Click here to Download MyLang App

ಒಬ್ಬ ಬ್ರದರ್ ಬರ್ತಾನ ನೋಡ್ - ಬರೆದವರು : ಮನೋಹರ ಕುಲಕರ್ಣಿ | ಸಾಮಾಜಿಕ


“ಅಮ್ಮಾ! ಅಮ್ಮಾ! ಬಾಗ್ಲಾ ಹಾಕೋ . ನಾವ್ ಇಬ್ರೂ ಆಫೀಸ್ ಗೆ ಹೊಂಟೇವಿ” ಎಂದು ಹೇಮಂತ್ ನಿತ್ಯದಂತೆ ಅಮ್ಮನಿಗೆ ಹೇಳಿದರೆ , ಅವನ ಹೆಂಡತಿ ಸುಮತಿ “ಕೆಲಸದವಳು ಬಂದ್ರೆ ಬಾಗಿಲ ತಗೀಬ್ಯಾಡ್ರಿ ಎಲ್ಲಾ ಭಾಂಡಿ , ಬಟ್ಟಿ ಹೊರಗ ಹಿತ್ತಲಾಗ ಇಟ್ಟೆನ್ರಿ” ಎಂದು ದನಿ ಗೂಡಿಸಿದಳು. ಸ್ಕೂಟರ್ ಮೇಲೆ ಹೊರಟಿತು ಅವರಿಬ್ಬರ ಸವಾರಿ. ಹೇಮಂತ ಒಬ್ಬ ಸರ್ಕಾರಿ ಹೈಸ್ಕೂಲ್ ಶಿಕ್ಷಕ. ಹೆಂಡತಿ ಸುಮತಿ ಸಹ ಸರ್ಕಾರಿ ಕಚೇರಿಯೊಂದರಲ್ಲಿ ಉದ್ಯೋಗಿ. ಅವನ ಸ್ಕೂಲ್ ನ ದಾರಿಯಲ್ಲೇ ಇರುವ ಆಫೀಸಿಗೆ ದಿನಾಲೂ ಅವಳನ್ನು ಡ್ರಾಪ್ ಮಾಡಿ, ತಾನು ಮುಂದೆ ಹೋಗುತ್ತಿದ್ದ. ಇದು ಅವರ ನಿತ್ಯದ ದಿನಚರಿ ಯಾಗಿತ್ತು. ಅವರು ಕೆಲಸಕ್ಕೆಂದು ಹೋದರೆ ಮನೆಯಲ್ಲಿ ಕಮಲಮ್ಮ ಒಬ್ಬರೇ. ಹಳ್ಳಿಯಲ್ಲೇ ಇರುವ ಅವರನ್ನು ಹೇಮಂತ ಹತ್ತು ವರ್ಷದ ಹಿಂದೆ ತನ್ನ ತಂದೆ ತೀರಿಕೊಂಡಾಗ ತಾಯಿಯನ್ನು ನೋಡಿಕೊಳ್ಳಲು ಯಾರೂ ಇಲ್ಲವೆಂದು ತಮ್ಮ ಹತ್ತಿರ ಇಲ್ಲಿ ಪಟ್ಟಣಕ್ಕೆ ಕರೆದುಕೊಂಡು ಬಂದಿದ್ದ. ಕಮಲಮ್ಮನವರಿಗೆ ಮೊದಮೊದಲು ಈ ಪಟ್ಟಣ ಜೀವನಕ್ಕೆ ಹೊಂದಿಕೊಳ್ಳಲು ಕಷ್ಟವಾದರೂ ಕ್ರಮೇಣ ಅದೇ ಅಭ್ಯಾಸವಾಗಿತ್ತು. ಹೇಮಂತನಿಗೆ ಮದುವೆಯಾಗಿ ಹನ್ನೆರಡು ವರ್ಷವಾದರೂ ಮಕ್ಕಳಾಗಿರಲಿಲ್ಲ. ವೈದ್ಯರಿಗೆ ತೋರಿಸಿದರೆ ಎಲ್ಲವೂ ಚೆನ್ನಾಗಿದೆ ಎಂದು ಹೇಳಿದರೂ ಇದುವರೆಗೆ ಯಾವುದೇ ಫಲ ಸಿಕ್ಕಿರಲಿಲ್ಲ. ದಂಪತಿಗಳಿಬ್ಬರೂ ತಮ್ಮ ತಮ್ಮ ಕೆಲಸದಲ್ಲಿ ತೊಡಗಿಸಿಕೊಂಡರೂ ಕಮಲಮ್ಮನವರಿಗೆ ಇದರ ಕೊರಗು ಸದಾ ಕಾಡುತ್ತಿತ್ತು.

