Click here to Download MyLang App

ಒಂಟಿ ಪಯಣಿಗರು - ಬರೆದವರು : ಗೀತಾ ಕುಂದಾಪುರ | ಸಾಮಾಜಿಕ

“ಮೇ ಶೆರ್ಲಿ, ಆಪಕಾ ಟೂರಿಸ್ಟ್ ಗೈಡ್” ಎಂದು ಹಿಂದಿಯಲ್ಲಿ ಮಾತು ಶುರು ಮಾಡಿದ ಹುಡುಗಿ ಕಣ್ಣು ಮಿಟುಕಿಸಿ ಬಾಗಿ ಬಳುಕಿ, ತನ್ನ ಕೈಯಲ್ಲಿರುವ ಕೆಂಪು ಬಣ್ಣದ ಫ್ಲ್ಯಾಗನ್ನು ಅತ್ತಿತ್ತ ಅಲುಗಾಡಿಸಿ ಚೈನಾದ ಚರಿತ್ರೆಯನ್ನು ಇಂಗ್ಲೀಷಿನಲ್ಲಿ ಹೇಳತೊಡಗಿದಳು. ಬೆಂಗಳೂರಿನಿಂದ ಚೈನಾ ನೋಡಲು ಬಂದು ಬಸ್ಸಿನಲ್ಲಿ ಕೂತ ಪ್ರವಾಸಿಗರು ಅವಳು ಹೇಳಿದ್ದನ್ನು ಅರಗಿಸಿಕೊಳ್ಳಲು ಒದ್ದಾಡುತ್ತಿದ್ದರು, ಅಲ್ಲದೆ ಇವರ ಚರಿತ್ರೆ ಯಾರಿಗೆ ಬೇಕಾಗಿದೆ?. ಶೆರ್ಲಿ ತನ್ನ ಮಾತನ್ನು ಮುಂದುವರಿಸಿ ಚೈನಾದಲ್ಲಿ ಕಮ್ಯೂನಿಸ್ಟ್ ಪಾರ್ಟಿಯ ಹುಟ್ಟು ಮತ್ತು ‘ಮಾವೋ’ನ ಕೊಡುಗೆಯನ್ನು ಹಾವ ಬಾವದೊಡನೆ ಬಣ್ಣಿಸುತ್ತಿದ್ದಳು. ಅವಳ ಇಂಗ್ಲೀಷ್ ಶಬ್ಧಗಳು ಮತ್ತು ಗ್ರಾಮರ್ ಸರಿಯಾಗಿದ್ದರೂ ರಾಗವಾಗಿ ಮೂಗಿನಲ್ಲಿ ಮಾತನಾಡುವಾಗ ನಗು ಬರುತ್ತಿತ್ತು.

ಬಸ್ಸು ಬೀಜಿಂಗಿನ ‘ಟಿನಮನ್ ಸ್ಕೇರ್’ನ ಮುಂದೆ ನಿಂತಿತು, ಅದರ ಇತಿಹಾಸವನ್ನು ಸೂಕ್ಷ್ಮವಾಗಿ ಹೇಳಿ ಎಲ್ಲರಿಗೂ 2 ಗಂಟೆಯ ಸಮಯ ನೀಡಿ, ಮತ್ತೆ ಅಲ್ಲಿಗೇ ಬಂದು ಸೇರಲು ಹೇಳಿದಳು. ಜಾತ್ರೆಯಂತೆ ನೆರೆದಿದ್ದ ಹತ್ತಾರು ದೇಶಗಳ ಸಾವಿರಾರು ಜನರೊಡನೆ ನನ್ನೊಡನೆ ಬಂದವರು ಹೆಜ್ಜೆ ಹಾಕಿ ಮುಂದೆ ಸಾಗಿದರು, ನಾನಲ್ಲೇ ನಿಂತೆ. ಎಲ್ಲೆಲ್ಲೂ ಕೆಂಪು ಬಣ್ಣದ ಕಟ್ಟಡಗಳು, ಸುಮಾರು 600 ವರ್ಷಗಳಷ್ಟು ಹಳೆಯ ಇತಿಹಾಸವನ್ನು ಮೂಖವಾಗಿ ಸಾರುತ್ತಿವೆ, ಅರಸೊತ್ತಿಗೆ, ಅದಕ್ಕಾಗಿ ಮಾರಾಮಾರಿ, ಹರಿದ ರಕ್ತದ ಹೊಳೆ, ಮಿಲಿಟರಿ ಆಡಳಿತ ಎಲ್ಲವೂ ಒಂದಂದಾಗಿ ಕಣ್ಣೆದುರಿಗೆ ಬಂತು. ಅಷ್ಟರಲ್ಲಿ ಹಿಂದಿನಿಂದ ಯಾರೋ ತಳ್ಳಿದಂತಾಯಿತು, ಮುಗ್ಗರಿಸಿ ಬಿಳುವುದರಲ್ಲಿದ್ದ ನನ್ನನ್ನು ಶೆರ್ಲಿ ಹಿಡಿದುಕೊಂಡು ಬದಿಗೆ ಕರೆದುಕೊಂಡು ಹೋದಳು. ಅವಳು ಹಚ್ಚಿದ ಸೆಂಟಿನೊಡನೆ ಮತ್ತೇನೋ ವಾಸನೆ ಬಂದ ಹಾಗಾಯಿತು, “ಹೇ…ನಿಮ್ಮಲ್ಲಿ ಹಾವು, ನಾಯಿ, ಜಿರಳೆ ತಿನ್ನುವವರೂ ಇದ್ದಾರೆಯೇ?” ಕೇಳಿದೆ, ಅವಳೋ ಕೂಲಾಗಿ “ಏಕೆ? ನನ್ನ ಅಮ್ಮ ಹಾವಿನ ಕರಿಯನ್ನು ಚೆನ್ನಾಗಿ ಮಾಡುತ್ತಾರೆ, ನಾಯಿ ತಿನ್ನುವವರು ಶಾಂಗೈನಲ್ಲಿ ಜಾಸ್ತಿ ಇದ್ದಾರೆ, ನಾವೂ ಅಪರೂಪಕ್ಕೆ ಮಾಡುವುದು, ಊರು ನೋಡಲು ಬಂದದ್ದಲ್ಲವೇ ಮತ್ತೇನು ಮಾಡುತ್ತಿದ್ದಿ?” ಎಂದಳು, ತಲೆಯಲುಗಿಸಿ ನಾನೂ ಟಿನಮನ್ ಸ್ಕೇರಿನತ್ತ ಹೆಜ್ಜೆ ಹಾಕಿದೆ.

