Click here to Download MyLang App

ಏಕಾಂತನ ಏಕಾಂತ ಸುಖ - ಬರೆದವರು : ವಿ ಕೆ ಎಸ್ ಶೆಟ್ಟಿ | ಸಾಮಾಜಿಕಬೆಂಗಳೂರಿನ ಖಾಸಗಿ ಸಂಸ್ಥೆಯೊಂದರ ಉನ್ನತ ಹುದ್ದೆಯಲ್ಲಿ ಏಕಾಂತ ಕೆಲಸ ಮಾಡುತ್ತಿದ್ದರೆ, ಅವನ ಹೆಂಡತಿ ಸಹನಾ ಉತ್ತಮ ಗ್ರಹಿಣಿಯಾಗಿ ಮನೆಯನ್ನು ನಿರ್ವಹಿಸುತ್ತಿದ್ದಾಳೆ. ಸಹನಾ ಒಳ್ಳೆಯ ವಿದ್ಯಾಭ್ಯಾಸ ಹೊಂದಿದ್ದರೂ, ಮಗನ ವಿದ್ಯಾಭ್ಯಾಸಕ್ಕೆ ತೊಂದರೆ ಆಗಬಾರದೆಂಬ ಒಂದೇ ಉದ್ದೇಶದಿOದ ಇರುವ ಉದ್ಯೋಗವನ್ನು ತೊರೆದಿದ್ದಳು. ಮಗ ರೋಹಿತನಿಗೆ ಚಿಕ್ಕಂದಿನಿಂದಲೂ ಓದಿನಲ್ಲಿ ಉತ್ತಮ ಮಾರ್ಗದರ್ಶನ ನೀಡುತ್ತಿದ್ದಳು ಸಹನಾ. ಮಗ ರೋಹಿತ್ ಪಿಯುಸಿ ಮತ್ತು ನೀಟ್ ನಲ್ಲಿ ಒಳ್ಳೆಯ ಅಂಕ ಪಡೆದು, ತಮ್ಮ ಊರಿನ ಸಮೀಪದ ಮಣಿಪಾಲದಲ್ಲಿ ಈಗ ಮೆಡಿಕಲ್ ವಿದ್ಯಾಭ್ಯಾಸ ಮಾಡುತ್ತಿದ್ದಾನೆ. ಹಾಸ್ಟೆಲ್ ನಲ್ಲಿ ಇರುವುದು ಬೇಡವೆಂದು , ಉಡುಪಿಯ ಹತ್ತಿರ ತಾವೇ ಕಟ್ಟಿಸಿದ ಒಂದು ಚಿಕ್ಕ ಮನೆಯಲ್ಲಿ ಒಬ್ಬಂಟಿಯಾಗಿ ವಾಸ ಮಾಡಿಕೊಂಡು ಕಾಲೇಜಿಗೆ ಹೋಗುತ್ತಿದ್ದಾನೆ. ಮಗ ಮೆಡಿಕಲ್ ಕಾಲೇಜಿಗೆ ಸೇರಿದ ಮೇಲೆ ಸಹನಾಳಿಗೆ ಮನೆಯಲ್ಲಿ ಒಬ್ಬಂಟಿಯಾಗಿರುವುದು ತುಂಬಾ ಕಷ್ಟವಾಗುತ್ತಿತ್ತು. ಇದನ್ನು ಯಾವಾಗಲೂ ತನ್ನ ಪತಿಯಲ್ಲಿ ವ್ಯಕ್ತಪಡಿಸುತ್ತಿದ್ದಳು. ಪತಿ ಏಕಾಂತ ಬೆಳಿಗ್ಗೆ ಆಫೀಸಿಗೆ ಹೋದರೆ ವಾಪಾಸು ಬರುವುದು ಸಂಜೆಯೇ.

ಆ ದಿನವಂತೂ ಏಕಾಂತ ಆಫೀಸಿನಿಂದ ಮನೆಗೆ ಬರುವಾಗ ರಾತ್ರಿ ಸುಮಾರು ಒಂಬತ್ತು ಗಂಟೆಯಾಗಿತ್ತು. ಪತ್ನಿ ಸಹನಾ ಪತಿಗಾಗಿ ಸೋಫಾದ ಮೇಲೆ ಕುಳಿತು ಸಹನೆಯಿಂದ ಕಾದು ಕಾದು ಸುಸ್ತಾಗಿ ಅಲ್ಲಿಯೇ ನಿದ್ದೆಗೆ ಜಾರಿದ್ದಳು . ಪತಿ ಮನೆಯ ಒಳಗೆ ಬರುತ್ತಲೇ "ಏನ್ರೀ, ನೀವು ಇತ್ತೀಚೆಗೆ ಆಫೀಸಿನಿ೦ದ ಮನೆಗೆ ಬರುವಾಗ ತುಂಬಾ ರಾತ್ರಿಯಾಗುತ್ತಿದೆ. ಬೆಳಿಗ್ಗೆ ಒಂಬತ್ತು ಗಂಟೆಗೆ ಮನೆ ಬಿಟ್ರೆ ಪ್ರತೀ ದಿನ ರಾತ್ರಿ ಏಳು ಗಂಟೆಗೆ ಮನೆಗೆ ಬರುತ್ತಿದ್ದೀರಿ. ಇವತ್ತು ರಾತ್ರಿ ಒಂಬತ್ತಾದರೂ ಮನೆಗೆ ಬಂದಿಲ್ಲ. ನನಗೆ ಕಾದು ಕಾದು ಸಾಕಾಗಿ ಹೋಗಿದೆ" ಎಂದು ಬೇಸರದಿಂದ ಹೇಳಿದಳು.

