯವರ ಬದುಕಿನ ಮದ್ಯೆ. ಇದ್ಯಾವೊದೊ ಕಣ್ಣಿಗೆ ಕಾಣ್ದಿರೊ, ಕೊರೋನವೆಂಬ ಗಂಡಾಂತರದ ಕಾಯಿಲೆಯೊಂದು ವಕ್ಕರಿಸಿಕೊಂತು, ಯಾರು ಎಲ್ಲು ಓಡಾಡ್ ಬ್ಯಾಡ್ರಿ ಅನ್ನುತ್ತ, ಸರ್ಕಾರ್ದವರು ಏಕಾ ಏಕಿ ಅದೆಂತಾದ್ದೊ ಲಾಕ್ಡೌನ್ಅಂತ ಮಾಡ್ ಬುಟ್ರು, ಇಂತದ್ದೊಂದು ವಿಚಿತ್ರವನ್ನ ಭೂಮಿ ಮ್ಯಾಲೆ ಹಿಂದು ನೋಡಿರಲಿಲ್ಲ. ಮುಂದೇನು ನೋಡ್ತ್ತಿವೊ ಇಲ್ಲವೊ? ಎಂತೆಂತ ವೀರಾ ಶೂರರೆಂಬ ಘಟಾನು ಘಟಿಗಳು ಎದರಿಸಲಾಗದೆ. ಇರುವ ಈಸಮೇವಿನ ಪ್ರಪಂಚವನ್ನ. ಬರಿ ಕೆಮ್ಮು ಸೀನೆಂಬ ಕಾಯಿಲೆಯೆಂಬೋದು ಎದುರಿಸಿ ಬಿಡತು ಯಾರ ಮುಲಾಜಿಗಂಜದೆ ಮುಂದೋಡುತ್ತಿರುವ ಈ ಕಾಲವೆಂಬೋದಿಕ್ಕೆ ಕೈಗಳು ಇಲ್ಲ, ಕಾಲುಗಳು ಇಲ್ಲ, ಉಸಿರು ಮೊಟ್ಟ ಮೊದಲೆ ಇಲ್ಲ.ಆದರು ಅದೊಂದು ಲೆಕ್ಕಾಚಾರದಲ್ಲಿ, ನಾನು ನೀನೆಂಬೋರುನ್ನೆಲ್ಲ ಒಂದೆ ತಕ್ಕಡೀಲಿ ಇಟ್ಟುಬುಡುತಲ್ಲ. ಕೊಡೋವರು ಒಳಗಿರ್ಬೇಕಂತೆ, ಕೊಂಡುಕೊಳೋವರು ಒಳಗಿರ್ಬೇಕಂತೆ, ಅಂಗಿದ್ ಮ್ಯಾಲೆ ಮೀನುಗಳು ಯಾರಿಗ್ ಮಾರ್ಬೇಕಂತೆ? ಅನ್ನುವ ಗಳಿಗೆಗಳು ಸೃಷ್ಠಿಯಾಗಿ, ಬೆಳೆದು ಬದುಕ್ ಬೇಕಂಬೋರೆಲ್ಲ ತಬ್ಬಿಬ್ಬಾಗಬುಟ್ರು.ಯಾವ್ ವ್ಯಾಪಾರ್ವು ಇಲ್ಲ, ಯಾವ್ ವಹಿವಾಟ್ವು ಇಲ್ಲ, ದೇಶಕ್ಕೆ ದೇಶ್ವೆ ನಿಂತಕಡೆ ನಿಂತಿರ್ಬೇಕಂದ್ರೆ.ಇನ್ನು ದುಡ್ಡೆಲ್ಲಿಂದ ಬರ್ಬೇಕು?ಇಂತ ಇಕ್ಕಟ್ಟಿನ ಪರುಸ್ಥಿತಿಯೊಳಗೆ, ಹೋಗ್ರಿ ಹೋಗ್ರಿ ಈಗಿಂದೀಗ್ಲೆ ನಿಮ್ ನಿಮ್ ಊರುಗಳ ಕಡೆ ಹೊರಟು ಬಿಡ್ರಿ. ಎಂದು ಮಂಗಳೂರಿನಲ್ಲಿ ಮೀನು ಹಿಡಿಸುವ ಕಂಟ್ರಾಕ್ಟರನೆಂಬೋನು. ಮಾತಾಡಿದ ಮಾತಿನ ಆತುರಕ್ಕೆ, ಎಲ್ಲರಿಗು ದಿಕ್ಕು ತೋಷದಂಗಾಗಿ.ಯಾರು ಸರಿಯಾಗಿ ಉಣ್ಣುಲು ಇಲ್ಲ, ತಿನ್ನಲು ಇಲ್ಲ, ಇಂತಾ ಏಕಾ ಏಕಿ ಆಸರೆಯಿಲ್ಲದ ಮಾತುಗಳನ್ನ ಕೇಳಿದ ಮೇಲೆ, ನಂಬಿಸಿ ತಲೆ ಉಯಿದು ಬುಟ್ರಲ್ಲ? ಒಂದು ಬಸ್ಸಿಲ್ಲ, ರೈಲಿಲ್ಲ, ಮತ್ತೆ ಹೋಗಾದಾದ್ರು ಎಂಗೆ?ಎಲ್ಲಿಗೆ? ಮಂಗಳೂರಿನ ಬಂದರನ್ನೆ ನೆಚ್ಚಿಕೊಂಡು ಬಂದಿದ್ದ, ಸಾವಿರಾರು ಕಾರ್ಮಿಕರು, ನೀರಿಲ್ಲದ ಮೀನುಗಳಂತೆ ಪರದಾಡಿ ಬಿಟ್ಟರು. ಈಗ್ಗೆ ಎಂಟು ವರ್ಷದ ಕೆಳಗೆ, ಸರೋಜಿ ರಂಗಣ್ಣ ಇಬ್ಬರ ಜೊತೆ, ಒಟ್ಟು ತೊಂಬತ್ತು ಜನ ಮಂಗಳೂರಿಗೆ ಬಂದು ನೆಲೆ ನಿಂತಿದ್ದರು, ನಮ್ಮೂರಿಗಿಂತ ಕೂಲಿ ಮಂಗಳೂರಲ್ಲೆ ಜಾಸ್ತಿ ಸಿಗುತೈತಂತೆ ಎಂದು. ಗುಂಡಾ ನಾಯ್ಕನೆಂಬ, ಊರಿನ ಹಿರಿಯ ಹುಡುಗನ ಮಾತು ನೆಚ್ಚಿಕೊಂಡು ಬಂದು ಬಿಟ್ಟಿದ್ದರು. ಈಗ ರಾತ್ರೊ ರಾತ್ರಿ ಅವರವರ ಊರುಗಳ ಕಡೆ. ಹೊರಟೆ ಬಿಡಬೇಕೆಂದ ತರಾತುರಿಯ ಸ್ಥಿತಿಯೊಳಗೆ. ಆಕಾಶ ಕಳಚಿ ಮ್ಯಾಲೆ ಬಿದ್ದಂಗಾಗಿತ್ತು, ಇಂತುಪೊದ್ದಲ ಎಕ್ಕಡ ಪೋವಲ್ಲಂಟ್ರ?