Click here to Download MyLang App

ಎಮ್ಮೆಯ ಬೆನ್ನೇರಿ - ಬರೆದವರು : ಕೌಂಡಿನ್ಯ ಕುಡ್ಲುತೋಟ | ಸಾಮಾಜಿಕ

ಊರಿಗೆ ಹೋಗಿಬರಬೇಕೆಂಬ ಬಹಳ ದಿನದ ಆಸೆಗೆ ಚುನಾವಣೆಗೆ ಮತದಾನ ಮಾಡಿ ಬರಬೇಕೆಂಬುದು ನೆಪವಾಗಿತ್ತು. ಕೆಲಸದ ಒತ್ತಡದಿಂದ ಕೊಂಚ ಬಿಡುವು ಮಾಡಿಕೊಂಡು, ನಾನು ನಂಬಿದ ಭೂಮಿಯ ಮೇಲಿನ ಸ್ವರ್ಗಕ್ಕೆ ಪಾದ ಬೆಳೆಸಿದ್ದೆ. ಕಳೆದ ದೀಪಾವಳಿಗೆ ಹೋದವನು, ಈ ದೀಪಾವಳಿಗೆ ಹೋಗಲಾಗದಿದ್ದರಿಂದ ಒಂದೂವರೆ ವರ್ಷ ಬರಿಯ ತಲೆಬಿಸಿಯ ಕೊಂಪೆಯಲ್ಲೇ ಜೀವನ ಓಡಿದ್ದರಿಂದ ಬಸ್ಸು ನಮ್ಮ ನಗರ ದಾಟುತ್ತಿದ್ದಂತೆಯೇ ಹೊನ್ನ ನೆನಪುಗಳು ನಿದ್ರಿಸಲೂ ಕೊಡದೆ ಜೀವವನ್ನು ಹಿತವಾಗಿ ಹಿಂಡ ತೊಡಗಿದ್ದವು. ಮಧ್ಯರಾತ್ರಿ ಅರಸೀಕೆರೆಯಲ್ಲಿ ನಿಂತ ಬಸ್ಸಿನಿಂದ ಇಳಿದಾಗ ಬೀಸಿದ ಗಾಳಿಯಲ್ಲಿ ಒಂದಾನೊದು ಕಾಲದಲ್ಲಿ ನಲ್ಲೆಯ ಜೊತೆ ಇದೇ ಬಸ್ಸಿನಲ್ಲಿ ಮಾಡಿದ ಪ್ರಯಾಣದ ನೆನಪು ತೇಲಿ ಬರುತ್ತಿತ್ತು. ಅಂದಿನ ನೆನಪು, ಇಂದು ಒಬ್ಬಂಟಿಯಾಗಿ ಕುಡಿದ ಕಡಖ್ ಚಹಾದ ರುಚಿಯನ್ನು ಕಿತ್ತುಕೊಂಡಿತ್ತು! ಬಸ್ಸು ಯಾವಗ ನಮ್ಮ ತಾಲ್ಲೂಕು ತಲುಪಿತ್ತೋ ಆಗ ತೂಕಡಿಕೆಯ ನಿದ್ರೆಯಲ್ಲಿದ್ದವನು ಹಠಾತ್ತನೆ ಎದ್ದುಕುಳಿತಿದ್ದೆ, ಕಾರಣ ಗಾಳಿಯೊದಿಗೆ ತೇಲಿಬರುತ್ತಿದ್ದ ಮಣ್ಣಿನ ಸುವಾಸನೆಯ ಘಮ ಮತ್ತು ತುಸುವೂ ಬದಲಾಗದ ಸಸ್ಯ ಶ್ಯಾಮಲೆಯ ಸ್ವಾಗತ ಗೀತೆ!
