Click here to Download MyLang App

ಒಂದು ಹುಲಿಯ ಕತೆ - ಬರೆದವರು : ಎರಿಕ್ ವಿವೇಕ್ ಸಿಂಗ್

"ದೇಶ ಸುತ್ತಿನೋಡು ಕೋಶ ಓದಿನೋಡು"! ಇದನ್ನ ಸ್ವಲ್ಪ ಸೀರಿಯಸ್ ಆಗೇ ತಗೊಂಡಿರೋ ನಾನು ಓದುವುದಕ್ಕೂ ಸುತ್ತುವುದಕ್ಕೂ ಒಂದು ಹೆಜ್ಜೆ ಮುಂದೇನೆ. ನನ್ನ ಹೆಸರು ಎರಿಕ್ ವಿವೇಕ್ ಸಿಂಗ್, ಕಾರ್ಪೊರೇಟ್ ಜಗತ್ತಿನ ಗುಲಾಮತೆಯಿಂದ ಹೊರ ಬಂದು ನನ್ನ ಹವ್ಯಾಸಗಳನ್ನು ಕೆಲಸವಾಗಿ ಮಾರ್ಪಡಿಸಿ ಸಾಗುತ್ತಿರುವ ಹುಡುಗ.

ಈಗ ನಾನು ನಿಮ್ಮ ಮುಂದೆ ಹೇಳಲು ಹೊರಟಿರುವ ಕಥೆ ನನ್ನ ಜೀವಿತದಲ್ಲಿ ನಿಜವಾಗಲೂ ನಡೆದೆರುವ ಒಂದು ಸಂದರ್ಭದ ಬರಹ. ಇದು ಸುಮಾರು ೫ ರಿಂದ ೬ ವರುಷ ಹಳೆಯ ಅನುಭವ. ಇಂತಹ ಹಲವಾರು ಪ್ರವಾಸಿ ಅನುಭವಗಳನ್ನು ನಿಮ್ಮ ಮುಂದೆ ಬರಹದ ಮೂಲಕ ಇಡುತ್ತಿರುತ್ತೇನೆ, ಇದು ಪ್ರಾರಂಭವಷ್ಟೇ . "ಒಂದು ಹುಲಿಯ ಕಥೆ"!

ಹುಲಿಯ ಕಥೆ ಅಂತ ನೋಡಿದ ತಕ್ಷಣ ನಾನ್ಯಾವ್ದೋ ನರಹಂತಕನ ಬಗ್ಗೆಯೂ ಅಥವಾ ಯಾವುದೊ ಬೇಟೆಯ ಬಗ್ಗೆ ಬರೆಯುತ್ತಿದ್ದೇನೆಂದು ಗ್ರಹಿಸಿದರೆ ಅದು ನಿಮ್ಮ ಗ್ರಹಿಕೆ ಅಷ್ಟೆ. ಇದು ನನ್ನ ಒಂದು ದಿನದ ಸಣ್ಣ ಅನುಭವ.

ಹೂಂ, ಅನುಭವ ಅಂದೊಡನೆ ನಾನು ಯಾವುದೋ ಹುಲಿಯ ಜೊತೆ ಸೆಣಸಾಡಿದ ಕಥೆಯಾಗಲಿ ಅಥವಾ ಏನೋ ವಿಶೇಷವಾದ ಸಂದರ್ಭವೂ ಅಲ್ಲ, ಆದರೂ ಇದು ಕುತೂಹಲವಾದ ಸಂಗತಿಯೇ ಸರಿ. ಅಂದ ಹಾಗೆ ನಾನೇನು ವನ್ಯಜೀವಿ ವೀಕ್ಷಕನಂತೂ ಅಲ್ಲ, ನಿಜ ಹೇಳಬೇಕಂದರೆ ಅದರ ಬಗ್ಗೆ ಅಂತ ಬಾರಿ ಜ್ಞಾನವೂ ನನಗಿಲ್ಲ, ಹಾಗಾಗಿ ಪುಸ್ತಕಗಳಲ್ಲಿ ಓದಿ ತಿಳಿದುಕೊಂಡ ವಿಷಯಗಳಷ್ಟೇ. ಆದರೂ ಅದೇನು ಕಡಿಮೆಯಲ್ಲ ಬಿಡಿ.

ಈ ನಗರ ಜೀವನದಲ್ಲಿ ಕಳೆಯುವ ಕೆಲವರಿಗೆ ರಜಾದಿನದಂದು ಪ್ರಶಾಂತವಾದ ಸ್ಥಳಕ್ಕೆ ಹೋಗಿ ಕಳೆಯಬೇಕೆಂಬ ಬಯಕೆ, ಅದರಲ್ಲು ಕೆಲವರು ಈ ರೀತಿ ಕಾಡು,ಬೆಟ್ಟಗುಡ್ಡ ಪ್ರದೇಶಗಳಲ್ಲಿ ಹೋಗಿ ದಿನ ಕಳೆಯುವ ಖಯಾಲಿ, ಅಂಥ ಗುಂಪಿಗೆ ಸೇರಿದವರಲ್ಲಿ ನಾನು ಒಬ್ಬ. ಪ್ರತಿನಿತ್ಯ ಗಣಕಯಂತ್ರ(ಕಂಪ್ಯೂಟರ್) ಮುಂದೆ ಕೂತು ಕೂತು ಈ ರೀತಿ ರಜಾ ಬಂದರೆ ಸದ್ಯವೆನ್ನುವ ಗುಂಪು ತುಂಬಾ, ಆ ಒಂದು ದಿನಗಳಲ್ಲಿ ಈ ರೀತಿ ಪ್ರಕೃತಿ ಸೌಂದರ್ಯ ಸವಿಯಲು ಹೊರಡುವುದು ನನಗೆ ಮೆಚ್ಚಿನ ಕೆಲಸ, ಅಷ್ಟುಮಾತ್ರವಲ್ಲದೆ ತರತರಹದ ಪೋಸ್ ಕೊಟ್ಟು ಅದನ್ನು ಫೇಸ್ ಬುಕ್ಕಿಗೆ ಹಾಕುವುದು ನನಗೆ ಒಂದುರೀತಿ ಇಷ್ಟ.