"ನಾನೇನು ಮಾಡಲಿ ಹೇಳು. ಪ್ರಮೋಶನ್ ಆದ ಮೇಲೆ ಆಫೀಸಿನಲ್ಲಿ ವಿಪರೀತ ಕೆಲಸ. ಕಳೆದ ತಿಂಗಳ ಸೇಲ್ಸ್ ರಿಪೋರ್ಟ್ ಇವತ್ತೇ ರೆಡಿ ಮಾಡಬೇಕಿತ್ತು. ನಾಳೆ ಸೇಲ್ಸ್ ಸ್ಟಾಫ್ ಮೀಟಿಂಗ್ ಇದೆ. ಹಾಗಾಗಿ ತುಂಬಾ-ಲೇಟಾಯ್ತು. ನಮಗೆ ಅನ್ನ ಕೊಡುವ ಕಂಪೆನಿಯೆಂದ ಮೇಲೆ ನಾವು ಜವಾಬ್ದಾರಿಯಿಂದ ಕೆಲಸ ಮಾಡ ಬೇಕು ಕಣೇ " ಎಂದು ಉತ್ತರಿಸಿದ.

"ಹೌದುರೀ, ನೀವು ಗಂಡಸರು ಅವರು ಇವರು ಅಂತ ಮಾತನಾಡುತ್ತಾ ಸಮಯ ಕಳೆಯುತ್ತೀರಾ. ಮೊಬೈಲ್ ಕೈಯಲ್ಲಿ ಇದ್ದರೆ ನಿಮಗೆ ಸಮಯ ಕಳೆದಿದ್ದೇ ತಿಳಿಯೋಲ್ಲ. ನಾನೊಬ್ಬಳೇ ಇಲ್ಲಿ ಒಂಟಿಯಾಗಿ ಬೆಳಗಿನಿಂದ ರಾತ್ರಿಯವರೆಗೆ ಸಮಯ ಕಳೆಯಬೇಕು. ನಾವು ಹೆಂಗಸರು ಒಬ್ಬಂಟಿಯಾಗಿ ಕುಳಿತು ಹೇಗೆ ಸಮಯ ಕಳೆಯುತ್ತೇವೆ ಅಂತ ನೀವು ಗಂಡಸರು ದಿನಕ್ಕೆ ಒಮ್ಮೆಯಾದರೂ ಯೋಚಿಸುತ್ತೀರ?" ಎಂದು ಬೇಸರದಿಂದ ಕೇಳಿದಳು

"ನೀನು ಒಬ್ಬಂಟಿ ಯಾಕೆ? ಬೇಕಾದಷ್ಟು ಪುಸ್ತಕದ ಭಂಡಾರವೇ ಮನೆಯಲ್ಲಿ ಇದೆ. ಓದುವ ಅಭ್ಯಾಸ ಬೆಳೆಸಿಕೊಂಡಿದ್ದರೆ ನಿನಗೆ ಒ೦ಟಿತನ ಕಾಡುತ್ತಿರಲಿಲ್ಲ. ಪುಸ್ತಕವನ್ನು ಓದುವ ಹವ್ಯಾಸ ಇರುವವರು ಎಂದೂ ಒoಟಿಯಾಗಿರುವುದಿಲ್ಲ ತಿಳಿಯಿತಾ?" ಎಂದು ಏಕಾಂತ ಉಪದೇಶ ನೀಡಲು ಪ್ರಾರಂಭ ಮಾಡಿದ.

"ನಿಮಗೇನು ಹೇಳಿ, ಮನೆಗೆ ಬಂದರೆ ಇಲ್ಲಿ ಮಾತನಾಡಲಿಕ್ಕೆ ನಾನಿದ್ದೇನೆ. ಆಫೀಸಿಗೆ ಹೋದರೆ ಅಲ್ಲಿ ಮಾತನಾಡಲಿಕ್ಕೆ ನಿಮ್ಮ ಸಹೋದ್ಯೋಗಿಗಳು ಸಿಗುತ್ತಾರೆ. ನಾನು ನೀವು ಆಫೀಸಿಗೆ ಹೋದ ಮೇಲೆ ಒಬ್ಬಳೇ ಕುಳಿತುಕೊಂಡು ಸಮಯ ಕಳೆಯುವುದೇ ಒಂದು ದೊಡ್ಡ ಶಿಕ್ಷೆ ನನಗೆ. ಪುಸ್ತಕ ಹಿಡಿದು ಓದಲು ಕುಳಿತರೆ ನಿದ್ದೆ ಬರುತ್ತದೆ. ಉಪದೇಶ ಮಾಡುವುದು ಸುಲಭ, ಆಚರಿಸುವುದು ಕಷ್ಟ" ಎಂದು ತನ್ನ ಅಳಲನ್ನು ತೋಡಿಕೊಂಡಳು ಸಹನಾ.

"ಅದಕ್ಕೆ ಯಾಕೆ ಅಷ್ಟೊಂದು ತಲೆ ಬಿಸಿ ಮಾಡಿಕೊಳ್ಳುತ್ತೀಯಾ? ಮನೆಯಲ್ಲಿ ಟಿವಿ ಸ್ವಿಚ್ ಆನ್ ಮಾಡಿದರೆ ಹತ್ತಾರು ಚಾನೆಲ್ ಗಳಲ್ಲಿ ನೂರಾರು ಧಾರಾವಾಹಿಗಳು ಬರುತ್ತದೆ. ಪ್ರಪಂಚದ ಆಗು ಹೋಗುಗಳನ್ನು ತಿಳಿದುಕೊಳ್ಳಲು ಬೇಕಾದಷ್ಟು ಸುದ್ಧಿ ಚಾನೆಲ್ ಗಳು ಕೂಡ ಇದೆ. ಅವುಗಳನ್ನು ನೋಡುತ್ತಾ ಸಮಯ ಕಳೆಯ ಬಹುದಲ್ಲ." ಎಂದು ಇನ್ನೊಂದು ಸಲಹೆ ಮಾಡಿದ ಏಕಾಂತ.