ಕಮಲಮ್ಮನವರು ಕೂಡ ಹತ್ತನೇ ತರಗತಿ ವರೆಗೆ ಓದಿದ್ದರಿಂದ ಅವರಿಗೆ ಓದಲು ಬರೆಯಲು ಚೆನ್ನಾಗಿಯೇ ಬರುತ್ತಿತ್ತು. ಅಮ್ಮ ಮನೆಯಲ್ಲಿ ಒಬ್ಬಳೇ ಇರುತ್ತಾಳೆ ಓದುವುದರಲ್ಲಿ ಆಸಕ್ತಿ ಉಳ್ಳವಳು ಎಂದು ಹೇಮಂತ ಸುಧಾ,ತರಂಗ, ಎಂದೆಲ್ಲಾ ವಿವಿಧ ಪತ್ರಿಕೆಗಳನ್ನು ತಂದಿರಿಸುತ್ತಿದ್ದ. ಕಮಲಮ್ಮ ಮಗ ಸೊಸೆ ಕೆಲಸಕ್ಕೆ ಹೋದರೆ ಅವರು ಟಿ.ವಿ ನೋಡುವುದಕ್ಕಿಂತ ಪತ್ರಿಕೆಗಳನ್ನು ಓದುವುದರಲ್ಲಿ ಕಾಲ ಕಳೆಯುತ್ತಿದ್ದರು.

ಹೀಗೆಯೇ ಒಂದು ದಿನ ಅವರು ಪತ್ರಿಕೆಯೊಂದನ್ನು ಓದುತ್ತಾ ಕುಳಿತಾಗ ,

ಅವ್ವಾರs! ಅವ್ವಾರs! ಎಂದು ಕಮಲಮ್ಮನವರ ಮನೆಯ ಕೆಲಸದವಳು ಒಂದೇ ಸಮನೇ ಹಿತ್ತಲ ಬಾಗಿಲಿನಿಂದಲೇ ಕೂಗಿ ಕೊಂಡಳು. ಅವಳ ದನಿ ಕೇಳಿ ಕಮಲಮ್ಮ “ಏನ್ ನಂದವ್ವ ! ಬಟ್ಟಿ, ಭಾಂಡಿ ಸೋಪ್ ಏನಾದರೂ ಬೇಕಾಗಿತ್ತs ಏನ್?” ಎಂದು ಅಡುಗೆ ಮನೆಯ ಹಿತ್ತಲಿನ ಕಡೆಗೆ ಹತ್ತಿಕೊಂಡ ಕಿಟಕಿಯಿಂದಲೇ ಕೇಳಿದರು. ”ಏನಿಲ್ರಿs ಅವ್ವಾರ ! ಪ್ರಸಾದ್ ಬಿಲ್ಡಿಂಗ್ ನವರು ದೇಶಪಾಂಡೆ ಅಜ್ಜ ತೀರಿಕೊಂಡ ಅಂತ ನೋಡ್ರಿ , ಪಾಪ! ಕೋರೋನಾನ ಆಗಿತಂತ್ರಿ, ಅವರ ಒಬ್ಬ ಮಗ ವಿದೇಶದಾಗ ಅದಾನ್ರಿ,ಇನ್ನೊಬ್ಬ ಇಲ್ಲೇ ಬೆಂಗಳೂರಾಗ ಇದ್ದಾಂವ ಬರಾಕ್ ಹತ್ಯಾನಂತ್ರಿ ಮುದುಕ ಸಾಯುವಾಗ ಯಾವ ಮಕ್ಕಳೂ ಹತ್ರ ಇರಲಿಲ್ಲ ಅಂತ ನೋಡ್ರಿ , ಎಷ್ಟ ಮಕ್ಕಳ ಇದ್ರ ಏನ್ ಮಾಡೂದ್ರಿ“ ಎಂದು ಕಮಲಮ್ಮನಿಗೆ ಕೆಲಸದ ನಂದವ್ವ ದಿನಾ ಒಂದ ಇಂಥಾ ಸುದ್ಧಿ ಹೇಳುತ್ತಿದ್ದಳು. ಕಮಲಮ್ಮ ಅವಳನ್ನು ಕಿಟಕಿಯಿಂದಲೇ ಮಾತಾಡಿಸಿ ಸಾಗ ಹಾಕುತ್ತಿದ್ದರು. ಯಾಕೆಂದರೆ ಅವರಿಗೆ ಅವರಿವರ ಮನೆಯ ಸುದ್ಧಿ ಕೇಳುವುದು ಇಷ್ಟವಾಗುತ್ತಿರಲಿಲ್ಲ. ಅದೊಂದನ್ನು ಬಿಟ್ಟರೆ ನಂದವ್ವ ಸ್ವಭಾವತಃ ಒಳ್ಳೆಯವಳು ಎಂಬ ಕಾರಣಕ್ಕೆ ಇದೇ ನಂದವ್ವ ಹತ್ತು ವರ್ಷದಿಂದ ಅವರ ಮನೆ ಕೆಲಸ ಮಾಡಿಕೊಂಡು ಬರುತ್ತಿದ್ದಳು.