ಎವರು ಸೇಸ್ರೊ ಈ ಪಿಚ್ಚಿ ದರ್ಬಾರಿನಿ? ಕಾಲೋನಿಯ ನರಸಿಂಹನ ಸೆಡವಿನ ಮಾತು, ಅವನನ್ನು ಕೊತ ಕೊತನೆ ಕುದಿಸಿ ಬಿಟ್ಟಿತ್ತು. ಲಾಕ್ ಡೌನ್ ಮಾಡೋರು ಮಾಡೀರು, ಅವರವರ ಊರುಗಳಿಗೆ, ಹೋಗೋರು ಬರೋರರನ್ನ ಒಂದು ದಡಾ ಸೇರಸ್ಬಾರ್ದಾಗಿತ್ತೆ? ಧರ್ಬಾರು ಮಾಡೋರೆಲ್ಲ ದಡ್ಡರೇನ್ ಅಲ್ವಂತೆ?ಕೆಲವರ ಎದೆಯೊಳಗೆ ಮುಲಾಜಿಲ್ಲದ ಪ್ರಶ್ನೆ ಮುಗ್ಗರಿಸುತ್ತಿರುವಾಗ,ಬೆಳಕೆಲ್ಲ ಕಣ್ಣು ಮುಚ್ಚಿಕೊಂಡಿದ್ದು ನೋಡಿ. ಕತ್ತಲೆಯಾಗಲೆ ಅದರ ಪಾಡಿಗದು, ಕವ ಕವನೆ ಕತ್ತಿ ಮಸೆಯುತ್ತಿತ್ತು,ಮಂಗಳೂರಿಗೆ ಬಂದಿದ್ದ ತೊಂಬತ್ತು ಜನವು ರಸ್ಥೆಗಿಳಿದಿದ್ದರು. ಯಾವ ಬಸ್ಸು ಲಾರಿಯು ಸಿಗದೆ ದಿಕ್ಕು ತೋಚದಂಗಾಗಿ, ತಡ ಬಡಾಯಿಸುತ್ತಿದ್ದರು, ಈಗ್ಗೆ ಏಳೆಂಟು ವರುಷದ ಕೆಳಗೆ ಕೆಲಸಕ್ಕೆಂದು, ದಂಡು ಕಟ್ಟಿಕೊಂಡು ಬಂದಿದ್ದ. ಗುಂಡಾನಾಯಕನೆಂಬೋನು, ಯಾವುದ್ಯಾವುದೊ ಲಾರಿಗಳಿಗೆ, ಟೆಂಪೊಗಳಿಗೆ, ಕೈ ಹಾಕಿ ಹಾಕಿ.ಅರಸಾಹಸ ಪಡುತ್ತಿದ್ದ,ಅವನ ಬೆನ್ನಿಂದೆ ನಿಂತವರ ಮತ್ತೆ ಗುಂಡಾ ನಾಯಕನ ಪ್ರಯತ್ನಕ್ಕೆÉ, ದೊಡ್ಡದೊಂದು ಗೂಡ್ಸ ಲಾರಿಯೊಂದು ಗಕ್ಕನೆ ನಿಂತು ಬಿಟ್ಟಿತು. ಕಬ್ಬಕ್ಕಿಗಳಂತೆ ಕಾಯುತ್ತಿದ್ದ ಜನವೆಲ್ಲ, ಹಿಂದು ಮಂದು ನೋಡ್ದಂಗೆ. ದಡಬಡನೆ ಲಾರಿ ಹತ್ತಿ ಕುಂತು ಬಿಟ್ಟರು. ಅದರೊಳಗೆ ನೆಟ್ಟಗೆ ಕುಂತುಕೊಳ್ಳಲು ಜಾಗವು ಇರಲಿಲ್ಲ. ಒಳ್ಳೆ ಕುರಿಗಳನ್ನ ತುಂಬುದಂಗಾಯಿತು, ಸದ್ಯ ಎಂಗೊ ಬಚಾವಾದ್ವಿ ನಮ್ಮೂರಿಗ್ ನಾವು ತಲುಪೀರೆ ಸಾಕೆಂದುಕೊಂಡು ಕುಂತರೆ. ಅವನು ಲಾರಿ ಕ್ಲೀನರ್ರು ಎಂಬೊ ಹುಡುಗ, ಒಂದಕ್ಕೆ ನಾಲಕ್ಕರಷ್ಟು ಚಾರ್ಜಕೇಳಾಕ್ ನಿಂತುಕೊಂಡ.ಇಷ್ಟಿಷ್ಟೊಂದು ದುಡ್ಡು ಯಾಕ್ ಕೇಳ್ ತಿದ್ದೀಯಾ ಅಂದ್ರೆ. ಕೊಡಂಗಿದ್ರೆ ನಾನ್ ಕೇಳ್ದಷ್ಟು ಕೊಡ್ರಿ, ಇಲ್ಲವ ಇಳಿಯಂಗಿದ್ರೆ ಇಲ್ಲೇ ಇಳದ್ ಬುಡಿ,ಎಂದು ಜೋರು ಮಾಡಿದ, ಅವನ ದರ್ಪದ ಮಾತಿನೊಳಗೆ ಧರ್ಮವೆಂಬೋದು ಕೊಳತೋಗಿತ್ತು. ಇಂತ ಸಂಕಟಗಳ ಸಮೇವುಗಳು(ಸಂದರ್ಭ) ಬಂದರೆ, ಕಂಡೋರ್ ಒಡವೆಗಾಗಿ, ಕಾಲು ಮುಂದಾಗುಟ್ಟಿರೊ ನನ್ಮಕ್ಕಳು ಕಾಯ್ತಿರತಾರಂತೆ, ಇಂತವರಿಂದಾಲೆ ದೇಶಕ್ಕೆ ಇಂತ ತಬ್ಬಲಿ ಕಾಯಿಲೆ ಬಂತೇನೊ? ಸರೋಜಿಯ ಮೌನದೊಳಗೆ ಮಾತು ಬಸಬಸನೆ ಗುನುಗುಟ್ಟಿತು.ಕುಪ್ಪಸದೊಳಗಿದ್ದ ಅವಳೆದೆಯ ಮೇಲಿನ, ಮ್ಯಾಣದ ಕವರಿನೊಳಗಿನ ದುಡ್ಡೆಂಬ ನೋಟುಗಳು. ಸರ ಸರನೆ ಮೈ ಹಿಗ್ಗಲಿಸಿ ಕೊಂಡವು. ಲಾರಿ ಮುಂದು ಮುಂದಕ್ಕೆ ಹೋಗುತ್ತಿರುವಾಗ, ಅದರೊಳಗೆ ನೆಟ್ಟಗೆ ತೂಗುಡುಸೋಕು ಜಾಗವಿಲ್ಲದಂತಾಗಿತ್ತು, ನಮ್ಮಂತವರಿಗಂತಲೆ ಇಂತ ಬಂಗದ ಬದುಕನ್ನ. ಭಗವಂತ ಬರ್ದಿಟ್ಟಿರಬೇಕು.