ಶುಕ್ರವಾರ ಕೆಲಸ ಮುಗಿಯುತ್ತಿದ್ದಂತೆ ನನ್ನ ಕಂಪ್ಯೂಟರನ್ನು ಸ್ವಿಚಾಫ್ ಮಾಡಿ ಉಫ್! ಕೊನೆಗೂ ಮುಗಿಯಿತು ಈ ವಾರ, ಇನ್ನೆರಡು ದಿನಗಳು ರಜಾ ಎಂದು ಮನಸಿನಲ್ಲಿ ಸಂತೋಷಗೊಂಡು ನನ್ನ ಕೆಲಸದ ಸ್ಥಳದಿಂದ ಹೊರನಡೆದೆ. ಅರೇ ನಾಳೆ ಶನಿವಾರ! ಆಗಲೇ ನನ್ನ ಮನಸ್ಸು ನಾಳೆಯ ಪ್ರವಾಸದ ಬಗ್ಗೆ ಯೋಚಿಸತೊಡಗಿತು. ನಮ್ಮ ಮೈಸೂರಿನಿಂದ ಸುಮಾರು ೧೦೦ ಕಿ.ಮೀ. ಒಳಗೆ ಕಣ್ಣಿಗೆ ತಂಪೆರೆಯುವ ಬಹಳ ಸ್ಥಳಗಳು ಸಿಗುತ್ತದೆ. ಅಲ್ಲಿಗೆ ಹೋಗಲು ನಿಮಗೆ ಮನಸ್ಸು ಮತ್ತು ಒಂದು ಕಾರು ಅದರಲ್ಲಿ ಪೆಟ್ರೋಲ್ ಇದ್ದರೆ ಸಾಕು. ನನ್ನ ಮಟ್ಟಿಗೆ ಮನಸ್ಸು ಮತ್ತು ಕಾರು ಎರಡೂ ಇತ್ತು, ಆದರೆ ಕೊರತೆ ಇದದ್ದು ನನ್ನ ಕಾರಿನ ಪೆಟ್ರೋಲ್, ಅದಕ್ಕೆ ಮನೆಯಲ್ಲಿ ನನ್ನ ಪೀಠಿಕೆ ಶುರುವಾಯಿತು. ನನ್ನ ತಂದೆ ತಾಯಿಗೆ ಇದು ಅಭ್ಯಾಸವಾಗಿತ್ತು, ಪ್ರತಿ ಶುಕ್ರವಾರ ನಾನು ಮನೆಗೆ ಹೋದೊಡನೆ ಈ ಪೀಠಿಕೆ ಸಾಮಾನ್ಯ, 'ಎಲ್ಲಾದರೂ ಹೋಗೋಣ ಎಲ್ಲಾದರೂ ಹೋಗೋಣ' ಎಲ್ಲಿ ಎನ್ನುವುದು ಮಾತ್ರ ಗೊತ್ತಿಲ್ಲ.

ಎಂದಿನಂತೆ ನನ್ನ ಪೀಠಿಕೆ ಶುರುವಾಯಿತು ಮೊದಲು ಅಷ್ಟು ಸುಲಭವಾಗಿ ಒಪ್ಪದ ನನ್ನ ತಂದೆ ಕೊನೆಗೂ 'ಹೂಂ' ಎಂದರು, ಅದು ನನ್ನ ತಾಯಿ ಒಪ್ಪಿದ ಮೇಲೆಯೇ! ಸರಿ ಮುಂದೇನು? ಎಲ್ಲಿ ಹೋಗುವುದು? ಸುಮಾರು ಸಮಯದ ಬೇಡ ಬೇಕುಗಳ ನಂತರ ಕೊನೆಗೂ ನಿರ್ಧರಿಸಿದ ಸ್ಥಳ "ಬಂಡೀಪುರ ಅಭಯಾರಣ್ಯ".