*************
ಪಕ್ಕದ ಓಣಿಯಲ್ಲಿಯೇ ನಂದವ್ವಳ ಒಂದು ಚಿಕ್ಕ ಮನೆ. ಅವಳ ಮನೆಯ ಎದುರಿಗೆ ಒಂದು ದೊಡ್ಡ ಆಸ್ಪತ್ರೆ ಇತ್ತು. ಅವಳ ಗಂಡ ಪ್ರವೇಟ್ ಶಾಲೆಯೊಂದರಲ್ಲಿ ಸಿಪಾಯಿ ಕೆಲಸ ಮಾಡುತ್ತಿದ್ದ . ಅದೇ ಶಾಲೆಯಲ್ಲಿ ಅವರ ಮಕ್ಕಳಿಬ್ಬರೂ ಓದುತ್ತಿದ್ದರು. ಆದರೆ ಈಗ ಕರೋನಾದಿಂದ ಶಾಲೆ ಮುಚ್ಚಿದ್ದರಿಂದ ಗಂಡನ ಸಂಬಳಕ್ಕೆ ಖೋತಾ ಆಗಿತ್ತು. ಕರೋನಾ ಭಯದಿಂದ ನಂದವ್ವಳನ್ನೂ ತುಂಬಾ ಜನ ಮನೆ ಕೆಲಸದಿಂದ ಬಿಡಿಸಿದ್ದರು. ಹೀಗಾಗಿ ಅವರ ಜೀವನ ನಡೆಸುವುದು ಕಷ್ಟವಾಗಿತ್ತು. ಸರಕಾರ ಪ್ರವೇಟ್ ಶಾಲೆ ಯವರಿಗೆ ಏನಾದರೂ ಸಹಾಯ ಮಾಡಬಹುದು ಎಂಬ ನಿರೀಕ್ಷೆಯಲ್ಲಿ ಹೆಚ್ಚು ದಿನ ಕಾಲ ತಳ್ಳದೇ ನಂದವ್ವಳ ಗಂಡ ಮನೆಯ ಅಂಗಳದಲ್ಲೇ ಒಂದು ಚಿಕ್ಕ ಹೋಟೇಲ್ ಮಾಡಿಕೊಂಡ. ಎದುರಿಗೆ ಒಂದು ದೊಡ್ಡ ಆಸ್ಪತ್ರೆ. ಹೀಗಾಗಿ ಇವರ ಹೋಟೆಲ್ ಬಿಸಿನೆಸ್ ಚೆನ್ನಾಗಿಯೇ ನಡೆಯುತ್ತಿತ್ತು. ಆಸ್ಪತ್ರೆಯಲ್ಲಿ ನಡೆಯುವ ಎಲ್ಲಾ ಸುದ್ಧಿಗಳು ನಂದವ್ವಳಿಗೆ ಗೊತ್ತಾಗುತ್ತಿದ್ದವು.
