Click here to Download MyLang App

ಓರೆಕೋರೆ ಬದುಕು - ಬರೆದವರು : ಅಜಯ್ ಕುಮಾರ್ ಎಂ ಗುಂಬಳ್ಳಿ | ಸಾಮಾಜಿಕ


ಪ್ರತಿನಿತ್ಯವೂ ಅವಳದೇ ನೆನಪು
ಅವಳದೇ ಯೋಚನೆಗಳು
ಅವಳದೇ ದನಿಯ ಸದ್ದು
ಅವಳ ರೂಪವೇ ಕಂಡಂಗೆ ಎಲ್ಲಿಲ್ಲಿಯೂ ಅವಳೇ ಕಾಣಿಸುತ್ತಿರಲು
ಅವಳ ತುಟಿ, ಕೆನ್ನೆಗೆ ಮುತ್ತು ಕೊಡಬೇಕೆಂಬ
ಆಸೆ ತೀವ್ರವಾಗಿ ಹೆಚ್ಚಾಗುತ್ತಿದೆ.

-ಸುಮಾರು ಹೊತ್ತಿನಿಂದ ಬರೆಯುತ್ತಿದ್ದುದಕ್ಕೆ ಈಗಷ್ಟೇ ಮೇಲಿನ ಸಾಲುಗಳು ಹುಟ್ಟಿದ್ದವು. ಬರೆದು ಮತ್ತೆ ಅವುಗಳನ್ನೆ ಓದುತ್ತ ಸಂಜಯ್ ಮುಖದಲ್ಲಿ ಮುಗುಳ್ನಗು ತಂದುಕೊಂಡಿದ್ದ. ನುಗ್ಗೆಸೊಪ್ಪು ಊರುತ್ತ ಕೂತಿದ್ದ ಭಾಗ್ಯ ಮಗನ ಮೇಲೇಯೇ ಕಣ್ಣು ನೆಟ್ಟಿದ್ದವಳು ಇದ್ದಕ್ಕಿದ್ದಂತೆ ಈಗ ‘ಒಡೋ ಎದ್ದು ಬೆಲ್ಲ ಟೀಸೊಪ್ಪು ತಕ್ಕ ಬಾ ವೋಗು. ಅಷ್ಟೊತ್ತಿಂದ್ಲೂವ ಕುಡಬಾಲ ಬರೀತ್‍ಕೂತನ’ ಅಂದಾಗ ಎದ್ದು ಸಂಜಯ್ ‘ಅದ್ಯಾಕವ್ವಾ ಹಿಂಗಾಡಿಯೇ ನಾನ್ಯಾನ್ ಮಾಡ್ದಿ ನಿನ್ನ’ ಗಿದುರ್ತ ಚಾವಡಿ ರೋಡಿಗೆ ಬಿದ್ದ. ಸಣ್ಣ ಹೈಕಳು ಚಾವಡಿಯ ಕಲ್ಲುಕಂಬಗಳನ್ನು ಹಿಡಿದು ಆಟ ಆಡುತ್ತಿದ್ದರು. ಬೀಡಿ ದಾಸಯ್ಯ ತನ್ನ ದಢೂತಿ ಮೈಯನ್ನು ಗಾರೆನೆಲಕ್ಕೆ ಹಾಸಿಕೊಂಡು ಮಲಗಿದ್ದ. ಬಿದಿರ ಕೋಲು ಪಕ್ಕದಲ್ಲಿತ್ತು. ಹೈಕಳು ಸದ್ದುಗದ್ದಲ ಮಾಡುತ್ತ ಅವನ ಮೇಲೇಯೇ ನೆಗೆದಾಡುತ್ತಿದ್ದರೂ ಎಚ್ಚರಾಗದಷ್ಟೂ ಮಾಯದ ನಿದ್ರೆ ಅವನಿಗೆ. ಸಂಜಯ್ ಅಂಗಡಿಗೆ ಬಂದಿದ್ದ. ಅದರ ಸುತ್ತಮುತ್ತಲು ಕುಳಿತಿದ್ದವರು ಇತರರ ಮನೆಯ ವಿಚಾರಗಳನ್ನು ಹರಟುತ್ತಿದ್ದರು. ಬೆಲ್ಲ-ಟೀಸೊಪ್ಪಿನೊಂದಿಗೆ ಅವನು ಹಟ್ಟಿಗೆ ವೋದ.