ಮೈಸೂರಿನಿಂದ ಸರಿಸುಮಾರು 120.ಕಿ.ಮೀಗಳನ್ನು ಕ್ರಮಿಸಿದರೆ ಸಿಗುವುದೇ 'ಬಂಡೀಪುರ', ಈ ಅಭಯಾರಣ್ಯಕ್ಕೆ ಗುಂಡ್ಲುಪೇಟೆ ಮಾರ್ಗವಾಗಿ ಹೋಗಬೇಕು, ಸುಮಾರು ಒಂದೂವರೆ ಅಥವಾ ಎರಡು ಗಂಟೆಗಳ ಪ್ರಯಾಣ ಬೇಕೇ ಬೇಕು. ಊಟಿ, ಮುದುಮಲೈಗೆ ಹೋಗಬೇಕಾದರೂ ನೀವು ಬಂಡೀಪುರ ದಾಟಿಯೇ ಹೋಗಬೇಕು. ನೀವು ಸಂಜೆಯವೇಳೆಗೆ ಈ ದಾರಿಯಲ್ಲಿ ಬಂದರೆ ನಿಮಗೆ ಒಂದೊಮ್ಮೆ ಇದು ನಿಜವಾಗಲೂ ಕಾಡೇ ಎಂಬ ಆಶ್ಚರ್ಯವಾಗುವುದು ಖಂಡಿತ, ಏಕೆಂದರೆ ನಾನು ಮೊದಲೇ ಹೇಳಿದಂತೆ ಊಟಿಗೆ ಹೋಗಲು ಇದು ಮುಖ್ಯ ರಸ್ತೆ ಅಲ್ಲಿಗೆ ಹೋಗುವ ವಾಹನಗಳು ಹೀಗೇ ಹೋಗಬೇಕು ಆದ್ದರಿಂದ ಈ ರಸ್ತೆ ಬೆಂಗಳೂರಿನ ಎಂ.ಜಿ ರಸ್ತೆಗಿಂತ ಹೆಚ್ಚಾಗಿ ವಾಹನದಿಂದ ತುಂಬಿರುತ್ತದೆ.

ನಾಳೆಯ ನೆನಪಲ್ಲೇ ನಾನು ನಿದ್ದೆ ಮಾಡಲು ಹೊರಟೆ, ಅದಕ್ಕಿಂತ ಮೊದಲು ನನ್ನ ಮೊಬೈಲಿನಲ್ಲಿ ಅಲಾರಂ ಕೊಟ್ಟು ಮಲಗಿದೆ.

ಒಳ್ಳೆ ಹಿತವಾದ ನಿದ್ದೆಯಲ್ಲಿ ಇದ್ದವನಿಗೆ ಯಾರೋ ಬಡಿದಂತೆ ನನ್ನ ಮೊಬೈಲಿನ ಅಲಾರಂ ಬಡಿಯಿತು ಎಂದಿನಂತೆ ಅದನ್ನು ಸುಮ್ಮನಿರಿಸಲು ನನ್ನ ಕೈ ತನ್ನಿಂದತಾನೇ ಹೋಯಿತು ಆಗ ನನ್ನ ಮೆದುಳಿಗೆ ಹೊಳೆದದ್ದು,

ಅರೇ! ಇವತ್ತು ಶನಿವಾರ! ಬಂಡೀಪುರ!

ಬಂಡೀಪುರದ ಜಿಂಕೆ ನೆಗೆಯುವಂತೆ ನನ್ನ ಹಾಸಿಗೆಯಿಂದ ಜಿಗಿದು ನನ್ನ ರೂಮಿನಿಂದ ಹೊರನಡೆದೆ, ಇನ್ನು ನನ್ನ ತಂದೆ ತಾಯಿ ಮಲಗಿರುವುದನ್ನು ಕಂಡು ಅವರನ್ನು ಕೋಪದಿಂದ ಎಬ್ಬಿಸಲು ಹೋದವನ ಮನಸ್ಸಿನಲ್ಲಿ ಕಾರಿನ ಪೆಟ್ರೋಲ್ ಬಗ್ಗೆ ನೆನಪಾಗಿ ನನ್ನ ರಭಸವನ್ನು ತಗ್ಗಿಸಿ ಬಹಳ ಸೌಮ್ಯದಿಂದ ಎಬ್ಬಿಸಿ ನನ್ನ ಬೆಳಗಿನ ಕಾರ್ಯದಲ್ಲಿ ನಿರತನಾದೆ.

ಕೊನೆಗೂ ನಾವು ಹೊರಡುವ ಹೊತ್ತಿಗೆ ಸೂರ್ಯ ನಮ್ಮನ್ನು ಇಣುಕಿ ನೋಡಿದ್ದಾಗಿತ್ತು. ನನ್ನ ತಾಯಿಯ ಹೊರಡುವ ತಯಾರಿ ಇನ್ನು ನಡೆಯುತ್ತಲೇ ಇತ್ತು, ಹಾಗು ಹೀಗೂ ೮:೦೦ ಗಂಟೆಯ ಸಮಯಕ್ಕೆ ನಮ್ಮ ಕಾರು ಬಂಡೀಪುರದ ದಾರಿ ಹಿಡಿಯಿತು. ನನ್ನ ಒಂದು ಚಟವೆಂದರೆ ಕಾರಿನಲ್ಲಿ ಬಹಳ ಜೋರಾಗಿ ಹಾಡುಹಾಕುವುದು, ಇದು ನನ್ನ ತಾಯಿಗೆ ಯಾರೋ 'ಕಾಪಾಡಿ' ಎಂದು ಕಿರುಚಿದ ಹಾಗೆ ಕೇಳಿದರೂ ನನ್ನ ಮಟ್ಟಿಗೆ ಅದು ಇಂಪಾದ ಸಂಗೀತವೇ.

ಅಂತೂ ಇಂತೂ ಎರಡು ಗಂಟೆಗಳ ಪ್ರಯಾಣದ ನಂತರ ನನಗೆ ದೂರದಲ್ಲಿ ಕಂಡಿದ್ದು ಬಂಡೀಪುರ ಅಭಯಾರಣ್ಯಕ್ಕೆ ಸುಸ್ವಾಗತ ಎಂಬ ಬರಹ, ಹಾ! ಕೊನೆಗೂ ಎಂದು ನಾನು ಉಸಿರು ಬಿಟ್ಟೆ, ನನ್ನ ತಾಯಿ ಕೂಡ ಉಸಿರುಬಿಟ್ಟರು ಯಾಕೆಂದರೆ ಕಾಡಿನ ಒಳಗೆ ಹೋಗಬೇಕಾದರೆ ನನ್ನ ಇಂಪಾದ ಸಂಗೀತ ಕೊನೆಯಾಗುತ್ತದೆ ಎಂದು.