ಸರಿಯಾಗಿ 2 ಗಂಟೆಯ ನಂತರ ಮತ್ತೆ ಎಲ್ಲರೂ ಸೇರಿದರು, ತಲೆ ಲೆಕ್ಕ ಹಾಕಿದವಳು ವಿಸಿಲ್ ಊದಿ ಡ್ರೈವರಿಗೆ ಸೂಚನೆ ಕೊಟ್ಟಳು. ಬಸ್ಸಿನಲ್ಲಿದ್ದ ಹೆಚ್ಚಿನವರು 60 ವರ್ಷದ ಮೇಲಿನವರು, ನಿವೃತ್ತಿ ಹೊಂದಿ, ಮಕ್ಕಳ ಮದುವೆ ಮಾಡಿ ಹಾಯಾಗಿ ದೇಶ ನೋಡಲು ಗ್ರೂಪ್ ಟೂರಿನಲ್ಲಿ ಬಂದವರು. ಸಮಯ ಸಿಕ್ಕಾಗಲೆಲ್ಲಾ ಮಕ್ಕಳ, ಮೊಮ್ಮಕ್ಕಳ ಸುದ್ಧಿ ಬಿಚ್ಚುತ್ತಿದ್ದರು. ನಾನೋ ಗೊಬ್ಬರ ಗುಂಡಿಯಾಗಿದ್ದ ತಲೆಯನ್ನು ರಿಫ್ರೆಶ್ ಮಾಡಲು ಇವರೊಂದಿಗೆ ಸೇರಿಕೊಂಡಿದ್ದೆ. ಎಲ್ಲದರಿಂದ ತಪ್ಪಿಸಿಕೊಳ್ಳಲು, ಅಟ್ಟಿಸಿಕೊಂಡು ಬರುವ ನೆನಪುಗಳನ್ನು ಎತ್ತಿ ಒಗೆಯಲು ಇಲ್ಲಿಗೆ ಬಂದರೆ ಮನಸ್ಸು ಮಾತ್ರ 5 ಸಾವಿರ ಕೀಮಿ ಆಚೆ ಇರುವ ಬೆಂಗಳೂರಿನ ಸುತ್ತವೇ ಸುತ್ತುತ್ತಿದೆ. ಬಲವಂತವಾಗಿ ಕಿಟಕಿಯಿಂದಾಚೆ ನೋಡಲು ಪ್ರಯತ್ನಿಸಿದೆ, ದಾರಿ ಬದಿಯಲ್ಲಿ ಆಟಿಕೆ ಮಾರುವ ಹಣ್ಣು, ಹಣ್ಣು ಮುದುಕಿಯರು, ಸುಟ್ಟ ಗೆಣಸು ಮಾರುವ ಗಂಡಸರು ಕಾಣಿಸಿದರು.

ಎತ್ತಲೋ ನೋಡುತ್ತಿದ್ದ ನನ್ನನ್ನು ಮುಂದೆ ಕೂತಿದ್ದ ಕುಲಕರ್ಣಿ ದಂಪತಿಗಳು ಹಿಂದೆ ತಿರುಗಿ ಮಾತಾಡಿಸಲು ಪ್ರಯತ್ನಿಸಿದರು “ರಿಷಿಕಾ ಅಲ್ಲವೇ ನಿನ್ನ ಹೆಸರು? ಒಬ್ಬಳೇ ಬಂದದ್ದಾ? ಮದುವೆಯಾಗಿದೆಯಾ?, ಕುತ್ತಿಗೆಯಲ್ಲಿ ಕರಿಮಣಿ ಕಾಣಿಸುತ್ತಿಲ್ಲ ಹಾಗೆ ಕೇಳಿದೆ?” ಮಿಸೆಸ್ ಆಶಾ ಕುಲ್ಕರ್ಣಿ ಎಂದಾಗ ಎಲ್ಲದಕ್ಕೂ ಹೌದೆನ್ನುವಂತೆ ತಲೆಯಲ್ಲಾಡಿಸಿದೆ, “ಅಲ್ಲಾ ಗಂಡ, ಹೆಂಡತಿ ಜಗಳ ಮಾಡಿಕೊಂಡು ಬಂದದ್ದಾ? ಏಕೆ ಕೇಳಿದೆ ಎಂದರೆ ಇದೆಲ್ಲಾ ಕಾಮನ್ ಈಗ, ಮದುವೆ ಇಲ್ಲದೆಯೂ ಒಟ್ಟಿಗಿರುತ್ತಾರೆ…ಮದುವೆ ಆದವರೂ ಬೇರೆ, ಬೇರೆಯಾಗಿರುತ್ತಾರೆ” ಆಶಾ ಎಂದಾಗ ಮುಖ ಕೆಂಪಾಯಿತು, ಅಧಿಕಪ್ರಸಂಗಿ ಎನಿಸಿತು, ಉತ್ತರ ಕೊಡಲಿಲ್ಲ, ನನಗೆ ಮಾತಾಡಲು ಮನಸ್ಸಿಲ್ಲದ್ದು ನೋಡಿ ಮುಂದೆ ತಿರುಗಿಕೊಂಡರು, ಆದರೂ ಮಧ್ಯೆ, ಮಧ್ಯೆ ಓರೆಗಣ್ಣಿನಿಂದ ನನ್ನ ಮುಖ ನೋಡುವುದನ್ನು ಬಿಡಲಿಲ್ಲ, ಅಲ್ಲಿರುವ ಭಾವನೆಗಳನ್ನು ಓದಿ ಒಂದು ತೀರ್ಮಾನಕ್ಕೆ ಬರಲು ಪ್ರಯತ್ನಿಸುತ್ತಿದ್ದಿರಬೇಕು.

ಗಾಳಿಯಲ್ಲಿ ತೇಲುತ್ತಿರುವಂತೆ ಹೊರಟ ಬಸ್ಸು ‘ಟೆಂಪಲ್ ಆಫ್ ಹೆವನ್’ನಿನ ಮುಂದೆ ನಿಂತಿತು. ನೀಲಿ, ಬಿಳಿಯ ಮೂರಂತಸ್ಥಿನ ಸುಂದರ ಸ್ಮಾರಕ, ಶಾಂತ, ಫ್ರಫುಲ್ಲತೆಯ ವಾತಾವರಣ, ಆದರೆ ಇದೇ ಶತಮಾನಕ್ಕೆ ಸೇರಿದ ನಮ್ಮ ದೇಶದ ವಾಸ್ತುಶಿಲ್ಪಕ್ಕೆ ಹೋಲಿಸಿದರೆ ಇದು ಏನೂ ಅಲ್ಲ ಅನಿಸಿತು, ಇರಲಿ ಅವರವರದ್ದು ಅವರಿಗೆ ಚಂದ. ಒಂದೆರಡು ಫೋಟೋ ತೆಗೆದುಕೊಳ್ಳುತ್ತಿದ್ದಂತೆ ಒಂಟಿಯಾಗಿ ಶೆರ್ಲಿ ಸಿಕ್ಕಳು, ಖುಷಿ, ಖುಷಿಯಲ್ಲಿದ್ದ ಅವಳನ್ನು ಛೇಡಿಸುವ ಮನಸ್ಸಾಯಿತು “ಏನೆನ್ನುತ್ತಾನೆ ಬಾಯ್ ಫ್ರೆಂಡ್?” ನಕ್ಕವಳು “2-3 ದಿನಗಳಿಂದ ನನ್ನ ಮೆಸೇಜಿಗೆ ಉತ್ತರವಿಲ್ಲ, ಬ್ಯೂಸಿ ಇರಬೇಕು, ಮಾರ್ಕೆಟಿಂಗ್ ಫೀಲ್ಟಿನಲ್ಲಿದ್ದಾನೆ, ನೋಡುತ್ತಿರು ಇನ್ನು ಮೂರು ತಿಂಗಳಲ್ಲಿ ಅವನನ್ನು ಮದುವೆಯಾಗುತ್ತಾನೆ, 4-5 ವರ್ಷಗಳಲ್ಲಿ ಎರಡು ಮಕ್ಕಳನ್ನು ಹೆರುತ್ತೇನೆ, ನಿಮ್ಮ ಇಂಡಿಯನ್ಸ್ ತರಹ”, “ಗುಡ್, ಗುಡ್ ಶೆರ್ಲಿ, ನಿಮ್ಮಲ್ಲಿ ಒಂದು ಕುಟುಂಬಕ್ಕೆ ಒಂದೇ ಮಗು ಎನ್ನುವ ಕಾನೂನು ಇದೆಯಲ್ವಾ?”, “ಕಾನೂನು ಇರುವುದು ಹೌದು, ಒಂದನ್ನು ಇಲ್ಲಿಯೇ ಹೆತ್ತು, ಇನ್ನೊಂದನ್ನು ಎಲ್ಲಾದರೂ ಹಳ್ಳಿಯಲ್ಲಿ ಗುಟ್ಟಾಗಿ ಹೆರುತ್ತೇನೆ, ಯಾರಿಗೂ ಗೊತ್ತಾಗೋಲ್ಲ, ಹಾಗೆ ಮಾಡುವವರೂ ಇದ್ದಾರೆ, ಮುಖ್ಯವಾಗಿ ಸರಕಾರಕ್ಕೆ ಗೊತ್ತಾಗದಿದ್ದರೆ ಸರಿ, ನನಗೆ ಮಕ್ಕಳೆಂದರೆ ಇಷ್ಟ”, ಅವಳು ಮಾತನ್ನು ಮುಂದುವರಿಸಿ “ರಿಷಿಕಾ, ನಿನಗೆ ಗೊತ್ತಾ 8-10 ವರ್ಷ ದುಡಿದು 650 ಸ್ವೇರ್ ಫೀಟಿನ ಮನೆ ಕೊಂಡಿದ್ದೇನೆ, ಒಬ್ಬಳೇ ಮಗಳು ನಾನು, ಅಪ್ಪ, ಅಮ್ಮನನ್ನು ನೋಡಿಕೊಂಡಿದ್ದೇನೆ”.

