Click here to Download MyLang App

ಒಲವು ಮೂಡಿದಾಗ - ಬರೆದವರು : ಮೇಘನಾ ಕಾನೇಟ್ಕರ್ | ಸಾಮಾಜಿಕ

*ಒಲವು ಮೂಡಿದಾಗ*

ವಿಕಾಸ್ ಕಣ್ಣು ಮುಚ್ಚಿ ಮಲಗಿದ್ದರೆ ಮಗುವಿನ ಮುಗ್ಧತೆ ಎದ್ದು ಕಾಣುತ್ತಿತ್ತು. ಮನದಲ್ಲಿ ಸಾವಿರ ಚಿಂತೆಗಳಿದ್ದರೂ ಮುಖದಲ್ಲಿ ನಿರುಮ್ಮಳ ಭಾವ. ಅವನ ತೋಳಲ್ಲಿ ಬಂಧಿಯಾಗಿ ಮಲಗಿದ್ದ ಉಜ್ವಲಾ ಅವನನ್ನೇ ತದೇಕಚಿತ್ತದಿಂದ ದಿಟ್ಟಿಸುತ್ತಾ ಅವನ ಪ್ರೇಮಸಾಗರದಲ್ಲಿ ಲೀನಳಾಗಿದ್ದಳು. ಮೆಲ್ಲಕೆ ಕೊಸರಾಡಿ ಎದ್ದು ಅವನ ಕಣ್ಣುಗಳಿಗೆ ಹೂ ಮುತ್ತನಿತ್ತಳು. "ಲವ್ ಯೂ ಚಿನ್ನಾ" ವಿಕಾಸ್ ನ ಸ್ವರ ಕೇಳಿ ಆಶ್ಚರ್ಯವಾಯ್ತು ಉಜ್ವಲಾಳಿಗೆ. ಅವನು ನಿದ್ರಿಸುತ್ತಿರಬಹುದೆಂದು ತಿಳಿದಿದ್ದಳು. ಆದರೆ ಕಣ್ಣು ಮುಚ್ಚಿ ಗಾಢವಾದ ಯೋಚನೆಯಲ್ಲಿ ಮುಳುಗಿದ್ದ.
"ವಿಕ್ಕಿ, ನಾನು ಎಂ.ಡಿ ಹತ್ರ ನನ್ ಟ್ರಾನ್ಸ್ ಫರ್ ಆರ್ಡರ್ ಕ್ಯಾನ್ಸಲ್ ಮಾಡೊಕೆ ರಿಕ್ವೆಸ್ಟ್ ಮಾಡ್ಲಾ?" ಉಜ್ವಲಾ ಸಹಾರಾ ಲೈಫ್ ಇನ್ಶೂರನ್ಸ್ ನಲ್ಲಿ ಸೀನಿಯರ್ ಡಿವಿಸನಲ್ ಮ್ಯಾನೇಜರ್ ಆಗಿದ್ದವಳು ಇದೀಗಷ್ಟೆ ಝೋನಲ್ ಮ್ಯಾನೇಜರ್ ಹುದ್ದೆಗೆ ಬಡ್ತಿ ಸಿಕ್ಕಿ ಹೈದರಾಬಾದ್ ಗೆ ವರ್ಗಾವಣೆ ಆರ್ಡರ್ ಬಂದಿದೆ. ಅದು ಅವಳ ಶ್ರಮಕ್ಕೆ ಸಂದ ಜಯ. ಅಷ್ಟೆತ್ತರಕ್ಕೆ ಬೆಳೆಯುವುದು ಅವಳ ಕನಸೂ ಹೌದು. ಆದರೆ, ತನ್ನ ಅನುಪಸ್ಥಿತಿಯಲ್ಲಿ ವಿಕಾಸ್ ಪುನಃ ಖಿನ್ನತೆಗೆ ಒಳಗಾಗಿ ಬಿಟ್ಟರೆ ಎನ್ನುವ ಆತಂಕ ಕಾಡಲಾರಂಭಿಸಿತ್ತು.
"ಒಹ್ ಕಮ್ ಆನ್ ಡಿಯರ್..ಏನಾಗಿದೆ ನಿನಗೆ? ಯು ನೊ ವಾಟ್! ಯು ಡಿಸರ್ವ್ ದಾಟ್ ಪೋಸ್ಟ್. ಹುಚ್ಚುಚ್ಚಾಗಿ ಏನೇನೊ ಯೋಚಿಸ್ಬೇಡ. ನಡಿ ಏಳು..ನಿನ್ ಕೈಯಾರೆ ಸ್ಟ್ರಾಂಗ್ ಕಾಫಿ ಕುಡಿಯೊ ಮನಸಾಗಿದೆ. ಮತ್ತೆ ಸಿಗಲ್ವಲಾ ಆ ರುಚಿ!" ವಿಕಾಸ್ ಶರ್ಟ್ ಗುಂಡಿಗಳನ್ನು ಹಾಕಿ ಕೊಳ್ಳುತ್ತಾ ತನ್ನೊಳಗಿನ ಖುಷಿಯನ್ನೂ ವಿಷಾದವನ್ನೂ ಒಟ್ಟಿಗೆ ಹೊರಗೆಡುವಿದ. ತೀವ್ರವಾದ ಖಿನ್ನತೆಗೊಳಗಾಗಿ ಪ್ರಾಣ ಕಳೆದುಕೊಳ್ಳಲು ಹೊರಟಿದ್ದ ವಿಕಾಸನನ್ನು ಪಾರು ಮಾಡಿ ಅವನ ಒಣಗಿದ ಎದೆನೆಲದಲ್ಲಿ ಮಳೆಯ ಸಿಂಚನವಾದವಳು ಉಜ್ವಲಾ.
* *