***********
ಬಟ್ಟೆ ಝಾಡಿಸಿ ಒಣಗಿ ಹಾಕುತ್ತಲೇ “ಅವ್ವಾರ ಇನ್ನೊಂದ ಸುದ್ಧಿ ಅದರೀ” ಎಂದು ಪೀಠಿಕೆ ಸುರು ಮಾಡಿದಳು ನಂದವ್ವ . “ಏನವಾ ನಿಂದ ಮತ್ತೊಂದ ಸುದ್ಧಿ” ಎಂದು ತಾತ್ಸಾರದಿಂದಲೇ ಕಮಲಮ್ಮ ಕೇಳಿದಾಗ ಸಣ್ಣ ದನಿಯಲ್ಲಿ “ಸ್ವಲ್ಪ ಬಾಗ್ಲಾ ತಗೀರಿ ಒಳಗ ಬಂದ ಹೇಳ್ತೀನಿ , ಹಂಗೆಲ್ಲಾ ಇಲ್ಲೇ ನಿಂತ ಹೇಳು ಸುದ್ಧಿ ಅಲ್ರಿ” ಎಂದಳು. ಕಮಲಮ್ಮನವರಿಗೂ ಕುತೂಹಲ ಹೆಚ್ಚಾಗಿ “ಬಾಗ್ಲಾ ತಗೀ ಬ್ಯಾಡ ಅಂತಾ ನನ್ನ ಮಗಾ ಸೊಸಿ ತಾಕೀತ ಮಾಡಿ ಹೋಗ್ಯಾರ” ಎಂದೆನ್ನುತ್ತಲೇ ಬಾಗಿಲ ತೆಗೆದರು. ನಂದವ್ವ ದೂರ ಬಾಗಿಲ ಬಳಿಯಲ್ಲೇ ನಿಂತು “ಅವ್ವಾರ ನಮ್ಮ ಎದುರಿನ ಆಸ್ಪತ್ರ್ಯಾ ಗ ನಿನ್ನೆ ಗಂಡಾ ಹೆಂಡತಿ ಇಬ್ರೂ ಕರೋನಾದಿಂದ ತೀರಿಕೊಂಡ್ರ ಅಂತ್ರಿ ,ಅವರಿಗೆ ಒಂದ್ ತಿಂಗಳ ಹೆಣ್ಣು ಮಗು ಐತಿ, ಈಗ ಆ ಮಗೂನ್ನ ಇಲ್ಲೇ ಕೆ. ಸಿ. ರಾಣಿ ರೋಡ್ ಗೆ ಇರೋ ನವಚೇತನ ಅನಾಥ ಆಶ್ರಮದಾಗ ಇಟ್ಟಾರ ಅಂತ್ರಿ , ಪಾಪ ಅದನ್ನ ಯಾರರೇ ಸಾಕಾವ್ರು ಇದ್ರ ಮಗೂನ್ನ ಕೊಡ್ತಾರಂತ್ರಿ ,” ಎಂದು ಸುದ್ಧಿ ಒಪ್ಪಿಸಿದಳು. “ಹೋಗ್ಲಿ ಈ ಸುದ್ಧಿ ನನ್ನ ಮುಂದ ಯಾಕ ಹೇಳಾಕ ಹತ್ತಿ ನಂದವ್ವ” ಎಂದು ಕೇಳಿದರು ಕಮಲಮ್ಮ . ಅದಕ್ಕೆ ನಂದವ್ವ “ಅವ್ವಾರ ನೀವ್ ತಪ್ ತಿಳಿಯಾಂಗಿಲ್ಲ ಅಂದ್ರ ಒಂದ್ ಮಾತ್ ಹೇಳ್ತೀನ್ರಿ” ಅಂದಾಗ,
“ಏನ್ ಮೊದಲ ಹೇಳರೇ ಹೇಳ್, ಅಷ್ಟಕ್ಕೂ ಹತ್ತು ವರ್ಷದಿಂದ ನಮ್ಮ ಮನೀ ಕೆಲಸಾ ಮಾಡಕೋತ ಬಂದೀs ನೀ ಏನs ಹೇಳಿದ್ರೂ ನಮ್ಮ ಛಲೋದ್ಕ ಹೇಳ್ತಿ , ಹೇಳ್ ನಾ ಏನ್ ಸಿಟ್ಟ ತಿಳಕೊಳ್ಳಾಂಗಿಲ್ಲ” ಎಂದು ಕಮಲಮ್ಮನವರು ಆಶ್ವಾಸನೆ ಕೊಟ್ಟಾಗಲೇ ನಂದವ್ವ ಹೇಳಲು ಸುರು ಮಾಡಿದಳು. “ಅಲ್ರೀ ಅವ್ವಾರ ಆ ಮಗೂನ್ನ ನೀವ ಯಾಕ ದತ್ತು ತಗೊಬಾರ್ದು, ಹೇಮಂತ್ ಅಣ್ಣಾರ್ಗೆ ಕೇಳಿ ನೋಡ್ರಿ” ಎಂದು ಅಳುಕುತ್ತಲೇ ಹೇಳಿದಾಗ, ಕಮಲಮ್ಮನವರು ಭಾವುಕರಾಗಿ “ನಾ ಹೆಂಗ್ ಹೇಳ್ಲಿ ನಂದವ್ವ ! ನನ್ನ ಮಾತ ಕೇಳಬೇಕಲ್ಲ ಮಗಾ ಸೊಸಿ, ನಾ ಯಾವಾಗ್ಲೂ ಅವರಿಗೆ “ದತ್ತು ಮಗೂನ್ನ ತಗೋಳ್ರಿ “ಅಂತಾ ಹೇಳಕೋತ ಅದೀನಿ, ಆದ್ರೂ ನನ್ನ ಮಾತ ಅವ್ರು ತಲ್ಯಾಗ ಹಾಕೋಳ್ಳವಾರ. ಮತ್ತs ಇದು ಹೆಣ್ಣು ಮಗು ಅಂತಾ ಹೇಳ್ತಿ, ಅವರಿಬ್ಬರೂ ಒಪ್ಪತಾರೋ ಇಲ್ಲೋ?” ಎಂದು ತನ್ನ ಅಸಹಾಯಕತೆಯನ್ನು ತೋಡಿಕೊಂಡರು. “ಅವ್ವಾರs ಆದ್ರೂ ಇವತ್ತ ಒಂದ ಸಲಾ ಕೇಳಿ ನೋಡ್ರಿ! ಪಾಪ ಆ ಮಗೂನೂ ಒಂದ ಒಳ್ಳೆ ಮನೀ ಸೇರ್ಕೋತೈತಿ ಅನ್ನೋ ಆಸೆ” ಎಂದು ಹೇಳುತ್ತಲೇ ನಂದವ್ವ ಕಮಲಮ್ಮ ನವರ ಮನೆಯಿಂದ ಹೊರಹೋದಳು.
*****************
ಕಮಲಮ್ಮ ನವರು ಎಷ್ಟೋ ಸಾರಿ ದತ್ತು ಮಗೂನ ಬಗ್ಗೆ ಪ್ರಸ್ತಾಪ ಎತ್ತಿದಾಗ ಗಂಡ ಹೆಂಡತಿ ಇಬ್ಬರೂ ಯಾಕೋ ಅದರ ಬಗ್ಗೆ ಗಂಭೀರವಾಗಿ ಚರ್ಚಿಸುತ್ತಿರಲಿಲ್ಲ. ಆದರೆ ಕಮಲಮ್ಮನವರಿಗೆ ಮಾತ್ರ ಒಂದು ಮೊಮ್ಮಗು ಮನೆಯಲ್ಲಿ ಆಡಿ ನಲಿಯೋದನ್ನ ನೋಡಬೇಕು ಎಂಬ ಆಸೆ ಇತ್ತು. ಅಂದು ರಾತ್ರಿ ಊಟಕ್ಕೆ ಕುಳಿತಾಗ ಕಮಲಮ್ಮನವರು ಸಾವಕಾಶವಾಗಿ ದತ್ತೂ ಮಗುವಿನ ಪ್ರಸ್ತಾಪ ಎತ್ತಿದರು. ಎಂದಿನಂತೆ, ಮಗ -ಸೊಸೆ ಇಬ್ಬರೂ ಅವರ ಮಾತಿಗೆ ಒಪ್ಪದಿದ್ದಾಗ , “ನನ್ನ ನಮ್ಮ ಹಳ್ಳಿಗೆ ಕಳಿಸಿ ಕೊಡ್ರಿ ಅಲ್ಲೇ ನಾ ಹ್ಯಾಂಗರೇ ಇರ್ತೀನಿ “ ಎಂದು ಹಠ ಮಾಡಿದರು. ಪರಿಸ್ಥಿತಿ ಗಂಭೀರ ವಾಗುತ್ತಿದೆ ಎಂದು ನಿರ್ಧರಿಸಿ ಗಂಡ- ಹೆಂಡತಿ ಇಬ್ಬರೂ ಕಮಲಮ್ಮ ನವರ ಮಾತಿಗೆ ಬೆಲೆ ಕೊಟ್ಟು “ನಾಳೆ ಆಶ್ರಮಕ್ಕೆ ಹೋಗಿ ನೋಡಕೊಂಡ ಬರ್ತೀವಿ” ಎಂದು ಹೇಮಂತ ತಾಯಿಗೆ ಸಮಾಧಾನ ಹೇಳಿದ.