ನಮ್ಮ ಕಾರು ಕಾಡಿನೊಳಗೆ ಹೋದ ಕೂಡಲೇ ನಾನು ಸಂಗೀತವನ್ನು ನಿಲ್ಲಿಸಿ ಬಹಳ ನಿಧಾನವಾಗಿ ಕಾರು ಚಾಲನೆ ಮಾಡಲು ಸಿಧ್ಧನಾದೆ, ಅಷ್ಟರೊಳಗೆ ನನ್ನ ಹಿಂದೆ ಆನೆ ಗೀಳಿಟ್ಟ ಸದ್ದಂತೆ ಒಂದು ಸದ್ದು ಕಿವಿಗೆ ಬಡಿಯಿತು, ತಿರುಗಿ ನೋಡಿದರೆ 'ಲಾರಿ!' ಅದರ ಹಾರನ್ ಸದ್ದು ನನ್ನನ್ನು ಎಷ್ಟು ಭಯ ಪಡಿಸಿತೆಂದರೆ, ಹಾ! ನಾನೇ ಈ ಮಟ್ಟಿಗೆ ಗಾಬರಿಯಾದರೆ ಇನ್ನು ಪ್ರಾಣಿಗಳ ಗತಿ!

ಹೂಂ, ನಮ್ಮ ಜನಕ್ಕೆ ಕೆಲವು ಸಾರಿ ಎಲ್ಲಿ ಏನು ಮಾಡಬೇಕು ಎನ್ನುವುದನ್ನು ಮರೆತುಬಿಡುತ್ತಾರೆ, ಮಾಡಬೇಡಿ ಎನ್ನುವುದನ್ನು ಮಾಡುವುದರಲ್ಲಿ ಏನೋ ಖುಷಿ, ಇದೇ ಇಲ್ಲಿಯೂ ನಡೆದದ್ದು. ಕಾಡಿನಲ್ಲಿ ನಿಶ್ಯಬ್ಧವೆಂದರೆ ಇವರ ಶಬ್ಧವೇ ಹೆಚ್ಚು, ಅದಕ್ಕೆ ನಾನು ಈ ರಸ್ತೆಯನ್ನು ಎಂ.ಜಿ.ರಸ್ತೆಗೆ ಹೋಲಿಸಿದ್ದು. ಬಂಡೀಪುರದ ಹೃದಯಭಾಗಕ್ಕೆ ಸೇರುವ ಹೊತ್ತಿಗೆ ಮಧ್ಯಾಹ್ನ ೧೨:೦೦ ಗಂಟೆಯ ಸಮಯವಾಗಿತ್ತು, ಸಫಾರಿಗೆ ಹೋಗ ಬೇಕಾದರೆ ಸಂಜೆ ಒಳ್ಳೆಯ ಸಮಯವೆಂದು ನಿರ್ಧರಿಸಿ ನಮ್ಮ ಊಟಕ್ಕಾಗಿ ಗೂಡಲೂರಿಗೆ ಹೋಗಲು ನಿರ್ಧಾರ ಮಾಡಿದೆವು.

ಗೂಡಲೂರು, ಇದು ತಮಿಳುನಾಡು ಗಡಿಯ ಒಂದು ಚಿಕ್ಕ ಊರು. ಮುದುಮಲೈ ಕಾಡನ್ನು ದಾಟಿ ಹೋದರೆ ಇದು ಸಿಗುತ್ತದೆ, ಇಲ್ಲಿನ ಊಟ ಬಹಳ ರುಚಿಕರವಾಗಿರುತ್ತದೆ, ಸ್ವಲ್ಪ ಹುಳಿ ಮತ್ತು ಖಾರ ಮಿಶ್ರಿತವಾದ ಊಟ, ಹಾ! ತಿಂದವರಿಗೆ ಗೊತ್ತು ಅದರ ರುಚಿ. ನಮ್ಮ ಎಲ್ಲಾ ಕೆಲಸ ಮುಗಿಸಿ ನಾವು ಬಂಡೀಪುರದ ಸಫಾರಿ ಜಾಗಕ್ಕೆ ಬರುವ ಹೊತ್ತಿಗೆ ಸಂಜೆ ೪:೦೦ ಗಂಟೆಯ ಸಮಯ, ಬಿಸಿಲಬೇಗೆಯಿಂದ ತಪ್ಪಿಸಿಕೊಳ್ಳಲು ದಟ್ಟ ಕಾಡಿನ ಒಳಗಿನ ಪ್ರಾಣಿಗಳು ನೀರನ್ನು ಹುಡುಕಿಕೊಂಡು ಸಫಾರಿ ಸಾಗುವ ಜಾಗಗಳಿಗೆ ಬರುವ ಸಮಯವೂ ಹೌದು.