‘ಇದ್ಯಾವನುಡಾ ನಿಂಗ ಈ ಬೆಲ್ಲ ಕೊಟ್ಟಿರವ್ನು. ಹಪ್ಪಳದ ಬಟ್ಟಿನಂಗೆ ಕಾಸ್ ತಕ್ಕಳಲ್ವ’ ಅನ್ನುತ್ತ ಭಾಗ್ಯ ಬೆಲ್ಲವನ್ನು ವಾಪಸ್ ಕೊಟ್ಟು ಬೇರೆದು ತರಲು ಹೇಳಿದಳು. ಯಾಕೆಂದರೆ ಅದರ ಎರಡು ಮೂಲೆಗಳು ಮುರಿದಿದ್ದವು. ಸಂಜಯ್ ಇರುಸುಮುರಿಸಿನಲ್ಲೆ ಮತ್ತೆ ಅಂಗಡಿ ಬಳಿಗೆ ಬಂದು ‘ಇದು ಬ್ಯಾಡ’ ಅಂದ. ಜುಂಜಯ್ಯ ಮುಖದ ಗಂಟುಗಳನ್ನು ಮತ್ತಷ್ಟು ಬಿಗಿಗೊಳಿಸುತ್ತ ‘ತತ್ತಾ’ ಅನ್ನುತ್ತ ಕಿತ್ತುಕೊಂಡು ಬ್ಯಾರೆ ಬೆಲ್ಲಕೊಟ್ಟ. ಆಗ ಪ್ರಸನ್ನ ಬಂದು ‘ಹೋಗಪ್ಪ ಮನೆಗೆ’ ಎಂದು ಜುಂಜಯ್ಯನನ್ನು ಕಳಿಸಿದ. ಸಂಜಯ್ ಸೀದಾ ಹಟ್ಟಿಗೆ ಹೊರಟಿದ್ದ. ಎಚ್ಚರಾಗಿದ್ದ ಬೀಡಿ ದಾಸಯ್ಯ ತನ್ನ ಮೇಲೆ ನೆಗೆಯುತ್ತಿದ್ದ ಹೈಕಳತ್ತ ಕೋಲನ್ನು ಬೀಸತೊಡಗಿದಾಗ ಭಯದಿಂದ ಹೈಕಳು ಬೀಳುವುದನ್ನು ಕಾಣದೇ ಓಡಿದರು. ಹಾಗೇ ಬಂದವರಲ್ಲಿ ಸ್ನೇಹಿತ್ ಸಂಜಯ್‍ಗೆ ಡಿಕ್ಕಿಹೊಡೆದ. ಅವನ ಕೈಲಿದ್ದ ಬೆಲ್ಲ ಗಲ್ಲಿಯೊಳಕ್ಕೆ ಬಿದ್ದೊಯ್ತು. ಆ ಸಣ್ಣ ಹೈದನ ಮೇಲೆ ಕೈಮಾಡುವ ಮನಸ್ಸು ಅವನಿಗೆ ಬರಲಿಲ್ಲ. ಅವನ ಜೇಬಲ್ಲಿ ಕಾಸು ಇರಲಿಲ್ಲ. ಹಾಗೇ ಮನೆಗೆ ಹೋದರೆ ಬೊಗಳು. ಇರೋ ವಿಷಯವನ್ನ ಹೇಳಿದರೂ ಅವ್ವ ಸುಮ್ಮನಿರುವುದಿಲ್ಲ. ಸಂಜಯ್ ಪೇಚಿಗೆ ಸಿಲುಕಿಕೊಂಡಿದ್ದ. ಏನೋ ಯೋಚಿಸುತ್ತ ಮನೆಗೆ ಬಂದ.
‘ಎಲ್ಲುಡಾ ಬೆಲ್ಲ’ ಖಾಲಿ ಕೈಯನ್ನು ನೋಡಿಯೇ ಭಾಗ್ಯ ಕೇಳಿದಳು.

‘ಗಲ್ಲಿಗೆ ಬಿದ್ದೊಯ್ತು’ ಅವ್ವನ ಸ್ವಭಾವ ಗೊತ್ತಿದ್ದು ಒಂದೇ ಮಾತೇಳಿದ.

‘ನಾಟ್ಕ ಆಡ್ಬೇಡ ಕೊಡುಡಾ’ ಭಾಗ್ಯ ತಮಾಷೆ ಮಾಡುತ್ತಿರಬೇಕೆಂದು ತಿಳಿದಿದ್ದಳು.