ಅವಳು ಮತ್ತೆ ಮತ್ತೆ ಚಿಂತೆಯೆಂಬ ಕಂತೆಯನ್ನ ಬಿಚ್ಚಿಕೊಳ್ಳುತ್ತಿದ್ದಳು. ನಿದ್ದೆ ನೀರಿಲ್ಲದೆ ಲಾರಿಯೊಳಗಿನ ಜನವೆಲ್ಲ ಜಾಗಾರಣೆಗೆ ಕುಂತು, ಒಂದೆರೆಡು ಗಂಟೆಯು ದಾಟಿರಲಿಲ್ಲ. ಅಂಗೆ ತನ್ನ ಪಾಡಿಗೆ ತಾನು ಸಾಗುತ್ತಿದ್ದ ಲಾರಿ, ಎಲ್ಲೊ ಒಂದುಕಡೆ ಗಕ್ಕನಂತ ನಿಂತು ಬುಡುತು. ಕುಂತಿದ್ದ ಜನ ಒಬ್ಬರ ಮ್ಯಾಲೊಬ್ಬರು, ಮುಗ್ಗುರುಸಿ ಒದ್ದಾಡುತ್ತಿರುವಾಗ. ಬೂಟುಗಾಲಿನ ಪೋಲೀಸಿನವರು, ಹೆಣ್ಣು ಗಂಡು ಅನ್ನದಂಗೆ, ಕೆಳಕ್ಕೆ ಎಳೆದೆಳೆದು ಬಾರಸ್ ಬುಟ್ರು. ಸರೋಜಮ್ಮನ ಸೊಂಟಕ್ಕೊಂದು ಏಟು ಬಲವಾಗೆ ಬಿತ್ತು. ಆ ಪೆಟ್ಟಿನ ಬಾದೆಗೆ, ಇನ್ನೊಂದುಸಲ ಈ ಜಲುಮ ಬ್ಯಾಡ ಪರಮಾತುಮ ಅನ್ನಂಗಾಗಿತ್ತು.
ಓಯ್ ಎದ್ದೋಳೆ, ಗುಂಡು ಬಂಡೆ ಒಣಗತಾ ಬಂತು. ಯಾಕಿಂಗೆ ದೆವ್ವ ಮೆಟ್ಟದೋಳಂಗ್ ಕುಂತಿದ್ದೀಯಾ? ಎಂದ ರಂಗಣ್ಣನ ಗಡಸು ದ್ವನಿಗೆ, ಮಿಟ್ಟು ಬಿದ್ದ ಸರೋಜಮ್ಮ. ಅವಳು ಊರಣವಾಡಿ ಒಣಗಿದ್ದ ಕೈಯ್ಯನ್ನು ತೊಳಕೊಂಡು. ಉರಿ ತಣ್ಣಗಾಗಿದ್ದ ಒಲೆಗೆ ಇನ್ನೆರೆಡು ಸೌದೆ ಜೋಡಿಸುತ್ತ, ಅನ್ನಕ್ಕೆಂದು ಅಚ್ಚೇರಿನಳತೆಯಲಿ ಅಕ್ಕಿ ತೊಳೆದಿಟ್ಟಳು, ಯಾಕೊ ಹೋದೊರುಷ ಇದೇ ಯುಗಾದಿ ಹಬ್ಬಕ್ಕಾಗಲೆ. ಹೊಸ ಕೊರೋನವೆಂಬ ಕಾಯಿಲೆ ಹುಟ್ಟಿಕೊಂಡು. ಅಲ್ಲು ಇದ್ದಂಗಲ್ಲ, ನಮ್ಮ ಊರು ಸೇರದಂಗಲ್ಲ, ಎಂಬ ವನವಾಸಕ್ಕೆ ಬಿದ್ದ ಕಥೆ. ಅವಳ ತಲೆ ಕೊಡವೀರು ಬಿಡದಂಗೆ ಕಾಡಾಕ್ ಶುರುವಾಯಿತು.
ಕವಕವನೆಂಬ ಕತ್ತಲೆ ಅದರ ಪಾಡಿಗದು ಬಡಕಂತಲೇಇತ್ತು, ಅದೊಂದು ಚೆಕ್ ಪೋಸ್ಟಾಗಿದ್ದರಿಂದ, ಒಬ್ಬರ ಮುಖ ಒಬ್ಬರಿಗೆ ಕಾಣಿಸ ಬೇಕಿದ್ದ, ಹಾಲು ಚೆಲ್ಲಿದ ಆನಂದದ ಬೆಳಕೆಂಬೋದು, ಕತ್ತಲೆಯ ಗುತ್ತಿಗೆಯಲ್ಲಿ ದಿಮಾಕಿನ ಮೀಸೆ ತೀಡುತ್ತಿತ್ತು, ಹೆಚ್ಚು ಕಮ್ಮಿ, ಎಲ್ಲರಿಗು ಪೋಲೀಸಿನವರ ಲಾಟಿ ಏಟು ಎರೆಡೆರೆಡುಬಿದ್ದವು. ಅಲ್ಲಿ ಧರ್ಮ ಕರ್ಮವೆಂಬೋದು ದೆವ್ವದಂತೆ ನಿಂತಂಗಾಗಿ. ಎಲ್ಲರ ಮುಖದಲ್ಲಿ ರಕುತ ಹೀರಿದಂತಾಯಿತು, ನೀವು ಎಲ್ಲಿಂದ ಬಂದಿದು,್ದ ಈಗ ಮತ್ತೆಲ್ಲಿಗೆ ಹೋಗ್ ಬೇಕೆಂಬೊದನ್ನ ಪರಿಶೀಲಿಸಿದ ಪೋಲೀಸಿನವರು. ಮತ್ತೆ ಅವರೆಲ್ಲರನ್ನು ಗೂಡ್ಸು ಲಾರಿ ಹತ್ತಿಸಿ ಮುಂದಕ್ಕೆ ಕಳಿಸಿಕೊಟ್ಟರು,