ಮರುದಿನ ಕೋವಿಡ ಹೊಸ (50-50)ನೀತಿಯಂತೆ ಸುಮತಿಗೆ ಆಫೀಸ್ ರಜಾ ಇತ್ತು. ಒಂದ ದಿನಾ ಬಿಟ್ಟು ಒಂದ ದಿನಾ ಆಫೀಸ್ಗೆ ಹೋಗುವುದಿತ್ತು. ನಿನ್ನೆ ಆಫೀಸ್ ಗೆ ಹೋಗಿದ್ದಳಾದ್ದರಿಂದ ಇವತ್ತು ಸುಮತಿ ಮನೆಯಲ್ಲೇ ಇದ್ದಳು. ಎಂದಿನಂತೆ ಮಗ ಹೇಮಂತ್ ಕೆಲಸಕ್ಕೆ ಹೋಗಲೆಂದು ತಯಾರಾದಾಗ, “ಈ ದಿನಾ ನೀನೂ ಯಾಕ ಮನ್ಯಾಗ ಕುಂತ ಆನ್ ಲೈನ್ ಕ್ಲಾಸ್ ತಗೋಬಾರ್ದು, ಹೆಂಗೂ ಹುಡುಗರು ಶಾಲೆಗೆ ಬರೋದಿಲ್ಲ, ಅಲ್ಲಿ ಹೋಗೀನೂ ಆನ್ ಲೈನ್ ಕ್ಲಾಸ್s ತಗೋಬೇಕು. ಅದನ್ನ ಇಲ್ಲೇ ಮನ್ಯಾಗ ತಗೋ” ಎಂದು ಕಮಲಮ್ಮನವರು ಹೇಳಿದಾಗ, “ಇಲ್ಲಮ್ಮ ನಮಗ ರೂಲ್ಸ್ ಹಂಗs ಐತಿ! ಏನ್ ಮಾಡೋದು ಸ್ಕೂಲ್ ಗೆ ಹೋಗಲೇಬೇಕು” ಎಂದಾಗ “ಅದೇನೋ ಪಾ ನಿಮ್ಮ ಸಾಲೀ ರೂಲ್ಸ್ ನನಗ ತಿಳಿಯಾಂಗಿಲ್ಲ, ಮತ್ತ ಆ ಮಗೂನ್ನ ನೋಡಕೊಂಡ ಬರೋದು ಏನಾತು” ಎಂದು ಮಗುವಿನ ಪ್ರಸ್ತಾಪ ಎತ್ತಿದಾಗ, “ಇವತ್ತ ಸಾಯಂಕಾಲ ಸ್ವಲ್ಪ ಜಲ್ದಿ ಬರತೇನಿ, ಬಂದ ಮ್ಯಾಲ ಸುಮತಿ ಮತ್ತ ನಾ ಹೋಗಿ ನೋಡಕೊಂಡ ಬರ್ತೀವಿ” ಎಂದು ಹೇಮಂತ ತನ್ನ ಕೆಲಸಕ್ಕೆ ಹೊರಟ.

ಮಧ್ಯಾಹ್ನ ನಂದವ್ವ ಕೆಲಸಕ್ಕೆಂದು ಬಂದಾಗ ಕಮಲಮ್ಮ ಮತ್ತು ಸುಮತಿ ಮಗುವಿನ ಬಗ್ಗೆ ಇನ್ನಷ್ಟು ವಿಷಯ ಅವಳೊಂದಿಗೆ ಚರ್ಚೆ ಮಾಡಿದರು. ಮಗುವನ್ನು ದತ್ತು ತೆಗೆದುಕೊಳ್ಳೋ ನಿರ್ಧಾರ ಕೇಳಿ ನಂದವ್ವಳಿಗೆ ತುಂಬಾ ಖುಷಿ ಯಾಗಿತ್ತು.

ಸಂಜೆ ಹೇಮಂತ್ ಕೆಲಸದಿಂದ ಬೇಗನೇ ಬಂದ. ಟೀ ಕುಡಿದು ಸುಮತಿಯೊಟ್ಟಿಗೆ ಅನಾಥಾಶ್ರಮಕ್ಕೆ ಹೊರಟು ನಿಂತ . ಕಮಲಮ್ಮ ಯಾವುದಕ್ಕೂ ದೇವರ ಮುಂದ ದೀಪಾ ಹಚ್ಚಿ, ಕೈ ಮುಗದ ಹೋಗ್ರಿ , ಒಳ್ಳೇ ಕೆಲಸಕ್ಕ ಹೊಂಟೇರಿ,ಒಳ್ಳೇದಾಗಲಿ” ಎಂದು ಹರಸಿದರು. ಹೇಮಂತ್ ಮತ್ತು ಸುಮತಿ ಕಮಲಮ್ಮನವರಿಂದಲೂ ಆಶೀರ್ವಾದ ಪಡೆದು ಹೊರಟರು. ಅವರು ಹೋದ ಮೇಲೆ ಮತ್ತೊಮ್ಮೆ ಕಮಲಮ್ಮ ದೇವರಿಗೆ ಬೇಡಿಕೊಂಡು “ಈ ಮನೆಗೆ ಮಗು ಬರುವಂತಾಗಲಿ” ಎಂದು ಪ್ರಾರ್ಥಿಸಿದರು .
