Click here to Download MyLang App

ಓಘ - ಬರೆದವರು : ಶೀಲಾ. ಶಿವಾನಂದ. ಗೌಡರ

ಬಯಲುಸೀಮೆಯಲ್ಲಿ ಎಪ್ರೀಲ್-ಮೇ ತಿಂಗಳುಗಳ ಬಿಸಿಲಿನ ಸ್ನಾನ ಮಾಡಿ, ಬಿಸಿಲನ್ನೇ ಉಂಡು, ಝಳವನ್ನೇ ಹೊದ್ದು, ನಿದ್ದೆ ಇಲ್ಲದ ಅದೆಷ್ಟೋ ರಾತ್ರಿ ಗಳನ್ನು ಕಳೆಯುತ್ತಿದ್ದ ನಯನಾ ಜೂನ್ ಸಾತ್ ನಂತರವಾದರೂ ಮುಂಗಾರು ಚುರುಕಾಗಿ, ಭೂಮಿ ತಂಪಾಗುತ್ತದೆ, ಸಾಕಷ್ಟು ಮಳೆಯಾಗುತ್ತದೆ ಎಂದು ಪ್ರತೀವರ್ಷ ಜೂನ್ ನಲ್ಲಿ ಬಹಳ ನಿರೀಕ್ಷೆಯಿಂದ ಕಾಯುತ್ತಿದ್ದಳು. ಆದರೆ ಪ್ರತಿವರ್ಷ ಅವಳ ನಿರೀಕ್ಷೆ ಭಾಗಶಃ ನಿಜವಾಗುತ್ತಿತ್ತು. ಆದರೆ ಈ ಬಾರಿ ಜೂನ್ ಸಾತ್ ಗೆ ಸರಿಯಾಗಿ ಮುಂಗಾರು ಚುರುಕಾಗಿತ್ತು. ಹದಿನೈದು ಇಪ್ಪತ್ತು ದಿನಗಳು ಕಳೆಯುವ ಹೊತ್ತಿಗೆ ಆಗಾಗ ಬರುವ ಮೋಡಗಳು ಸೂರ್ಯನನ್ನು ಮರೆಮಾಚುತ್ತ , ತಂಪಿನ ಮಳೆಹನಿಗಳ ಸಿಂಚನ ಮಾಡುತ್ತ ಬದುಕಿಗೆ ಶೀತಲತೆ ತಂದಿದ್ದವು. ಈ ಮೋಡಗಳ ಆಟ ಹೀಗೇ ಹೆಚ್ಚುತ್ತ ಮುಂದಿನ ಸುಮಾರು ದಿನಗಳ ಕಾಲ ಸೂರ್ಯನ ವಿಳಾಸವೇ ಪತ್ತೆ ಇರಲಿಲ್ಲ. ನಯನಳಿಗೆ ಖುಶಿಯೋ ಖುಶಿ…. ಮದುವೆಯಾಗಿ ಹನ್ನೆರಡು ವರ್ಷಗಳ ತರುವಾಯ ತನ್ನ ಮಲೆನಾಡಿನ ತವರಿನ ದೃಶ್ಯ ವೈಭವ ವನ್ನು ಮತ್ತೊಮ್ಮೆ ಕಣ್ಣು ತುಂಬಿಕೊಳ್ಳ ತೊಡಗಿದ್ದಳು. ಕರಿಕಂಬಳಿ ಬೀಸಿದಂತೆ ಆಗಸದಲ್ಲಿ ಮುಟ್ಟಾಟ ಆಡುವ ಕಪ್ಪು ಮೋಡಗಳು , ಒಮ್ಮೆಲೇ ಧೋ ಎಂದು ಸುರಿಯುವ ಮಳೆ, ಮೋಡಗಳೊಂದಿಗೆ ಕಣ್ಣು ಮುಚ್ಚಾಲೆ ಆಡುವ ಗುಡ್ಡಗಳು….. ನಯನಳ ಖುಶಿಗೆ ಪಾರವೇ ಇರಲಿಲ್ಲ. ದೂರದ ಮಲೆನಾಡಿನ ಸೆರಗ ತವರನ್ನು , ಅಲ್ಲಿಯ ಸೊಬಗನ್ನು ಮಕ್ಕಳಿಗೆ ಇಲ್ಲಿಯೇ ತೋರಿಸುವ ಭಾಗ್ಯ ಒದಗಿತ್ತು ನಯನಳಿಗೆ ಈ ಬಾರಿ. ಪತಿ ಕೊಣ್ಣೂರಿನ ಸಹಕಾರಿ ಬ್ಯಾಂಕಿನ ಗುಮಾಸ್ತನಾಗಿದ್ದ. ಸ್ವಾಭಿಮಾನಿಯಾದ, ಒಬ್ಬರಿಗೊಬ್ಬರು ಅನುರೂಪಿಯಾದ , ಪತಿ ಪತ್ನಿಯರ ಜೀವನ ಸ್ವರ್ಗಕ್ಕೇ ಕಿಚ್ಚು ಹಚ್ಚುವಂತಿತ್ತು.
ಜುಲೈನಲ್ಲಿ ಮಳೆ, ಬರಬರುತ್ತ ಬೇಸರವೆನಿಸತೊಡಗಿತ್ತು. ತಿಂಗಳಾದರೂ ತನ್ನ ಮುನಿಸಿನಿಂದ ಹೊರಬರದ ಸೂರ್ಯನನ್ನು ಕಾಣಲು ಎಲ್ಲರ ಕಣ್ಣುಗಳೂ ಕಾಯತೊಡಗಿದವು. ನಯನಳಿಗೆ ಯಾಕೋ ಒಳಗೊಳಗೇ ಆತಂಕ….”ಯಾವ ವರ್ಷವೂ ಈ ರೀತಿ ಬಿಟ್ಟೂ ಬಿಡದೇ ಸುರಿಯದ ಈ ಮಳೆ ಯಾಕೋ ಈ ವರ್ಷ ಏನೋ ಅನಾಹುತ ಮಾಡುತ್ತೆ ರೀ” ಎಂದು ಆಗಾಗ ಪತಿಯ ಬಳಿ ಆತಂಕ ವ್ಯಕ್ತ ಪಡಿಸುತ್ತಲೇ ಇದ್ದಳು. “ ಮನುಷ್ಯ ಯಾವುದನ್ನೂ ತಡಕೊಳ್ಳೋದಿಲ್ಲ. ಇಷ್ಟು ದಿನ ಬಿಸಿಲೂ ಬಿಸಿಲೂ ಅಂದು ಹಿಡಿಶಾಪ ಹಾಕತಿದ್ದಿ…ಈಗ ಮಳೆ ಹೆಚ್ಚಾಯ್ತಾ?” ಎಂದು ಅವಳನ್ನು ರೇಗಿಸುತ್ತಿದ್ದ. “ ಮಳೆ ಬಂದರೆ ಕೇಡಲ್ಲ , ಮಗ ಉಂಡರೆ ಕೇಡಲ್ಲ” ಎಂದು ಏಳು ವರ್ಷದ ಮಗನನ್ನು ಎತ್ತಿ ಮುದ್ದಾಡುತ್ತಿದ್ದ. “ ಯಾಕ್ರೀ …! ಮಗಳು ಉಂಡರೆ ಕೇಡಾ…..ನಿಮಗೇ….. ! ಹೆಣ್ಣು-ಗಂಡು ಇಬ್ಬರೂ ಸಮಾನರು ….. ಗೊತ್ತೈತಿಲ್ಲೋ….!“ ಎಂದು ನಯನಾ ಕುದುರೆ ಏರಿ ಬಂದು ಬಿಡುತ್ತಿದ್ದಳು ಐದು ವರ್ಷದ ಮಗಳನ್ನು ಎತ್ತಿಕೊಂಡು….! “ಆಯ್ತು ನನ್ನ ಬಿಟ್ಟು ಬಿಡು ಮಾರಾಯ್ತಿ…. ನೀನು ನಿನ್ನ ಮಗಳೇ ಎಲ್ಲರಿಗಿಂತ ಹೆಚ್ಚು ಬಿಡು…” ಎಂದು ಹೆಂಡತಿ ಮಕ್ಕಳನ್ನು ಮುದ್ದಾಡುತ್ತಿದ್ದ ನಾಗರಾಜ.