ನಮ್ಮ ತಂದೆ ಮತ್ತು ನಾನು ಸಫಾರಿಗೆ ಟಿಕೆಟು ಪಡೆಯುವ ಸ್ಥಳದಲ್ಲಿ ಹೋಗಿ ನಿಂತೆವು, ನಮ್ಮಿಬ್ಬರ ಕಾಡಿನ ಮಾತನ್ನು ಗಮನಿಸುತ್ತಿದ್ದ ಒಬ್ಬ ವ್ಯಕ್ತಿ ನಮ್ಮ ಜೊತೆ ಮಾತಿಗೆ ಇಳಿದರು. ಹೀಗೆ ಹಸ್ತಲಾಘವ ಮತ್ತು ಪರಿಚಯವೂ ಆಗಿತ್ತು, ಅವರು ಮೈಸೂರಿನ wipro ಕಂಪನಿಯ ನೌಕರನಾಗಿದ್ದು ಕಾಡಿನ ಬಗೆಗೆ ಇರುವ ಆಸಕ್ತಿಯನ್ನು ವಿವರಿಸುತ್ತಾ ನಮ್ಮ ಮಾತು ಮುಂದುವರೆಯಿತು.

ಅಷ್ಟರೊಳಗೆ ಬಸ್ ಬಂದು ನಿಂತಿತು, ಟಿಕೆಟ್ ಕೊಡಲು ಶುರುವಾಯಿತು, ನಮಗೆ ಟಿಕೆಟ್ ದರವನ್ನು ಕೇಳಿದ ಕೂಡಲೇ ಆಶ್ಚರ್ಯ ಮತ್ತು ಗಾಬರಿ ಒಮ್ಮೆಲೇ ಆಯಿತು. ಏಕೆಂದರೆ ಮುದುಮಲೈಯಲ್ಲಿ ನಾವು ಹಿಂದೆ ಬಂದಾಗ ಸಫಾರಿಗೆ ಕೊಟ್ಟ ಹಣ ಕೇವಲ 35ರೂ ಗಳು ಮಾತ್ರ ಹಾಗೂ ಇಂದಿನವರೆಗೂ ಅದೇ ದರ ಚಾಲ್ತಿಯಲ್ಲಿದೆ, ಆದರೆ ನಮ್ಮ ಕರ್ನಾಟಕದಲ್ಲಿ ಒಬ್ಬರಿಗೆ 350ರೂ ಗಳು. ಆಗ ನೆನಪಿಗೆ ಬಂದಿದ್ದು ನಿನ್ನೆಯ ಟಿ. ವಿ ವಾರ್ತೆ. ನೆನ್ನೆ ನಾವು ವಾರ್ತೆ ನೋಡುತ್ತಿರಬೇಕಾದರೆ ನಮ್ಮ ಮುಖ್ಯಮಂತ್ರಿಗಳು ಕರ್ನಾಟಕದ ಹಲವು ಭಾಗಗಳು ಬರಪೀಡಿತವಾಗಿದೆ ಎಂದು ಘೋಷಿಸಿದ್ದರು, ನನಗೆ ಅದರ ಪ್ರಭಾವವೇ ಈ 350ರೂ ಅನ್ನಿಸಿತು.

ಟಿಕೆಟು ಸಿಕ್ಕಿತು, ನಮ್ಮ ಜೊತೆಗೆ ಆ ವಿಪ್ರೋ ಕೆಲಸ ಮಾಡುವವರು ಕೂತರು. ಅವರ ಹೆಸರು ನನಗೆ ಅಷ್ಟು ಜ್ಞಾಪಕ ಇಲ್ಲದ ಕಾರಣ ಸದ್ಯದ ಮಟ್ಟಿಗೆ ಅವರ ನಾಮಕರಣವನ್ನು ನಾನು ಮಾಡುತ್ತಾ ಅವರ ಹೆಸರು ಗಣೇಶ್ ಎಂದು ಅಂದುಕೊಳ್ಳೋಣ. ಗಣೇಶ್ ನನಗಿಂತ ಹೆಚ್ಚು ಆಸಕ್ತಿ ಮತ್ತು ಕಾತುರತೆಯಿಂದ ಕುಳಿತು ತಮ್ಮ ಕ್ಯಾಮೆರಾವನ್ನು ಸಿದ್ಧ ಮಾಡಿಕೊಂಡರು. ಅವರ ಮುಖದಲ್ಲಿ ಏನೋ ಒಂದು ಖುಷಿ ಕಾಣುತ್ತಿತ್ತು. ಅವರ ದುಂಡನೆ ಮುಖದ ಪೂರ್ತಿ ಅವರ ನಗು ಹರಡಿತ್ತು

ಐದು ನಿಮಿಷಗಳ ತಪಾಸಣೆಯ ಬಳಿಕ ಕೊನೆಗೂ ನಮ್ಮ ಸಫಾರಿಯ ಬಸ್ ಕಾಡಿನೊಳಗೆ ಹೊರಟಿತು.