ಸದ್ಯ ಲಾರಿಯೊ ಗೀರಿಯೊ ಸಿಕ್ಕಿ, ಎಂಗಾದರು ಸರಿ ಊರು ಸೇರೀರೆ ಸಾಕೆಂಬ ದಾವಂತಕ್ಕೆ ಬಿದ್ದು. ರಾತ್ರಿ ಮಂಗಳೂರಿನಲ್ಲಿ ಯಾರು ಏನು ತಿಂದಿರಲಿಲ್ಲ, ಹೆಚ್ಚು ಕಮ್ಮಿ ಎಲ್ಲರ ಹೊಟ್ಟೆಗಳು ಹಸಿದು ಸೀಯತೊಡಗಿದ್ದವು. ದಾರಿಯುದ್ದಕ್ಕು ಒಂದು ಟೀ ಅಂಗಡಿನು ಗತಿಯಿಲ್ಲ.ಯಾಕೊ ಎಲ್ಲರು ಈ ಭೂಮಿ ಮ್ಯಾಲೆ ನರಸತ್ತಂಗಾಗೆವರೆ,ಸರೋಜಿ ಸುಮ್ಮನೆ ಕುಂತುಕೊಳದೆ ಗೊಣಗಿದ್ದು ನೋಡಿ. ಓಯ್ ಅಮ್ಮಣ್ಣಿ ಲಾಕ್ಡೌನು ಬರಿ ನಿನ್ನೊಬ್ಬಳಿಗೆ ಅಲ್ಲಕಣಮ್ಮ, ಇಡೀ ದೇಶಕ್ಕೆ ಬಂದು ಗರ ಬಡದಂಗಾಗೋಗೈತೆ, ನಿನಗೆ ಟೀ ಎಲ್ಲಿ ಸಿಗತೈತೆ? ಎಲ್ಲೊ ಉಣ್ಣೋರು ಮಾತ್ರ ಉಣ್ಣುತಾನೆ ಅವರೆ, ಇಲ್ಲಿ ನಾವು ಸೀಯೋರು ಮಾತ್ರ ಸೀಯ್ತಾ ಇದ್ದೀವಿ,ಯಾವೋನ್ ಮಾಡಿನೊ? ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ, ಇಕ್ಕೊ ದರ್ಭಾರು ಮಾಡ್ತಾ ಅವರೆ. ಲಾರಿಯೊಳಗೆ ನೆಟ್ಟಗೆ ಜಾಗವಿಲ್ಲದೆ ಕುಂತು ಕೊಳ್ಳಲು ಒದ್ದಾಡುತ್ತಿದ್ದ, ರಂಗಣ್ಣನ ಅಸ್ಸಾಹಾಯಕತೆಯ ಮಾತು ಎಲ್ಲರ ಕಿವಿಗು ಬಿದ್ದಿತ್ತು.
ಒಬ್ಬರ ಮ್ಯಾಲೊಬ್ಬರು ನಿಟ್ಟು ನಿಗವಿಲ್ಲದೆ,ಬೀಳ್ತಾ, ಬೀಳ್ತಾ, ತೂಗಡುಸೋರು. ಅಂಗೆ ನಿಟ್ಟಿಲ್ಲದ ಮಾಲೊಳಗೆ, ತೂಗುಡುಸ್ತಾ ಇರುವ ಗಳಿಗೆಯಲ್ಲಿ, ಸುಮಾರು ಮೊದಲ ಕೋಳಿ ಕೂಗುವ ಜಾವವಿರಬೇಕು. ಯಾರ ಸಂಕಟಕ್ಕೆ ಕಿವಿಗೊಡದ ಲಾರಿ, ಅದರ ಪಾಡಿಗದು ಹೋಗ್ತಾ ಹೋಗುತಾ, ಯಾಕೊ ಇನ್ನೊಂದು ಸಲ, ತನ್ನ ಕಾಲ ಬುಡದಲ್ಲಿದ್ದ, ಟೈರುಗಳನ್ನೆಲ್ಲ ಉಜ್ಜಿ ಕೊಂಡು, ಜೀಯೆಂದು ನಿಂತು ಬುಡುತು. ಲೇ ಟೈಮೆಂತಯ್ಯಿಂದ್ರಾ?ನಮ್ಮೂರ ತಿಪ್ಪೇಶ ಹಿಂದು ಮುಂದು ಎಣಿಸದೆ ಕೂಗಿಕೊಂಡ.ಲಾರಿ ಮುಗ್ಗರಿಸಿ ನಿಂತಿದ್ದಕ್ಕು, ತಿಪ್ಪೇಶ ಅದೇ ಟೈಮಲ್ಲಿ ಅಬ್ಬರಿಸಿಕೊಂಡಿದ್ದಕ್ಕು, ಈ ಎರಡು ಶಬುದಗಳು ಒಂದೆ ಸಮವಾಗಿ, ಇದ್ದ ಬದ್ದವರು ಬೆಚ್ಚಿ ಬಿದ್ದುಬಿಟ್ಟರು. ಏ ಯಾರು ಗಲಾಟೆ ಮಾಡ್ ಬ್ಯಾಡ್ರೊ, ಇಲ್ಲು ಪೋಲೀಸ್ನೋರವರೆ. ಎಂದು ಕೊನೇಲಿ ಕುಂತಿದ್ದವರು ಬಸ ಬಸನೆಂಬ ಉಸಿರು ಕಕ್ಕಿದರು, ಅಲ್ಲು ಅಷ್ಟೆ ಯಾರ್ ಸುಮ್ಮನಿದ್ರು ಬಿಡಲಿಲ್ಲ. ಎಲ್ಲರನ್ನು ಇನ್ನೊಂದ್ ಸಲ ಇಳಿಸಿ ಇಳಿಸಿ ಹೊಡಯಲಾರಂಬಿಸಿದರು. ಸದ್ಯ ಈಸಲ ಹೆಂಗಸರಿಗೆ ವದೆ ಬೀಳಲಿಲ್ಲ. ಪೋಲೀಸೆಂಬ ಪುಣಾತುಮರಿಗೆ ಅಡ್ಡ ಬೀಳ್ ಬೇಕೆಂದು ಕೊಂಡರು.ಅವು ಶಿರಾ ಎದ್ದಾರಿಯೊಂದರಲ್ಲಿ ಕಾದು ಕುಳಿತಿದ್ದ ಪೋಸಿನವರ ಲಾಟಿ ಏಟುಗಳು. ಒಬ್ಬೊಬ್ಬರ ಮೈಮೇಲೆ ಒಂದೊಂದು ತರದ ಬಾಸುಂಡೆಗಳು, ಕೋಟಿ ಕೋಟಿ ಕೊಳ್ಳೆ ಹೊಡದವರಗು, ಇಂತ ಏಟು ಬೀಳ್ತ್ತಾವೊ ಇಲ್ಲವೊ? ಇಂತದ್ದೊಂದು ಏಟಿಗೆ ತಡಕೊಳ್ಳದೆ, ಕಣ್ಣಾಗಿನ ನೀರು ಕೆಳಕ್ಕುದರದಂತೆ ಕುಂತ ನಮ್ಮೂರಿನ ತಿಪ್ಪೇಶನಿಗೆ, ಅವನು ಏಳನೆ ತರಗತಿಯಲ್ಲಿ ಓದುತ್ತಿದ್ದಾಗ, ನೀನು ನೆಟ್ಟಗೆ ಹೋಮ್ವರ್ಕೆ ಬರಿಯಲ್ಲವಲ್ಲೊ? ಅಂತ ಒಂದೇ ಒಂದು ದಿನಮೇಷ್ಟ್ರು ಕಡ್ಡೀಲಿಂಗೆ ಮುಟ್ಟಸೀರು ಅನುತ. ಅವನ ಸ್ವಾದ್ರ ಮಾವುನ್ನ ಕರಕೊಂಡೋಗಿ, ಇಸ್ಕೂಲಿನ ಕಾಂಪೊಂಡಿನಲ್ಲಿ ಸುರೇಶ ಮೇಷ್ಟ್ರೊಬ್ಬರಿಗೆ, ಕೊಳ್ಳು ಪಟ್ಟಿ ಇಡುಕೊಂಡು ಒದೆ ಕೊಡಿಸಿದ್ದ.ಭೂಪ. ಎರಡು ತುಟಿಗಳ ನಡುವಿನ ಅಟ್ಟ ಹಾಸದ ಹಲ್ಲುಕಿಸಿಯತ್ತ, ಹೀರೊ ಆಗಿದ್ದ ತಿಪ್ಪೇಶನಿಗೆ. ಇವತ್ತು ಯಾವ ತಪ್ಪು ಮಾಡದೇನೆ ಕುಂತಿದ್ದವನಿಗೆ, ಪೋಲೀಸಿನೋರು ಬಿಸಿ ಬಿಸಿ ತುಪ್ಪ ಸರಿಯಾಗಿ ತಿನಿಸಿಬಿಟ್ರು, ನೋಡು ಸರೋಜಮ್ಮ, ಆವತ್ತು ಮೇಷ್ಟ್ರು ಮಾತು ಕೇಳಿ, ಏಳನೆ ತರಗತಿ ಪಬ್ಲಿಕ್ ಪರೀಕ್ಷೆ ದಾಟಿಕೊಂಡು, ಇವರಂಗೆ ಸಾದನೆ ಮಾಡಿದ್ರೆ, ನೆಳ್ಳು ಮರೆಯಲ್ಲಿ ಹಿಟ್ಟುಣುತ್ತಿದ್ನೇನೊ? ಇವತ್ತು ಈನನ್ಮಕ್ಳತ್ತಿರ ಒದೆ ತಿನ್ನಾದು ತಪ್ಪುತಿತ್ತೇನೊ? ಎಂದು ಹೇಳಿಕೊಂಡನಾದರು, ಏಳನೆ ತರಗತೀಲಿ ಅಕಲನ್ಯಾಯವಾಗಿ ಮೇಷ್ಟ್ರಿಗೆ ಒದೆಕೊಡಿಸಿದ್ದು, ತಿಪ್ಪೇಶನಿಗ್ಯಾಕೊ ಇನ್ನಿಲ್ಲದಂಗೆ. ಇವತ್ತು ಕಾಡಿ ಕಾಡಿ ದಃಖಿಸಲಾರಂಬಿಸಿದ್ದ, ಅವನ ದುಃಖವೆಂಬೋದು, ಇವತ್ತು ಸರೋಜಿಯ ಹೊಲೆಯ ಮೇಲೆ ಕುದಿಯುತ್ತಿರುವ ಅನ್ನದಂತೆ. ಕೊತಕೊತನೆ ಕುದ್ದು ಬುಡುತು.ನಾವು ಯಾರ್ದೇನು ಕೊಳ್ಳೆ ಹೊಡದಿದ್ದೀವೊ?ಈ ಪೋಲೀಸಿನವರು ದನಕ್ಕ ಬಡದಂಗೆ ಬಡದ್ಬುಟ್ರಲ್ಲೋ?ವೀರಾಪುರದ ಭೂತಣ್ಣನಿಗೆ ನಿಯಮಗಳು ಗೊತ್ತಿಲ್ಲದೆ. ಅವನ ಮುಂದಿದ್ದ ಹೊಟ್ಟೆ ಬಟ್ಟೆಯೆಂಬಂತೆ ಬದುಕುತ್ತಿದ್ದ. ನಿಯತ್ತಿನ ಮನುಷ್ಯನಿಗೆ, ಪೋಲೀಸಿನವರ ಲಾಠಿ ಏಟು, ಕುಂಡಿ ಮ್ಯಾಲಿನ್ನು ಕವ ಕವನೆನ್ನುತ್ತಿತ್ತು.
ಮತ್ತೆ ನೀವೆಲ್ಲ ಇಂಗೆ ಡೈರಕ್ಟಾಗಿ ಊರಿಗೋಗಂಗಿಲ್ಲ? ಎಂದು ಅಲ್ಲಿಗೆ ಬಂದ ತರಾವರಿಯ ಅಧಿಕಾರಿಗÀಳು.ಚಿಂತಾ ಕ್ರಾಂತರಾದರು.ಯಾಕೆಂದರೆ ಶಿರಾನಗರದಲ್ಲಿ ಯಾವ ಬಿಲ್ಡಿಂಗು ಖಾಲಿಯು ಇರಲಿಲ್ಲ, ಕತ್ತಲೆಯ ಮಸುಕರಿದು, ಇಷ್ಟಿಷ್ಟೆ ಬೆಳಕಿನ ಕಿರಣಗಳು ಮರಿಗಳಾಗತೊಡಗಿದವು. ಸೆಕೆಯ ಚಾದರ ಕಿತ್ತು, ಸುಳಿ ಗಾಳಿ ಸಳ ಸಳನೆ ತೂರಿಬರತೊಡಗಿತು, ಯುಗಾದಿ ಹಬ್ಬದೊತ್ತಿಗೆ ಊರು ಸೇರೇ ಸೇರ್ತೀವಂತ, ಕಟ್ಟಿಕೊಂಡಿದ್ದವರ ಕನಸುಗಳು, ಕಣ್ಣಲ್ಲಿ ಕಾವು ಕಳಕೊಂಡವು, ಇಂಗೆ ತೊಂಬತ್ತು ಜನ ಮಂಗಳೂರಿನಿಂದ ಬಂದು ಸಿಗಾಕ್ಕೆಂಡು ಬಿಟ್ಟವರೆ. ಅವರನ್ನ ಏಕಾ ಏಕಿ ಊರಿಗೆ ಕಳಸಂಗಿಲ್ಲ, ನಿಮ್ಮನ್ನೆಲ್ಲ ಕ್ವಾರಂಟೈನ್ ಮಾಡ್ಬೇಕೆಂದು, ಅಲ್ಲಿಗೆ ಆಗಮಿಸಿದ್ದ ಏಸಿ, ಡೀಸಿ, ತಾಸಿಲ್ದಾರುಗಳು ಯೋಚನೆ ಮಾಡುತ್ತಿದ್ದ ಗಳಿಗೆಯಲ್ಲಿ., ಕೊನೆಗೆ ಆ ಮಧುಗಿರಿ ತಾಸಿಲ್ದಾರೆಂಬ ಪುಣ್ಯಾತುಮರು, ಯಾವುದೊ ಮುರಾರ್ಜಿ ಹಾಸ್ಟೆಲ್ಲಿಗೆ ತಂದು ದಡಾ ಸೇರ್ಸೀರು. ಸ್ವಾಮಿ ನಮ್ಮಪ್ಪ ಯಾರೆತ್ತ ಮಗನೊ ಏನೊ?