ಅಲ್ಲಿಂದ ಬೌದ್ಧ ದೇವಾಲಯವೊಂದನ್ನು ನೋಡಲು ಹೊರಟೆವು. ದೇವಾಲಯದ ಎದುರುಗಡೆ ದೊಡ್ಡ ಅಗರಬತ್ತಿ ಸ್ಟ್ಯಾಂಡ್, ನಮ್ಮವರೂ ಅಗರಬತ್ತಿ ಕೊಂಡು ಹಚ್ಚಿದರು. ಶೆರ್ಲಿಯೂ ಅಗರಬತ್ತಿ ಹಚ್ಚಿ, ಕಣ್ಣು ಮುಚ್ಚಿ ಕೈ ಮುಗಿಯುವುದು ಕಾಣಿಸಿತು. “ಓ ಬುದ್ಧನ ಭಕ್ತಳು” ಎಂದು ಛೇಡಿಸಿದೆ, ಅದಕ್ಕವಳು “ನಿನ್ಯಾಕೆ ಇಲ್ಲೇ ನಿಂತಿದ್ದಿ? ದೇವರ ಮೇಲೆ ಭಕ್ತಿ ಇಲ್ಲವೇ?”, “ಇದೆ ಎಂದರೆ ಇದೆ, ಇಲ್ಲ ಎಂದರೆ ಇಲ್ಲ, ಮನಸ್ಸಿಗೆ ಆಸರೆ ಬೇಕೆನಿಸಿದಾಗ, ಮನಸ್ಸು ತಲ್ಲಣಿಸಿದಾಗ ಭಗವಂತನ ಮೊರೆ ಹೋಗುತ್ತೇನೆ, ನಿಮ್ಮಲ್ಲಿ ಎಲ್ಲರೂ ಬುದ್ಧನನ್ನು ಪೂಜಿಸುವವರೇ?” ಕೇಳಿದೆ, “ಹಾಗೇನೂ ಇಲ್ಲ, ಕ್ರಿಶ್ಚಯನ್ನರು, ಮುಸ್ಲಿಮರೂ ಇದ್ದಾರೆ, ದೇವರು ಇಲ್ಲ ಎನ್ನುವವರೂ ಸಾಕಷ್ಟು ದೊಡ್ಡ ಸಂಖ್ಯೆಯಲ್ಲಿದ್ದಾರೆ, ಸರಕಾರ ಅಧಿಕೃತವಾಗಿ ಯಾವ ಜಾತಿ, ಮತವನ್ನೂ ಗುರುತಿಸುವುದಿಲ್ಲ, ಪ್ರತಿಯೊಬ್ಬರೂ ಖಾಸಗಿಯಾಗಿ ಪ್ರಾರ್ಥಿಸಬಹುದು. ಇಲ್ಲಿರುವ ಬೌದ್ಧ ದೇವಲಯಗಳೆಲ್ಲಾ ಬಹಳ ಹಳೆಯದ್ದು, ಕಮ್ಯೂನಿಸ್ಟ್ ಸರಕಾರ ಬರುವ ಮೊದಲೇ ಇದ್ದಿರುವಂತಹದ್ದು,” ಎನ್ನುತ್ತಾ ದೀರ್ಘ ಉತ್ತರವನ್ನೇ ಕೊಟ್ಟಳು.