ಬಸ್ಸು ಇಳಿಯುತ್ತಿದ್ದಂತೆಯೇ ನನ್ನ ಬರುವಿಕೆಗಾಗಿ ಕಾಯುತ್ತಿದ್ದ ಅಪ್ಪನನ್ನು ನೋಡಿ ಆದ ಸಂತೋಷವು ಅವನ ಕೆಲಸದ ಒತ್ತಡಗಳಿಂದ ಸುಕ್ಕಾದ ಮುಖ, ಬೆಳ್ಳಿ ಎಳೆಯಾದ ತಲೆಗೂದಲು, ತುಸು ಗೂನಾದ ಬೆನ್ನು ಮುಂತಾದುದನ್ನು ನೋಡುತ್ತಿದ್ದಂತೆಯೇ ಮಾಯವಾಗಿತ್ತು. ಎಷ್ಟು ಹೇಳಿದರೂ ಬದಲಾವಣೆಗೆ ಒಗ್ಗದ ಅಪ್ಪನ ಗುಣಕ್ಕೆ ಓಬೀರಾಯನ ಕಾಲದ ಸ್ಕೂಟರ್ ಸಾಕ್ಷಿಗೆ ನಿಂತಿತ್ತು. ಬಹಳಾ ದಿನದ ನಂತರ ಅಪ್ಪನ ಭುಜವ ಹಿಡಿದು ಸ್ಕೂಟರ್ ಹಿಂಬಾಗದಲ್ಲಿ ಕುಳಿತಿದ್ದೆ. ಅಪ್ಪ ಆಡುತ್ತಿದ್ದ ಮಾತಿನಲ್ಲಿದ್ದ ಆಹ್ಲಾದತೆಯಿಂದಾಗಿ, ನನ್ನ ಮುಖವನ್ನು ಕೆಂಪಗೆ ಮಾಡುತ್ತಿದ್ದ ಅವನ ಕವಳದ ರಸ ಕೊಳಕು ಎಂದೆನಿಸಿರಲಿಲ್ಲ. ಕಾರಣ ಕರವಸ್ತ್ರ ತನ್ನ ಕೆಲಸವನ್ನು ಮಾಡಲು ಮರೆತಿರಲಿಲ್ಲ!! ಮನೆಯ ಬಳಿಯ ಕಿರಿದಾದ ಮಣ್ಣು ದಾರಿಯಲ್ಲಿ ಅಪ್ಪನ ಗಾಡಿ ಎಗ್ಗಿಲ್ಲದೇ ನುಗ್ಗುತ್ತಿದ್ದರೆ ಸೂರ್ಯಕಿರಣಗಳನ್ನು ಭೂಮಿಸ್ಪರ್ಶಿಸಲು ಬಿಡಬಾರದೆಂದು ಹೋರಾಡುತ್ತಿದ್ದ ದೆವ್ವ ಸ್ವರೂಪೀ ಮರಗಳು, ಅಡ್ಡಬರುವ ಕಾನು ಕೋಳಿಗಳು, ಬಿಸಿಲಿನ ಕೋಲಿಗೆ ಮೈಒಡ್ಡಿಬರುತ್ತಿದ್ದ ಬಗೆ ಬಗೆಯ ಪಕ್ಷಿಗಳು, “ಹೋ... ಹೆಗ್ಡೇರೇ ಬಂದ್ರೇನ್ರಾ ಓಟ್ ಹಾಕ್ಲಕ್ಕೆ” ಎಂದು ಕೈಬೀಸಿದ ಗಾಮನಾಯಕನ ಧ್ವನಿ, ಢಣ್ ಗುಟ್ಟಿದ ದುರ್ಗಿಗುಡಿಯ ಗಂಟೆ, ತಂಪಾಗಿ ಹರಿಯುತ್ತಿದ್ದ ಶರಾವತಿಯ ಕವಲುಗಳು, ಹೀಗೆ ಇವೆಲ್ಲವೂ ನಮ್ಮೂರು ಸ್ವರ್ಗ ಎನ್ನದಿರಲು ಬಿಡುತ್ತಿರಲಿಲ್ಲ. ಆದರೆ ಇದರ ಮಧ್ಯವೇ ಅಪ್ಪ ನನಗೊಂದು ಶಾಕಿಂಗ್ ಸುದ್ದಿ ಕೊಟ್ಟಿದ್ದರು. ಅದು, ನಿನ್ನೆ ಬೆಳಗ್ಗೆ ಮೇಯಲು ಹೋದ ನನ್ನ ಪ್ರೀತಿಯ ಕಮಲಿ ಎಂಬ ಎಮ್ಮೆ ಇಂದು ಬೆಳಗಾದರೂ ಮರಳಿ ಬಂದಿರಲಿಲ್ಲ. ಅಪ್ಪ ನಿನ್ನೆ ನಡೆಸಿದ ಹಲವು ಸುತ್ತಿನ ಕಾರ್ಯಾಚರಣೆಯಲ್ಲೂ ಅದು ಸಿಕ್ಕುಹಾಕಿಕೊಂಡಿರಲಿಲ್ಲ. “ಬಿಡಪ್ಪ ನಾಳೆ ರಾತ್ರಿ ನಾನು ವಾಪಾಸ್ ಹೋಗ ಒಳಗೆ ಕಮಲೀನ ಕೊಟ್ಗೆ ಹೊಕ್ಕುಸ್ತಿ” ಎಂದು ಯಾವುದೋ ಜೋಷಿನಲ್ಲಿ ಮಾತು ಕೊಟ್ಟುಬಿಟ್ಟಿದ್ದೆ. ಅಪ್ಪನ ಸ್ಕೂಟರ್ ತಗ್ಗಿನಲ್ಲಿದ್ದ ಕಡುದಾರಿಯನ್ನು ಇಳಿದು ಎಲ್ಲಿ ಮನೆಯ ದಣಕಲು(ಗೇಟ್) ಪಕ್ಕ ಬಂದು ನಿಂತಿತ್ತೋ ಆಗ ಭಕ್,ಭಕ್,ಭೋ... ಎಂದು ಬೊಗಳುತ್ತಾ ಬಂದ ದಾಸು ಮತ್ತು ಕರಿಯ ನಾಯಿಗಳು ತಮ್ಮ ಕೆಸರಾದ ಕಾಲಚ್ಚನ್ನು ನನ್ನ ಹಾಲು ಬಿಳುಪಿನ ಅಂಗಿಯ ಮೆಲೆ ಒತ್ತಿ, ಸಿಕ್ಕ ಸಿಕ್ಕ ಜಾಗಗಳನ್ನೆಲ್ಲಾ ನೆಕ್ಕಿ ತನ್ನ ಮೂಕ ಪ್ರೀತಿಯನ್ನು ತೋರುತ್ತಿತ್ತು. ಆಗ ಅಪ್ಪ “ಹಚಾ...ನಡೀರ ಅತ್ಲಾಗಿ”ಎಂದು ಕೂಗಿದ್ದರಿಂದ ಬೆನ್ನಿಗೆ ಕಾಲ್ಕೊಟ್ಟು ಓಡಿದ್ದವು. ನನ್ನ ಬರುವಿಕೆಗಾಗಿ ರಣಹದ್ದಿನಂತೆ ಕಾದು ಕುಳಿತಿದ್ದ ಅಮ್ಮನ ಕಣ್ಣಂಚಿನಲ್ಲಿ ಕಂಡ ಆ ಪ್ರೀತಿಯ ಸ್ವಾಗತವನ್ನು ಅಕ್ಷರಗಳಲ್ಲಿ ಹಿಡಿದಿಡಲು ಸಾಧ್ಯವಾಗುತ್ತಿಲ್ಲ... ನನ್ನ ನರಪೇತಲ ಭುಜಕ್ಕೆ ಜೋತುಬಿದ್ದ ಮುದ್ದು ತಂಗಿಯು, ಕುಶಲೋಪರಿ ವಿಚಾರಿಸುವ ಬದಲು ನನ್ನ ಆನೇ ತೂಕದ ಬ್ಯಾಗಿನ ಪರಿಶೀಲನೆಯಲ್ಲಿ ತೊಡಗಿದ್ದಳು. ಅವಳ ಉಡುಗೊರೆಯ ನಿರೀಕ್ಷೆಯನ್ನು ನನ್ನ ಆಪತ್ಭಾಂದವ ಮರೆವುರಾಯ ಮಣ್ಣುಮಾಡಿದ್ದ!