ಕುಂಟು ರಂಗಮ್ಮನ ಮಾತು ಅಲ್ಲಿ ನಿಂತಿದ್ದವರ ಕಿವಿಗೆಲ್ಲ ಬಿತ್ತು.ಅಲ್ಲಿ ಮಲಗಾಕು ಜಾಗವಿತ್ತು, ಉಂಬಾಕು ಊಟವಿತ್ತು, ಉಂಬುವಾಗ ಕಂಠ ಪೂರ್ತಿ ಇಕ್ಕುತ್ತಿದ್ದರು, ಅಲ್ಲಿ ಬಟ್ಟೆ, ಬರೆ, ಬೆಲ್ಶೀಟು ಕೊಡುವಂತ ಕೊಡುಗೈನವರು ದಾನವು ಕೊಟ್ಟರು, ಆದರೆ ನಮ್ಮನೇಲಿ ನಾವು ಇದ್ದಂಗಾಯಿತೆ? ಸರೋಜಿಯ ಮೈ ಉದ್ದ ಸುರುದರು. ಒಪ್ಪಿಕೊಂಬದ ವೆಕ್ತಿ ಸ್ವತಂತ್ರದ ಪ್ರಶ್ನೆ, ಅವಳೊಳಗವಳನ್ನ್ನೆ ತಿನ್ನಾಕಿಡಿದಿತ್ತು, ಮೇಮೇಮಿ ದೊಂಗಲೇಮರಾ? ಇಟ್ಲು ಕೂಡೇಸಿಂಡಾರು? ವೀರಾಪುರದ ಭೂತಣ್ಣನ ಅನುಮಾನದ ಸಿಟ್ಟು, ಅಂತದ್ದೊಂದು ಅಸ್ಸಾಹಾಯಕತೆಯ ಸಿಟ್ಟನ್ನ ನುಂಗಲಾರದವನು. ಆಗಾಗ ಅವನಿಗವನೆ ಅಬ್ಬರಿಸುತ್ತಿದ್ದ,
ಗಂಡಸರೆಲ್ಲ ಹಾಲಿನೊಳಗೆ ಪವಡಿಸುವಂತಾಯಿತು. ಹೆಣ್ಣುವiಕ್ಕಳೆಲ್ಲ ರೂಮುಗಳಲ್ಲಿ ಸೇರಿಕೊಂಡರು, ಗೋಡೆಯ ಪಕ್ಕಕ್ಕೆ ಆನಿಕೊಂಡಿದ್ದ, ಸರೋಜಿಯ ಹ್ಯಾಂಡ್ ಬ್ಯಾಗಿನ ಮ್ಯಾಲಿದ್ದ ಹೊಸಾ ಶರ್ಟು.ಮಗನಿಗೆ ಹಬ್ಬಕ್ಕಂತಲೆ ಕೊಂಡು ಕೊಂಡಿದ್ದಳು, ಮಂಗಳೂರಿನ ಅಂಗಡಿಯವನು, ರೇಟು ಆರುನೂರಂತ ಪಟ್ಟಿಡುಕೊಂಡು ಕೊಡೇ ಕೊಡ, ಇವಳು ನಾನ್ನೂರಕ್ಕಂತ ಕೊಸರಾಡಿಕೊಂಡಿದ್ದವಳು ಬಿಡೆ ಬಿಡಲಿಲ್ಲ, ಕೊನಿಗೆ ನನಗು ಬ್ಯಾಡ? ನಿನಗು ಬ್ಯಾಡ? ಯಣ ಐನೂರು ಕೊಡತ್ತೀನಿ ಕೊಟ್ಟು ಬುಡು, ಎಂದು ಆಸೆಯ ಲೆಕ್ಕಾಚಾರಕ್ಕೆ ಮುಕ್ಕು ಬಾರದಂತೆ. ಕೊಂಡು ಕೊಂಡು ತಂದಿದ್ದಳು. ನೋಡಿವತ್ತು ಇದು ನನ್ನ ಮಗನಮೈಮ್ಯಾಲಿದ್ದಂಗಲ್ಲ. ಇಲ್ಲ ಅವನಂಗಡೀಲಿದ್ದಂಗಲ್ಲ. ಇದನ್ನೆ ಭಗವಂತನ ಲೀಲೆಯೆಂಬೋದು. ಮೈಗೆಲ್ಲ ಎಣ್ಣೆತಿಕ್ಕಿ, ಗುಡಾಣದೊಳಗೆ ಕಾದ ಸುಡಾ ಸುಡಾ ನೀರುಯಿದು. ಈ ಗರಿ ಗರಿಯಂತ ಶರ್ಟು ತೊಡೆಸಿ, ಕಾಯಾಲು ಹೋಳಿಗೆ ಉಣಿಸಿ, ಅವನ ತಲೆಯೊಳಗಿನ ಸಾಮ್ರಾಜ್ಯದ ಕ್ರಾಪಿನೊಳಗೆ. ತಣ್ಣನೆಯ ಬೆರಳುಗಳಾಡಿಸಿ, ತಬ್ಬಿ ಮುದ್ದಾಡ ಬೇಕಿದ್ದ ಸರೋಜಿಯ ಕನಸು, ಅವಳೆದೆಯೊಳಗೆ ಇಲ್ಲೆ ನೆನೆಗುದಿಗೆ ಬಿದ್ದುಬಿಡುತು. ನಾವಂದುಕೊಂಡಿದ್ದೇನು ಆಗಲ್ಲ. ಎಲ್ಲ ಆ ಭಗವಂತನಿಚ್ಚೆ, ಕುಂತು ಮಕನಾಗಿ ಕುಂತಿದ್ದವಳನ್ನ. ಏ ಎದ್ದೋಳಮ್ಮಣ್ಣಿ ಹೊಲೆ ಮ್ಯಾಲಿರುವ ಅನ್ನ ಸೀಯ್ತಾ ಬಂತು. ನಿನಗೇನೊ ಮೆಟ್ಟಿಕೊಂಡೈತ್ ಕಣಲೆ, ಅದಿಕ್ಕೆ ಇವತ್ತು ಇಂಗ್ ಕುಂತಿದ್ದೀಯಾ, ಅಂದ ರಂಗಣ್ಣನಮಾತಿಗೆ ಸರೋಜಿ ಅವಳ ಚಿಂತೆಯ ತಲೆಯನ್ನ ಕೊಡುವುತ್ತ ದಡಗ್ಗನೆದ್ದಳು,