"ಈಗ ಬರುತ್ತಿರುವ ಟಿವಿ ಸೀರಿಯಲ್ ಗಳನ್ನು ನೋಡಿದರೆ ನನಗೆ ತಲೆ ಚಿಟ್ಟು ಹಿಡಿದ೦ತೆ ಆಗುತ್ತದೆ. ಅಲ್ಲಿ ಬರುವುದು ಮತ್ತು ತೋರಿಸುತ್ತಿರುವುದು ಎಲ್ಲಾ ಮನಸ್ಸು ಮತ್ತು ಮನೆ ಎರಡನ್ನೂ ಹಾಳು ಮಾಡುವ ಕಥೆಗಳೇ. ಕೆಲವೊಂದು ಸೀರಿಯಲ್ ನೋಡಿದರೆ ಗಂಡಸರ ಮೇಲೆ ನಮಗೆ ಎಲ್ಲಿಲ್ಲದ ಅನುಮಾನ ಬರುವಂತೆ, ನಮ್ಮ ತಲೆ ಹಾಳು ಮಾಡುತ್ತದೆ. ಈ ಕಡೆ ಸುದ್ದಿ ಚಾನೆಲ್ ನೋಡಲು ಹೋದರೆ, ಬೆಳಗಿನಿಂದ ಸಂಜೆಯ ತನಕ ತೋರಿಸಿದ್ದನ್ನೇ ತೋರಿಸಿ, ಕೊರೆದ್ದಿದ್ದನ್ನೇ ಕೊರೆದು, ಪದೇ ಪದೇ ಹೇಳಿದ್ದನ್ನೇ ಹೇಳಿ ಕಿವಿ ತೂತು ಆಗುವ ಹಾಗೆ ಮಾಡುತ್ತಾರೆ. ಅದಕ್ಕೆ ಟಿವಿಯನ್ನು ಆನ್ ಮಾಡಲಿಕ್ಕೂ ಕೂಡ ಮನಸ್ಸು ಬರುವುದಿಲ್ಲ. ನನ್ನ ಹಾಗೆ ನೀವೂ ಕೂಡಾ ಒಂದು ದಿನ ಮನೆಯಲ್ಲಿ ಒಬ್ಬರೇ ಕುಳಿತು ನೋಡಬೇಕು. ಆಗ ನಮ್ಮಂತಹ ಒಬ್ಬಂಟಿ ಹೆಂಗಸರ ಕಷ್ಟ ಏನೂಂತ ತಿಳಿಯುತ್ತದೆ" ಎಂದಳು

"ನೋಡೇ, ನನಗೆ ಒಬ್ಬಂಟಿಯಾಗಿ ಕಳೆದ ಅಭ್ಯಾಸ ಚೆನ್ನಾಗಿದೆ. ಒಂದು ದಿನವಲ್ಲ, ಒಂದು ವಾರ ಬೇಕಾದರೆ ಒಬ್ಬಂಟಿಯಾಗಿ ಕಾಲ ಕಳೆಯ ಬಲ್ಲೆ. ನನ್ನ ಹೆಸರೇ ಏಕಾಂತ, ಆದ್ದರಿಂದಲೋ ಏನೋ ನನಗೆ ಏಕಾಂತ ವಾಸ ಅಂದರೆ ಇಷ್ಟ, ತಿಳಿಯಿತಾ?" ಎಂದು ಜಂಬದಿಂದಲೇ ಹೆಂಡತಿಗೆ ಹೇಳಿದ.

" ಹೌದಾ? ಹಾಗಿದ್ದರೆ ನಾನು ಇಲ್ಲದಿದ್ದರೆ, ನೀವೊಬ್ಬರೇ ಎರಡು ಮೂರು ದಿನಗಳು ಖುಷಿ ಖುಷಿಯಾಗಿ ಈ ಮನೆಯಲ್ಲಿ ಇರ ಬಲ್ಲೀರಾ?" ಎಂದು ಪ್ರಶ್ನಿಸಿದಳು.

" ಮೂರು ದಿನಗಳು ಯಾಕೆ ? ಒಂದು ವಾರ ಬೇಕಾದರೂ ಏಕಾಂತವಾಗಿ ಕಳೆಯ ಬಲ್ಲೆ. ನನಗೆ ಚಿಕ್ಕವನಿoದಲೂ ಪುಸ್ತಕ ಓದುವ ಅಭ್ಯಾಸ ಬೆಳೆಸಿಕೊಂಡು ಬಂದಿದ್ದೇನೆ. ಹಾಗಾಗಿ ನಾನು ಒಂಟಿಯಾಗಿ ಖುಷಿ ಖುಷಿಯಾಗಿ ಇರಬಲ್ಲೆ. ಇದ್ದು ತೋರಿಸ ಬಲ್ಲೆ" ಎಂದು ಹೇಳಿದ.

"ಹಾಗಿದ್ದರೆ ಸಮಯ ಬಂದಾಗ ನೋಡೋಣವಂತೆ. ಮುಂದಿನ ವಾರ ನಮ್ಮ ರೋಹಿತನಿಗೆ ಪರೀಕ್ಷೆ ಇದೆಯಂತೆ. ನಾನು ಹೋಗಿ ಒಂದು ವಾರ ಅವನ ಜೊತೆಗೆ ಇದ್ದು ಬರುತ್ತೇನೆ. ನೀವು ಬರ್ತೀರಾ?. ಇಬ್ಬರೂ ಹೋಗಿ ಒಂದು ವಾರ ನಮ್ಮ ಮನೆಯಲ್ಲಿ ಇದ್ದು ತೋಟವನ್ನೆಲ್ಲ ನೋಡಿ ಕೊಂಡು ಬರೋಣ"

"ಒಂದು ವಾರಾನ? ಸಾಧ್ಯವೇ ಇಲ್ಲದ ವಿಷಯ. ಅಷ್ಟು ದಿನ ಕಂಪೆನಿಯವರು ನನಗೆ ರಜೆ ಎಲ್ಲಿ ಕೊಡುತ್ತಾರೆ? ರೋಹಿತ್ ನಿನ್ನನ್ನು ಬರಲೇ ಬೇಕೆಂದು ಹೇಳಿದ್ದಾನ? " ಎಂದು ಕೇಳಿದ ಏಕಾಂತ.