‘ನಿಜವಾಗ್ಲೂ ಗಲ್ಲಿಗೆ ಬಿದ್ದೊಯ್ತು. ಬೀಡಿ ದಾಸಯ್ಯ ಹೈಕುಳ್ಗ ಅಂತ ದೊಣ್ಣೆ ಎಸ್ದದ್ದೂ ನನ್ ಕೈಗೆ ತಾಗಿ ಬೆಲ್ಲ ಗಲ್ಲಿ ಒಳಕ ಬಿದ್ದೋಯ್ತು’ ಅಂದದ್ದೇ

ಸಿಡಿಮದ್ದು ಸ್ಫೋಟಿಸಿದಂತೆ ಭಾಗ್ಯ ಕ್ಯಾಕರಿಸಿ ಉಗಿಯುತ್ತ ‘ಅಯ್ಯೋ ಕಿತ್ತೋದ್ ನನ್ ಮಗ್ನೆ’ ಎನ್ನುತ್ತ ಚಾವಡಿಯತ್ತ ಹಜ್ಜೆ ಇಟ್ಟಳು. ಅವಳಿಂದಿಂದೆ ಸಂಜಯ್‍ನೂ ಹೋದ.

ಕೂತಿದ್ದ ಬೀಡಿ ದಾಸಯ್ಯನ ಬಳಿ ಬಂದು ಅವಳು ಬಾಯಿಗೆ ಬಂದಂತೆ ಬೈಯಲು, ದೊಣ್ನೆಯನ್ನು ಎತ್ತಿ ಕೆಟ್ಟಪದಗಳಿಂದ ಬೈಯಲು ಅವನು ಶುರುಮಾಡಿದ. ಸಂಜಯ್‍ಗೆ ಹೆದರಿಕೇಲಿ ಕೈಕಾಲುಗಳು ನಡುಗಲು ಶುರುವಾಗಿದ್ದವು. ಸುತ್ತಮುತ್ತಲ ಜನವೂ ಅಲ್ಲಿಗೆ ಬಂದು ಕಣ್ಣುಗಳನ್ನು ಮಿಟಕಿಸದೇ ನೋಡುತ್ತ ನಿಂತರು. ಗದ್ದಲದತ್ತ ಗಮನವಿಟ್ಟು ಶಾಂತಮ್ಮ ಒಂದೇ ಸೂಲಿಗೆ ಓಡಿಬಂದು ‘ಯಾನವ್ವ’ ಅಂದರೂ ಭಾಗ್ಯ ತನ್ನ ಬಾಯಿಯನ್ನು ಹಿಡಿತಕ್ಕೆ ತಂದುಕೊಳ್ಳದ್ದು ಸಂಧರ್ಭವನ್ನು ಮತ್ತಷ್ಟು ಬಿಗಡಾಯಿಸಿತು. ನಡೆದಿದ್ದನ್ನು ಹೇಳಬೇಕೋ? ಹೇಳಬೆಡವೋ? ಎಂಬುದನ್ನು ನಿಶ್ಚಯಿಸುವ ದ್ವಂದ್ವದಲ್ಲಿದ್ದ ಸಂಜಯ್ ಹೇಳಬೇಕೆಂಬಂತೆ ಇನ್ನಷ್ಟು ಹತ್ತಿರಕ್ಕೆ ಬಂದ. ಅಷ್ಟೊತ್ತಿಗೆ ಅಂಗಡಿ ಪ್ರಸನ್ನ ಹಟ್ಟಿಯಿಂದ ಬಂದವನು ‘ದಾಸಯ್ಯನದೂ ಏನು ತಪ್ಪಿಲ್ಲ. ನಿನ್ ಮಗನ್ನ ಕೇಳಕ್ಕ’ ನಗುತ್ತಲೇ ಹೇಳಿದಾಗ ಭಾಗ್ಯ ‘ಬಾ ಇಲ್ಲಿ’ ಕರೆದಳು. ಹತ್ತಿರಕ್ಕೆ ಬಂದ ಮಗನನ್ನು ಹೀನಮಾನವಾಗಿ ಬೈಯುತ್ತ ‘ಅದ್ಯಾನ ಬಂದುದಾ ಬೊಗಳು’ ಅಂದಳು. ನಡೆದದ್ದ ಹೇಳಿದ ಸಂಜಯ್‍ಗೆ ಮತ್ತಷ್ಟು ಬೈಗಳು ಬಿದ್ದವು. ಬೀಡಿ ದಾಸಯ್ಯನೂ ಮಗಳ ಸಮಾನವಾದ ಭಾಗ್ಯಾಳನ್ನು ಹಿಗ್ಗಾಮುಗ್ಗಾ ಬೈದುಬಿಟ್ಟಿದ್ದು ಅವಳಲ್ಲಿ ತುಂಬಾ ನೋವು ತರಿಸಿತ್ತು. ಈ ನೋವಿಗೆ ತನ್ನ ಮಗನೇ ಕಾರಣವೆಂದು ತಿಳಿದಿದ್ದ ಭಾಗ್ಯ ಮುಖವನ್ನು ಚಿಕ್ಕದು ಮಾಡ್ಕಂಡು ಹಟ್ಟಿಯೆಡೆಗೆ ನಡೆದಳು. ಸ್ನೇಹಿತ್‍ನ ಅಜ್ಜಿ ಕೆಂಚಮ್ಮ ಬಂದವಳೇ ಬೆಲ್ಲ ತೆಗೆದೂ ಸಂಜಯ್ ಕೈಗೆ ಕೊಟ್ಟು ‘ನನ್ನೇ ಕೇಳ್ಬಾರ್ದ ಕೂಸು ನೀನು’ ಎನ್ನುತ್ತ ಬುದ್ದಿ ಮಾತೇಳಿ ‘ಹೋಗು ನನ್ ಕಂದ’ ಅಂದು ಹಟ್ಟಿ ಸೇರ್ಕಂಡಳು.
ಚಾವಡೀಲಿ ಬೀಡಿ ದಾಸಯ್ಯ ತಡೆ ಇಲ್ಲದಂತೆ ಬೈಯುತ್ತಲೆ ಇದ್ದ.