ಬ್ಯಾಂಕಿನ ತುರ್ತು ಕೆಲಸಕ್ಕಾಗಿ ಬೆಂಗಳೂರಿಗೆ ಹೋಗಬೇಕೆಂದು ಅಂದು ಲಗು ಬಗೆಯಿಂದ ಮಳೆಯಲ್ಲಿ ಓಡಿಯೇ ಬಿಟ್ಟ. ನಯನಳಿಗೆ ಏನೋ ಹಳಹಳಿ…. “ಎಷ್ಟವಸರ ಇವರಿಗೆ . ಸರಿಯಾಗಿ ಮಾತನಾಡಲೂ ಇಲ್ಲ, ಊಟವೂ ಮಾಡಲಿಲ್ಲ… ಮಕ್ಕಳಿಗೆ ಟಾಟಾ ಕೂಡ ಮಾಡಲಿಲ್ಲ. ಬಂದ ಮೇಲೇ ವಿಚಾರಾ ಮಾಡ್ಕೋತೀನಿ…” ಎಂದು ಬಾಗಿಲು ಹಾಕಿಕೊಂಡು ಕುಳಿತಳು. ಆಕೆಯ ನಿರೀಕ್ಷೆಯಂತೆ ಜಂಗಮ ಕರೆ ಗಂಡನಿಂದ ಬರುತ್ತಲೇ ಇತ್ತು…. ಈಕೆ ಕಟ್ ಮಾಡ್ತಾನೇ ಇದ್ಲು. “ ಜಾನೂ ತುಂಬಾ ಅರ್ಜಂಟ್ ಕೆಲಸಾ ಇದೆ. ಇನ್ನೆರಡು ದಿನಾ ಬಿಟ್ಟು ಬರ್ತೀನಿ. ಹುಷಾರು. ಮಳೆ ತುಂಬಾ ಇದೆ. ಮಕ್ಕಳು ಹುಷಾರು…..” ಎಂಬ ಸಂದೇಶ ಬಂದ ತಕ್ಷಣ ಆಕೆಯ ಮುನಿಸೆಲ್ಲ ಮಂಜಿನಂತೇ ಕರಿಗೇ ಬಿಟ್ಟಿತ್ತು.
ಬಿಟ್ಟು ಬಿಟ್ಟು ಬರುವ ಮಳೆ, ಸೂರ್ಯ ದರ್ಶನವಿಲ್ಲದ ಹಗಲು , ಅದರಲ್ಲೇ ಮಕ್ಕಳನ್ನು ಶಾಲೆಗೆ ಕಳುಹಿಸಿ ಮನೆಯ ಕೆಲಸದಲ್ಲಿ ತೊಡಗಿದಳು ನಯನ. ಸಂಜೆಯ ಹೊತ್ತಿಗೆ ಮಹರಾಷ್ಟ್ರ ಮತ್ತು ಉತ್ತರ ಕರ್ನಾಟಕದಲ್ಲಿ ಮಳೆಯ ತೀವ್ರತೆ ಹೆಚ್ಚಿದ್ದರಿಂದ ಕೃಷ್ಣೆ, ಮಲಪ್ರಭೆಯರು ಅಪಾಯ ಮಟ್ಟ ಮೀರಿ ಹರಿಯುತ್ತಿರುವ, ಆಣೆಕಟ್ಟುಗಳು ತುಂಬುತ್ತಿರುವ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿತು. ಮರುದಿನ ನವಿಲು ತೀರ್ಥ ಡ್ಯಾಂ ನಿಂದ ಹೆಚ್ಚಿನ ನೀರನ್ನು ಬಿಡುವುದಾಗಿಯೂ , ನದಿ ಪಾತ್ರದ ಹಳ್ಳಿಗಳ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವ ಮುನ್ಸೂಚನೆ ಬಂದಾಯಿತು. ಅದರಲ್ಲಿ ಕೊಣ್ಣೂರೂ ಇತ್ತು. ಶಾಲೆ – ಕಾಲೇಜುಗಳಿಗೆ ರಜೆ ಘೋಷಿಸಲಾಯಿತು. ಆದರೆ ಪ್ರತಿಸಾರಿ ಕೊಣ್ಣೂರಿನ ಒಳಗೆ ನೀರು ಬರುತ್ತಿರಲಿಲ್ಲ. ಅದಕ್ಕಾಗಿ ಕೊಣ್ಣೂರಿನ ಯಾರೂ ಕೂಡ ಜಿಲ್ಲಾಡಳಿತದ ಸಂದೇಶ ಇದ್ದರೂ ಮನೆ ಬಿಡುವ ಗೋಜಿಗೆ ಹೋಗಿರಲಿಲ್ಲ. ನಯನ ಗಂಡ ಕಟ್ಟಿಸಿದ್ದ ಪುಟ್ಟ ಮನೆಯಲ್ಲಿ ಮಕ್ಕಳೊಂದಿಗೆ ಮನೆಯಲ್ಲೇ ಉಳಿದಳು. ಮರುದಿನ ಡ್ಯಾಮಿನಿಂದ ನೀರು ಬಿಡಲಾಯಿತು. ಪ್ರತಿ ವರ್ಷ ಸಾಮಾನ್ಯವಾಗಿ ಹೀಗೇ ನವಿಲು ತೀರ್ಥ ಡ್ಯಾಮಿನಿಂದ ನೀರು ಬಿಡುವುದು, ‘ಗೋವನಕೊಪ್ಪ’ ಸಮೀಪದ ಬ್ರಿಜ್ ಮೇಲೆ ನೀರು ಬಂದು ಹೆದ್ದಾರಿ ಬಂದ್ ಆಗುವುದು ಸರ್ವೇ ಸಾಮಾನ್ಯವಾಗಿತ್ತು. ಈ ಬಾರಿ ಹೆದ್ದಾರಿ ಬಂದ್ ಆಗದಂತೆ ಹೊಸದಾದ , ಎತ್ತರದ ಬ್ರಿಜ್ ಕೂಡ ಲೋಕಾರ್ಪಣೆ ಯಾಗಿತ್ತು. ಕಳೆದ ಬಾರಿ ಹಳೆಯ ಬ್ರಿಜ್ ಮೇಲೆ ನೀರು ಬಂದು, ಮೂರು ದಿನಗಳಿಂದ ಹೆದ್ದಾರಿ ಮುಚ್ಚಿದ್ದರಿಂದ ಬೇಸತ್ತ ಲಾರಿ ಡ್ರೈವರ್ ಒಬ್ಬ ಪ್ರವಾಹದಲ್ಲೆ ಬ್ರಿಜ್ ಮೇಲೆ ಲಾರಿ ದಾಟಿಸಲು ಹೋಗಿ ಲಾರಿ ಪ್ರವಾಹದಲ್ಲಿ ಕೊಚ್ಚಿ ಹೋಗಿತ್ತು. ಬ್ರಿಜ್ ಎತ್ತರ ಕಡಿಮೆ ಇದ್ದ ಕಾರಣ ಇಂತಹ ಅವಾಂತರಗಳು ನಡೆದೇ ನಡೆಯುತ್ತಿದ್ದವು. ಈ ಬಾರಿ ಎತ್ತರದ ಹೊಸ ಬ್ರಿಜ್. ಹೆದ್ದಾರಿ ಬಂದ್ ಆಗುವುದಿಲ್ಲ. ಏನೂ ಅವಗಡಗಳಾಗುವುದಿಲ್ಲ ಎಂಬ ಹುಮ್ಮಸ್ಸಿನಲ್ಲಿ ಕೊಣ್ಣೂರಿನ ಜನತೆ ಜಿಲ್ಲಾಡಳಿತದ ಸಂದೇಶವನ್ನು ಲಘುವಾಗಿ ತೆಗೆದುಕೊಂಡಿದ್ದರು.