" ಪರೀಕ್ಷೆ ಸಮಯದಲ್ಲಿ ಮನೆಯಲ್ಲಿ ಅಡಿಗೆ ಮಾಡಿಕೊಳ್ಳಲು ಆಗುತ್ತಿಲ್ಲವಂತೆ. ಹೋಟೆಲ್ಲಿನ ಊಟವೂ ಸರಿಯಾಗಲ್ವಂತೆ ಮತ್ತು ಸಮಯವೂ ವೇಸ್ಟ್ ಆಗುತ್ತದಂತೆ" ಎಂದು ಹೇಳಿದಳು ಸಹನಾ.

" ನನಗೆ ಬರಲು ಕಷ್ಟವಾಗುತ್ತದೆ. ನೀನು ಹೋಗಿ ಒಂದು ವಾರ ಇದ್ದು ಬಾ" ಎಂದು ಮನಸ್ಸಿಲ್ಲದ ಮನಸ್ಸಿನಿಂದ ಸಮ್ಮತಿಸಿದ.

"ನಿಮಗೆ ಎಲ್ಲಿ ಸಮಯ ಇದೆ. ಇಡೀ ಕಂಪೆನಿಯನ್ನೇ ನಿಮ್ಮ ತಲೆಯ ಮೇಲೆ ಹೊತ್ತುಕೊಂಡಿದ್ದೀರಾ. ನಾನು ಏನು ಕೇಳಿದರೂ, ಎಲ್ಲಿಗೆ ಹೋಗೋಣ ವೆಂದರೂ ನಿಮಗೆ ರಜೆಯೂ ಇಲ್ಲ.... ಸಮಯವೂ ಇಲ್ಲ.... ನಾನು ಊರಿಗೆ ಹೋದಾಗ, ನೀವು ಒಂದು ವಾರ ಮನೆಯಲ್ಲಿ ಒಳ್ಳೊಳ್ಳೆಯ ಪುಸ್ತಕಗಳನ್ನು ಓದುತ್ತಾ ಖುಷಿ ಖುಷಿಯಾಗಿ ಕಾಲ ಕಳೆಯಿರಿ " ಎಂದು ಸಹನಾ ಹೇಳಿದಾಗ "ನನ್ನ ಬಗ್ಗೆ ನಿನಗ್ಯಾಕೆ ಅಷ್ಟು ಚಿಂತೆ? ನಾನು ಹೇಗೋ ಜೀವನ ಮಾಡುತ್ತೇನೆ ಬಿಡು" ಎಂದುತ್ತರಿಸಿದ.

ಅಂತೂ ಆ ದಿನ ಬಂದೇ ಬಿಟ್ಟಿತು. ಶನಿವಾರ ಪತ್ನಿಯನ್ನು ಬಸ್ಸು ಹತ್ತಿಸಿ ಏಕಾಂತ ಮನೆಗೆ ಬರುವಾಗ ರಾತ್ರಿ ಎಂಟು ಗಂಟೆಯಾಗಿತ್ತು. ಮನೆಯಲ್ಲಿ ಒಬ್ಬಂಟಿಯಾಗಿದ್ದರೂ ಖುಷಿ ಖುಷಿಯಾಗಿ ಹೇಗೆ ಇರಬಹುದು ಎಂಬುದನ್ನು ಸಾಬೀತು ಮಾಡಿ ತೋರಿಸಬೇಕೆಂದು ನಿರ್ಧರಿಸಿ ಮನೆಯತ್ತ ಹೊರಟ. ಆನ್ ಲೈನ್ ವೇದಿಕೆಯೊಂದರಲ್ಲಿ, ನಿಮ್ಮ ಏಕಾಂತ ವಾಸ ನಿಮಗೆ ಇಷ್ಟವೇ? ನಿಮ್ಮ ಏಕಾಂತ ವಾಸದ ಅನುಭವ ಇದ್ದರೆ ಆ ಬಗ್ಗೆ ಒಂದು ಕತೆ ಬರವನಮಲ್ಲಿ ಹಂಚಿಕೊಳ್ಳಿ - ಎಂದು ಹಾಕಿದ್ದರು ಸಂಪಾದಕರು. ತನ್ನ ಮುಂದಿನ ಒಂದು ವಾರದ ಒಂಟಿ ಜೀವನದ ಅನುಭವಗಳ ಬಗ್ಗೆ ಸ್ವಾರಸ್ಯಕರವಾದ ಕಥೆಯೊಂದನ್ನು ಓದುಗರಿಗಾಗಿ ಬರೆಯ ಬೇಕೆಂದು ನಿರ್ಧಾರ ಮಾಡಿದ, ಏಕಾಂತ.