ತಲಬಾಗಿಲ ತುಂಬ ತೂಗಿ ತೂಗಿ ಮೆರೆದ ಮಾವಿನ ತೋರಣ. ನಾವು ಜೊತೆಯಲ್ಲೆ ಇರಬೇಕೆಂದು, ಜೋತು ಬಿದ್ದ ಬೇವಿನೆಲೆಯ ಗುಚ್ಚಗಳು. ಅರಿಶಿನಕುಂಕುಮವಿಕ್ಕಿಸಿಕೊಂಡ ಮೇಲು ಮದನಿಂಗಿಯಂತ ವೊಸಿಲು. ಬಂಗಾರದ ಕಿರಣಗಳಿಂದ ಬಾಗಿ ಬಾಗಿ ಮುತ್ತಿಕ್ಕುತ್ತಿರುವ ಸೂರ್ಯಪರಮಾತುಮ. ಬಗ್ಗಡವಾಕಿ ಸಾರಿಸಿದ ಹಟ್ಟಿ ಬಯಲ ತುಂಬ. ಅವಳ ಬೆರಳ ತುದಿಯಲ್ಲಿ ಜಾರಿದ. ತೇರು ತೇರಿನ ರಂಗೋಲಿ, ಅಪ್ಪ ಮತ್ತು ಮಗನ, ನೆತ್ತಿ ಬಾಯಿಂದ ಇಳಿದು. ಕಾಲಿನ ಪಾದದವರೆಗು ಮಿನುಗುಟ್ಟದ ಹರಳೆಣ್ಣೆ. ಗಣಗಣನೆ ಕಾದ ಗುಡಾಣದಲ್ಲಿ ಕಾವಾಡಿದ ಬಿಸಿನೀರು. ಬಚ್ಚೆಕಲ್ಲೊಳಗೆ ತಿಕ್ಕ ತಿಕ್ಕಿ ಉಯಿಕೊಂಡ. ಸುಡಾ ಸುಡಾ ಹೊಗೆಯ ರಂಗೆಬ್ಬಿಸಿದ ಸ್ನಾನ, ಹೊಸ ಬನೀನು ನಿಕ್ಕರ್ರು ತೊಟ್ಟುಕೊಂಡ ಅಪ್ಪ ಮಗ,ಯಾವ ಮಧುವೆಯ ಮದನಿಂಗರಿಗು ಸಮವಿಲ್ಲದ.ಮಿಂಚು ಮುಖದವರಾಗಿ, ಕಣ್ಣೋಳಗಿನ ಕನ್ನಡಿಯ ಹೊಳಪು ತೀಡಿಕೊಂಡು,ಮನೆದೇವರ ಮುಂದಿದ್ದ ಬೇವು ಬೆಲ್ಲಕ್ಕೆ ಕೈ ಒಡ್ಡಿದರು. ಕಷ್ಟಾನು ಇರಲಿ, ಸುಖಾನು ಇರಲಿ, ಭಗವಂತನ್ನ ಮಾತ್ರ ಬ್ರೆಷ್ಟು ಮಾಡ್ಬಾರದು. ಎಂದು ಸಮಾದಾನಿಸಿಕೊಳ್ಳುತ್ತ, ಕೆಮ್ಮಿನಿಂದೆಯೆ ಗೂಡು ಕೀಳುತ್ತಿದ್ದ, ಕಫವ ನುಂಗಿದ ಗಂಡ ರಂಗಣ್ಣ.ಒಳಗೆ ಉಣ್ಣು ಬೇಕಿದ್ದ ಹೋಳಿಗೆಗಳು, ಕೆಂಡದ ಮ್ಯಾಲೆ ಕರಗಿದ ಬಿಸಿ ತುಪ್ಪ, ಕಾಯಾಲು, ಕಾಳು ಉಳಿ, ಅಕ್ಕಿಸಂಡಿಗೆ ಹಪ್ಪಳ, ಉಪ್ಪಿನಕಾಯಿ, ಉಪ್ಪು ಉಳಿಸೇರಿಕೊಂಡ ಹೆಸರು ಬೇಳೆ, ನೀರುಳ್ಳಿಬೆರೆತ ನೀರು ಮಜ್ಜಿಗೆ, ಅಮ್ಮಣ್ಣಿ ಹೋಳಿಗೆ ಸಾರು ಸುಮ್ಮನೆ ಉಂಡುರಾಗಲ್ಲ? ಕಪ್ಪಿನ ತುಂಬ ಬಿಟ್ಟುಕೊಂಡು ಕುಡಿಯಂಗಿರ್ಬೇಕು. ಎಂದು ಗಮಾಡಿಸುತ್ತಿದ್ದ ಅಡಿಗೆಯ ಸುತ್ತ, ರಂಗಣ್ಣ ಗಿರಕಿ ಹೊಡೆಯತೊಡಗಿದ. ಸರೋಜಿಯ ಮಗ ಮ್ಯಾಗಲಟ್ಟಿ ಮಾದೇಶನ ತೋಟದಲ್ಲಿ, ಕುಯಿದು ತಂದಿದ್ದ ಬಾಳೆಎಲೆಗಳನ್ನ.ಅವಳು ನಿಗಾಮಾಡುತ್ತ ತಿರುವಾಕುತ್ತಿದ್ದಳು, ಇದ್ಯಾಕಲ ಸರೋಜಿ? ಹೊತ್ತು ನೆತ್ತಿ ಸುಡಂಗಾದರು ಸುಮ್ಮನೆ ಎಲೆ ತಿರುವಾಕ್ತಿದೀಯಾ?ಹೊಟ್ಟೆ ಸೀಯ್ತಿಲ್ಲವೇನಮ್ಮಣ್ಣಿ?ಗಂಡ ರಂಗಣ್ಣ ಹಾಳೊಟ್ಟೆ ಗಂಡಸು ಹಸಿವಿಗೆ ತಡಿದಿದ್ದವನು. ಎಂಗೈತಪ್ಪ ಗ್ಯಾನ? ದೊಡ್ಡೋರ್ ಗುಡ್ಡೆಗಳಿಗೆ ಎಡೆ ಹಾಕಿ ಕಾಯಿ ಹೊಡಿಬ್ಯಾಡವೆ?ಅವರನ್ನ ನಾವ್ ಮರತ್ವಿ ಅಂದ್ರೆ, ಇವರು ನಮ್ಮನ್ ಮರಿಯಲ್ಲವೆ?ಅಂಗಂತಲೆ ಒಂದು ಅಗ್ಗರದ ಎಲೆ ಹುಡುಕುತ್ತಿದ್ದೀನಿ, ಅನುತ ತಣ್ಣಗೆ ಹೇಳೀಳು.