ಹೊರಗಡೆಯಿಂದ ಓಡಿ ಬಂದ ಮಗ್ಗುಲ ಮನೆಯ ಅನಿತ “ ಆಂಟಿ ಹೊಳಿ ಬಾಳ ಬರಾಕತ್ತೇತಿ ಅಂತರಿ. ಲೊಗು ಲೊಗು ಪ್ಯಾಕ್ ಮಾಡಕೊಂಡ ಹೊರಗ ಬರಬೇಕಂತ . ನಮ್ಮ ಮಮ್ಮಿ ಪ್ಯಾಕ್ ಮಾಡಾಕತ್ತಾರ “ ಅಂದು ಓಡಿಹೋದಳು. ನಯನಾಗೆ ನಿಂತ ನೆಲಾನೇ ಕುಸಿದಹಾಗಾಯ್ತು. ಮಗ್ಗುಲದ ಜಮೀನ್ದಾರ ಮಲ್ಲಯ್ಯನ ಮನೆಗೆ ಓಡಿದಳು. “ ನಯನವ್ವ ಲೊಗುನ ಹುಡುಗರ ಅರಬಿ ತುಗೋ. ನಿಮ್ಮ ಹಿರಿಯಾನೂ ಮನ್ಯಾಗ ಇದ್ದಾಂಗ ಇಲ್ಲಾ. ನಮ್ಮ ಜೊತಿನ ಮಗ್ಗಲೂರಿಗೆ ಮಗಳ ಮನಿಗೆ ಬರವಂತೆಂತ. ಹೊಳಿ ಊರಾಗ ಬರ್ತೇತಿ ಅಂತ ಹೇಳ್ಯಾರಂತ. ಇಲ್ಲಿ ವರಿಗೂ ಒಮ್ಮೆನೂ ಬಂದಿಲ್ಲ. ಬರಾಕಿಲ್ಲ …..ಯಾವದಕ್ಕೂ ನಮ್ಮ ಹುಷಾರ್ಯಾಗ ನಾವು ಇರಬೇಕು” ಅಂತ ಮಲ್ಲಯ್ಯ ನವರು ಹೇಳಿದ ತಕ್ಷಣ ನಯನಾ ಗೆ ಎಲ್ಲಿಂದ ಪ್ಯಾಕ ಮಾಡಲು ಪ್ರಾರಂಭಿಸ ಬೇಕು ತಿಳಿಯದಾಯಿತು. ಮಕ್ಕಳ ಬಟ್ಟೆಬರೆಗಳನ್ನು ಜೋಡಿಸುತ್ತ, ದುಬಾರಿ ಸಾಮಾನುಗಳನ್ನು ಬೀರಿನ ಮೇಲೆ ಹಾಕ ತೊಡಗಿದಳು. ಹೊರಗಿನಿಂದ ಅನಿತಾಳ ಕೂಗು “ ಅಯ್ಯೋ ಅಜ್ಜಾ ಅಲ್ಲಿ ನೋಡು , ಹೊಳಿ ನೀರು ಕಾಣಾಕತ್ತೇತಿ…..” ಓಡಿ ಬಂದು ನಯನಳಿಗೂ ಹೇಳಿದಳು. ನಯನ ಓಡಿಹೋಗಿ ಮೇಲ್ಛಾವಣಿ ಹತ್ತಿ ನೋಡಿ ದರೆ ನದಿ ನೀರು ಸ್ಪಷ್ಟವಾಗಿ ಕಾಣುತ್ತಿದೆ. ಎರಡೂ ಮಕ್ಕಳನ್ನು ಗಟ್ಟಿಯಾಗಿ ತಬ್ಬಿಕೊಂಡಳು. ಪಟಾಕಿ ಶಬ್ದಕ್ಕೆ ಬೆದರಿದ ಹೋರಿಯಂತೆ ಅತ್ತಿಂದಿತ್ತ ಮಕ್ಕಳನ್ನು ಹೊತ್ತು, ಮಗನಿಗೆ ಸಾಮಾನು ಎತ್ತಿಡಲು ಅರಚುತ್ತ ಕೈಗೆ ಸಿಕ್ಕ ಬಟ್ಟೆ ಬರೆಗಳನ್ನು ಚೀಲಕ್ಕೆ ತುಂಬತೊಡಗಿದಳು. ಗಾಬರಿಯಲ್ಲಿ ಒಂಟಿ ಹೆಣ್ಣು – ಎರಡು ಎಳೆಯ ಮಕ್ಕಳನ್ನು ತೆಗೆದುಕೊಂಡು ಸುರಿವ ಮಳೆಯಲ್ಲಿ, ಕೊರೆವ ಚಳಿಯಲ್ಲಿ ಎಲ್ಲಿ ಹೋಗಬೇಕು ತೋಚದೇ , ಅತ್ತರೆ ಮಕ್ಕಳು ಗಾಬರಿಯಾಗುತ್ತಾರೆ ಎಂದು ದುಃಖ ನುಂಗಿಕೊಂಡು ಧೈರ್ಯದಿಂದ ಒಬ್ಬಳೇ ಸಾಮಾನು ಎತ್ತ ತೊಡಗಿದಳು. ತಾಸಿನಲ್ಲಿ ಮಲಪ್ರಭೆ ಮನೆ ಪ್ರವೇಶಿಸ ತೊಡಗಿದಳು. ಹೊಟ್ಟೆ ಬಟ್ಟೆ ಕಟ್ಟಿ , ಹಣ ಕೂಡಿಸಿ ಕಟ್ಟಿದ ಮನೆಯಲ್ಲಿ ಪ್ರವಾಹ ಮಾನವನ ಪಾಪಗಳನ್ನೂ ಹೊತ್ತುಕೊಂಡು ಬರುತ್ತಿತ್ತು. ಕಟ್ಟಿಗೆಯ ಬೀರುಗಳು, ಸೋಫಾ, ಮಂಚ ಹೀಗೇ ಒಂದೊಂದೇ ಸಾಮಾನುಗಳು ನೀರ ಪಾಲಾಗುತ್ತಿದ್ದವು. ಸಾಲ ಮುಟ್ಟುವ ಮೊದಲೇ ,ತನ್ನ ಕನಸುಗಳೆಲ್ಲ ಪ್ರವಾಹದಲ್ಲಿ ಕೊಚ್ಚಿಹೋಗುತ್ತಿರುವುದನ್ನು ಕಂಡೂ , ಒಡಲ ಕುಡಿಗಳಿಗಾಗಿ ಮನೆಗೆ ಬೀಗ ಹಾಕಿ ಮಲ್ಲಯ್ಯನವರ ಮನೆಗೆ ಎರಡೂ ಮಕ್ಕಳನ್ನು ಎತ್ತಿಕೊಂಡು ಓಡಿದಳು.