ಮನೆಯ ಬೀಗ ತೆಗೆದು ಒಳಗೆ ನೋಡಿದರೆ ಅಲ್ಲಿ ಸಂಪೂರ್ಣ ಕಗ್ಗತ್ತಲಾಗಿತ್ತು. ಮನಸ್ಸಿನೊಳಗೆ ಏನೋ ಒಂದು ತರಹದ ಅವ್ಯಕ್ತ ಭಯ ಆವರಿಸಿತು. ಈ ಮನೆಗೆ ಬಂದು ಎರಡು ವರುಷಗಳಾದರೂ ಈ ರೀತಿಯ ಕಗ್ಗತ್ತಲ್ಲನ್ನು ಎಂದೂ ನೋಡಿದವನಲ್ಲ ಏಕಾಂತ. ಹೌದು ಇಂದು ಮೊದಲ ಬಾರಿಗೆ ಈ ಮನೆಯಲ್ಲಿ ಒಂಟಿ ಜೀವನದ ಅನುಭವ. ಮನಸ್ಸಿನಲ್ಲಿ ಏನೋ ತಳಮಳ ಪ್ರಾರಂಭವಾಯಿತು ಏಕಾಂತನಿಗೆ. ಸಾಯಂಕಾಲ ಮನೆಯಿಂದ ಹೊರಗೆ ಹೋಗುವಾಗ ಲೈಟಿನ ಸ್ವಿಚ್ ಆನ್ ಮಾಡದೇ ಹೋಗಿರುವುದರಿಂದಲೇ ಈ ಕಗ್ಗತ್ತಲೆಯ ಅನುಭವ. ಒಳಗೆ ನಿಧಾನ ಹೆಜ್ಜೆಯನ್ನಿಟ್ಟು ಲೈಟಿನ ಸ್ವಿಚ್ಚಿನತ್ತ ಕೈ ತೆಗೆದುಕೊಂಡು ಹೋದ. ಅಷ್ಟರಲ್ಲಿ ಏನೋ ದಡಬಡ ಓಡಿಕೊಂಡು ಹೋದ ಶಬ್ಧ ಕೇಳಿಸಿತು. ಮೈ ಜುಂ ಎಂದಿತು. ಪಕ್ಕದ ಮನೆಯ ಬೆಕ್ಕು ಅಥವಾ ಇಲಿ ಇರ ಬಹುದೆಂದು ಮನಸ್ಸಿನಲ್ಲಿಯೇ ಧೈರ್ಯ ತಂದುಕೊಂಡು ಸ್ವಿಚ್ ಆನ್ ಮಾಡಿದರೆ ಲೈಟೇ ಹತ್ತಿಲ್ಲ. ಆಗ ತಿಳಿಯಿತು ಇಡೀ ವಠಾರದಲ್ಲಿ ಕರೆಂಟೇ ಇಲ್ಲವೆಂದು. ಮೇಲಿನ ಮನೆಯಲ್ಲಿ ಯುಪಿಎಸ್ ಇದ್ದಿದ್ದರಿಂದ ಅಲ್ಲಿ ಕೆಲವು ಲೈಟುಗಳು ಉರಿಯುತ್ತಿದ್ದವು.

ಕೊನೆಗೆ ಮೊಬೈಲ್ ಬೆಳಕಿನಲ್ಲಿ ಇಡೀ ಅಡುಗೆ ಮನೆಯಲ್ಲ ಹುಡುಕಿದ. ಬೆಂಕಿ ಪೆಟ್ಟಿಗೆಯೇನೋ ಕೈಗೆ ಸಿಕ್ಕಿತು. ಆದರೆ ಕ್ಯಾಂಡಲ್ ಕೈಗೆ ಸಿಗಬೇಕಲ್ಲ. ಹುಡುಕಿ ಹುಡುಕಿ ಸುಸ್ತಾದ. ಟೆನ್ಶನ್ ಆಗಿ ಹೆಂಡತಿಗೆ ಫೋನ್ ಮಾಡಬೇಕೆಂದು ಮೊಬೈಲ್ ಕೈಗೆ ಎತ್ತಿಕೊಂಡವನಿಗೆ ಮಧ್ಯೆ ತಡೆಯಿತು ಸ್ವಾಭಿಮಾನ. ತನ್ನ ಒಂಟಿತನದ ಈ ಬವಣೆ ಅವಳಲ್ಲಿ ಯಾಕೆ ಹೇಳಿ ಕೊಳ್ಳಬೇಕು? ಯಾವುದನ್ನೂ ಸರಿಯಾದ ಇಡುವ ಅಭ್ಯಾಸ ಇಲ್ಲದ ಹೆಂಡತಿಗಿಷ್ಟು ಮನಸ್ಸಿನಲ್ಲಿಯೇ ಬೈದುಕೊಳ್ಳುತ್ತಾ ಮತ್ತೆ ಹುಡುಕ ತೊಡಗಿದ. ಅರ್ಧ ಗಂಟೆ ಹುಡುಕಿದ ನಂತರ ಕ್ಯಾಂಡಲ್ ಸಿಕ್ಕಿತು. ಕ್ಯಾಂಡಲ್ ಹಚ್ಚ ಬೇಕೆಂದು ಬೆಂಕಿ ಕಡ್ಡಿ ಗೀರಿ ಕ್ಯಾಂಡಲ್ ಹತ್ತಿರ ಹಿಡಿದಾಗ ಇಡೀ ಕೋಣೆಯೇ ಜಗ್ಗೆಂದು ಬೆಳಗಿದಾಗ ಏಕಾಂತ ಒಮ್ಮೆ ಬೆಚ್ಚಿ ಬಿದ್ದ. ಮೇಲೆ ನೋಡುತ್ತಾನೆ ಕರೆಂಟು ದೀಪ ಹೊತ್ತಿ ಉರಿಯುತ್ತಿದೆ. ಬೆಸ್ಕಾಂ ಕಂಪೆನಿಗೆ ಮನಸ್ಸಿನಲ್ಲಿಯೇ ಇಷ್ಟು ಶಪಿಸಿದ. ಇಷ್ಟು ಹೊತ್ತು ಎಲ್ಲಿ ಸತ್ತಿದೆ ಈ ಕರೆಂಟು ಎಂದು.