ಮನೆಯ ಒಳ ಹೊಕ್ಕಾಗ, ಬಚ್ಚಲಮನೆಯ ಹಂಡೆಯ ಬಿಸಿನೀರಿನಿಂದ ಕಾಲನ್ನು ತೊಳೆದಾಗ, ಅಮ್ಮನ ಕೈ ರುಚಿಯ ಕಾಫಿ ಹೀರಿದಾಗ, ತಂಗಿಯ ಕ್ರೀಡಾ ಸಾಧನೆಗಾಗಿ ದಕ್ಕಿದ ಪಾರಿತೋಷಕಗಳನ್ನು ನೋಡುವಾಗ, ಅಪ್ಪನ ಕೈ ಕುಸುರಿಯಲ್ಲರಳಿದ ಬೆತ್ತದ ಕಲಾಕೃತಿಗಳನ್ನು ನೋಡಿದಾಗ ಆದ ಸಂತೋಷಕ್ಕೆ ಒಡ್ಡು ಕಟ್ಟುವ ಪ್ರಯತ್ನಮಾಡಿದ್ದು ನಮ್ಮ ಮನೆಯ ಹೊರ ಜಗುಲಿಯ ಮೇಲೆ ನಿಂತರೆ ಕಾಣುವ ಫರ್ಲಾಂಗು ದೂರದ ತಗ್ಗಿನಲ್ಲಿರುವ ಸುಲೋಚನತ್ತೆಯ ಮನೆಯ ಕೋಳು ಹಂಚು ಕಂಡಿತ್ತು! ಪಕ್ಕದ ಮನೆಯಂತೆಯೇ ಇದ್ದ ಸುಲೋಚನತ್ತೆ ಮತ್ತು ಅವರ ಮಗಳು ಸೌಗಂಧಿಕಳ ನೆನಪು ಎಂದು ಮನವ ಹೊಕ್ಕಿತೋ ಆಗ ಎಲ್ಲಾ ಸಂತೋಷಗಳಿಗೂ ಅಲ್ಪವಿರಾಮ ಬಿದ್ದಿತ್ತು.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹೋಗಿ ತೋರುಬೆರಳನ್ನು ಮಸಿ ಮಾಡಿಕೊಳ್ಳುವ ಪ್ರಕ್ರಿಯೆಯ ಹಿಂದೆ ಒಳ್ಳೆಯ ಸರ್ಕಾರವೊಂದು ನಮ್ಮನ್ನು ಆಳುತ್ತದೆ ಎಂದು ನಂಬಿದವನು ನಾನಾಗಿರಲಿಲ್ಲ ಆದ್ದರಿಂದ ಓಟ್ ಹಾಕುವುದು ಈ ಸ್ವರ್ಗದ ಭೇಟಿಯ ಒಂದು ಭಾಗವೆಂದು ಮಾತ್ರಾ ತಿಳಿದಿದ್ದೆ. ಯಾರೇ ಮಂತ್ರಿಯಾದರೂ ಅವರುಗಳ ಉದ್ಧಾರಕ್ಕೆ ಮಾತ್ರಾ. ಆ ಮಟ್ಟಿನಲ್ಲಿ ಉದ್ದಾರ ಆಗಬೇಕೆಂದರೆ ನಾವೂ ಮಂತ್ರಿಗಳೇ(ಅದರಲ್ಲೂ ಹಣದ ಹಪಹಪಿಯ) ಆಗಬೇಕು ಎಂಬುದು ನನ್ನ ತಮಾಷೆ ಪೂರ್ವಕವಾದ ವಾ ದವಾಗಿತ್ತು. ಬಾಲ್ಯದ ಶಿಕ್ಷಕರನ್ನು, ಊರಲ್ಲೇ ನೆಲೆನಿಂತ ಸ್ನೇಹಿತರನ್ನು, ಹೊಸದಾಗಿ ಪರಿಚಯವಾದ ನನ್ನ ಫೇಸ್ ಬುಕ್ ಮಿತ್ರರುಗಳನ್ನು ಮಾತನಾಡಿಸಿ ಮನಸ್ಸಿಗೆ ತೃಪ್ತಿ ಆದರೂ ಹೊಟ್ಟೆಯು ತೃಪ್ತಿಪಟ್ಟಿದ್ದು ಅಮ್ಮ ಅಕ್ಕರೆಯಿಂದ ಮಾಡಿ ಬಡಿಸಿದ ಪೂರಿ ಮತ್ತು ಮಾವಿನಹಣ್ಣಿನ ರಸಾಯನ ತಿಂದ ಬಳಿಕವೇ...!