ಕಾಡಿನೊಳಗೆ ಬಸ್ ಹೋಗುತ್ತಿದ್ದಂತೆ ಮರಗಳ ತಂಪು ನಮ್ಮನ್ನು ಕೈಬೀಸಿ ಕರೆಯುತ್ತಿರುವಂತೆ ಭಾಸವಾಯಿತು. ಆಕಾಶದೆತ್ತರಕ್ಕೆ ಬೆಳೆದ ಮರಗಳ ನಡುವಿನಿಂದ ಬರುತ್ತಿದ್ದ ಬಿಸಿಲು ಭೂಮಿಯ ಮೇಲೆ ಚಿನ್ನ ಹರಡಿದಂತೆ ಕಾಣಿಸುತಿತ್ತು. ತಂಪಾದ ಗಾಳಿ ನಮ್ಮನ್ನು ಸೋಕುತ್ತಾ ಇಲ್ಲಿರುವುದೇ ನಿಜವಾದ ಆಮ್ಲಜನಕ, ನಾವು ನಾಡಿನಲ್ಲಿ ಉಸಿರಾಡುವ ಗಾಳಿ ಬರಿ ವಿಷಪೂರಿತ ಎಂದು ಗೊತ್ತಾಗುತ್ತಿತ್ತು. ಅದಲ್ಲದೆ ಪಕ್ಷಿಗಳ ಚಿಲಿಪಿಲಿ ನನಗೆ ಏನೋ ಇಂಪಾದ ಸಂಗೀತದಂತೆ ಕೇಳುತಿತ್ತು .ಆ ತಂಗಾಳಿಯಲ್ಲಿ ಗಂಧದ ವಾಸನೆ ಸವಿಯುವುದೇ ಮಜಾ, ಅದಕ್ಕೆ ಅನಿಸುತ್ತೆ ನಮ್ಮ ಕರ್ನಾಟಕವನ್ನು ಗಂಧದಗುಡಿ, ಗಂಧದ ನಾಡು ಎನ್ನುವುದು.

ನಾನು ಪ್ರಕೃತಿ ಸೌಂದರ್ಯವನ್ನು ಅನುಭವಿಸುತಿರಬೇಕಾದರೆ ಇದ್ದಕಿದ್ದಂತೆ ನಮ್ಮ ಬಸ್ ನಿಂತಿತು. ಅಲ್ಲಿದ್ದ ಜನ ಎಲ್ಲಾ ನನ್ನ ಎಡಗಡೆಗೆ ಹೋಗಿ ನೋಡುತ್ತಿದ್ದರು. ನಾನು ಏನು ಎಂದು ನೋಡಲು ಹೋದಾಗ ಅಲ್ಲಿ ಒಂದು ಜಿಂಕೆಯ ಗುಂಪು ನಿಂತ್ತಿತ್ತು. ಮಿಸ್ಟರ್ ಗಣೇಶ್ ಅಂತೂ, ಕುಂತೂ ನಿಂತೂ ಮಲಗಿ ಎಲ್ಲ ಬಂಗಿಯಲ್ಲೂ ಅದರ ಫೋಟೋ ತೆಗೆದರು, ಅವರ ದುಂಡು ಮುಖದ ನಗು ಇನ್ನೂ ಹೆಚ್ಚಿತು. ಆದರೆ ನನಗೆ ಅದು ಖುಷಿ ಎನಿಸಿತಾದರೂ ಹೆಚ್ಚು ಖುಷಿಯಾಗಲಿಲ್ಲ, ಏಕೆಂದರೆ ಬಂಡೀಪುರದಲ್ಲಿ ಜಿಂಕೆಯೆಂದರೆ ನಮ್ಮ ಸಿಟಿಯ ಬೀದಿ ನಾಯಿದಂತೆ. ಬಂಡೀಪುರದಲ್ಲಿ ನಿಮಗೆ ಹೆಚ್ಚಾಗಿ ಕಾಣುವ ಪ್ರಾಣಿ ಜಿಂಕೆಯೆಂದರೆ ತಪ್ಪಾಗುವುದಿಲ್ಲ.

ನಾನು ತಿರುಗಿ ನನ್ನ ಪ್ರಕೃತಿ ವೀಕ್ಷಣೆಯಲ್ಲಿ ಮಗ್ದನಾದೆ, ಸ್ವಲ್ಪ ದೂರದ ನಂತರ ತಿರುಗಿ ಬಸ್ ನಿಂತಿತು, ತಿರುಗಿ ಜಿಂಕೆಯ ಗುಂಪು, ಮಿಸ್ಟರ್ ಗಣೇಶ್ ಅವರದಂತೂ ಅದೇ ಸಂಭ್ರಮ. ನನಗೆ ಇದು ಮೊದಲನೇ ದೃಶ್ಯದ ಪುನರಾವರ್ತನೆ ಎನಿಸಿತು. ಸ್ವಲ್ಪ ದೂರ ಕ್ರಮಿಸಿದ ಮೇಲೆ ಬಸ್ ತಿರುಗಿ ನಿಂತಿತು, ಆದರೆ ಈ ಭಾರಿ ಯಾರು ಅಲ್ಲಾಡಲಿಲ್ಲ ನೋಡಿದರೆ ಜಿಂಕೆಯ ಮತ್ತೊಂದು ಗುಂಪು, ನಾನು ಗಣೇಶ್ ಅವರ ಮುಖ ನೋಡಿದೆ, ಯಾಕೋ ಅವರ ದುಂಡು ಮುಖದ ನಗೆ ಸ್ವಲ್ಪ ಕ್ಷೀಣಿಸಿದಂತೆ ಕಂಡಿತು, ನನ್ನನ್ನು ನೋಡಿ ನಗಲಾರದ ನಗು ಅವರ ಮುಖದಲ್ಲಿ ಮೂಡಿತು, ಅದು ಪದೇ ಪದೇ ಕಂಡ ಜಿಂಕೆಯ ಬೇಸರವೆಂದು ನನಗೆ ಗೊತ್ತಿತ್ತು.
ನಮ್ಮ ಬಸ್ ಇನ್ನು ಕಾಡಿನೊಳಗೆ ಹೋಗುತ್ತಿದ್ದಂತೆ ಕಾಡಿನ ಸೌಂದರ್ಯ ಇನ್ನು ಹೆಚ್ಚುತ್ತಿತ್ತು, ಹಚ್ಚ ಹಸಿರು ಗಿಡಗಳು, ಮರಗಳು, ಹಾ! ಎಂಥಾ ಸೌಂದರ್ಯ ಅದನ್ನು ನೋಡುವುದೇ ಒಂದು ಸಂಭ್ರಮದ ವಿಷಯ. ಇದ್ದಕ್ಕಿಂದಂತೆ ಬಸ್ ನಿಂತಿತು, ಮರದ ಮೇಲೆ ಒಂದು ರಣಹದ್ದು ಕಾಣಿಸಿತು, ಎಲ್ಲಾ ಅದರ ಫೋಟೋ ತೆಗೆಯೋ ಸಂಭ್ರಮದಲ್ಲಿ ತೊಡಗಿದ್ದರು ಆದರೆ ನಮ್ಮ ಬಸ್ ಚಾಲಕ ಮಾತ್ರ ಅದನ್ನು ಗಮನಿಸದೆ ಅತ್ತಿತ್ತ ಗಂಭೀರದಿಂದ ನೋಡುತ್ತಿದ್ದರು ಅವರ ನೋಟ ಬೇರೇನೋ ಹೇಳುತ್ತಿರುವಂತೆ ತೋರುತ್ತಿತ್ತು.