ಅನಾಥಾಶ್ರಮದಲ್ಲಿ ಮಗುವನ್ನು ಕಂಡು ಅದರೊಟ್ಟಿಗೆ ಸ್ವಲ್ಪ ಕಾಲ ಕಳೆದು , ಅಲ್ಲಿಯ ಆಫೀಸ್ ನಲ್ಲಿ ಭೇಟಿಯಾಗಿ, ದತ್ತು ತೆಗೆದುಕೊಳ್ಳುವ ವಿಧಾನದ ಬಗ್ಗೆ ತಿಳಿದುಕೊಂಡು ಬಂದರು. ಮುಂದೆ ಒಂದು ಹದಿನೈದು ದಿನ ಅಗತ್ಯ ಕಾಗದಪತ್ರ ಗಳನ್ನು ಹೊಂದಿಸಿ , ಅನಾಥಾಶ್ರಮಕ್ಕೆ ಸಲ್ಲಿಸಿ ಬಂದರು. ಕೆಲವು ದಿನಗಳು ಕಳೆದ ನಂತರ ಮಗುವನ್ನು ಕರೆದುಕೊಂಡು ಹೋಗುವಂತೆ ಕರೆ ಬಂದಿತ್ತು. ಸಡಗರದಿಂದ ಹೇಮಂತ ಮತ್ತು ಸುಮತಿ ಆ ಮಗುವನ್ನು ಮನೆಗೆ ಕರೆದುಕೊಂಡು ಬಂದರು. ಕಮಲಮ್ಮನವರಂತೂ ಚಿಕ್ಕ ಮಕ್ಕಳಂತೆ ಕುಣಿ ಕುಣಿದಾಡಿದರು . ನಂತರ ಒಂದು ಒಳ್ಳೆಯ ದಿನ ನೋಡಿ, ಆ ಮಗುವಿನ ನಾಮಕರಣ ಕಾರ್ಯಕ್ರಮ ನಡೆಯಿತು. ಮನೆ ಬೆಳೆಯಲು ಕಾರಣವಾದ ಮಗುವಿಗೆ ಅಮ್ಮನ ಸಲಹೆಯಂತೆ “ಸಮೃದ್ಧಿ” ಎಂಬ ಹೆಸರನ್ನು ಇಟ್ಟರು. ಕಮಲಮ್ಮನವರು ನಂದವ್ವಳಿಗೆ ಅಂದೇ ಒಂದು ಹೊಸ ಸೀರೆ ಕೊಟ್ಟು “ನಮ್ಮ ಸಂತೋಷಕ್ಕೆ ನೀನೆ ಕಾರಣ” ಎಂದು ಹೇಳಿ ಅವಳ ಉಪಕಾರವನ್ನು ಕೃತಜ್ಞತೆಯಿಂದ ನೆನೆದರು. ಆಗ ಹೇಮಂತ ತನ್ನ ತಾಯಿಯನ್ನು ಕುರಿತು, “ಅಮ್ಮಾ, ನಂದವ್ವ,ಸುಮತಿ, ನೀನು ಎಲ್ಲಾರೂ ಕೂಡಿ ಒಂದ ಹೆಣ್ಣು ಮಗು ಈ ಮನೀಗೆ ಬರುವ್ಹಂಗ ಮಾಡಿದ್ರೀ , ಹೆಣ್ಣಿಗೆ ಹೆಣ್ಣೇ ಶತ್ರು ಅಂತಾ ಹೇಳತಾರಲ್ಲ ಅದೆಲ್ಲ ಸುಳ್ಳು ನೋಡು” ಎಂದು ನಗುತ್ತಾನೆ. ಅವನ ಜೊತೆ ಎಲ್ಲರೂ ನಗುತ್ತಾರೆ.