ನಮ್ಮೊಡನೆ ಬಂದಿದ್ದ ಶೆಟ್ಟಿ ದಂಪತಿಗಳು ಗಮನ ಸೆಳೆದರು, ಫೋಟೋದ ಹುಚ್ಚು, ಇಬ್ಬರೂ ಕೈ ಕೈ ಹಿಡಿದುಕೊಂಡೋ, ತಬ್ಬಿಕೊಂಡೋ, ಹೆಗಲ ಮೇಲೆ ಕೈ ಹಾಕಿಕೊಂಡೋ ಫೋಟೋ ತೆಗೆದುಕೊಳ್ಳುತ್ತಿದ್ದರು, ಮದುವೆಯಾಗಿ 40-50 ವರ್ಷಗಳಾಗಿರಬಹುದು, ಇನ್ನು ಅವರಲ್ಲಿರುವ ಉತ್ಸಾಹ, ಪ್ರೀತಿ ಕಂಡು ಆಶ್ಚರ್ಯವಾಯಿತು. ಎಲ್ಲ ಅವರವರು ಕೇಳಿಕೊಂಡು ಬಂದಿದ್ದು, ನನ್ನ ಅಮ್ಮ-ಅಪ್ಪನೂ ಹೀಗೆಯೇ ಅಲ್ಲವೇ, ಎಲ್ಲಿಗೆ ಹೋಗುವುದಾದರೂ ಒಟ್ಟಿಗೆ ಹೋಗಬೇಕು, ಒಟ್ಟಿಗೆ ಊಟ, ತಿಂಡಿ ಮಾಡಬೇಕು, ಆದರೂ ಒಬ್ಬರ ಮೇಲೆ ಒಬ್ಬರು ದೂರು ಹೇಳುವುದನ್ನು ಬಿಡುವುದಿಲ್ಲ. “ರಿಷಿಕಾ ಒಬ್ಬಳೇ ಬಂದಾದ್ದ? ಎಲ್ಲಿ ನಿನ್ನ ಗಂಡ? ಮದುವೆಯಾಗಿಲ್ಲವಾ ಹೇಗೆ” ಮಿಸೆಸ್ ಶೆಟ್ಟಿ ಕೇಳಿದಾಗ “ನನ್ನ ಪ್ರಾಜೆಕ್ಟ್ ಮುಗಿದು ಕೆಲವು ದಿನಗಳ ರಜಾ ಸಿಕ್ಕಿತು, ನನ್ನ ಗಂಡ ಸದಾ ಬ್ಯೂಸಿ, ಜೆಸ್ಟ್ ಫಾರ್ ಚೇಂಜ್ ಟೂರಿಗೆ ಒಬ್ಬಳೇ ಬಂದೆ” ಸುಳ್ಳು ಹೇಳುವಾಗ ನಾಲಿಗೆ ತಡವರಿಸಿತು, “ಹೆಚ್ಚು ದಿನ ಬಿಟ್ಟಿರಬೇಡ, ಬೇರೊಬ್ಬಳನ್ನು ಹುಡುಕಿಕೊಂಡಾನು ನಿನ್ನ ಗಂಡ” ಮಿಸ್ಟರ್ ಶೆಟ್ಟಿ ತಮಾಷೆ ಮಾಡಿದರು, ದೂರದಲ್ಲಿದ್ದ ನಾಯಕ್ “ನಿನ್ನ ಗಂಡ ಡೈವೊರ್ಸ್ ಕೊಟ್ಟರೆ ಬೇಸರಿಸಬೇಡ, ನಾನಿದ್ದೇನೆ” ಎನ್ನುತ್ತಾ ಕಣ್ಣು ಹೊಡೆದರು, ಸದಾ ತಮಾಷೆ ಮಾಡುವ ನಾಯಕ್ ಅಂಕಲಿನ ಹಿಂದೆ ದೊಡ್ಡ ಕರುಣಾಜನಕ ಕತೆಯೇ ಇದೆ ಎಂದು ಬಸ್ಸಿನಲ್ಲಿರುವ ಹೆಂಗಸರು ಮಾತಾಡಿದ್ದು ಕೇಳಿಸಿತ್ತು.
--
ಬೆಳಿಗ್ಗಿನ ನಮ್ಮ ಪ್ರಯಾಣ ‘ಹೊಂಗ್ಸು’ ಪಟ್ಟಣದತ್ತ, ಕೆಂಪು ಪ್ಯಾಂಟು, ಶರ್ಟಿನಲ್ಲಿದ್ದ ಶೆರ್ಲಿ ಪಕ್ಕಾ ಕಮ್ಯುನಿಸ್ಟ್ ಆಗಿ ತೋರುತ್ತಿದ್ದಳು. “ಹಿಂದಿ, ಚೀನಿ ಬಾಯಿ, ಬಾಯಿ, ನೀವು, ನಾವು ಅಣ್ಣ, ತಮ್ಮಂದಿರು, ಅಕ್ಕ, ತಂಗಿಯರು” ಎನ್ನುವ ಭಾಷಣದೊಂದಿಗೆ ಶುರು ಮಾಡಿದಳು….. ಬೆನ್ನಿಗೇ ಚೂರಿ ಹಾಕುವ ಇವರನ್ನು ಸಹೋದರ ಎನ್ನಲಾದೀತೇ? ನಂಬುವುದುಂಟೇ?. ಹೊಂಗ್ಸು ಪ್ರಾಂತಕ್ಕೆ ಬರುತ್ತಿದ್ದಂತೆ “ನಮ್ಮ ಹೊಂಗ್ಸು ನಿಮ್ಮ ಬೆಂಗಳೂರು ಇದ್ದಂತೆ, ಎಜುಕೇಟಡ್ ಮಾಡರ್ನ್ ಸಿಟಿ” ಎಂದಾಗ ಹೆಮ್ಮೆ ಎನಿಸಿತು…ಹೊಂಗ್ಸು ಬಹಳ ಚಂದದ ಸಿಟಿ ಎಲ್ಲೆಲ್ಲೂ ಕೊಳಗಳು, ಆಧುನಿಕ ಮನೆಗಳು, ಚಂದದ ರೋಡುಗಳು, ನಮ್ಮ ಬೆಂಗಳರೂರು ಹೀಗೆ ಒಂದು ಕಾಲದಲ್ಲಿ ಇತ್ತೋ ಏನೋ..... ಎಲ್ಲವೂ ಇದ್ದರೂ ಚೀನಿಯರ ಮುಖದಲ್ಲಿರುವ ಒಂದು ತರಹದ ನಿರ್ಲಿಪ್ತ ಭಾವ ಅರ್ಥವಾಗದಂತಿತ್ತು, ನಮಗೋ ಖುಷಿಯಾದರೆ ಕುಣಿದು ಕುಪ್ಪಳಿಸಬೇಕು, ಅಳುವುದೆಂದರೆ ಜೋರಾಗಿ ಎಲ್ಲರಿಗೂ ಕಾಣಿಸುವಂತೆ ಅಳಬೇಕು, ಜಗಳ ಆಡಬೇಕೆಂದರೆ ಜಗಳವಾಡುವುದು, ಹಿಂದಿನಿಂದ ಇರಿಯುವ ಪ್ರಶ್ನೆ ಇಲ್ಲಿರುವುದಿಲ್ಲ.