ಚಿಕ್ಕ ವಯಸ್ಸಿಗೇ ತಂದೆಯನ್ನು ಕಳೆದುಕೊಂಡು, ಡಿಗ್ರಿ ಮುಗಿಸಿ ಕೆಲಸಕ್ಕೆ ಸೇರುವವರೆಗೂ ಸಂಪೂರ್ಣವಾಗಿ ತಾಯಿಯ ಆರೈಕೆಯಲ್ಲೆ ಬೆಳೆದ ಮಗಳು ಉಜ್ವಲಾ. ತಾನು ಮದುವೆಯಾದರೆ ತನ್ನ ತಾಯಿ ಒಂಟಿಯಾಗಬಹುದು ಎನ್ನುವ ಕಾರಣಕ್ಕೆ ಮದುವೆಯಾಗುವುದಿಲ್ಲವೆಂದು ನಿರ್ಧಾರಿಸಿದ್ದಳು. ಅವಳ ಇಷ್ಟಕ್ಕೆ ವಿರುದ್ಧವಾಗಿ ನಡೆದುಕೊಳ್ಳುವುದು ಸರಿಯಲ್ಲವೆಂದೆನಿಸಿ ತಾಯಿಯೂ ಬಲವಂತ ಮಾಡದೆ ಸುಮ್ಮನುಳಿದು ಬಿಟ್ಟರು. ಪಿಇಎಸ್ ಕಾಲೇಜ್ ನಲ್ಲಿ ಬಿಕಾಂ ಓದಿಕೊಂಡಿದ್ದ ಉಜ್ವಲಾ ಅಕೌಂಟಿಂಗ್ ಅಸೋಸಿಯೆಶನ್ ನಲ್ಲಿ ಕನ್ಸಲ್ಟಂಟ್ ಆಗಿ ಕೆಲಸ ಮಾಡುತ್ತಾ ಕರೆಸ್ಪಾಂಡೆಂಟ್ ಎಂಬಿಎ ಮಾಡಿಕೊಂಡಿದ್ದಳು. ಒಂದು ಜಾಬ್ ಫೇರ್ ನಲ್ಲಿ ಇವಳ ಪರ್ಫಾರ್ಮನ್ಸ್ ಮೆಚ್ಚಿದ ಸಹಾರಾ ಲೈಫ್ ಇನ್ಶೂರೆನ್ಸ್ ಕಂಪನಿಯವರು ಅಸಿಸ್ಟಂಟ್ ಮ್ಯಾನೇಜರ್ ಹುದ್ದೆಗೆ ನೇಮಿಸಿಕೊಂಡರು.

ತಂದೆ ಬಿಎಂಟಿಸಿ ಯಲ್ಲಿ ಅಕೌಂಟ್ಸ್ ಆಫೀಸರ್ ಆಗಿದ್ದವರು. ಅನಿರೀಕ್ಷಿತವಾಗಿ ಬಿಳಿ ಕಾಮಾಲೆಗೆ ತುತ್ತಾಗಿ ಸರಿಯಾದ ಚಿಕಿತ್ಸೆ ದೊರೆಯದೆ ಮೃತ ಪಟ್ಟಿದ್ದರು. ತಾಯಿ ದ್ವಿತೀಯ ಪಿಯುಸಿ ಓದಿದ್ದರಿಂದ ಗಂಡನ ಮರಣಾನಂತರ ಅವರ ಆಫೀಸ್ ನಲ್ಲೆ ಅಟೆಂಡರ್ ಕೆಲಸ ಸಿಕ್ಕಿತ್ತು. ತಾಯಿಯ ಸಂಬಳದ ಜೊತೆಗೆ ತಂದೆಯ ಪೆನ್ಷನ್ ಮನೆ ನಡೆಸಲು ಸಾಕಾಗಿತ್ತು. ಉಜ್ವಲಾಳ ತಾಯಿ ನಿವೃತ್ತಿ ಹೊಂದಿ ನಾಲ್ಕೈದು ವರ್ಷಗಳಾಗಿವೆ. ನಿವೃತ್ತಿಯ ನಂತರ ಹಳ್ಳಿಯಲ್ಲಿ ವಯಸ್ಸಾದ ತಮ್ಮ ಅತ್ತೆ-ಮಾವನನ್ನು ನೋಡಿಕೊಳ್ಳಲೆಂದು ಹೋಗುಳಿದರು. ಈಗ ಬೆಂಗಳೂರಿನ ಮನೆಯಲ್ಲಿ ಉಜ್ವಲಾ ಏಕಾಂಗಿ. ರಜೆ ಸಿಕ್ಕಾಗ ಹಳ್ಳಿಗೆ ಹೋಗಿ ತಾಯಿ, ಅಜ್ಜಿ-ತಾತ ನ ಜೊತೆ ಸಮಯ ಕಳೆದು ಮತ್ತೆ ಬೆಂಗಳೂರಿಗೆ ವಾಪಸ್ಸಾಗುತ್ತಿದ್ದಳು.