ಅವರದೋ ಜಮೀನ್ದಾರರ ಕುಟುಂಬ. ರಾಶಿ ರಾಶಿ ಬೆಳೆದ ಬೆಳೆಯ ಚೀಲಗಳನ್ನು ಟ್ರ್ಯಾಕ್ಟರಿಗೆ ಸಾಗಿಸುವ ಕೆಲಸ ಜೋರಾಗಿ ನಡೆದಿತ್ತು. “ ಅಪ್ಪ ನಮ್ಮ ಮಾತು ಎಲ್ಲಿ ಕೇಳ್ತಾನ. ಇಲ್ಲೆ ಯಾಕ ಹೊಳಿ ಬರ್ತೇತಿ, ಬರಂಗಿಲ್ಲಳ ಅಂತ ನಿನ್ನೆ ನಮ್ಮನ್ನ ಬಿಡಿಸಿದ. ನಿನ್ನೆ ಇವನ್ನೆಲ್ಲ ಸಾಗಿಸಿ ಬಿಡ್ತಿದ್ವಿ “ ಅಂತ ಮಲ್ಲಯ್ಯನವರ ಮಗ ತಂದಿಯನ್ನು ಬಯ್ಯುತ್ತ ಚೀಲ ಹೇರುತ್ತಿದ್ದ.ಅವರ ಹೆಂಡತಿ ಸಾವಿತ್ರೆವ್ವ “ ಬೆಳದ ಬೆಳಿಯೆಲ್ಲ ಹೊಳಿಗಂಗವ್ವನ ಪಾಲಾತಲ್ಲೋ “ ಅಂತ ಅಳುತ್ತ ಕೈ ಗೆ ಸಿಕ್ಕ ಸಾಮಾನುಗಳನ್ನ ಗಾಡಿಗೇ ಹಾಕುತ್ತಿದ್ದಳು. “ಗಂಜಿ ಕೇಂದ್ರ ಕ್ಕ ಹೋಗಾಕ ಸರ್ಕಾದವರು ಗಾಡಿ ಕಳಸ್ಯಾರ . ಲೊಗೂ ಹತ್ತ ಬರ್ರಿ. ನೀರು ಮತ್ತ ಮ್ಯಾಲಬಂದ್ರ ಇನ್ನೊಮ್ಮೆ ಬರಾಕ ಆಗಂಗಿಲ್ಲ” ಎಂದು ಹೊರಗ ಕೂಗೋದು ಕೇಳಿ ಮಲ್ಲಯ್ಯನವರ ಮಗಾ,” ಅವ್ವಾ ಅತಗೊಂತ ಕುಂತ್ರ ಈಗ ಕೆಲಸಾ ಇಲ್ಲಾ. ಬೀಗರೂರಿಗೆ ಯಾಕ ಹೋಗತೀರಿ. ಒಂದೂರಿನ ರಾಜಾ ಮತ್ತೊಂದೂರಿನ್ಯಾಗ ತಳವಾರನ. ನಮ್ಮೂರ ನಮಗ ಪಾಡ. ಬಡಾ ಬಡಾ ಗಾಡಿಯೊಳಗ ಕುಂದರ ಹೋಗ್ರಿ ನೀನು, ಅಪ್ಪಾ. ನಾ ಎಲ್ಲಾ ಬರ್ತೇನಿ. ಅಪ್ಪಾ ನಿನ್ನ ಸೊಸಿನ್ನು, ಮೊಮ್ಮಕ್ಕಳ್ಳನ್ನು ಕರ್ಕೊಂಡು ಹೋಗ್ರಿ ಲೊಗೂನ” ಎನ್ನುತ್ತಿರುವಂತೆ ಮಲ್ಲಯ್ಯನವರಿಗೆ ತಮ್ಮ ಮಗನ ತಿಳುವಳಿಕೆಯ ಮಾತಿನಿಂದ ಹೆಮ್ಮೆ ಅನಿಸಿತು. ಅವರಿಗೆ ಹೊರಗೆ ಹೆದರಿದ ಜಿಂಕೆಯಂತೆ ಎರಡೂ ಮಕ್ಕಳನ್ನು ಎತ್ತಿಕೊಂಡು , ಕಣ್ಣುಗಳಲ್ಲಿ ನೀರು ತುಂಬಿಕೊಂಡು ನಿಂತ ನಯನಳೂ ಕಂಡಳು. ಮಲ್ಲಯ್ಯನವರು ಬೇಗ ಬೇಗ ಎಲ್ಲರನ್ನೂ ಕರೆದುಕೊಂಡು, ನಯನಳನ್ನೂ ಕರೆದುಕೊಂಡೂ ಗಾಡಿ ಏರಿದರು. ಬೀದಿಯಲ್ಲೆಲ್ಲ ಸಾಮಾನುಗಳನ್ನು, ಜಾನುವಾರುಗಳನ್ನು, ಮನುಷ್ಯರನ್ನು ಹೊತ್ತುಕೊಂಡ ಗಾಡಿಗಳು ಪ್ರವಾಹದ ಮಧ್ಯದಲ್ಲೇ ಓಡುತ್ತಿದ್ದವು. “ಇಂತಾ ದಿನಾ ನೋಡಾಕ ದೇವರು ನಮ್ಮನ್ನ ಇನ್ನೂ ಗಟ್ಟಿ ಇಟ್ಟಾನನ….!” ಎಂದು ಸಾವಿತ್ರಮ್ಮಾ ಮತ್ತೆ ಗೋಗರೆಯಲು ಪ್ರಾರಂಭಿಸಿದಳು. ಅವರ ಗೋಳಾಟವನ್ನು ಕೇಳಿ ಕೇಳಿ ಸುಸ್ತಾಗಿದ್ದ ಮಲ್ಲಯ್ಯನವರು “ ಏ! ನಿನ್ನವ್ವನ…! ಸುಮ್ನಾಗ್ತಿಯ ಇಲ್ಲ…. ಸಣ್ಣ ಸಣ್ಣ ಕೂಸು ಕುನ್ನಿ ಕಟಕೊಂಡು ಮಕ್ಕಳು ಬಂದಾವು. ಅವರಿಗೆ ಧೈರ್ಯ ಹೇಳ ಬಿಟ್ಟ ,ನೀನ ಎಲ್ಲಾ ಕಳಕೊಂಡವರಂಗ ಅಳಾಕತ್ತಿಯಲ್ಲ ಮುದಿಗೂಬಿ…!” ಎಂದು ಅಬ್ಬರಿಸಿದಾಗ ಜೊತೆಗಿದ್ದವರು “ಇರ್ಲಿ ಹಿರಿಯರ… ಸುಧಾರಿಸಕೊಳ್ರಿ” ಎಂದು ಸಮಾಧಾನ ಮಾಡಿದ್ರು. ನಯನಾ ಮಾತ್ರ ಎರಡೂ ಮಕ್ಕಳನ್ನ ಗಟ್ಟಿಯಾಗಿ ತಬ್ಬಿಕೊಂಡೇ , ಚೀಲವನ್ನೂ ಹಿಡಿದಿದ್ದಳು. ತನ್ನ ಪತಿಯಾದರೂ ಇದ್ದಿದ್ದರೆ ತನಗೆ ಅದೆಷ್ಟೋ ಧೈರ್ಯ ಇರುತ್ತಿತ್ತು…..ಎಂದುಕೊಂಡು ಗಂಜಿಕೇಂದ್ರ ತಲುಪಿದ ತಕ್ಷಣ ಫೋನಾದರೂ ಮಾಡಬೇಕು ಎನ್ನುವಷ್ಟರಲ್ಲಿ ಚಾರ್ಜಗೆ ಹಾಕಿದ ಪೋನನ್ನು ಅಲ್ಲೇ ಬಿಟ್ಟಿದ್ದು ನೆನಪಾಗಿ ಮತ್ತಷ್ಟು ಪಾತಾಳಕ್ಕೆ ಕುಸಿದಂತಾಯಿತು…..! ಯಾರ ಮುಂದೆ ತನ್ನ ಅಳಲು ತೋಡಿಕೊಳ್ಳುವುದು…. ಎಲ್ಲರನ್ನೂ ಮಲಪ್ರಭೆ ತನ್ನ ತೆಕ್ಕೆಗೆ ತೆಗೆದುಕೊಂಡಿದ್ದಳು. ನೀರಿನಲ್ಲಿ ಆಗಲೇ ವಾಹನಗಳ ಚಲನೆ ದುಸ್ತರವಾಗಿ, ಟ್ಯುಬ್ ಬೋಟ್ ಗಳು ಕಾಣತೊಡಗಿದ್ದವು. ನಯನ ದೇವರನ್ನು ನೆನೆಸುತ್ತ ಹಾಗೇ ಕಣ್ಣು ಮುಚ್ಚಿದ್ದಳು. “ಇಳಿರಿ. ಇಲ್ಲೇ ಶಾಲ್ಯಾಗ ಇರಾಕ ಸರಕಾರದವರು ವ್ಯವಸ್ತೆ ಮಾಡ್ಯಾರಾ. “ ಎಂದಾಗ ನಯನ ಕಣ್ಣು ಬಿಟ್ಟಳು. ಎತ್ತರದ ಪ್ರದೇಶದಲ್ಲಿ ಊರ ಹೊರಗಿದ್ದ ಶಾಲೆಯಲ್ಲಿ ಜನ ಜಾತ್ರೆಯೇ ಇತ್ತು. ಮಲ್ಲಯ್ಯನವರು ಮುಂದಾಳತ್ವ ವಹಿಸಿ ತಮ್ಮ ಮನೆಯವರೆನ್ನಲ್ಲ ಒಳಗೆ ಕರೆದೊಯ್ದರು.
ಊರು ಕೇರಿಯ ಎಲ್ಲೆಲ್ಲಿಂದಲೋ ಬಂದ ಹಲವು ವರ್ಗದ, ವೃಧ್ದರು, ಮಕ್ಕಳು, ಮಹಿಳೆಯರು, ಅನಾರೋಗ್ಯ ಪೀಡಿತರು, ಅಂಗವಿಕಲರು…… ನಯನಳಿಗೆ ದಿಕ್ಕೇ ತಿಳಿಯದಾಯಿತು. “ಡಿ,ಸಿ ಸಾಹೇಬ್ರು ಬಂದರು ಬಂದರು” ಎಂದು ಜನ ಹೊರಗೋಡಿದರು. ಅಲ್ಲಿದ್ದ ಸರಕಾರಿ ಸಿಬ್ಬಂಧಿ ಜನರನ್ನೆಲ್ಲ ಸುಮ್ಮನೇ ಕೂಡಿಸುವಲ್ಲಿ ಹರಸಾಹಸ ಪಟ್ಟರು. ನಂತರ ಮಾತನಾಡಿದ ಡಿ,ಸಿ ಎಲ್ಲರಿಗೂ ಧೈರ್ಯ ತುಂಬಿ, ಇನ್ನೂ ಮೂರು ದಿನಗಳ ಕಾಲ ನೀರು ಇಳಿಯುವುದಿಲ್ಲ. ಎಲ್ಲರಿಗೂ ಇಲ್ಲಿಯೇ ಊಟ, ವಸತಿ ಸೌಲಭ್ಯ ಕಲ್ಪಿಸಲಾಗುತ್ತದೆ. ಯಾರೂ ಅಂಜುವ ಅಂಜುವ ಅಗತ್ಯವಿಲ್ಲೆಂದು ಹೇಳಿಹೊರಟರು. ಎಲ್ಲರೂ ನಮಗೆ ಹೊಸ ಮನೆ ಕಟ್ಟಿಸಿಕೊಡಿ, ಹೊಸ ಜಾಗೆ ಕೊಡಿ ಎಂದೆಲ್ಲ ಅನೇಕಾನೇಕ ಬೇಡಿಕೆಗಳನ್ನು ಇಡುತ್ತಿದ್ದರು. ಸಾವಿತ್ರಮ್ಮ, ನಯನಾ ಮಾತ್ರ ಕೋಣೆಯ ಮೂಲೆಯಲ್ಲಿ ಪೆಚ್ಚು ಮೋರೆ ಹಾಕಿ ಕುಳಿತಿದ್ದರು. ಮಕ್ಕಳು ಒಂದೊಂದಾಗಿ “ಅಮ್ಮಾ ಹಸಿವು….” ಎಂದು ಕಿರಿ ಕಿರಿ ಪ್ರಾರಂಭಿಸಿದವು. ಛಳಿ ಕೂಡ ಹೆಚ್ಚಿತ್ತು…. ನಯನಳಿಗೆ ಮನೆಯಲ್ಲಿ ಇಟ್ಟಿದ್ದ ಬಿಸ್ಕಿಟು, ಬ್ರೆಡ್ಡು, ಉಂಡಿ…. ಮಕ್ಕಳಿಗೆ ಮಾಡಿದ ತಿನಿಸುಗಳು ನೆನಪಾಗತೊಡಗಿದವು. ಅವಸರದಲ್ಲಿ ಅವಳು ಬ್ಯಾಗಿಗೆ ಏನೂ ಹಾಕಿರಲಿಲ್ಲ. “ಅಯ್ಯೋ ದೇವರೆ ಇದೆಂಥ ಪರೀಕ್ಷೆನಪ್ಪಾ….!” ಎಂದು ಕಣ್ಣಿೀರು ಹಾಕ ತೊಡಗಿದಳು. ಮಕ್ಕಳನ್ನು ಹಾಗೇ ತೊಡೆಯ ಮೇಲೆ ಹಾಕಿಕೊಂಡು ತಟ್ಟಿ ಮಲಗಿಸಲು ಪ್ರಯತ್ನಿಸತೊಡಗಿದಳು. ಅವಳಿಗೆ ಅಲ್ಲಿಯ ಜನರ ಒರಟು ಮಾತು, ಜನ ದಟ್ಟಣೆ, ಮೇಲೆ ಹೊಟ್ಟೆ ಹಸಿವು ಉಸಿರು ಕಟ್ಟುವಂತಾಗತೊಡಗಿತ್ತು. ಎಲ್ಲಿಯೂ ಹೋಗಲೂ ಜಾಗೆಯೇ ಇಲ್ಲ. ಸುತ್ತ ಜಲದಿಗ್ಭಂಧನ. ಜೀವ ಉಳಿಸಿಕೊಳ್ಳಲು ಅಲ್ಲಿಯೇ ಇರಬೇಕಾದ ಅನಿವಾರ್ಯತೆ. ಸರಕಾರಿ ಸಿಬ್ಬಂಧಿ ಅಡುಗೆಗೆ ರೇಶನ್ ಹೊಂದಿಸುವ ಕೆಲಸದಲ್ಲಿ ಓಡಾಡುತ್ತಿದ್ದರು. ಪುಟಾಣಿ ಮಕ್ಕಳು ಅಮ್ಮನಿಗೆ “ ಅಮ್ಮಾ ಏನೋ ಗಮ್ ಅಂತಾ ವಾಸನೆ ಬರಾಕತ್ತೇತಿ….! “ ಎಂದು ಪಕ್ಕನೇ ಎದ್ದು ಕುಳಿತರು. “ ಫಲಾವ್ ಮಾಡ್ಯಾರಂತ….. ಲೊಗು ಲೊಗು ಬರ್ರಿ” ಅಂತ ಜನಾ ಎಲ್ಲಾ ಓಡಿ ಹೋದರು. ನಯನಾಳ ಮಕ್ಕಳು “ ಬಾರಮ್ಮ ….. ಹಸಿವು…” ಎಂದು ಎಳೆಯತೊಡಗಿದರು. ಆದರೆ ಸಾವಿತ್ರಮ್ಮ , ನಯನಾ ಜಪ್ ಎನ್ನಲಿಲ್ಲ. ಕಣ್ಣೀರು ಮಾತ್ರ ದಳ ದಳ ಹರಿಯುತ್ತಿತ್ತು. ಹೊರಗಡೆ ಮಲ್ಲಯ್ಯನವರೂ ದಿಕ್ಕು ಕಾಣದೇ ಸುಮ್ಮನೇ ಕುಳಿತಿದ್ದರು. “ದಿನಾ ಹತ್ತು ಮಂದಿಗೆ ಅನ್ನ ಹಾಕಿದ ಕೈಗಳಿವು. ಇವತ್ತನೋಡು ಬೇರೆಯವರಿಗೆ ಕೈ ಯೊಡ್ಡುವ ಪರಿಸ್ಥಿತಿ ಬಂತು” ಎಂದು ಮತ್ತೆ ಸಾವಿತ್ರಮ್ಮನ ದುಖದ ಕಟ್ಟೆ ಒಡೆಯಿತು. ಮಕ್ಕಳು ಫಲಾವು ತಿನ್ನುವವರನ್ನು ನೋಡುತ್ತ ಒಳಗೇ ಹೊರಗೇ ಅಡ್ಡಾಡ ತೊಡಗಿದರು. ಇದನ್ನೆಲ್ಲ ಗಮನಿಸಿದ ಶಿಕ್ಷಕಿ ಕಮಲಮ್ಮ “ಏನೋ ಪುಟ್ಟಾ ಫಲಾವು ಬೇಕಾ…. ಎಂದು ಮಕ್ಕಳನ್ನು ಪ್ರೀತಿಯಿಂದ ಕರೆದುಕೊಂಡು ತಟ್ಟೆಯಲ್ಲಿ ಫಲಾವು ಹಾಕಿ ಕರೆತಂದರು. “ಎಲ್ಲಿ ಆ…. ಅನ್ನು “ ಎಂದು ನಾಲ್ಕು ತುತ್ತು ತಿನಿಸಿದರು… “ಅಮ್ಮಾ ಫಲಾವು ಮಸ್ತ ಐತಿ” ಎಂದು ಗಬ ಗಬ ತಿಂದು ಮುಗಿಸಿದರು. ಮನೆಯಲ್ಲಿ ಎಷ್ಟೆಲ್ಲ ಹದಾಹಾಕಿ ಫಲಾವು ಮಾಡಿದರೂ ತನ್ನನ್ನು ಸತಾಯಿಸಿ ಸತಾಯಿಸಿ ತಾಸಿಗೊಂದು ತುತ್ತು ತಿನ್ನುವ ಮಕ್ಕಳು ಕೇವಲ ಐದು ನಿಮಿಷದಲ್ಲಿ ಬಾಯಿ ಚಪ್ಪರಿಸುತ್ತ ಫಲಾವು ತಿಂದಿದ್ದು ನೋಡಿ ನಯನಳಿಗೆ ಅಚ್ಚರಿ.