ಸಂಜಯ್‍ಗೆ ಮನಸ್ಸು ಭಾರವೆನಿಸಿ ತನ್ನಿಂದಾದ ಎಡವಟ್ಟಿನ ಬಗ್ಗೆಯೇ ಚಿಂತಿಸುತ್ತಾ ಮನೆಗೆ ಬಂದು ‘ಅವ್ವ ಬೆಲ್ಲ’ ಅಂದ. ಅವ್ವ ಮಾತಾಡದಿದ್ದಕ್ಕೆ ಮತ್ತಷ್ಟು ಕ್ಷೋಭೆಗೊಂಡು ಅವನು ಚಾವಡಿ ಹತ್ತಿರಕ್ಕೆ ಬಂದು ‘ಬೋಳಿ ಮಗನೆ ಸಾಕು ಮುಚ್ಚು ಬಾಯಿನಾ’ ಅಂದ. ಬೀಡಿ ದಾಸಯ್ಯ ದೊಣ್ಣೆ ಬೀಸಿದ. ಅದೇ ದೊಣ್ಣೆ ಕಿತ್ತುಕೊಂಡು ಸಂಜಯ್ ತೂದೆಸೆದ ದೂರಕ್ಕೆ. ಅಲ್ಲಿ ಸದ್ದುಗದ್ದಲ ಇದ್ದಷ್ಟು ಜೋರಾಯಿತು. ಪ್ರಸನ್ನ ಅಂಗಡಿಯಿಂದ ಇಳಿದು ‘ಮತ್ತೆ ಯಾಕಪ್ಪ ನೀನು ಇಲ್ಲಿಗೆ ಬಂದೆ’ ಸಂಜಯ್‍ಗೆ ಕೇಳಿದ. ವಿಪರೀತ ಕೋಪದಲ್ಲಿದ್ದ ಅವನಿಗೆ ತಾಳ್ಮೆ ಕರಗಿಹೋಗಿತ್ತು. ‘ಹೆಂಗುಸ್ರು ಮಕ್ಕಳು ಅನ್ದೆ ಈ ಮುದುಕ ಎಂಥೆಂತಾ ಬೈಗಳು ಬೈತಾನೆ.’ ಎಂದು ಸಂಜಯ್ ಬೆಂಕಿಯಂತಾಗಿದ್ದ. ಪ್ರಸನ್ನ ‘ತಪ್ಪು ನಿನ್ನದು ತಾನೆ’ ಅಂದ. ‘ಹೌದಣ್ಣ ತಪ್ಪು ನಂದೇ. ಆದರೂ ಇವ ಅಂಥ ಮಾತ್ನೆಲ್ಲ ನಮ್ಮವ್ವುಂಗ ಅನ್ನಬೌದಾ’ ಎಂದು ಒದಯಲು ಕಾಲೆತ್ತಿದ ಸಂಜಯ್. ‘ಇದು ತಪ್ಪಾಗುತ್ತೆ. ನೀನು ಒಬ್ಬ ಮುದುಕನ ಮೇಲೆ ಹಿಂಗೆ ಮಾಡ್ಬಾರ್ದು’ ಅನ್ನುತ್ತ ಸಮದಾನ ಮಾಡಿ ಅವನನ್ನು ಕಳಿಸಲು ಸಾಹಸ ಪಟ್ಟ ಪ್ರಸನ್ನ. ಸಂಜಯ್ ಬೈಯುತ್ತಲೇ ಹಟ್ಟಿ ದಿಕ್ಕುಗೆ ನಡೆಯುತ್ತಿದ್ದರೆ, ಕೆಂಚಮ್ಮ ಅವನನ್ನು ಕೆರಳಿಸುವ ಎಲ್ಲಾ ಪ್ರಯತ್ನವನ್ನೂ ಮಾಡುತ್ತಿದ್ದಳು. ಸ್ನೇಹಿತ್ ಸಂಜಯ್‍ನನ್ನೇ ನೋಡುತ್ತ ಹಲ್ಲು ಕಿಸಿಯುತ್ತಿದ್ದ.