ಪ್ರತಿಷ್ಠಿತ ಐಟಿ ಕಂಪನಿಯೊಂದರಲ್ಲಿ ಟೀಮ್ ಮ್ಯಾನೇಜರ್ ಆಗಿರುವ ವಿಕಾಸ್ ಮಧ್ಯ ವಯಸ್ಸಿನ ಸಂಸಾರಸ್ಥ. ಒಂದು ಹೆಣ್ಣು ಹಾಗೂ ಅವಳಿ ಗಂಡು ಮಕ್ಕಳ ತಂದೆ. ಹೆಂಡತಿ ಇದ್ದೂ ಇಲ್ಲದಂತಿರುವ ಜಿಗುಪ್ಸೆಗೊಳಗಾದ ಗಂಡ. ಹೌದು, ವೈಶಾಲಿ ಮೊದಲಿನಿಂದಲೂ ಹಠಮಾರಿ, ಗಯ್ಯಾಳಿ, ಜಂಭದ ಹೆಣ್ಣು. ಎಲ್ಲಕ್ಕಿಂತ ಹೆಚ್ಚಾಗಿ ಆಳಸಿಗೊಡ್ಡು ಹೆಸರಿಗೆ ಮಕ್ಕಳನ್ನು ಹೆತ್ತಿದ್ದಳಷ್ಟೆ. ಆದರೆ ಒಂದು ದಿನವೂ ಮಕ್ಕಳೊಂದಿಗೆ ಪ್ರೀತಿಯಿಂದ ಬೆರೆಯುತ್ತಿರಲಿಲ್ಲ.

ವಿಕಾಸ್ ಒಬ್ಬನೇ ಗಾಣದೆತ್ತಿನಂತೆ ಮನೆಯಲ್ಲೂ ಆಫೀಸ್ ನಲ್ಲೂ ದುಡಿದು ಹೈರಾಣಾಗಬೇಕಿತ್ತು. ಮದುವೆಯಾಗಿ ಹದಿನೆಂಟು ವರ್ಷಗಳಾಗಿದ್ದರೂ ಮೂರು ಮಕ್ಕಳನ್ನು ಬಿಟ್ಟರೆ ಅದೇ ಮುಗಿಯದ ಜಗಳ, ಮನಸ್ತಾಪ, ಕಿರಿಕಿರಿ, ವಾದ, ವಿವಾದಗಳು ಒಟ್ನಲ್ಲಿ ಸಂಸಾರದಲ್ಲಿ ಯಾವ ಆಸಕ್ತಿಕರ ಬದಲಾವಣೆಯೂ ಆಗಿರಲಿಲ್ಲ. ಮೊದಲೊಂದಷ್ಟು ವರ್ಷ ಆಫೀಸ್ ಗಿಂತ ಮನೆಗೇ ಹೆಚ್ಚು ಪ್ರಾಶಸ್ತ್ಯ ನೀಡುತ್ತಿದ್ದ. ಕುಟುಂಬವನ್ನು ಅತಿಯಾಗಿ ಪ್ರೀತಿಸುವ ಅವನು ಆಫೀಸ್ ನಲ್ಲಿ ಕೆಲಸ ಮುಗಿಯುತ್ತಿದ್ದಂತೆ ಒಂದೇ ಒಂದು ನಿಮಿಷವೂ ವ್ಯರ್ಥ ಮಾಡದೆ ಮನೆಗೆ ಬಂದು ಮಕ್ಕಳೊಂದಿಗೆ ಸಮಯ ಕಳೆಯುತ್ತಿದ್ದ. ಪ್ರತಿ ತಿಂಗಳು ಸಿನಿಮಾ, ಡಿನ್ನರ್, ಪಿಕ್ ನಿಕ್, ಶಾಪಿಂಗ್ ಎಂದು ಮನೆಯವರನ್ನು ಕರೆದುಕೊಂಡು ಹೋಗುತ್ತಿದ್ದ.
ಬ್ಯಾಡ್ಮಿಂಟನ್ ಆಡುವುದು ಹಾಗೂ ಅಡುಗೆ ಮಾಡುವುದು ವಿಕಾಸ್ ನ ಅಚ್ಚುಮೆಚ್ಚಿನ ಹವ್ಯಾಸ. ಮಕ್ಕಳಿಗೆ ಅಪ್ಪನ ಕೈ ಅಡುಗೆ ಅಂದರೆ ಪಂಚಪ್ರಾಣ. ಮಕ್ಕಳೊಂದಿಗೆ ಆಟವಾಡುವುದು ಮಾತ್ರವಲ್ಲದೆ ಅವರ ಅಭ್ಯಾಸ, ಮನೆಪಾಠ ಸಹ ತಾನೇ ಮಾಡಿಸುತ್ತಿದ್ದ. ಪ್ರತಿ ತಿಂಗಳ ಕೊನೆಯ ಶನಿವಾರ ಶಾಲೆಯಲ್ಲಿ ಪೇರೆಂಟ್ಸ್ ಮೀಟ್ ಇರುತ್ತಿತ್ತು. ವೈಶಾಲಿಗೆ ಅದರಲ್ಲೆಲ್ಲಾ ಆಸಕ್ತಿಯಿರಲಿಲ್ಲ. ಹೇಗೂ ಶನಿವಾರ ವೀಕ್ಹೆಂಡ್ ಆಫ್ಫ್ ಇರುವುದರಿಂದ ವಿಕಾಸ್ ನೆ ಪಾಲ್ಗೊಳ್ಳುತ್ತಿದ್ದ. ಎಷ್ಟಾದರೂ ಅವನೇ ಅಲ್ಲವೆ ಆಸ್ಥೆಯಿಂದ ಮಕ್ಕಳ ಲಾಲನೆ-ಪಾಲನೆ ಮಾಡುತ್ತಿರುವುದು. ನಾನಾರೀತಿಯಿಂದ ಹೆಂಡತಿಗೆ ಬುದ್ಧಿ ಹೇಳಿದ; ಏನೂ ಪ್ರಯೋಜನವಾಗಲಿಲ್ಲ. ಆದರೂ ಇಂದಲ್ಲ ನಾಳೆ ಹೆಂಡತಿಗೆ ತಿಳುವಳಿಕೆ ಬರಬಹುದು, ಕುಟುಂಬದ ಜವಾಬ್ದಾರಿ ಅರಿಯಬಹುದು, ಗಂಡ-ಮಕ್ಕಳು ನೆಂಟರು ಬಳಗವನ್ನು ಪ್ರೀತಿಸಬಹುದು ಎಂದು ಮಿತಿ ಮೀರಿ ತಾಳ್ಮೆ ರೂಢಿಸಿಕೊಂಡ. ಉಡಾಫೆ ಮಾಡುತ್ತಾ ಅವನ ತಾಳ್ಮೆಯನ್ನು ದುರುಪಯೋಗ ಪಡಿಸಿಕೊಳ್ಳತೊಡಗಿದಳು ವೈಶಾಲಿ.


ದಿನದಿಂದ ದಿನಕ್ಕೆ ಮನೆಯ ಹಳಸಿದ ವಾತಾವರಣದೊಂದಿಗೆ ಸಾಲದ ಹೊರೆ, ಆಫೀಸ್ ನಲ್ಲಿ ಸೀನಿಯರ್ ಗಳ ಕಿರುಕುಳ ದ್ವಿಗುಣಗೊಂಡು ಖಿನ್ನನಾಗತೊಡಗಿದ ವಿಕಾಸ್. ಅದೊಂದು ಮಧ್ಯಾಹ್ನ ಬ್ಯಾಂಡ್ಮಿಂಟನ್ ಕೋರ್ಟ್ ನಲ್ಲಿ ಆಟವಾಡಲು ಮನಸ್ಸಿಲ್ಲದೆ ಮೂಲೆಯಲ್ಲಿ ಒಂಟಿಯಾಗಿ ದುಃಖಿಸುತ್ತಾ ಕುಳಿತಿದ್ದ. ಅದೇನನ್ನಿಸಿತೊ ಇದ್ದಕ್ಕಿದ್ದಂತೆ ಆವೇಶ ಬಂದವರ ಹಾಗೆ ಎದ್ದು ಹೊರ ನಡೆದು ದರದರನೆ ಮೆಟ್ಟಿಲು ಹತ್ತುತ್ತಾ ಕೊನೆಯ ಮಹಡಿಗೆ ಹೋದವನೆ ಕಟ್ಟಡದ ತುದಿಯಲ್ಲಿ ನಿಂತು ಕಣ್ಣು ಮುಚ್ಚಿ ಹಾರಿಬಿಟ್ಟ.
* *

"ಮಿಸ್ಟರ್ ವಿಕಾಸ್..ವಿಕಾಸ್ ಎದ್ದೇಳಿ ಪ್ಲೀಸ್ ಕಣ್ಣು ಬಿಡಿ" ಅವನ ಎದೆಯ ಮೇಲೆ ಕೈ ಇಟ್ಟು ಎಬ್ಬಿಸಲೆತ್ನಿಸುತ್ತಿದ್ದಾಳೆ. "ಹು ಆರ್ ಯು? ನನ್ನನ್ಯಾಕೆ ಇಲ್ಲಿಗೆ ಕರ್ಕೊಂಡು ಬಂದ್ರಿ? ಬಿಡಿ ನಾನು ಸಾಯಬೇಕು..." ಹುಬ್ಬು ಗಂಟಿಕ್ಕಿ ಹಲುಬಿದ ವಿಕಾಸ್ ಮಂಚದಿಂದೇಳಲು ಪ್ರಯಾಸ ಪಡುತ್ತಿದ್ದಾನೆ. "ಕಾಮ್ ಡೌನ್ ಮಿಸ್ಟರ್ ವಿಕಾಸ್..ಬನ್ನಿ ಫ್ರೆಶ್ನ್ ಅಪ್ ಆಗಿ ಏನಾದ್ರು ತಿನ್ನಿ..ತುಂಬಾ ಆಯಾಸಗೊಂಡಿದಿರಿ." ಇಂತಹ ಪ್ರೀತಿಯ ನುಡಿಗಳಿಗೆ ಆ ಬಡಜೀವ ಅದೆಷ್ಟು ವರುಷಗಳಿಂದ ಹಾತೊರೆಯುತ್ತಿತ್ತೊ. ಅವಳು ತೋರುವ ಕಕ್ಕುಲಾತಿಗೆ ಅಕ್ಷರಶಃ ಕರಗಿ ನೀರಾಗಿದ್ದ. ಅದರಲ್ಲೂ ಅವನೆದೆಯ ಮೇಲೆ ಕೈಯಿಟ್ಟಾಗ ಆಕೆಯ ಕೋಮಲ ಕೈಗಳ ಸ್ಪರ್ಶ ಮಲಗಿದ್ದ ಆಸೆಗಳನ್ನು ಬಡಿದೆಬ್ಬಿಸುವಂತಿತ್ತು.