ಬೆಳಗಿನಿಂದ ಸಂಜೆ ತನಕ, ಪುರುಸೊತ್ತಿಲ್ಲದ ಕೆಲಸದಲ್ಲಿ, ರುಬ್ಬಿ ರೋಕುತ್ತ, ಸೋತು ಸುಣ್ಣವಾದ ಶರೀರವನ್ನ ಬಗ್ಗಿಸಿಕೊಂಡು, ರಾತ್ರಿ ಹೊತ್ತಿನೊಳಗೆ ಟೀ ವಿ ನೋಡಾಕ್ ಕುಂತುಕೊಂಡರೆ. ಯವ್ವ ಯವ್ವ ಲೆಕ್ಕವಿಲ್ಲದ ರಾಶಿ ರಾಶಿ ಎಣಗಳು. ಅವುಗಳಿಗೆ ನಾನು ನೀನೆಂಬೋರಿಲ್ಲದೆ ಅನಾತವಾಗಿ. ಸುಡಾಕು ಜಾಗಿಲ್ಲದೆ, ಊಣಾಕು ಜಾಗಿಲ್ಲದೆ,ಎಳೆದೆಳೆದು ತೋರ್ ಸಿದ್ದನ್ನೆ ತೋರಿಸುತ್ತಿರುವ, ಅವಳ ನಡುಮನೆಯ ಟೀವಿಯನ್ನ ನೋಡಿ ನೋಡಿ, ಎದಾರಿಗಿಕ್ಕೆಂಡಿದ್ದ ಸರೋಜಿಯ ಮನಸ್ಸು, ಅಂಗಾರೆ ನಾನು ಸತ್ತರೆ ಇಷ್ಟೇ ತಾನೆ? ಮೊನ್ನೆ ಮೊನ್ನೆವರಗು ಸಾವಿಗೆಷ್ಟೊಂದು ಅರ್ಥವಿತ್ತು. ಇವತ್ತು ಅಷ್ಟೊಂದು ಎಣಗಳಿಗೆ ಯಾರು ನೀರುಯ್ಯುತ್ತಿಲ್ಲ,ಹೊಸ ಪಂಚೆಯಲಿ ಸುತ್ತಲಿಲ್ಲ, ಪಾದ ಪೂಜೆ ಮಾಡಲಿಲ್ಲ. ಎದೆ ತುಂಬ ಹಾರಗಳ ರಾಶಿಯಿಲ್ಲ.ಬಂದು ಬಳಗದವರು ಎಗಲು ಕೊಡಲಿಲ್ಲ, ಕೊಂಬು ಕಹಳೆಗಳ ಮುಂದೆ ಸಾಗಲಿಲ್ಲ, ಆರಡಿ ಗುಂಡಿಗಿಕ್ಕಿ ಮಲಗಿಸಲಿಲ್ಲ, ಹಿಂದು ಮುಂದಲವರ ಹಿಡಿ ಮಣ್ಣಿನ ರಾಶಿಯಲಿ ಮಾಯವಾಗಲಿಲ್ಲ. ನಮ್ಮ ಮಕ್ಕಳು ಮುಂದೊಂದು ದಿನ ಬದುಕಿನರ್ಥವನ್ನ ಕಳುಕೊಂತಾರೆ. ಅನ್ನುವ ಎದಾರಿನಲ್ಲಿರುವ ನಾವು. ನಮ್ಮ ಕಣ್ಣ ಮುಂದೆಯೆ, ಸಾವಿನರ್ಥವನ್ನು ಕೂಡ ಇಷ್ಟು ಗಕ್ಕನೆ ನಾವೆ ಕಳಕೊಂಡೆವ? ಭಗವಂತ ಈ ಪಾಪಿ ಕಣ್ಣೋಳಗೆ ಇನ್ನು ಏನೇನ್ ತೋರುಸ್ತ್ತಾನೊ? ಎಂದು ಅವಳ ಮುಂದಿದ್ದ ಅಗ್ರದ ಬಾಳೆ ಎಲೆ ಹುಡುಕಿಕೊಂಡವಳು. ಅತ್ತೆ ಮಾವನ್ನ ಊಣಿಸಿರುವ ಊರಿಂದಲ ಹೊಲಮಾಳಕ್ಕೆ ಬಂದಳು.
ಗುಡ್ಡೆಗಳ ಸುತ್ತ ಕಲ್ಲು ಕಸ ಹಾಯ್ದಳು, ನೀರು ಚಿಮುಕಿಸಿ ಹೂವ್ವ ಮುಡಿಸೀಳು, ಎಡೆ ಹಾಕಿ ಕಾಯಿಹೊಡೆದಳು, ಸುತ್ತ ಮೂರು ಸುತ್ತುಸುತ್ತಿಬಂದು, ಭೂಮಿಗೆ ಬಾಗಿ ಶರಣು ಮಾಡೀಳು, ಅಲ್ಲೆ ಕುಂತವಳ ಕಣ್ಣೀರು ಪಳ್ಳೆಂದು ಉದುರಿದವು. ಇದ್ಯಾಕಮ್ಮ ಅಜ್ಜಿ ತಾತ ಸತ್ತು ಏಸೊ ವರ್ಷಕ್ಕ ಬಂತಲ್ಲ? ಮತ್ತೀಗ್ಯಾಕಳತೀಯ? ಎಂದ ಮಗನ ಮಾತಿಗೆ. ಅಪ್ಪಯ್ಯ ಇವರೆ ಪುಣ್ಯವಂತರು ಕಣಲ, ಬಂದು ಬಳಗದವರ ನಡುವೆ ಮಣ್ಣಾಗೆವರೆ ಕಣೊ, ಈಗ್ ಬಂದಿರೊ ತಬ್ಲಿನನ್ ಮಗನ ಕಾಯಿಲೆ ನಮಗೇನಾರ ಬಂದು ಸತ್ತರೆ. ಆಸ್ಪತ್ರೆಯವರೆ ಸುಡುತ್ತಾರಂತೆ, ಅಂದ ಮ್ಯಾಲೆ ನೀನು ನಿನ್ ಮಕ್ಕಳು ಎಲ್ಲಿಗೆ ಬಂದು ಎಡೆಯಾಕಿ ಪೂಜೆ ಮಾಡ್ತ್ತೀರಪ್ಪ? ಎಂದು ಅತಂತ್ರದ ಮನಸ್ಸಿನೊಳಗೆ ಬಡ ಬಡಿಸಿದ ಸರೋಜಿ. ಮನೆ ತನಕ ಬಂದ್ರು ಅವಳ ದುಃಖದ ಕಣ್ಣೀರು ಮಾತ್ರ ಬ್ಯಾಡ ಬ್ಯಾಡವೆಂದರು ಇನ್ನು ಜಿನುಗುತ್ತಲೆ ಇದ್ದವು.**********