ಬಸ್ಸು 15ನೇ ಶತಮಾನದಲ್ಲಿ ಕಟ್ಟಿದ್ದೆನ್ನಲಾದ ಪಗೋಡದ ಮುಂದೆ ನಿಂತಿತು. ಭವ್ಯ ಸ್ಮಾರಕ, ಸುತ್ತ ಹೂವು ಗಿಡಗಳಿರುವ ಸುಂದರ ಪಾರ್ಕು, ಬಣ್ಣ, ಬಣ್ಣದ ಮೀನುಗಳಿರುವ ಕೊಳ ಬೇರೆ ಇದೆ, ಪಗೋಡ 8-10 ಅಂತಸ್ತುಗಳಿದ್ದರೂ ನೋಡಲು ಬಿಟ್ಟಿದ್ದು ಕೆಳ ಅಂತಸ್ತು ಮಾತ್ರ, ಎಲ್ಲೆಲ್ಲೂ ಹೀಗೆಯೇ, ಹೇಳಿದಂತೆ ಮಾಡಿ, ತೋರಿಸಿದಂತೆ ಮಾಡಿ ಮುಚ್ಚಿಡುವುದೇ, ಹೇಳದಿರುವುದೇ ಹೆಚ್ಚು, ಕಪಟಿಗಳು, ಎಲ್ಲೆಲ್ಲೂ ಸೆನ್ಸರ್, ವಾಪಸು ಬಂದುಬಿಟ್ಟೆ ಎಲ್ಲರೂ ವಾಪಸು ಬರಲು ಇನ್ನೂ 15-20 ನಿಮಿಷವಾದರೂ ಇತ್ತು. ಮರದ ಕೆಳಗೆ ಶೆರ್ಲಿ ವಾಟ್ಅಪ್ಪನಲ್ಲಿ ಬ್ಯೂಸಿಯಾಗಿದ್ದಂತೆ ಕಾಣಿಸಿತು, ಎಷ್ಟು ಚೆನ್ನಾಗಿದ್ದಾಳೆ, ವರ್ಷ ಮೂವತ್ತಂತೆ, ನೋಡಿದರೆ ಇಪ್ಪತ್ತೆನ್ನಬಹುದು, ಮುಖದಲ್ಲಿ ನೆರಿಗೆಯಾಗಲಿ, ಕಲೆಯಾಗಲಿ ಒಂದೂ ಇಲ್ಲ, ಹಾಲು ಬಿಳಿ ಬಣ್ಣ, ತುಟಿಗೆ ಲೈಟ್ ಆಗಿ ಹಚ್ಚಿದ ಬಣ್ಣ ಒಪ್ಪುತ್ತಿತ್ತು. ನೋಡುತ್ತಿದ್ದಂತೆ ಪಕ್ಕನೆ ಪಟ, ಪಟನೆ ಉದುರಿದ ಅವಳ ಕಣ್ಣೀರು ಮೊಬೈಲನ್ನು ಒದ್ದೆ ಮಾಡಿತು, ಅವಳನ್ನು ಮಾತಾಡಿಸುವ ಮನಸ್ಸಾಯಿತು, “ಏನಾಯಿತೇ?, ಏಕೆ ಅಳುತ್ತಿರುವೆ?”, ಮಾತಾಡಲಿಲ್ಲ ಅವಳು, ಅನುಮಾನವಾಯಿತು, “ಶೆರ್ಲಿ ಬಾಯ್ ಫ್ರೆಂಡ್ ಏನೆಂದ?”, ಕಣ್ಣು, ಮೂಗು ಒರೆಸುತ್ತಾ “ಮೆಸೇಜ್ ಕಳುಹಿಸಿದ್ದಾನೆ, ನನ್ನ, ನಿನ್ನ ಸಂಬಂಧ ಮುಗಿಯಿತು ಎಂದು ಸಿಂಪಲ್ ಆಗಿ ಬರೆದಿದ್ದಾನೆ, ಅವನೀಗ ಬೇರೊಬ್ಬಳನ್ನು ಹಿಡಿದಿದ್ದಾನೆ, ದೊಡ್ಡ ಕೆಲಸದಲ್ಲಿರುವವಳಿರಬೇಕು”, “ಬೇಡ ಬಿಡು ಮತ್ತೊಬ್ಬನನ್ನು ಹುಡುಕಿಕೊಂಡರಾಯಿತು, ನಿನ್ನನ್ನು ಯಾರೂ ಬೇಡ ಅನ್ನೋರು” ಎಂದೆ, ಮತ್ತೆ ದಳದಳನೆ ಕಣ್ಣೀರು ಹರಿಸಿದಳು, ಗಾಭರಿಯಾಯಿತು “ಸಿಸ್ಟರ್, ಈ ಐದು ವರ್ಷಗಳಲ್ಲಿ ಮೂರನೆಯ ಬಾಯ್ ಫ್ರೆಂಡ್ ಇವನು, ಒಂದು ಸಲ ಅಬಾರ್ಷನ್ ಬೇರೆ ಮಾಡಿಸಿಕೊಂಡಿದ್ದೇನೆ, ಬಾಯ್ ಫ್ರೆಂಡ್ಸಗಳು ಮೊದಲು ಒಳ್ಳೆಯವರಾಗಿಯೇ ಇರುತ್ತಾರೆ, ಬೇರೊಬ್ಬ ಒಳ್ಳೆಯ ಹುದ್ದೆಯಲ್ಲಿರುವವಳು ಸಿಕ್ಕಿದ ಕೂಡಲೆ ಹೊರಟು ಹೋಗುತ್ತಾರೆ, ಟೂರಿಸ್ಟ್ ಗೈಡ್ ಕೆಲಸ ವರ್ಷವಿಡೀ ಇರುವುದಿಲ್ಲ, ಸಂಜೆಯ ಸೂಪರ್ ಮಾರ್ಕೆಟ್ಟಿನಲ್ಲಿ ಕೊಡುವ ಸಂಬಳವೂ ಅಷ್ಟಕಷ್ಟೇ, ಪ್ರೀತಿ, ಪ್ರೇಮ ಎಲ್ಲಾ ಸುಳ್ಳು, ದುಡ್ಡೇ ಇಂಪಾರ್ಟೆಂಟ್. ನನ್ನ ವಯಸ್ಸಿನ ಹುಡುಗ, ಹುಡುಗಿಯರಲ್ಲಿ ಹೆಚ್ಚಿನವರು ಆಗಲೇ ಮದುವೆಯಾಗಿದ್ದಾರೆ, ಎಲ್ಲವೂ ಇದೆಯೆಂದು ತೋರವ ಚೈನಾದಲ್ಲಿ ಜನರು ಸಂತೋಷವಾಗಿರುವರೆಂದು ಕೊಂಡೆಯಾ? ಬಿಡು, ಹೆಚ್ಚು ಹೇಳಲು ಆಗೋಲ್ಲ, ಸರಕಾರದ ಅನುಮತಿ ಇಲ್ಲ”.

ದಿನವಿಡಿ ನಿರಾಸಕ್ತಿಯಿಂದ ತನ್ನ ಕೆಲಸವನ್ನು ಮಾಡುತ್ತಿದ್ದಳು, ಅವಳನ್ನು ಹೆಚ್ಚು ಮಾತಾಡಿಸಲು ಹೋಗಲಿಲ್ಲ. ಬಸ್ಸಿನಲ್ಲಿದ್ದ ಉಳಿದ ಟೂರಿಸ್ಟುಗಳು ಅವಳನ್ನು ಆಗಾಗ ಛೇಡಿಸುತ್ತಿದ್ದರು, ಅವಳೋ ನಿರಾಸಕ್ತಿಯಿಂದ ನಗುತ್ತಿದ್ದಳು. ಬಸ್ಸಿನಲ್ಲಿ ಅಂತಾಕ್ಷರಿ ಶುರುವಾಯಿತು, ಮುಂದಿನ ಸೀಟಿನಲ್ಲಿ ಕೂತ ಪಾಟೀಲ್ ದಂಪತಿಗಳ ಜಗಳ ಅಂತಾಕ್ಷರಿಯನ್ನು ಮೀರಿ ಕೇಳಿಸುತ್ತಿತ್ತು. ಆಶಾ ಊರಿನಿಂದ ತಂದಿದ್ದ ಕೋಡುಬಳೆ, ರವೆ ಉಂಡೆ ಹಂಚುತ್ತಿದ್ದರು.