ಅಡಿಗೆ ಮನೆಯತ್ತ ಒಮ್ಮೆ ಕಣ್ಣು ಹಾಯಿಸಿದ. ರಾತ್ರಿ ಊಟಕ್ಕೆ ಏನೂ ಮಾಡಿ ಇಟ್ಟಿಲ್ಲ ಸಹನಾ. ಇವತ್ತು ಅವಳಿಗೆ ಏಕಾದಶಿ ಉಪವಾಸ. ಕೇವಲ ಫಲಹಾರ ಮಾತ್ರ. ಏಕಾಂತನಿಗೆ ಅದೆಲ್ಲ ಇಷ್ಟವಿಲ್ಲ. ಪ್ರತಿ ದಿನ ರಾತ್ರಿ, ಊರಿನಿಂದ ತಂದ ಕುಚ್ಚಲಕ್ಕಿ ಗಂಜಿ ಊಟ ಮಾಡುವ ಅಭ್ಯಾಸ. ಸಹನಾ ಯಾವಾಗಲೂ ಹೇಳುತ್ತಿದ್ದಳು ' ನಿಮಗೆ ಒಂದು ಗಂಜಿ ಮಾಡಲಿಕ್ಕೂ ಬರುವುದಿಲ್ಲ. ನಾನಿಲ್ಲವೆಂದರೆ ಹೋಟೆಲ್ಲಿಗೆ ದುಡ್ಡು ಹಾಕುತ್ತೀರಾ.... ಆಮೇಲೆ ಆರೋಗ್ಯ ಹಾಳು ಮಾಡಿಕೊಳ್ಳುತ್ತೀರಾ". ಈ ಬಾರಿಯಾದರೂ ತಾನೇ ಕುಚ್ಚಲಕ್ಕಿ ಗಂಜಿ ಮಾಡಿ ಅಪ್ಪಿ ಮಾವಿನ ಮಿಡಿ ಉಪ್ಪಿನ ಕಾಯಿ ಹಾಕಿಕೊಂಡು ಮನೆಯಲ್ಲೇ ಊಟ ಮಾಡಬೇಕು ಎಂದು ನಿರ್ಧಾರ ಮಾಡಿದ ಏಕಾಂತ.

ಕುಕ್ಕರ್ ನಲ್ಲಿ ನೀರು ತುಂಬಿಸಿ ಗ್ಯಾಸ್ ಮೇಲೆ ಬಿಸಿ ಮಾಡಲು ಇಟ್ಟ. ಒಂದು ಲೋಟ ಕುಚ್ಚಲು ಅಕ್ಕಿಯನ್ನು ಮೂರು ಬಾರಿ ಚೆನ್ನಾಗಿ ತೊಳೆದ. ಕುಕ್ಕರ್ ಮುಚ್ಚಳವನ್ನು ಭದ್ರವಾಗಿ ಮುಚ್ಚಿದ. ಕುಕ್ಕರಿನಲ್ಲಿ ಬಿಸಿಯಾದ ಸ್ಟೀಮ್ ಬಂದ ಮೇಲೆ ವೆಯಟರ್ ಇಡಬೇಕು. ಸ್ವಲ್ಪ ಹೊತ್ತು ಬಿಟ್ಟ ಮೇಲೆ ವಿಸಿಲ್ ಬರುತ್ತದೆ ಆಮೇಲೆ ಬೆಂಕಿಯನ್ನು ಸಿಮ್ಮಲ್ಲಿ ಇಪ್ಪತ್ತು ನಿಮಿಷ ಕಾಯಬೇಕು. ಆ ಮೇಲೆ ಅರ್ಧ ಗಂಟೆ ಬಿಟ್ಟು ಊಟ ಮಾಡಬಹುದು ಎಂದು ಸಹನಾ ನಿನ್ನೆಯಿಂದ ಹೇಳುತ್ತಾ ಇದ್ದಿದ್ದನ್ನು ಕೇಳಿಸಿಕೊಳ್ಳುತ್ತಾ ಇದ್ದ. ಇವತ್ತು ತನ್ನ ಅಡಿಗೆಯ ರುಚಿ ನೋಡಲೇ ಬೇಕು ಎಂದು ನಿರ್ಧಾರ ಮಾಡಿದ.