ಕುಡಿದು ಹಣ್ಣಾಗಿದ್ದ ಸೀನಯ್ಯ ಹಟ್ಟಿಗೆ ಬಂದು ‘ಹಾದರ ಮಾಡ್ತಿಯ ಬಡ್ಡೇ’ ಎನ್ನುತ್ತ ಭಾಗ್ಯಾಳನ್ನು ಬೈಯುತ್ತಿದ್ದ. ಅವಳೋ ಒಂದೂ ಮಾತು ಆಡದೇ ಸುಮ್ಮನಿದ್ದಳು. ಸೀನಯ್ಯನ ಈ ನಡೆ ರೂಢಿಗತವಾಗಿ ನಿತ್ಯವು ನಡೆಯುತ್ತಿತ್ತು. ಅವನೂ ದುಡಿಮೆ ಬಿಟ್ಟು ನಾಲ್ಕೈದು ವರುಷಗಳೇ ಕಳೆದಿದ್ದವು. ಸಂಸಾರದ ನೊಗವನ್ನು ಭಾಗ್ಯಾಳೆ ಹೊರುವ ಪರಿಸ್ಥಿತಿ ಬಂದೊದಗಿತ್ತು. ಅವಳ ದುಡಿಮೆಯಲ್ಲಿ ಮನೆ ನಡೆಯುವುದು ತುಂಬಾ ಕಷ್ಟವಾಗಿತ್ತು. ಇದ್ದ ಒಬ್ಬ ಮಗ ಕಾಲೇಜು ಓದುತ್ತಿದ್ದ. ಹಿಡಿಯಷ್ಟಿದ್ದ ಜಮೀನನ್ನು ಆರಂಭ ಮಾಡದೇ ಸೀನಯ್ಯ ಪಾಳು ಬೀಳಿಸಿದ್ದ. ಇಂಥ ಸ್ಥಿತಿಯಲ್ಲಿ ಭಾಗ್ಯ ತಪ್ಪೋ? ಸರಿಯೋ? ತನಗನಿಸಿದ್ದನ್ನು ಮಾಡುತ್ತಿದ್ದಳು. ಪ್ರಕೃತಿ ಸಹಜವಾಗಿ ಬೇಕಾದ ದೇಹಸುಖವನ್ನು ನಿಗ್ರಹಿಸುವ ತಾಕತ್ತು ಯಾರಿಗಿದೆ? ಅಲ್ಲದೇ ಮೂರು ಹೊತ್ತು ಕುಡಿದು ಬೀಳುವುದನ್ನೆ ಕಸುಬು ಮಾಡಿಕೊಂಡಿರುವ ಸೀನಯ್ಯನಿಗೆ ಸಂಸಾರದ ಅರಿವಿಲ್ಲ. ಇಲ್ಲಿ ತಪ್ಪು ಯಾರದ್ದು?