ಮರುದಿನ ಶಾಂಗೈಗೆ ವಿಮಾನದಲ್ಲಿ ನಮ್ಮ ಪ್ರಯಾಣ.
--
“ಗುಡ್ ಮಾರ್ನಿಂಗ್ ಫ್ರೆಂಡ್ಸ್, ದಿ ಇಸ್ ಯುವರ್ ಫ್ರೆಂಡ್ ಶೆರ್ಲಿ” ಎನ್ನುತ್ತಾ ಉತ್ಸಾಹದಿಂದಲೇ ನಮ್ಮನ್ನು ಸ್ವಾಗತಿಸಿದಳು, ಗ್ರೀನ್ ಫ್ರಾಕಿನಲ್ಲಿ ಬಹಳ ಮುದ್ದಾಗಿ ಕಾಣುತ್ತಿದ್ದಳು. ನಿನ್ನೆಯ ದುಃಖವನ್ನು ಆದಷ್ಟು ಮರೆಯಲು ಪ್ರಯತ್ನಿಸಿದಂತೆ ಕಾಣಿಸಿತು.

ಶಾಂಗೈ, ಅತ್ಯಾಧುನಿಕ ಸಿಟಿ, ಕಟ್ಟಡಗಳ ವಾಸ್ತುಶಿಲ್ಪ ಯೂರೋಪಿನ ಕಟ್ಟಡಗಳನ್ನು ಹೋಲುತ್ತಿತ್ತು. ಯಾವುದೋ ‘ಮಾಲ್’ನ ಮುಂದೆ ನಿಲ್ಲಿಸಿ ನಮ್ಮನ್ನು ಶಾಪಿಂಗ್ ಮಾಡಲು ಬಿಟ್ಟರು.

ಎಲ್ಲರೂ ಅತ್ತ ಹೊರಟರೆ ನಾನು ಶೆರ್ಲಿಯನ್ನು ಮೆಲ್ಲನೆ ಮಾತಿಗೆಳೆದೆ, ನನ್ನ ಮಾತನ್ನು ತುಂಡರಿಸಿ “ನಿನ್ನ ಬಗ್ಗೆ ಹೇಳು ರಿಷಿಕಾ, ಮದುವೆಯಾಗಿದೆಯಾ?, ಏನೆನ್ನುತ್ತಾರೆ ಮುಂಬೈ ಜನರು, ನೀನೇಕೆ ಎಲ್ಲರಂತೆ ಎಂಜಾಯ್ ಮಾಡುತ್ತಿಲ್ಲ?, ಏನೋ ಇದೆ”.

ಒಮ್ಮೆಲೆ ಹಿಮ್ಮೆಟ್ಟಿದೆ, ಯಾರಿವಳು ಇವಳ ಹತ್ತಿರ ನಾನೇಕೆ ಎಲ್ಲವನ್ನೂ ಹೇಳಬೇಕು, ಏನೋ ಒಂದು ಹೇಳಿದರಾಯಿತು ಎಂದುಕೊಂಡು ಬಾಯಿ ತೆರೆದೆ, ಆದರೆ ಮನಸ್ಸು ಸತ್ಯ ಹೇಳಿಬಿಡು ಎಂದಿತು, ಮನಸ್ಸಿನ ತರ್ಕ, ವಿತರ್ಕದಲ್ಲಿ ಗೊಂದಲವಾಯಿತು, ಕೊನೆಗೆ ಇವಳ ಹತ್ತಿರವಾದರೂ ಸತ್ಯ ಹೇಳಿ ಮನಸ್ಸುನ್ನು ಹಗುರ ಮಾಡಿಕೊಳ್ಳುತ್ತೇನೆ. ಸತ್ಯದ ಕೈಕಾಲು ಕಟ್ಟಿ ಮೂಲೆಯಲ್ಲಿ ಕೂರಿಸಿದ್ದು ಸಾಕು, ಜಾಸ್ತಿ ಹೊತ್ತು ಹೊಟ್ಟೆಯಲ್ಲಿಟ್ಟುಕೊಳ್ಳುವುದು ಸರಿಯಲ್ಲ ಎನಿಸಿ ಬದುಕಿನ ಪದರವನ್ನು ಇವಳೆದರು ಬಿಚ್ಚಿಡಲು ತೀರ್ಮಾನಿಸಿದೆ.

“ಭಾರತದಲ್ಲಿ ಹೆಚ್ಚಿನವರದ್ದು ಅರೆಂಜಡ್ ಮ್ಯಾರೇಜ್, ನಮ್ಮದೂ ಅಷ್ಟೇ, ಮದುವೆಗೆ ಮೊದಲು ನಾನು, ರಿತಿಕ್ 5-6 ತಿಂಗಳು ಸಾಕಷ್ಟು ಓಡಾಡಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದೆವು. ಅವನ ಭುಜಕ್ಕೆ ಒರಗಿ ಕೈ ಹಿಡಿದು ಮಂಗಳೂರಿನ ಸಮುದ್ರ ದಂಡೆಯಲ್ಲಿ ನಡೆದಾಡಿದೆ, ಮರಳಿನ ಮೇಲೆ ನಿಂತು ಭವಿಷ್ಯದ ಸೌಧವನ್ನು ಕಟ್ಟಿದೆವು. ಅವನು ಐಸ್ ಕ್ರೀಮ್ ತಿನ್ನಿಸಿ, ಕೆನ್ನೆಗೆ ಕಿಸ್ ಕೊಟ್ಟಾಗ ಇವನೇ ನನಗೆ ಸರಿಯಾದ ಜೊತೆಗಾರ ಎನಿಸಿತು, ಅವನ ಕಣ್ಣಲ್ಲಿ ಕಣ್ಣಿಟ್ಟು ನೋಡಿದಾಗ ನನ್ನ ಪ್ರತಿಬಿಂಬವನ್ನೇ ಕಂಡೆ. ಎಲ್ಲದಕ್ಕಿಂತ ಅವನು ಹೇಳುತ್ತಿದ್ದ ಕವಿತೆಗಳಿಗೆ ನಾನು ಮಾರು ಹೋದೆ. ಎಲ್ಲವೂ ಸರಿಯಾಗಿದೆ ಎಂದು ಕಣ್ಣು ಮುಚ್ಚಿ ಕನಸು ಕಟ್ಟುತ್ತಿರುವಾಗಲೇ ನಮ್ಮ ಮದುವೆಯಾಯಿತು. ಮೊದಲ ಆರು ತಿಂಗಳು ನಮ್ಮದು ಹನಿಮೂನ್ ಪಿರಿಯೆಡ್….” ಇಷ್ಟು ಹೇಳುತ್ತಿರುವಾಗಲೇ ಶಾಪಿಂಗ್ ಹೋದವರು ಬಂದರು. “ಕಡೆಗೆ ಎಲ್ಲವನ್ನೂ ಹೇಳಿ ಬಿಡು, ಇವತ್ತೇ ಕಡೆಯ ದಿನ, ಮತ್ತೆ ನಾನೆಲ್ಲೋ, ನೀನೆಲ್ಲೋ” ಎಂದಳು.