**************
ಅಮ್ಮನಿಗೆ ರೂಢಿಯಾಗುವವರೆಗೆ ಸುಮತಿ ಮಗುವನ್ನು ನೋಡಿಕೊಳ್ಳಲೆಂದು ಆಫೀಸಿಗೆ ರಜಾ ಹಾಕಿ ಮನೆಯಲ್ಲೇ ಕೆಲವು ದಿನಗಳ ಕಾಲ ಉಳಿದುಕೊಂಡಿದ್ದಳು. ಅವಳ ರಜೆಯೂ ಮುಗಿದು ಆಫೀಸಿಗೆ ಹೊರಡಲು ಆರಂಭಿಸಿದಾಗ, ಮನೆಯಲ್ಲಿ ಕಮಲಮ್ಮ ಮತ್ತು ಮಗು ಇಬ್ಬರೇ. ಮಗುವಿನ ಸಂಪೂರ್ಣ ಜವಾಬ್ದಾರಿ ಕಮಲಮ್ಮನವರ ಮೇಲೆಯೇ ಬಿತ್ತು. ನಂದವ್ವ ಕೂಡ ಆಗಾಗ ಅವರ ಕೆಲಸಕ್ಕೆ ಸಹಾಯ ಮಾಡುತ್ತಿದ್ದಳು. ಹೀಗೆಯೇ ಅವರೆಲ್ಲರ ದಿನಚರಿ ಸಾಗಿತ್ತು.

ಒಂದು ದಿನ ಇದ್ದಕ್ಕಿದ್ದಂತೆ ಹೇಮಂತನಿಗೆ ಮಧ್ಯಾಹ್ನ ಊಟದ ಸಮಯಕ್ಕೆ ಸುಮತಿಯ ಆಫೀಸ್ ನಿಂದ ಕರೆ ಬಂದಿತ್ತು. “ ಸರ್ ನಿಮ್ಮ ಮಿಸೆಸ್ ಯಾಕೋ ತಲೆ ಸುತ್ತಿ ಬಿದ್ದ ಬಿಟ್ಟರು. ಗಾಬರಿ ಆಗುವಂಥದ್ದು ಏನೂ ಇಲ್ಲಾ, ಸಧ್ಯ ಅವರು ಆಫೀಸಿನ ರೆಸ್ಟ್ ರೂಮಲ್ಲಿ ರೆಸ್ಟ್ ಮಾಡ್ತಾ ಇದ್ದಾರೆ” ಎಂದು ಹೇಳಿ ಫೋನ್ ಕಟ್ ಮಾಡಿ ಬಿಟ್ಟರು. ಹೇಮಂತ್ ಸ್ಕೂಲ್ ನಲ್ಲಿ ಪರ್ಮಿಶನ್ ಕೇಳಿ, ಗಾಬರಿಯಿಂದಲೇ ಸುಮತಿಯ ಆಫೀಸಿಗೆ ಬಂದಾಗ ,ಅವಳು ಆಗ ಸ್ವಲ್ಪ ಚೇತರಿಸಿ ಕೊಂಡಿದ್ದಳು. ಅಲ್ಲಿಂದಲೇ ಅವಳನ್ನು ಹಾಸ್ಪಿಟಲ್ ಗೆ ಕರೆದುಕೊಂಡು ಹೋಗಿ ಚೆಕ್ ಅಪ್ ಮಾಡಿಸಿದಾಗ, ಅವಳು ಗರ್ಭಿಣಿ ಎಂಬ ವಿಷಯ ಗೊತ್ತಾಯಿತು. ಮನೆಗೆ ಬಂದ ಇಬ್ಬರೂ “ಸಮೃದ್ಧಿ”ಯನ್ನು ಮುದ್ದಾಡುತ್ತಾ ಅಮ್ಮನಿಗೆ ಈ ಸಿಹಿ ಸುದ್ಧಿ ಹೇಳಿದಾಗ ಕಮಲಮ್ಮನರು ಸಂತೋಷ ಪಡುತ್ತಾ “ಇವತ್ತೇನೋ ಬ್ರದರ್ಸ್ ಡೇ ಅಂತ ಪೇಪರ್ ನ್ಯಾಗ ಓದಿದ್ದೆ , ನಮ್ಮ “ಸಮೃದ್ಧಿ”ಗೆ ಮುಂದಿನ ವರ್ಷ ಅನ್ನುದ್ರಾಗ ಒಬ್ಬ ಬ್ರದರ್ ಬರ್ತಾನ ನೋಡ್ . ಇದೆಲ್ಲಾ ನಮ್ಮ ಈ ಸಮೃದ್ಧಿ ತಂದ ಸಂಭ್ರಮ” ಎಂದು ಮಗುವಿನ ಮುಗ್ಧ ನಗುವಿನೊಂದಿಗೆ ತಮ್ಮ ನಗೆಯನ್ನೂ ಬೆರೆಸಿ ಸಂಭ್ರಮಿಸಿದ್ದರು.
***************************