ಎಂದಿನಂತೆ ಮಾತಾಡಿ ಸೀನಯ್ಯನೆ ಮಾತು ನಿಲ್ಲಿಸಿದ. ಟೀ ಕಾಯಿಸಿ ಒಂದು ಲೋಟದಲ್ಲಿ ತಂದು ಅವನ ಮುಂದಕ್ಕೆ ತಂದಿಟ್ಟು ಅವಳು ಒಲೆ ಮುಂದಕ್ಕೆ ನಡೆದಳು. ಅಷ್ಟೊತ್ತಿಗೆ ಸಂಜಯ್ ಬಂದವನೆ ಅಪ್ಪನನ್ನು ಬೈಯಲು ಶುರುಮಾಡಿದ. ಮಗನ ಮುಂದೆ ಸೀನಯ್ಯ ಮಾತನ್ನೇ ಆಡುತ್ತಿರಲಿಲ್ಲ.

ಮುಂಜಾನೆಗೆ ಭಾಗ್ಯ ಉಪ್ಪಿನ ಡಬ್ಬಿ ಎತಿದಳು. ಒಂದು ಸಾವಿರ ರೂಪಾಯಿ ಇರಲಿಲ್ಲ. ಈ ಕೆಲಸ ಗಂಡನದೇ ಎನಿಸಿ ಅವನಿಗಾಗಿ ತಡಕಾಡಿದಳು. ಮಗನಿಗೂ ‘ನಿಮ್ ಅಪ್ಪನ್ನ ಕರ್ಕಂಡು ಬಾ ವೋಗು’ ಅಂದುದ್ದಕ್ಕೆ ಸಂಜಯ್ ಬಸ್ಟ್ಯಾಂಡ್ ಕಡೆಗೆ ಹೊರಟ. ಸಂಘಕ್ಕೆಂದು ಇಟ್ಟಿದ್ದ ದುಡ್ಡನ್ನು ಸೀನಯ್ಯ ಎಗರಿಸಿಬಿಟ್ಟಿದ್ದ. ಕಟ್ಟದಿದ್ದರೆ ತಲೆಗೊಬ್ಬಬ್ಬರಂತೆ ಹತ್ತಾರು ರೀತಿ ಮಾತಾಡುತ್ತಾರೆ. ಭಾಗ್ಯ ರೋಷಗೊಂಡು ಗಂಡನಿಗಾಗಿ ಕಾಯುತ್ತಿದ್ದಳು. ಅಪ್ಪನನ್ನು ಕರೆದು ತಂದ ಸಂಜಯ್ ‘ಅವ್ವಾ’ ಎಂದಿದ್ದೆ ಭಾಗ್ಯ ಸೀನಯ್ಯನ ಚೆಡ್ಡಿ ಜೇಬಿನಿಂದ ಐನೂರು ರೂಪಾಯಿ ತೆಗೆದು ಅವನ ಮುಖಕ್ಕೆ ಕ್ಯಾಕರಿಸಿ ಉಗಿದು ‘ನೀನೊಬ್ಬ ಗಂಡಸಾ’ ಅಂದಳು. ಪುನ ಪುನ ಸೀನಯ್ಯ ‘ಹಾದರಗಿತ್ತಿ’ ಎನ್ನುತ್ತಿದ್ದರಿಂದ ‘ಹೌದು ನಿನ್ನಂತ ಗಂಡ ಇದ್ರೆ ಇನ್ನೇನ್ ಮಾಡದು. ನಾನು ಇನ್ನೊಬ್ಬನ ಜೊತೆ ಮಲುಗ್ತೀನಿ. ನಿಂಗೆ ತಾಕತ್ತಿದ್ರೆ ನನ್ನ ಸರಿಯಾಗಿ ನೋಡ್ಕೋ’ ಎಂದು ಅತ್ಯಂತ ಆವೇಷದಿಂದ ಕೂಗಿ ಹೇಳಿದಳು. ಸುತ್ತಲೂ ನಿಂತಿದ್ದ ಜನರೆಲ್ಲ ಸಂಜಯ್‍ನನ್ನು ನೋಡಿ ಮುಸಿಮುಸಿ ನಗುತ್ತಿದ್ದರಿಂದ ಅವನು ಅಲ್ಲಿಂದ ಮರೆಯಾಗಿ ಚಾವಡಿ ಸೇರಿ ಯೋಚನೆಗೆ ಬಿದ್ದ.

ಅವನಿಗೆ ಅವ್ವನಿಗಿಂತ ಅಪ್ಪನ ಮೇಲೆ ಎಲ್ಲಿಲ್ಲದ ಕೋಪ ಬಂದು ವ್ಯಾಘ್ರನಾಗಿಹೋಗಿದ್ದ.