ಶಾಂಗೈನ ಪ್ರಸಿದ್ಧ ಕಟ್ಟಡ ‘ಶಾಂಗೈ ಟವರ್’ ಅದರ ಮುಂದೆ ನಿಂತು ಫೋಟೋ ತೆಗೆದುಕೊಳ್ಳದವರು ಇದ್ದಾರೆಯೇ? ಎಲ್ಲರೂ ಅತ್ತ ಹೊರಟರು, ಅತ್ತ ಹೆಜ್ಜೆ ಹಾಕಿದವಳನ್ನು ಶೆರ್ಲಿ ಕೈ ಹಿಡಿದು ಜಗ್ಗಿದಳು, ಇಬ್ಬರೂ ಅಲ್ಲೇ ಕಲ್ಲಿನ ಬೆಂಚಿನ ಮೇಲೆ ಕೂತು ಹಸಿರು ಚಹ ಹೀರತೊಡಗಿದೆವು ‘ಮುಂದುವರಿಸು’ ಎನ್ನುವಂತೆ ನನ್ನ ಮುಖ ನೋಡಿದಳು “ಒಂದು ವರ್ಷ ಕಳೆಯುವುದರೊಳಗೆ ರಿತಿಕನ ನಿಜವಾದ ಬಣ್ಣ ಹೊರಗೆ ಬಂತು, ಮುಖ ತೊಳೆದಾಗ ಮುಖಕ್ಕೆ ಹಚ್ಚಿದ ಬಣ್ಣ ತೊಳೆದು ಹೋಗುವುದಿಲ್ಲವೇ ಹಾಗೆ... ನಮ್ಮ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡಿತು, ನಮ್ಮ ಕನಸಿನ ಸೌಧ ಕುಸಿದು ಬಿತ್ತು, ಎಷ್ಟಾದರೂ ಮರಳಿನ ಮೇಲೆ ನಿಂತು ಕಟ್ಟಿದ್ದಲ್ಲವೇ?. ಮೊದಲನೆಯದು ಅವನು ಹೇಳುತ್ತಿದ್ದ ಕವಿತೆಗಳು ಅವನದ್ದಲ್ಲ, ಬೇರೆ ಯಾರೋ ಬರೆದದ್ದು. ಅಮ್ಮನೊಡನೆ ಆಗಾಗ ನನಗೆ ಗೊತ್ತಾಗದ ಹಾಗೆ ಫೋನಿನಲ್ಲಿ ಮಾತನಾಡುತ್ತಿರುತ್ತಾನೆ, ಈಗ ಅವನದ್ದು ಒಂದೇ ಹಠ, ಮಗುವಾಗಲಿ, ನಿನ್ನ ಪ್ಲಾನಿಂಗ್ ಸಾಕು ಎನ್ನುತ್ತಿದ್ದಾನೆ, ಅವನಮ್ಮನದ್ದೇ ಪಿತೂರಿ ಇರಬೇಕು. ಆಫೀಸಿನಲ್ಲಿ ಮ್ಯಾನೇಜರ್ ಪೋಸ್ಟು ಸಿಕ್ಕಿದ ಮೇಲೆಯೇ ನಾನು ಬಸುರಿಯಾಗುವುದು, ಅದಕ್ಕಾಗಿ ಎರಡು-ಮೂರು ವರ್ಷ ಕಾಯಬೇಕು ಎಂದು ಮೊದಲೇ ಹೇಳಿದ್ದೆ, ನನಗೆ ನನ್ನ ಕೆರಿಯರ್ ಇಂಪಾರ್ಟೆಂಟ್. ಈಗೀಗ ಅವನು ಸಿಟ್ಟು ಬೇರೆ ಮಾಡಿಕೊಳ್ಳುತ್ತಿದ್ದಾನೆ” ಎಂದೆ, “ಅಯ್ಯೋ ಇಷ್ಟೇನಾ? ಈಗ ಬೇಡದಿದ್ದರೆ ಇನ್ನೊಂದು ಆರು ತಿಂಗಳು ಬಿಟ್ಟು ಬಸುರಿಯಾಗು, ಹೆಚ್ಚು ತಡವಾದರೆ ಮಕ್ಕಳಾಗುವುದು ಕಷ್ಟ, ಮ್ಯಾನೇಜರ್ ಆದ ಮೇಲೆ ಜವಾಬ್ದಾರಿ ಜಾಸ್ತಿ ಇರುತ್ತದೆ, ಅದಕ್ಕೆ ಮೊದಲೇ ಮಕ್ಕಳಾದರೆ ಒಳ್ಳೆಯದು” ಎಂದಳು, ಅವಳನ್ನೇ ವಿಚಿತ್ರವಾಗಿ ನೋಡಿದೆ, ನನ್ನಜ್ಜಿಯ ಪಾಠ ಹೇಳುತ್ತಿದ್ದಾಳೆ ಅನಿಸಿತು, “ಮನೆಯಲ್ಲಿ ಒಂದಲ್ಲ, ಒಂದು ವಿಷಯಕ್ಕೆ ದಿನ ನಿತ್ಯ ಜಗಳ, ಲಾಯರನ್ನು ನೋಡಿದ್ದೇನೆ, ಡೈವೊರ್ಸಿಗೆ ಪೇಪರ್ ರೆಡಿಯಾಗಿದೆ, ನನ್ನ ಲಾಯರ್ ಈ ವಾರ ಪೇಪರನ್ನು ಕೋರ್ಟಿಗೆ ಸಬಮಿಟ್ ಮಾಡುತ್ತಿದ್ದಾರೆ”, “ರಿಷಿಕಾ, ಈಗ ನೀನು ಇವನನ್ನು ಡೈವರ್ಸ್ ಮಾಡಿ ಮತ್ತೊಬ್ಬನನ್ನು ಮದುವೆಯಾದರೂ ಮತ್ತೊಬ್ಬನಲ್ಲಿರುವ ಮತ್ತೇನೋ ಗುಣ ನಿನಗೆ ಇಷ್ಟವಾಗದಿರಬಹುದು”, “ಬೇಡ, ಸರಿಯಾದವನು ಸಿಕ್ಕಿದರೆ ಇನ್ನೊಂದು ಮದುವೆಯಾಗುತ್ತೇನೆ, ಇಲ್ಲದಿದ್ದರೆ ಇಲ್ಲ, ಬಲವಂತದ ಹೊರೆಯನ್ನಂತೂ ನಾನು ಹೊರುವುದಿಲ್ಲ” ಎನ್ನುತ್ತಾ ಬಸ್ಸಿನಲ್ಲಿ ಕೂತೆ.