ಕುಕ್ಕರ್ ಮುಚ್ಚಳವನ್ನು ಭದ್ರವಾಗಿ ಮುಚ್ಚಿ ಸೋಫಾದ ಮೇಲೆ ಬಂದು ಕುಳಿತ. ಏಕಾಂತನಿಗೆ ಈಗ ಮನೆಯಲ್ಲಿ ಬಿಕೋ ಅನ್ನಿಸಲಿಕ್ಕೆ ಪ್ರಾರಂಭವಾಯಿತು. ಎಷ್ಟೋ ಸಮಯದ ನಂತರ ಇದು ಮೊದಲ ಬಾರಿಗೆ ಮನೆಯಲ್ಲಿ ಒಬ್ಬಂಟಿಯಾಗಿ ಸಮಯ ಕಳೆಯುವoತಹ ಪರಿಸ್ಥಿತಿ ಬಂದಿದೆ. ಸಂಜೆಯಿಂದ ವಾಟ್ಸಾಪ್ ಮೆಸ್ಸೇಜೇ ನೋಡಲು ಸಾಧ್ಯವಾಗಲಿಲ್ಲ. ಮೊಬೈಲ್ ಕೈಗೆ ಎತ್ತಿಕೊಂಡು ವಾಟ್ಸಾಪ್ ಚೆಕ್ ಮಾಡ್ತಾನೆ, ವಾಟ್ಸಾಪ್ ಮೆಸೇಜ್ ಓಪನ್ನೇ ಆಗುತ್ತಿಲ್ಲ. ನೋಡುತ್ತಾನೆ ಮೊಬೈಲ್ ಸಿಗ್ನಲ್ಲೇ ಇಲ್ಲ. ಮೊಬೈಲ್ ಸಿಗ್ನಲ್ ಇಲ್ಲದಿದ್ದರೆ ಏನು? ವೈಫೈ ಇದೆಯಲ್ಲ ಮನೆಯಲ್ಲಿ, ಅದರ ಮೂಲಕ ವಾಟ್ಸಾಪ್ ನೋಡಬಹುದು ಎಂದು ಮೊಬೈಲಿನಲ್ಲಿ ವೈಫೈ ಆನ್ ಮಾಡಿದ. ಇಲ್ಲ ವೈಫೈ ಕೂಡಾ ಕನೆಕ್ಟ್ ಆಗುತ್ತಿಲ್ಲ. ಮನೆಯಲ್ಲಿ ವೈಫ್ ಇಲ್ಲದಿದ್ದರೂ ವೈಫೈ ಇದ್ದರೆ ಕಾಲ ಕಳೆಯಬಹುದು, ಎಂದು ಕೊಂಡ ಏಕಾಂತನಿಗೆ ಇಲ್ಲಿಯೂ ನಿರಾಸೆ. ಕೊನೆಗೆ ಟೀವಿಯನ್ನಾದರೂ ನೋಡೋಣವೆಂದು ಟೀವಿ ಆನ್ ಮಾಡಿದ. ಟಿವಿ ಸ್ವಿಚ್ ಆನ್ ಆಯಿತು. ಯಾವುದಾದರೂ ಸುದ್ದಿ ಚಾನಲ್ ನೋಡೋಣವೆಂದು ರಿಮೋಟ್ ಹುಡುಕುತ್ತಾನೆ ಎಲ್ಲಿಯೂ ಸಿಗುತ್ತಿಲ್ಲ. ಸುಮಾರು ಹದಿನೈದು ನಿಮಿಷ ಹುಡುಕಾಡಿದರೂ ಸಿಗಲಿಲ್ಲ. ಅಷ್ಟರಲ್ಲಿ ಕುಕ್ಕರ್ ನಲ್ಲಿ ಸ್ಟೀಮ್ ಶಬ್ದ ಕೇಳಿಸಿತು. ಕುಕ್ಕರ್ ಮೇಲೆ ವೇಯ್ಟ್ ಇಟ್ಟು ಮತ್ತೆ ರಿಮೋಟ್ ಹುಡುಕಲು ಶುರು ಮಾಡಿದ. ಎಲ್ಲಿಯೂ ಸಿಗಲಿಲ್ಲ. ಸಹನೆಯನ್ನು ಕಳೆದುಕೊಂಡ ಏಕಾಂತ ಸಹನಾಳಿಗೆ ಫೋನ್ ಮಾಡಬೇಕು ಎಂದುಕೊಂಡರೂ ಸ್ವಾಭಿಮಾನ ತಡೆಯಿತು. ಕುಕ್ಕರ್ ನಲ್ಲಿ ಬೇಯಲಿಕ್ಕೆ ಇನ್ನು ಹತ್ತು ನಿಮಿಷವಾದರೂ ಬೇಕು. ಕೊನೆಗೆ ಕೈಗೆ ಸಿಕ್ಕ ಯಾವುದೋ ಪುಸ್ತಕವೊಂದನ್ನು ತೆಗೆದು ಕೊಂಡು ಓದ ತೊಡಗಿದ.

ಓದುತ್ತ ಓದುತ್ತ ಕುಳಿತಲ್ಲಿಯೇ ನಿದ್ರೆಗೆ ಜಾರಿದ ಏಕಾಂತ. ಸ್ವಲ್ಪ ಹೊತ್ತಿನಲ್ಲಿಯೇ ಕುಕ್ಕರ್ ವಿಸಿಲ್ ಜೋರಾಗಿ ಕೂಗಲು ಪ್ರಾರಂಭವಾಯಿತು. ಸೋಫಾದಿಂದ ಎದ್ದು ಓಡಿ ಹೋಗಿ ಗ್ಯಾಸ್ ಸಿಮ್ಮಲ್ಲಿ ಇಟ್ಟು ಬಂದು ಮತ್ತೆ ಪುಸ್ತಕ ಹಿಡಿದು ಕುಳಿತ . ಇಪ್ಪತ್ತು ನಿಮಿಷ ಆದ ಮೇಲೆ ಗ್ಯಾಸ್ ಆಫ್ ಮಾಡಿ ಮತ್ತೆ ಬಂದು ಕುಳಿತ ಸೋಫಾದ ಮೇಲೆ. ಮೊಬೈಲ್ ಮತ್ತೆ ಚೆಕ್ ಮಾಡಿ ನೋಡಿದ. ಅಲ್ಲಿ ಒಂದು ಮೆಸೇಜ್ ಬಂದಿತ್ತು. ನಿಮ್ಮ ಸಿಮ್ಮನ್ನು ತಕ್ಷಣ 4 ಜಿ ಗೆ ಬದಲಾಯಿಸಿಕೊಳ್ಳಿ. ಅಲ್ಲಿಯವರಿಗೆ ನಿಮ್ಮ ಮೊಬೈಲ್ ಸೇವೆಯನ್ನು ತಾತ್ಕಾಲಿಕವಾಗಿ ಕಡಿತಗೊಳಿಸಲಾಗಿದೆ. ಇದನ್ನು ನೋಡಿದ ಏಕಾಂತನಿಗೆ ಆಕಾಶವೇ ತಲೆಯ ಮೇಲೆ ಬಿದ್ದ ಅನುಭವವಾಯಿತು. ಇನ್ನು ಬೆಳಿಗ್ಗೆಯ ವರೆಗೆ ಮೊಬೈಲ್ ಇಲ್ಲದೆ ಕಾಲ ಕಲೆಯುವುದಾ ? ನಾಳೆಯ ವರೆಗೆ ಏನು ಮಾಡಲಿ ಎಂದು ಚಿಂತೆಗೆ ಒಳಗಾದ. ಮೊಬೈಲ್ ಇಲ್ಲ , ವೈಫೈ ಇಲ್ಲ ಮತ್ತು ಟೀವಿ ನೋಡಲಿಕ್ಕೆ ರಿಮೋಟ್ ಕಾಣಿಸುತ್ತಿಲ್ಲ.