ಅಷ್ಟರಲ್ಲಿ “ಗಾಡಿ ಬಂದವು” ಎಂದು ಎಲ್ಲರೂ ಹೊರ ಹೊರಟರು. ಹೊರಗಡೆ ಏನೋ ಗದ್ದಲ.... ಅನೇಕ ಸಂಘ ಸಂಸ್ಥೆಗಳಿಂದ ಹಣ್ಣು-ಹಂಪಲಗಳು, ಹಾಸಿಗೆ-ಬಟ್ಟೆಗಳು ಬಂದಿದ್ದವು. ಅವುಗಳನ್ನೆಲ್ಲ ಕೊಟ್ಟು ಹೋದ ಮೇಲೆ ಹಂಚುವಾಗ ಜನ ಕಚ್ಚಾಡ ತೊಡಗಿದ್ದರು. ನಿಜವಾದ ಅಸಹಾಯಕರಿಗೆ ಅವುಗಳನ್ನು ತಲುಪಿಸುವ ನೈತಿಕ ಜವಾಬ್ದಾರಿ ಹೊತ್ತು ಶಿಕ್ಷಕಿ ಕಮಲಮ್ಮ ಎಲ್ಲರಿಗೂ ತಿಳುವಳಿಕೆ ನೀಡಿ, ಓಡಾಡುತ್ತಿರುವುದನ್ನು ನಯನಾ ಹಾಗೇ ನೋಡುತ್ತಿದ್ದಳು. ಜಲ ಪ್ರಳಯದ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿ ಸಹಾಯ ಹಸ್ತಕ್ಕಾಗಿ ಎಲ್ಲ ದಿಕ್ಕುಗಳಿಂದ ಜನ ಬರುತ್ತಿದ್ದರು. ಕುಳಿತ ಜಾಗೆಯಿಂದ ಸ್ವಲ್ಪವೂ ಕದಲದ, ಹಸಿವಿನಿಂದ ಬಳಲಿದರೂ ಎದ್ದು ಊಟಮಾಡದೇ ಆಕಾಶವನ್ನೇ ಹೊತ್ತು ಕುಳಿತಿದ್ದ ನಯನ ಮತ್ತು ಸಾವಿತ್ರವ್ವನ ಹತ್ತಿರ ಕಮಲಮ್ಮ ತಾವೇ ಬಂದು,” ಯಾಕ್ರೀ ಇಷ್ಟು ಚಿಂತಿ ಮಾಡ್ತೀರಿ. ಊಟಾ ಮಾಡಬರ್ರಿ. ಇದು ನಿಮ್ಮ ಮನಿ ಇದ್ದಂಗ. ಇಲ್ಲಿ ನೀವು ಯಾರ ಹಂಗಿನಲ್ಲೂ ಇಲ್ಲ. ಪ್ರಕೃತಿ ಮುಂದೆ ನಾವೆಲ್ಲ ಕುಬ್ಜರು. ಇನ್ನೂ ಎಷ್ಟೋ ಮಂದಿ ಪ್ರಾಣ ಕಳಕೊಳಾಕತ್ತಾರ. ನಾವು- ನೀವು ಬದಕೀವಿ. ನಮ್ಮ ಮುಂದೆ ಮಕ್ಕಳ ಭವಿಷ್ಯ ಐತಿ. ಏಳ್ರಿ ಊಟಾ ಮಾಡ್ರಿ” ಎಂದಾಗ ನಯನಳ ದುಃಖದ ಕಟ್ಟೆವಡೆದು ಕಮಲಮ್ಮನನ್ನು ತಬ್ಬಿಕೊಂಡು ಅತ್ತು ಬಿಟ್ಟಳು. ಈ ಮನಕಲುಕುವ ದೃಶ್ಯ ಕಂಡು ,ಬಂದ ಹೆಣ್ಣು ಮಕ್ಕಳು ತಮ್ಮ ತಮ್ಮ ಗೋಳು ತೋಡಿಕೊಳ್ಳ ತೊಡಗಿದರು. ಈಶಮ್ಮ ಗಂಡನನ್ನು ಕಳೆದುಕೊಂಡು , ವಯಸ್ಸಾದ ಅತ್ತೆ, ರಟ್ಟೆಬಲಿಯದ ಮಗನೊಟ್ಟಿಗೆ ಹೇಗೋ ಜೀವನ ಕಳೆಯುತ್ತಿದ್ದವಳು. ಪ್ರವಾಹದ ರಭಸಕ್ಕೆ ಅವಳ ಜೀವನವೇ ನರಕವಾಗಿತ್ತು.” ದೇವರು ಪೆಟ್ಟಿನ ಮ್ಯಾಲ ಪೆಟ್ಟು ಕೊಟ್ರ ಹೆಂಗರೀ ಅವ್ವಾರ ! ಜೀವನ ಸಾಗಸೋದು…. ? ರಾತ್ರಿ ಬೆಳತನ ಹೆಣ್ಣಮಗಳು ಅನ್ನೋದು ಮರತು ಹೊಲದಾಗ ಗೊಂಜಾಳಕ್ಕ ನೀರ ಹಾಸಿದ್ದೆರೀ.. ಎಲ್ಲಾನೀರ ಪಾಲ ಆತ ರೀ… ಮನ್ಯಾಗ ಗೋದಿ ಚೀಲ ತುಂಬಿದ್ದವ ರೀ …. ಬಾಗಲಕ್ಕ ನೀರು ಬಂದ ನಿಂತ ಒಳಗ ಬರ್ತೇನಿ ಸರೀರಿ…ಸರೀರಿ ….. ಅನ್ನೋ ಹೊತ್ನ್ಯಾಗ ಜೀವಾ ಉಳದರ ಸಾಕು ಅಂತ ಎಳೇ ಹುಡುಗನ ಹೆಗಲಿಗೆ ಸಾಮಾನು ಹೇರಿ ಸಾಗಿಸಿದ್ಯಾ ರೀ…..” ಅಂತ ಗೊಳೋ ಅಳತೊಡಗಿದಳು. “ಬಡವರ ಮನ್ಯಾಗ ಲಕ್ಷಿ ಚಂದ ಕಾಣಲಿ ಅಂತ ಮೊನ್ನೆ ಮಾಡಸಿದ ಅವಲಕ್ಕಿ ಸರಾ ಹಾಕಿ ಲಕ್ಷಿ ಪೂಜಾ ಮಾಡಿದ್ದೆರೀ… ಸಾಮಾನ ಸಾಗಸೋ ಗದ್ದಲದಾಗ ಅಲ್ಲೇ ಬಿಟ್ಟ ಬಂದೆರೀ…. ಇನ್ನೂ ಅಕ್ಷಾಲ್ಡ್ರಪ್ಪನ ಸಾಲ ಮುಟ್ಟಿಲ್ರೀ……ಈಗ ಇರಾಕ ಗೇಣ ಮನಿ ನೂ ಇಲ್ಲದಂಗ ಆತರೀ….” ಎಂದು ಶಾಂತವ್ವ ಗೋಳಾಡಿದಳು. “ ಮಗಳು ಹಡದು ಒಂದವಾರನೂ ಆಗಿಲ್ರೀ… ಕೂಸು ಏನ ಬೇಡಿ ಬಂದೇತೆನ…. ಹಸೇ ಬಾಣತಿ –ಕೂ ಸು ಕರಕೊಂಡು ಇಲ್ಲಿಗೇ ಬಂದೇನಿ ನೋಡ್ರಿ” ಅನ್ನೋದು ಅಮೀನವ್ವನ ಗೋಳು….. ಹೀಗೇ ಒಬ್ಬೊಬ್ಬರದು ಒಂದೊಂದು ಕಥೆ. ಎಲ್ಲರಿಗೂ ಬೇಸರವಿಲ್ಲದೇ ಸಮಾಧಾನ ಮಾಡುವ , ಮಕ್ಕಳನ್ನು ಆಡಿಸುವ, ಊಟ ಬಟ್ಟೆ ಬರೆ ಹಂಚುವ ಕಮಲಾ ಟೀಚರ…!