ಅಂದು ಚೈನಾದಲ್ಲಿ ಕೊನೆಯ ದಿನ, ಟೂರಿನವರು ರಾತ್ರಿ ಕ್ಲಬ್ಬಿನಲ್ಲಿ ಪಾರ್ಟಿ ಇಟ್ಟುಕೊಂಡಿದ್ದರು. ಮೂಲೆ ಟೇಬಲನ್ನು ಆರಿಸಿಕೊಂಡು ಗ್ಲಾಸು ಹಿಡಿದು ಕೂತೆ, ಶೆರ್ಲಿ ನನ್ನ ಹತ್ತಿರ ಬಂದು ಕೂತಳು, ಏನೋ ಹೇಳಲು ಬಾಯಿ ತೆಗೆದವಳು ತಲೆಯಲ್ಲಾಡಿಸಿ ಉಗುಳು ನುಂಗಿ ಸುಮ್ಮನಾದಳು “ಶೆರ್ಲಿ ಏನೋ ಹೇಳಬೇಕಂತ ಇದ್ದಿಯಲ್ಲೇ”, “ರಿಷಿಕಾ, ಸಾಕಾಯಿತು ನನಗಿಲ್ಲಿ, ನೀವು ಭಾರತೀಯರು ಎಷ್ಟೋಂದು ಖುಷಿಯಾಗಿ ಇರುತ್ತೀರಿ, ಎಲ್ಲರೂ ಮದುವೆಯಾಗುತ್ತಾರೆ, ಕಷ್ಟ, ಸುಖವನ್ನು ಹಂಚಿ ಉಣ್ಣುತ್ತಾರೆ, ಮುದುಕರಾದ ಮೇಲೂ ಎಷ್ಟೊಂದು ಸಂತೋಷವಾಗಿರುತ್ತಾರೆ, ನಾನೂ ಭಾರತಕ್ಕೆ ಬರುತ್ತೇನೆ, ನನಗೊಂದು ಗಂಡನ್ನು ಹುಡುಕಿ ಕೊಡು, ಮದುವೆಯಾಗಿ ಅಲ್ಲೇ ಸೆಟ್ಲ್ ಆಗುತ್ತೇನೆ”, ಗಾಬರಿಯಾಯಿತು “ಅಲ್ವೇ ನಿನಗೊತ್ತಿಲ್ಲ ಭಾರತೀಯ ಗಂಡಸರು ಶುದ್ಧ ಅಮ್ಮನ ಬಾಲಗಳು, ಸೋಂಬೇರಿಗಳು, ಮನೆ, ಮಕ್ಕಳ ಜವಾಬ್ದಾರಿ ಎಲ್ಲಾ ಹೆಂಗಸರದ್ದೇ” ಎಂದೆ….. ಕ್ಲಬ್ಬಿನಲ್ಲಿ ಹಾಡಿನ ಶಬ್ಧ ಜಾಸ್ತಿಯಾಯಿತು, ಸರಿಯಾಗಿ ಮಾತು ಕೇಳಿಸದಾಯಿತು, ಕಡೆಯಲ್ಲಿ ಅವಳು ಹೇಳಿದ್ದು ಕೇಳಿಸಿತು “……..ನೊ ಪ್ರಾಬ್ಲಂ, ಸ್ವಲ್ಪ ಅಡ್ಜೆಸ್ಟ್ ಮಾಡಿಕೊಂಡರಾಯಿತು” ಎನ್ನುತ್ತಾ ತನ್ನ ಪುಟ್ಟ ಕಣ್ಣನ್ನು ಹಿಗ್ಗಿಸಿ ನೀನು ತಪ್ಪು ತಿಳಿದುಕೊಳ್ಳುವುದಿಲ್ಲ ಎಂದರೆ ಒಂದು ಮಾತು ಎಂದವಳು ಮೆಲ್ಲಗೆ “ನಿನ್ನ ಡೈವೊರ್ಸ್ ಆದ ಮೇಲೆ ನಿನ್ನ ಗಂಡನನ್ನೇ ಮದುವೆಯಾಗುತ್ತೇನೆ, ನನ್ನ ಫೋಟೋ ಅವನಿಗೆ ತೋರಿಸು, ಕೇಳಿ ನೋಡು, ನಾನು ವರ್ಜಿನ್ ಅಲ್ಲದಿದ್ದರೇನಾಯಿತು, ನಿನ್ನ ಗಂಡನೂ ಅಲ್ಲ ತಾನೇ” ಅವಳು ಮೆಲ್ಲನೆ ಆಡಿದ್ದರೂ ನನಗೆ ಸ್ವಷ್ಟವಾಗಿ ಕೇಳಿಸಿತು, ತಟ್ಟನೆ ಹೊರಗೋಡಿ ಬಂದೆ.

ಮರುದಿನ ಏರ್ಪೋರ್ಟಿಗೆ ಶೆರ್ಲಿ ಕಳುಹಿಸಿಕೊಡಲು ಬಂದಿದ್ದಳು, ಅವಳಿಂದ ತಪ್ಪಿಸಿಕೊಂಡು ಓಡಾಡಿದೆ, ವಾಟ್ಸಅಪ್ಪಿನಲ್ಲಿ ಅವಳ ಫೋಟೋ ಕಳಿಸಿದಳು, ಅಲ್ಲದೆ ಮತ್ತೇನೊ ಪ್ರವರ ಬರೆದಿದ್ದಳು. ಇಲ್ಲಿ ಅವಳದ್ದೂ ತಪ್ಪಿಲ್ಲ, ಪಾಪದ ಹುಡುಗಿ ಮದುವೆ, ಮಕ್ಕಳ ಕನಸನ್ನು ಕಾಣುತ್ತಿದ್ದಾಳೆ, ಒಂದು ಸ್ಮೈಲಿ ಎಮೋಜಿಯನ್ನು ಕಳುಹಿಸಿಕೊಟ್ಟೆ. ಫ್ಲೈಟಿನಲ್ಲಿ ಕೂತವಳಿಗೆ ಇನ್ನಿಲ್ಲದ ತಳಮಳ, ಆ ಕೆಂಪು ದೇಶದವಳು ಹೇಳಿದ ಮಾತುಗಳು ಮತ್ತೆ, ಮತ್ತೆ ನೆನಪಾಗುತ್ತಿದ್ದವು. ಫ್ಲೈಟು ಬಂಗಾಳ ಕೊಲ್ಲಿಯ ಮೇಲೆ ಹಾರುತ್ತಿತ್ತು, ಇನ್ನೊಂದೆರಡು ಗಂಟೆಗಳಲ್ಲಿ ಬೆಂಗಳೂರು ತಲುಪುವುದರಲ್ಲಿತ್ತು, ಮನಸ್ಸು ನನ್ನನ್ನು ಕೇಳದೆ ಒಂದು ನಿರ್ಧಾರ ತೆಗೆದುಕೊಂಡಿತು, ನೋಡಿದರೆ ಇಂಟರನೆಟ್ ಕನೆಕ್ಶನ್ ಸಹ ಇತ್ತು, ಕೂಡಲೇ ನಮ್ಮ ಲಾಯರಗೆ ಮೆಸೇಜ್ ಮಾಡಿದೆ “ಕೋರ್ಟಿಗೆ ಪೇಪರ್ ಸಬ್ ಮಿಟ್ ಮಾಡುವುದು ಬೇಡ”, ರಿತಿಕನಿಗೆ “ನಾನು ಬರುತ್ತಿದ್ದೇನೆ, ಬಿಸಿ ಬಿಸಿ ಕಾಫಿ ಮಾಡಿಕೊಡುತ್ತಿ ತಾನೇ?” ಎಂದು ಮೆಸೇಜ್ ಕೊಟ್ಟೆ, ರಿತಿಕ್ಕನ ಉತ್ತರ ಕೂಡಲೆ ಬಂತು ..ಕಾಫಿ, ಬರ್ಗರ್ ಮತ್ತು ಲೌ ಚಿನ್ನೆಯ ಎಮೋಜಿ.. ನಾನೂ ಲೌ ಚಿನ್ನೆಯ ಎಮೋಜಿ ಕಳುಹಿಸಿದೆ. ತೊಳಲಾಡುತ್ತಿದ್ದ ಮನಸ್ಸಿಗೆ ನೆಮ್ಮದಿ ಸಿಗುತ್ತಿದ್ದಂತೆ ಕಣ್ಣಿಗೆ ನಿದ್ರೆ ಹತ್ತಿತು.