ಹೊರಗಡೆ ಸಂಜೆಗತ್ತಲು ಆವರಿಸಿದೆ; ಆದರೆ, ಇದ್ಯಾವುದರ ಪರಿವೆಯೆ ಅವನಿಗಿಲ್ಲ. ಫ್ರೆಶ್ನ್ ಅಪ್ ಆಗಿ ಹೊರ ಬಂದಾಗ ಬೆಡ್ ಬಳಿಯಿರುವ ಟಿಫಾಯ್ ಮೇಲೆ ಸ್ಟೀಲ್ ಲೋಟದಲ್ಲಿ ಬಿಸಿಬಿಸಿ ಕಾಫಿ ಮತ್ತು ಬೌಲ್ ನಲ್ಲಿ ಕೋಡುಬಳೆ ತಂದಿಟ್ಟು ಇವನಿಗಾಗಿ ಕಾಯುತ್ತಿದ್ದಳು. ಸ್ಟ್ರಾಂಗ್ ಫಿಲ್ಟರ್ ಕಾಫಿಯ ಗಮಗಮ ಪರಿಮಳಕ್ಕೆ ಮರುಳಾಗಿದ್ದ. ಒಂದು ಗುಟುಕು ತುಟಿಗೆ ಸೋಕಿಸುತ್ತಲೇ ಅದ್ಭುತವಾದ ರುಚಿಗೆ ಮೈ ಮರೆತು ಹೋದ. "ಹ್ಯಾವ್ ಇಟ್..ನಾನೇ ಮಾಡಿದ್ದು" ಕೋಡುಬಳೆ ಇರುವ ಬೌಲ್ ಅವನ ಬಳಿಯಿಡುತ್ತಾ ತಿನ್ನಲು ಹೇಳಿದಳು. ಅವಳು ಮಾಡುವ ಉಪಚಾರಕ್ಕೆ ವಿಕಾಸ್ ಮನಸ್ಸು ಬಯಸಿದಂತೆ ಆಗುತ್ತಿದೆಯಲ್ಲ ಎನಿಸಿ ಉಲ್ಲಾಸಗೊಂಡ.
ನಂತರ ಪರಸ್ಪರ ಇಬ್ಬರ ಪರಿಚಯ ಲೋಕಾರೂಢಿ ಮಾತುಗಳೆಲ್ಲಾ ನಡೆದು ರಾತ್ರಿ ಅವಳೇ ಅವನನ್ನು ಮನೆಗೆ ಡ್ರಾಪ್ ಮಾಡಿ ಬಂದಳು. ವಿಕಾಸ್ ಗೆ ತನ್ನ ಅನುಪಸ್ಥಿತಿಯ ಕುರಿತು ವಿಚಾರಿಸಲು ಮನೆಯಲ್ಲಿ ಯಾರಿಗೂ ಕಿಂಚಿತ್ತೂ ಆಸಕ್ತಿ ಇರುದುದನ್ನು ಕಂಡು ಮನಸ್ಸು ಮತ್ತೆ ಖಿನ್ನವಾಯಿತಾದರೂ ಅಷ್ಟೇ ಬೇಗನೆ ಉಜ್ವಲಾಳತ್ತ ವಾಲಿತು. ಇತ್ತ ಉಜ್ವಲಾಳಿಗೂ ಮನೆಯೆಲ್ಲ ಬಣಬಣ ಎನ್ನುತ್ತಿದೆ. ಅವಳ ಮನಸ್ಸು ಯಾಕೊ ವಿಕಾಸ್ ನ ಸಾಂಗತ್ಯವನ್ನು ಬಯಸುತ್ತಿದೆ.