ಇನ್ನು ಕೆಲಸ ಮಾಡಲು ಏನೂ ಇಲ್ಲ. ಅಡುಗೆ ಮನೆಗೆ ಹೋಗಿ ಕುಕ್ಕರಿನಲ್ಲಿದ್ದ ಗಂಜಿ ಬಡಿಸಿಕೊಂಡು ಅಪ್ಪೆ ಮಿಡಿ ಉಪ್ಪಿನಕಾಯಿ ಹಾಕಿಕೊಂಡು ಊಟ ಮಾಡಿ ನಿದ್ದೆ ಮಾಡುವುದೇ ಇವತ್ತಿನ ಗತಿ ಎಂದು ಮನಸ್ಸಿನಲ್ಲಿಯೇ ಅಂದುಕೊಂಡ. ಡೈನಿಂಗ್ ಟೇಬಲ್ ಮೇಲೆ ಊಟದ ತಟ್ಟೆ ಇಟ್ಟು ಕುಕ್ಕರ್ ಮುಚ್ಚಳ ತೆಗೆದು ನೋಡುತ್ತಾನೆ ........... ಏನು ವಿಚಿತ್ರ ......ಕುಕ್ಕರಿನಲ್ಲಿ ಗಂಜಿಯೇ ಮಾಯವಾಗಿದೆ ..... ... ಕೇವಲ ಬಿಸಿ ನೀರು ಮಾತ್ರ ಇದೆ .............. ಏನಾಯಿತು ಎಂದು ತನಗೆ ತಾನೇ ಪ್ರಶ್ನೆ ಹಾಕಿ ಕೊಂಡ ........ ಹೀಗೂ ಉಂಟೇ ? ....... ಯಾಕೆ ಹೀಗಾಯಿತು .?.......... ಕುಕ್ಕರಿನಲ್ಲಿ ತಾನೇ ಕೈಯಾರೆ ತೊಳೆದು ಹಾಕಿದ ಕುಚ್ಚಲಕ್ಕಿ ಗಂಜಿ ಚೆನ್ನಾಗಿ ಬೆoದಿರಬೇಕಿತ್ತು. ಈಗ ಎಲ್ಲಿ ಮಾಯವಾಯಿತು? ....... ತಲೆಯೆಲ್ಲಾ ಕೆಟ್ಟು ಹೋಯಿತು...... ಕೊನೆಗೆ ನೋಡುತ್ತಾನೆ ತಾನು ಮೂರು ಬಾರಿ ತೊಳೆದ ಕುಚ್ಚಲ್ಲಕ್ಕಿ, ಆ ಪಾತ್ರದಲ್ಲಿ ಹಾಗೆಯೇ ಇದೆ. ಯಾವುದೋ ಆಲೋಚನೆಯಲ್ಲಿ ಅದನ್ನು ಕುಕ್ಕರಿಗೆ ಹಾಕಲು ಮರೆತೇ ಬಿಟ್ಟಿದ್ದಾನೆ ಏಕಾಂತ.

ಈಗ ತನ್ನ ಹೆಂಡತಿಯ ಸಹನಾಳ ಸಹನೆ ಎಷ್ಟಿದೆ ಎಂದು ಅರ್ಥವಾಯಿತು. ಒಂಟಿಯಾಗಿ ಮನೆಯಲ್ಲಿ ಕುಳಿತುಕೊಳ್ಳುವುದು ಕೂಡ ಎಷ್ಟು ಕಷ್ಟವೆಂದು ತಿಳಿಯಿತು. ಮನೆಯಲ್ಲಿ ಮೊಬೈಲ್, ವೈಫೈ ಮತ್ತು ಟೀವಿ ಎಲ್ಲವೂ ಕೈ ಕೊಟ್ಟರೆ ಒಂಟಿ ಜೀವನವನ್ನು ಕಳೆಯುವುದು ಎಷ್ಟು ಕಷ್ಟವೆಂದು ಮೊದಲ ಬಾರಿಗೆ ಅನುಭವವಾಯಿತು. ಕೊನೆಗೆ ಇವತ್ತು ಏಕಾದಶಿ ಎಂದು ಮತ್ತೆ ನೆನಪು ಮಾಡಿಕೊಂಡ. ಆ ದೇವರೇ ಇವತ್ತು ಉಪವಾಸ ಮಾಡಲು ಪ್ರೇರಣೆ ಕೊಟ್ಟಿದ್ದಾನೆಂದು ತಿಳಿದು ಒಂದು ಲೋಟ ನೀರು ಕುಡಿದು ಮಲಗಿ ನಿದ್ದೆ ಹೋದ.

ಬೆಳಿಗ್ಗೆ ಎದ್ದವನೇ ತನ್ನ ಕಂಪೆನಿಯ ಮೇನೇಜರ್ ಗೆ ಲ್ಯಾಂಡ್ ಲೈನಿನಿಂದ ಫೋನ್ ಮಾಡಿದ "ತನಗೆ ಊರಿಗೆ ಹೋಗಲು ಒಂದು ವಾರದ ರಜೆ ಬೇಕು" ಎಂದು. ಯಾವತ್ತೂ ರಜೆ ಕೇಳದವನು ಇವತ್ತು ರಜೆ ಕೇಳಿದ್ದು ಮ್ಯಾನೇಜರ್ ಗೆ ಅಚ್ಚರಿಯಾಯಿತು. ಆದ್ದರಿಂದ ಕೂಡಲೇ ರಜೆ ಮಂಜೂರು ಮಾಡಿದರು. ಏಕಾಂತ ಕೂಡಲೇ ಸಹನಾಳಿಗೆ ಫೋನ್ ಮಾಡಿ " ನಾಳೆ ನಾನೂ ಊರಿಗೆ ಬರುತ್ತಿದ್ದೇನೆ ಕಣೇ , ಅಂತೂ ಇವತ್ತು ನಮ್ಮ ಮೆನೇಜರ್ ರಜಾ ಮಂಜೂರು ಮಾಡಿದರು " ಎಂದು ಹೇಳಿದರೂ , ತನ್ನ ಏಕಾಂತ ಜೀವನದ ಸುಖ ಸಂತೋಷದ ಗುಟ್ಟು ಹೆಂಡತಿಗೆ ಬಿಟ್ಟು ಕೊಡಲಿಲ್ಲ.