ರಣಹದ್ದು ನೋಡಿದ ಸಂಭ್ರಮದಲ್ಲಿ ತಲ್ಲೀನರಾಗಿದ್ದ ನಮ್ಮನ್ನು ಚಾಲಕ ನಿಶ್ಯಬ್ಧವಾಗಿರಲು ಸೂಚಿಸಿದರು. ಬಸ್ಸನ್ನು ನಿಧಾನವಾಗಿ ಸ್ವಲ್ಪ ದೂರ ಓಡಿಸಿ ಅಲ್ಲಿ ಒಂದು ಜಿಂಕೆಯ ಬಳಿ ನಿಲ್ಲಿಸಿದರು. ಇದನ್ನು ಕಂಡ ಗಣೇಶ್, ನನ್ನ ಬಳಿ ಬಂದು ಈ ಜಿಂಕೆಗೋಸ್ಕರ ಇಷ್ಟೊಂದು ನಿಶ್ಯಬ್ಧನಾ?! ಎಂದು ಅಪಹಾಸ್ಯದ ನಗು ಬೀರಿದರು. ಆದರೆ ನನಗೆ ಅಲ್ಲಿ ಬೇರೆಯೇ ವಿಷಯವಿರಬಹುದೆಂದು ಅನ್ನಿಸಿತು, ಏಕೆಂದರೆ ಆ ಜಿಂಕೆಯ ಕಣ್ಣಲ್ಲಿ ಏನೋ ಭಯವಿದ್ದಂತೆ ತೋರುತಿತ್ತು ಅದಲ್ಲದೆ ನನ್ನ ಬಲಗಡೆಯಲ್ಲಿ ಲಂಗರುಗಳ ಗಲಾಟೆ ಜೋರಾಗಿ ನಡೆದಿತ್ತು.