ಉಜ್ವಲಾ ಮುಂಚೆ ಸಂಜೆ ಹೊತ್ತು ಬ್ಯಾಡ್ಮಿಂಟನ್ ಆಡಲು ಹೋಗುತ್ತಿದ್ದಳು. ಇತ್ತಿಚೇಗೆ ಕೆಲಸದ ವೇಳೆ ಬದಲಾಗಿದ್ದರಿಂದ ಮಧ್ಯಾಹ್ನ ಬರತೊಡಗಿದ್ದಳು. ಆಗಲೇ ಅವಳು ವಿಕಾಸ್ ನನ್ನು ಗಮನಿಸಿದ್ದು. ಅವತ್ತು ಖಿನ್ನತೆಯಿಂದ ಅವನಿಗೆ ಕಣ್ಕತ್ತಲೆ ಬಂದಿತ್ತಷ್ಟೆ. ಹಾರುವ ಮುಂಚೆಯೇ ಇವಳು ಅವನನ್ನು ರಕ್ಷಿಸಿ ತನ್ನ ಮನೆಗೆ ಕರೆ ತಂದು ಆರೈಕೆ ಮಾಡಿದ್ದಳು. ಕ್ರಮೇಣ ಅವರಿಬ್ಬರ ನಡುವೆ ಸ್ನೇಹ ಬೆಳೆದು ಪ್ರೇಮಕ್ಕೆ ತಿರುಗಿತು. ಅವರಿಬ್ಬರ ಬಾಂಧವ್ಯ, ವಿಶ್ವಾಸ ಎಷ್ಟರಮಟ್ಟಿಗೆ ಗಾಢವಾಗಿತ್ತೆಂದರೆ ವಿಕಾಸ್ ನ ಸಾಲ ತೀರಿಸುವುದರಿಂದ ಹಿಡಿದು ಅವನ ಮಕ್ಕಳ ಶಾಲೆಯ ಫೀ ತುಂಬುವುದು, ಅವರಿಗೆ ಒಳ್ಳೆಯ ಕಡೆ ಕೋಚಿಂಗ್ ಕಳುಹಿಸುವುದು, ಅವನ ಆಫೀಸ್ ಸಮಸ್ಯೆಗಳಿಗೆ ಪರಿಹಾರ ನೀಡುವುದು ಎಲ್ಲವನ್ನೂ ಉಜ್ವಲಾ ಬಹಳ ಆಸ್ಥೆಯಿಂದ ನಿಭಾಯಿಸುತ್ತಿದ್ದಳು.
ಕೆಲಸದ ವೇಳೆಯಲ್ಲಿ ಸ್ವಲ್ಪ ಬಿಡುವು ಸಿಕ್ಕರೂ ಸಾಕು ಇಬ್ಬರ ನಡುವೆ ವಾಟ್ಸಪ್ ಸಂದೇಶಗಳು ವಿನಿಮಯವಾಗುತ್ತಿದ್ದವು. ಊಟದ ಸಮಯದಲ್ಲಿ ಕಾಲ್ ಮಾಡಿ ಹರಟುತ್ತಿದ್ದರು. ಮನೆ ತಲುಪುವ ಮುನ್ನ ವಿಡಿಯೋ ಕಾಲ್ ನಲ್ಲಿ ಸರಸ ಸಲ್ಲಾಪಗಳು, ರಾತ್ರಿ ಮಲಗುವ ಮುನ್ನ 'ಶುಭ ರಾತ್ರಿ' ಯೊಂದಿಗೆ ಒಂದು ಸೆಲ್ಫಿ. ವಾರಕ್ಕೊಮ್ಮೆ ಡಿನ್ನರ್, ತಿಂಗಳಿಗೊಮ್ಮೆ ಲಾಂಗ್ ಟೂರ್. ಹೀಗೆ ನಡೆದಿದೆ ಐದು ವರ್ಷಗಳಿಂದ.
* *

ಉಜ್ವಲಾಳ ಫೋನ್ ರಿಂಗಣಿಸುತ್ತಿದೆ. ಅವಳು ಇಷ್ಟೊತ್ತು ಪ್ಯಾಕಿಂಗ್ ನಲ್ಲಿ ನಿರತಳಾಗಿದ್ದವಳು ಈಗಷ್ಟೇ ಸ್ನಾನಕ್ಕೆ ಇಳಿದಿದ್ದಳು. ಮೂರು ನಾಲ್ಕು ಬಾರಿ ರಿಂಗಣಿಸಿ ಸೋತಿತ್ತು ಅವಳ ಫೋನ್. "ಹೇಳಿ ಡಾರ್ಲಿಂಗ್ ಏನಾಯ್ತು? ಯಾಕಿಷ್ಟೊಂದ್ಸಲ ಕಾಲ್ ಮಾಡಿದ್ರಿ?" ಆ ಕಡೆಯಿಂದ "ಸ್ವೀಟಿ ಒಂದ್ ಹೆಲ್ಪ್ ಆಗ್ಬೇಕಾಗಿತ್ತು...ಇವತ್ತು ಸಂಜೆ ಮಗಳ ಕಾಲೇಜ್ ನಲ್ಲಿ ಕಾನ್ವೊಕೇಶನ್ ಪ್ರೋಗ್ರಾಮ್ ಇದೆ. ಅವಳ ಜೊತೆ ಪೇರೆಂಟ್ಸ್ ಹೋಗಬೇಕಂತೆ. ಮಗಳು ನಿನ್ನನ್ನ ಕರ್ಕೊಂಡು ಹೋಗಣ, ಮಮ್ಮಿ ಹೇಗೂ ಬರಲ್ವಲಾ ಅಂತಿದಾಳೆ..ವಿಲ್ ಯು ಕಮ್?" ಮಕ್ಕಳಿಗೆ ಈಗ ಮನೆಯ ವಾಸ್ತವ ಚಿತ್ರಣ ಅರಿವಾಗಿದೆ. ಬೇಜವಾಬ್ದಾರಿ ತಾಯಿ ಹಾಗೂ ಮನೆಗಾಗಿ ಜೀವ ಒತ್ತೆಯಿಡುವ ತಂದೆ ಇಬ್ಬರಲ್ಲಿ ಯಾರನ್ನು ಗೌರವಿಸಬೇಕೆಂಬ ಪ್ರಬುದ್ಧತೆ ಬೆಳೆದಿದೆ. ಬೇಸರವಾದಾಗ ಅವರೂ ಉಜ್ವಲಾಳೊಂದಿಗೆ ಫೋನ್ ನಲ್ಲಿ ಮಾತನಾಡುತ್ತಾರೆ ಇಲ್ಲವೆ ಅವಳ ಮನೆಗೆ ಬಂದು ಅವಳೊಂದಿಗೆ ಸಮಯ ಕಳೆಯುತ್ತಾರೆ.

ಉಜ್ವಲಾ ಅವರಿಬ್ಬರಿಗೂ ತಾನು ಪ್ರೋಗ್ರಾಮ್ ಅಟೆಂಡ್ ಮಾಡುತ್ತೇನೆ ಆದರೆ ಸ್ಟೇಜ್ ಹತ್ತಲಾರೆ ಎಂದು ಷರತ್ತು ವಿಧಿಸಿ ಕಾನ್ವೊಕೇಶನ್ ಗೆ ಬರಲು ಒಪ್ಪಿದಳು. ಆದರೆ, ಮೊದಲು ಸಮ್ಮತಿಸಿದ್ದವರು ಅಲ್ಲಿಗೆ ಹೋದ ನಂತರ ಬಲವಂತದಿಂದ ಸ್ಟೇಜ್ ಹತ್ತಲೇಬೇಕಾದ ಅನಿವಾರ್ಯತೆ ತಂದೊಡ್ಡಿದರು. ಸ್ಟೇಜ್ ಮೇಲೆ ಮೂವರೂ ಜೊತೆಯಾಗಿ ನಿಂತಿದ್ದ ಫೋಟೋ ಮರುದಿನ ನ್ಯೂಸ್ ಪೇಪರ್ ನಲ್ಲಿ, ಕಾಲೇಜಿನ ಬ್ಲಾಗ್ ನಲ್ಲಿ ಎಲ್ಲೆಡೆಯೂ ಹರಿದಾಡಿತು. ಅದು ವೈಶಾಲಿಯ ಕಣ್ಣಿಗೆ ಬಿದ್ದದ್ದೇ ತಡ ಮನೆ ರಣರಂಗವಾಯ್ತು. ಅನೇಕ ದಿನಗಳಿಂದ ಅಹಂ ಗೆ ಒತ್ತಿ ಇರಿಯುತ್ತಿದ್ದ ಸಿಟ್ಟು, ಹತಾಶೆ, ಅವಮಾನ, ಅಪರಾಧಿ ಮನೋಭಾವವೆಲ್ಲ ಒಟ್ಟಾಗಿ ಹೊರನೂಕಲ್ಪಟ್ಟಿತ್ತು.