ಮಧ್ಯಮ ವರ್ಗದಲ್ಲಿ ಬೆಳೆದರೂ ನಯನಳ ಜೀವನ ಎಂದಿಗೂ ಕಷ್ಟಗಳಿಗೆ ಅನಾವರಣ ಗೊಂಡಿರಲಿಲ್ಲ. ಇಷ್ಟೊಂದು ಸಮಾಜಮುಖಿ ಯಾಗಿರಲಿಲ್ಲ. ಈ ಪರಿಸ್ಥಿತಿಯನ್ನು ಕಂಡ ಅವಳಲ್ಲಿ ಈಗ ಏನೋ ಅಭೂತಪೂರ್ವ ಬದಲಾವಣೆ… ಇದನ್ನೇ ಬುದ್ದ ಜ್ಞಾನೋದಯ ಎಂದಿರಬೇಕು…. ಕುಳಿತ ಜಾಗೆಯಿಂದ ತಡಬಡಿಸಿ ಎದ್ದಳು. ತನ್ನ ಮಕ್ಕಳು ಕಮಲಮ್ಮ ಕೊಟ್ಟ ಆಟಿಕೆಯಿಂದ ಓರಿಗೆಯವರೊಡನೆ ಆಡುತ್ತಿದ್ದವು. ಅಮೀನಮ್ಮನ ಬಳಿ ಹೋಗಿ ಎಂಟುದಿನದ ಮಗುವನ್ನು ಎದೆಗವಚಿಕೊಂಡಳು… ಬಾಣಂತಿಯ ತಲೆ ಸವರಿ ತಾ ತಂದಿದ್ದ ಶಾಲನ್ನು ಹೊದಿಸಿದಳು… ಗರ ಬಡಿದವರಂತೆ ಕುಳಿತಿದ್ದ ವೃಧ್ದ ಸಾವಿತ್ರಮ್ಮ , ಮಲ್ಲಯ್ಯನವರನ್ನು ಎಬ್ಬಿಸಿ ಊಟ ಮಾಡಿಸಿದಳು. ಗಂಜಿಕೇಂದ್ರ ನಿರ್ವಹಣೆಯಲ್ಲಿ ಮೂರು ದಿನ ಕಮಲಮ್ಮನವರಿಗೆ ಬಲಗೈಯಾಗಿ ನಿಂತಳು. ಎಲ್ಲರಿಗೂ ಧೈರ್ಯ ತುಂಬುತ್ತ, ಕಣ್ಣೀರು ಸುರಿಸುವ ಪ್ರಸಂಗಗಳಲ್ಲೂ ಹಾಸ್ಯಚಟಾಕಿಗಳಿಂದ ನರಕದಲ್ಲೂ ಸ್ವರ್ಗ ಸೃಷ್ಟಿಸುತ್ತ ಎಲ್ಲರಿಗೂ ಮಾದರಿಯಾದಳು. ಪ್ರವಾಹ ಪರಿಸ್ಥಿತಿಯಲ್ಲಿ ಮೊಬೈಲ್ ನೆಟ್ ವರ್ಕ ಕೂಡ ನೆಟ್ಟಗಿರದ ಕಾರಣ ಸಂವಹನ ಕೂಡ ಸಾಧ್ಯವಾಗದೇ ಇದ್ದರೂ ,ಗಂಡನಿಲ್ಲದೇ ಒಂಟಿಯಾಗಿ ಸಮಾಜದ ಸಹಾಯದಿಂದ ಅಪಾಯಗಳನ್ನು ಎದುರಿಸಬಲ್ಲ ಶಕ್ತಿ ಅವಳಲ್ಲಿ ಮೈಗೂಡಿತ್ತು. ಮೂರು ದಿನಗಳ ನಂತರ ನೀರು ಇಳಿದ ಮೇಲೆ ಹೆಂಡತಿ ಮಕ್ಕಳನ್ನು ಹುಡುಕುತ್ತ ಬಂದ ಗಂಡ ಹೊರಗಡೆ ಕಂಡತಕ್ಷಣ “ಏ! ಪಾಪು …ಅಪ್ಪ ಬಂದ್ರು…. ನೋಡಿ…..” ಎಂದು ಮಕ್ಕಳಿಗೆ ಅವರಪ್ಪನನ್ನು ತೋರಿಸಿದ ತಕ್ಷಣ ಮಕ್ಕಳು ಓಡಿ ಹೋಗಿ ಕರು ಆಕಳನ್ನು ತಬ್ಬುವಂತೆ ಅಪ್ಪನನ್ನುತಬ್ಬಿದವು. ಹೆಂಡತಿಯ ಸುಳಿವೇ ಇಲ್ಲ. ಅಮೀನವ್ವನ ಸಾಮಾನು ಜೋಡಿಸುವುದು, ರಂಗವ್ವನಿಗೆ ಧೈರ್ಯ ಹೇಳುವುದು, ಶಾಂತವ್ವನಿಗೆ ಮನೆಗೆ ಕರೆಯುವುದು, ಕಮಲಾಟೀಚರ್ ಗೆ ರೆಜಿಸ್ಟರ್ ಜೋಡಿಸುವುದು……. ನಾಗರಾಜನಿಗೆ ಒಂದುಕ್ಷಣ ಗಾಬರಿಆಯಿತು. ಅಡುಗೆ ಮನೆಇಂದ ಆಚೆ ಬಂದು ಬೇರೆಯವರನ್ನು ಮಾತನಾಡಿಸಲೂ ಮುಜುಗರಪಡುತ್ತಿದ್ದ ತನ್ನ ಹೆಂಡತಿ ಇವಳೇನಾ…? ಎಂದು ಯೋಚಿಸುವಂತಾಯಿತು….. ಎಲ್ಲರೂ ಹೋಗುವಾಗ ಆತ್ಮೀಯವಾಗಿ ಬೀಳ್ಕೊಟ್ಟು ತುಂಬಿದ ಕಣ್ಣಾಲಿಗಳಿಂದ ಗಂಡನೆಡೆಗೆ ದೃಷ್ಟಿ ಬೀರಿದಳು. ಮಲಪ್ರಭೆಯ ಕಟ್ಟೆಯೊಡೆದಂತೆ ಅವಳಲ್ಲಿ ಮಡುಗಟ್ಟಿದ್ದ ದುಃಖದ ಕಟ್ಟೆ ಒಡೆದು ಗಂಡನನ್ನು ತಬ್ಬಿ ಬಿಕ್ಕಿ ಬಿಕ್ಕಿ ಅತ್ತು ಮಲಪ್ರಭೆಯಂತೆ ತಾನೂ ಹಗುರಾದಳು. ವೃಧ್ಧರಾದಿಯಾಗಿ ಎಲ್ಲರೂ ಇಷ್ಟು ವರ್ಷಗಳ ಕಾಲ ನಾವಂತೂ ಇಂತಹ ಭಯಂಕರ ಪ್ರವಾಹವನ್ನೂ ನೋಡಿಯೇ ಇರಲಿಲ್ಲ ಎನ್ನುತ್ತ ತಮ್ಮ ಗೂಡ ಸೇರತೊಡಗಿದ್ದರು.