ಆಗ ನನಗೆ ನಾನು ಓದಿದ್ದ ಪೂರ್ಣಚಂದ್ರ ತೇಜಸ್ವಿಯವರ ಪುಸ್ತಕದಿಂದ ಕೆಲವು ಆಯ್ದ ಭಾಗಗಳು ನೆನಪಿಗೆ ಬಂತು, ಅದರಲ್ಲಿ ಈ ಲಂಗರುಗಳ ಬಗ್ಗೆ ವಿವರವಾಗಿ ಹೇಳಲಾಗಿತ್ತು. 'ಲಂಗರು' ಇದು ಒಂದು ಜಾತಿಯ ಕೋತಿ, ಮೈಬಣ್ಣ ಬೆಳ್ಳಗಿದ್ದು ಅದರ ಮುಖಮಾತ್ರ ಕಪ್ಪಾಗಿರುತ್ತದೆ.
ಲಂಗರುಗಳನ್ನು ಜಿಂಕೆಯ ಮಿತ್ರನೆಂದು ಕರೆಯುತ್ತಾರೆ. ಏಕೆಂದರೆ ಯಾವುದೇ ಮಾಂಸಾಹಾರಿ ಪ್ರಾಣಿಗಳು ಸುತ್ತಮುತ್ತವಿದ್ದಲ್ಲಿ ಈ ಲಂಗರುಗಳು ಅದರ ಸುಳಿವಿಕೆಯನ್ನು ಜಿಂಕೆಗಳಿಗೆ ಒಂದು ರೀತಿಯಾಗಿ ಕೂಗಿ ಎಚ್ಚರಿಸುತ್ತವೆ.
ಈ ವಿಷಯವನ್ನು ನಾನು ಗಣೇಶ್ ಅವರಿಗೆ ಪಿಸು ಮಾತಿನಲ್ಲಿ ಹೇಳಿದೆ, ಅಷ್ಟರೊಳಗೆ ನಮ್ಮ ಬಸ್ ಚಾಲಕ ಹುಲಿಯ ಬಗ್ಗೆ ಸೂಚನೆ ಕೊಟ್ಟಿದಾಗಿತ್ತು. ಎಲ್ಲರು ನಮ್ಮ ಕ್ಯಾಮೆರಾಗಳನ್ನು ಸಿದ್ಧಮಾಡಿ ನಿಶ್ಶಬ್ದದಿಂದ ಕುಳಿತೆವು. ಗಣೇಶ್ ಅವರ ದುಂಡು ಮುಖ ಮತ್ತೆ ಅರಳಿತು.
ಚಾಲಕನು ನಮಗೆ ಇನ್ನೂ ಕೆಲವು ನಿಮಿಷಗಳಲ್ಲಿ ಹುಲಿಯು ಬೀಟೆಯಾಡುವ ಸಂಭವ ಹೆಚ್ಚಿದೆ ಏಕೆಂದರೆ ರಣಹದ್ದು ಕಂಡ ದಿನ ಹುಲಿಯು ಕಾಣುವದು ಕಂಡಿತ ಎಂಬ ನಂಬಿಕೆ. ನಾನು ಚಾಲಕರ ಬಳಿ ಹೋಗಿ ಈ ತರಹದ ಅವರ ಹಲವು ಅನುಭವಗಳ ಬಗ್ಗೆ ಕೇಳತೊಡಗಿದೆ. ಎರಡು ನಿಮಿಷದ ಬಳಿಕ ತಿರುಗಿ ಲಂಗರುಗಳ ಗಲಾಟೆ ಜೋರಾಯಿತು, ಮಾತಾಡುತಿದ್ದ ನಾವು ಮತ್ತೆ ನಮ್ಮ ಸುತ್ತ ಮುತ್ತ ಕಣ್ಣಿಡಲು ಶುರು ಮಾಡಿದೆವು. ಐದು ನಿಮಿಷವಾಯಿತು ಲಂಗರುಗಳು ಸದ್ದು ಮಾಡುತಿದ್ದ ಕಡೆ ಏನೂ ಚಾಲನೆ ಇದಂತೆ ಕಾಣಿಸುತು, ಜಿಂಕೆ ಗಾಬರಿಯಿಂದ ನಿಂತಂತೆ ಕಾಣುತಿತ್ತು, ನಮೆಲ್ಲರ ಗಮನ ಆ ಕಡೆ ಹೋಯಿತು, ಬಸ್ಸಿನಲ್ಲೇ ಸಂಪೂರ್ಣ ನಿಶ್ಯಬ್ಧ, ಎಲ್ಲರೂ ಒಂದೊಂದು ದಿಕ್ಕನ್ನು ತೀಕ್ಷ್ಣವಾಗಿ ಗಮನಿಸುತ್ತಿದೆವು.... ಹತ್ತು ನಿಮಿಷವಾಯಿತು , ಹದಿನೈದು ನಿಮಿಷವಾಯಿತು ಕೊನೆಗೆ ಇಪ್ಪತ್ತು ನಿಮಿಷವೂ ಆಯಿತು, ಏನೂ ಕಾಣಲಿಲ್ಲ.
ಲಂಗರುಗಳು ನಮ್ಮನ್ನು ಮುರ್ಖರನ್ನಾಗಿ ಮಾಡಿದ್ದು ಖಚಿತವಾಯಿತು, ಒಬ್ಬರ ಮುಖವನ್ನು ಒಬ್ಬರು ನೋಡಿ, ಏನೋ ಹೇಳಲು ಬಂದು ಏನೂ ಹೇಳದಂತೆ ನಮ್ಮ ಜಾಗದಲ್ಲಿ ಕುಳಿತೆವು. ಗಣೇಶರವರ ಪಾಡು ಯಾರಿಗೂ ಬೇಡ, ಲಂಗರುಗಳನ್ನು ಬಾಯಿಗೆ ಬಂದಂತೆ ಶಪಿಸುತ್ತಾ ಬಂದು ಕುಳಿತರು, ಎಲ್ಲರಿಗೂ ನಾವು ಮೂರ್ಖರಾದೆವೇನೋ ಎಂಬ ಚಿಹ್ನೆ ಮುಖದಲ್ಲಿ ಎದ್ದು ಕಾಣುತಿತ್ತು.

ನಮ್ಮ ಬಸ್ ಮುಂದೆ ಸಾಗಿತು ಜಿಂಕೆ ಬಿಟ್ಟರೆ ಆನೆಯ ಲದ್ದಿಯೂ ಕೂಡ ನಮಗೆ ದೊರೆಯಲಿಲ್ಲ. ನನ್ನ ಹಿಂದೆ ಕೂತಿದ್ದ ದಂಪತಿ, ಇದರ ಬದಲು ಮೃಗಾಲಯಕ್ಕೆ ಹೋಗಿದ್ದಾರೆ ಇನ್ನೂ ಕಡಿಮೆ ದುಡ್ಡಿನಲ್ಲೇ ಹೆಚ್ಚು ಪ್ರಾಣಿ ನೋಡಬಹುದಿತ್ತು ಎಂದು ಶಪಿಸುತ್ತಿದ್ದರು, ನಮ್ಮ ಸಫಾರಿ ಮುಗಿದು ಬಸ್ ನಿಂತಿತು.

ಎಲ್ಲರೂ ಲಂಗರುಗಳನ್ನು ಮನಬಂದಂತೆ ಶಪಿಸುತ್ತಾ ನಡೆದ ಘಟನೆಯನ್ನು ನೆನೆದು ನಗುತ್ತಾ ಇಳಿದೆವು, ಆದರೆ ಗಣೇಶ್ ಮಾತ್ರ ಅದೇ ಸಪ್ಪೆ ಮೋರೆಯಿಂದ ಕೆಳಗಿಳಿದರು.

ನಡೆದ ಘಟನೆಯನ್ನು ನೆನೆಯುತ್ತಲೇ ನಾವೆಲ್ಲರೂ ನಮ್ಮ ನಮ್ಮ ಊರಿನ ದಾರಿ ಹಿಡಿದೆವು.