ಬೆಳಗ್ಗೆ ತಿಂಡಿ ತಿನ್ನುತ್ತ ಕುಳಿತಿದ್ದ ಗಂಡ ಮಕ್ಕಳನ್ನು ಕಂಡು ಇದೇ ಸರಿಯಾದ ಸಮಯವೆಂದರಿತು "ಏನ್ರೀ ನಿಮ್ಮಿಬ್ಬರ ಚಕ್ಕಂದವೆಲ್ಲಾ ಎಷ್ಟು ದಿನದಿಂದ ನಡೀತಿದೆ?" ತನ್ನನ್ನು ತಾನು ಪತಿವೃತೆ ಎಂದುಕೊಂಡು ಜಂಭದಿಂದ ಎತ್ತರದ ದನಿಯಲ್ಲೆ ಕೇಳಿದಳು ವೈಶಾಲಿ. ವಿಕಾಸ್ ನಿಗೇಕೊ ಅವಳ ಪ್ರಶ್ನೆಗೆ ಉತ್ತರಿಸುವ ಅಗತ್ಯವಿಲ್ಲ ಎಂದೆನಿಸಿ ಸುಮ್ಮನೇ ಎದ್ದು ಮೇಲಿನ ಕೋಣೆಗೆ ಹೋಗಿ ಬಾಗಿಲೆಳೆದುಕೊಂಡ. ಮಗಳು ಇನ್ನು ತಾನು ಸುಮ್ಮನಿದ್ದರೆ ಜೀವನಪರ್ಯಂತ ಪಪ್ಪ ತಮಗೆ ಸಿಗುವುದಿಲ್ಲ ಎಂದು ಮನವರಿಕೆಯಾಗಿ "ಮಮ್ಮಿ ನಿನಗೆ ಅವ್ರ ಬಗ್ಗೆ ಚಕಾರವೆತ್ತಲೂ ಯೋಗ್ಯತೆಯಿಲ್ಲ. ಇನ್ನಾದ್ರೂ ನಿನ್ನ ತಪ್ಪನ್ನ ತಿದ್ಕೊಂಡು ಪಪ್ಪಂಗೆ ಒಳ್ಳೆ ಸಂಗಾತಿಯಾಗು. ನಮಗೂ ಕೂಡಾ ಒಳ್ಳೆ ಅಮ್ಮ ಬೇಕು. ನೀ ಬದಲಾಗಿಲ್ಲ ಅಂದ್ರೆ, ನಾವೆಲ್ಲಾ ಉಜ್ವಲಾ ಆಂಟಿ ಜೊತೆ ಹೈದರಾಬಾದ್ ನಲ್ಲಿ ಸೆಟ್ಲ್ ಆಗ್ತಿವಿ." ಎಂದಾಗ ಅವಮಾನ ತಾಳಲಾರದೆ ಗಂಟಲುಬ್ಬಿ ಉಗುಳು ನುಂಗುತ್ತ ಕಣ್ಣೆವೆ ತುಂಬಿಕೊಂಡು ಬಿಕ್ಕುತ್ತ ತತ್ತರಿಸಿ ಹೋದಳು ವೈಶಾಲಿ.
ಇಷ್ಟು ದಿನ ತನ್ನ ಕಿಟ್ಟೀ ಪಾರ್ಟಿ ಫ್ರೆಂಡ್ಸ್‌ಗಳ ಮೂದಲಿಕೆ, ತನ್ನ ಕುಟುಂಬದವರ ತಾತ್ಸಾರ, ಸಂಬಂಧಿಕರ ಅವಮಾನ ಹೇಗೊ ಸಹಿಸಿಕೊಂಡಿದ್ದಳು. ನಿಜ ಹೇಳಬೇಕೆಂದರೆ ಅವಳಿಗೆ ಇವೆಲ್ಲಾ ಕಿಂಚಿತ್ತೂ ನಾಟುತ್ತಲೇ ಇರಲಿಲ್ಲ. ಆದರೆ ಇಂದು ತಾ ಹೆತ್ತ ಮಗಳು ಅದರಲ್ಲೂ ತನ್ನ ಹೆಗಲೆತ್ತರಕ್ಕೆ ಬೆಳೆದ ಹಿರಿಮಗಳು ತೋರಿದ ಧಾರ್ಷ್ಟ್ಯ ಮಾತ್ರ ಎದೆಯಾಳಕ್ಕೆ ನಾಟಿ ಬಿಟ್ಟಿತ್ತು. ಮನದ ಒಂದು ಮೂಲೆಯಲ್ಲಿ ಅಪರಾಧಿ ಭಾವ ಕಾಡುತ್ತಿತ್ತು. ಹುಟ್ಟು ಸಹಜ ಮನೆಮಾಡಿದ್ದ ಅಹಂಕಾರದ ಬಲೂನ್ ಒಡೆದು ಹೋಗಿತ್ತು. ಇಷ್ಟು ವರ್ಷಗಳ ಕಾಲ ಮನೆಯ ಚಿತ್ರಣವನ್ನೆಲ್ಲ ಕಂಡುಂಡು ಬೆಳೆದು ನಿಂತ ಮಗಳ ಕಣ್ಣಲ್ಲಿ ದೃಢತೆಯಿತ್ತು. ಧೈರ್ಯವಿತ್ತು. ಎಲ್ಲಕ್ಕೂ ಮಿಗಿಲಾಗಿ ಅವಳೆದೆಯಲ್ಲಿ ತನ್ನ ತಂದೆಯ ಬಗ್ಗೆ ಅಪಾರವಾದ ಪ್ರೀತಿ, ಗೌರವವಿತ್ತು. ಉಜ್ವಲಾಳ ಮೇಲೂ ಅದಮ್ಯ ವಿಶ್ವಾಸವಿತ್ತು. ತನ್ನ ಮಗಳಿಗಿರುವಷ್ಟು ತಿಳುವಳಿಕೆ ತನಗಿಲ್ಲವಲ್ಲ ಎಂದು ತನ್ನ ಬಗ್ಗೆ ತನಗೇ ಅಸಹ್ಯವೆನಿಸಿತು. ವೈಶಾಲಿ ತನ್ನ ತಪ್ಪೊಪ್ಪಿಕೊಂಡು ವಿಕಾಸ್ ನಲ್ಲಿ ಕ್ಷಮೆಯಾಚಿಸಿ ಹೊಸ ಮನುಷ್ಯಳಾಗಿ ಬದಲಾದಳು.

* *

ತಿಂಗಳುಗಳ ನಂತರ... " ಹಾಯ್ ವಿಕಾಸ್ ನನಗೆ ನೀವೆಲ್ಲಾ ಸೇರಿ ಹುಡ್ಕಿರೊ ಗಂಡು ಇಷ್ಟವಾಗಿದಾರೆ. ಅಮ್ಮನ ಜೊತೆ ಮಾತಾಡಿ ಮುಂದಿನ ತಯಾರಿ ಮಾಡ್ಕೊಬಹುದು." ವಿಕಾಸ್ ಮತ್ತು ವೈಶಾಲಿಗೆ ಕೊಟ್ಟ ಮಾತಿನಂತೆ, ಅಮ್ಮನ ಆಸೆಯಂತೆ ನಡೆದುಕೊಂಡು ಉಜ್ವಲಾ ಹೊಸ ಬಾಳಿಗೆ ಜೊತೆಯಾದ ದೀಪಕ್ ನ ಮನೆ ಮನವನ್ನು ಪ್ರಜ್ವಲಿಸಿದಳು.
- ಮೇಘನಾ ಕಾನೇಟ್ಕರ್