ಕವಳದ ಬಟ್ಟಲಲ್ಲಿದ್ದ ಚಿಕಣಿ ಅಡಿಕೆ, ಚಿಗುರು ಲಕ್ಕವಳ್ಳಿ ಎಲೆ, ಬೆಣ್ಣೆ ಮುದ್ದೆಯಂತಿದ್ದ ಸುಣ್ಣವನ್ನು ನೋಡಿದೊಡನೆಯೇ ಒಂದು ಕೈ ನೋಡಿಬಿಡೋಣವೆಂದು ಎಲ್ಲವನ್ನೂ ಒಪ್ಪಮಾಡಿ ಬಾಯಿಗೆ ತುಂಬಿಕೊಳ್ಳುತ್ತಿದ್ದಾಗ, “ ಹೊಗೇಸೊಪ್ಪಿನ್ ಎಸ್ಳಿದ್ದು ತರ್ಲನೋ??” ಎಂದು ತಂಗಿ ಕುಸುಮ ವ್ಯಂಗ್ಯವಾಡಿದ್ದಳು. ಅವಳ ತರಲೆ ತುಂಟಾಟದ ಮಾತುಗಳನ್ನು ಇನ್ನಷ್ಟು ಕೇಳುವ ತವಕದಿಂದ ನಾಳೆ ಇಂಟರ್ನಲ್ ಎಕ್ಸಾಮ್ ಇದೆ ಎಂದು ಓದುತ್ತಿದ್ದವಳನ್ನು ತೋಟ, ಬೆಟ್ಟ, ಗುಡ್ಡಗಳನ್ನು ಸುತ್ತಾಡಲು ಕರೆದುಕೊಂಡು ಹೋಗಿದ್ದೆ. ಕಮಲಿ ಎಮ್ಮೆಯನ್ನು ಹುಡುಕುವುದು ಆ ತಿರುಗಾಟದ ಹಿಂದಿನ ಉದ್ದೇಶವಾಗಿತ್ತು. ಕಮಲಿ ತಿರುಗಾಡಬಹುದಾದ ಮಾರನಕೆರೆ, ನೆಲ್ಲಿ ಹೊಂಡ ಮಾರ್ಗವಾಗಿ ಮಾರ್ಕುಣಿ ಶಿಖರ ಏರಿದ್ದೆವು. “ವಾಂಯ್...ಕಮಲೀ...ಬಾ..., ವಾಂಯ್ ಕಮಲೀ... ಬಾ...” ಎಂಬ ಕೂಗು ನಮ್ಮಿಬ್ಬರ ಭಜನೆಯಾಗಿತ್ತು. ಕ್ರೀಡೆಗಳಲ್ಲಿ ಹೆಸರು ಮಾಡುತ್ತಿದ್ದ ಜಾಣೆ ಮುದ್ದು ತಂಗಿಯೊಂದಿಗಿನ ಸುತ್ತಾಟದಲ್ಲಿ ಕವಳಿ, ಮುಳ್ಳು ಹಣ್ಣು, ಗೇರು ಹಣ್ಣು, ಬುಕ್ಕೇ ಕಾಯಿ, ಹೀಗೆ ಹಲವು ಕಾಡು ಹಣ್ಣುಗಳು ನಮ್ಮ ಉದರ ಸೇರಿತ್ತು. ಹಾಸ್ಯದ ಮಾತುಗಳೊಂದಿಗೇ ನಾನು ಅವಳ ಮದುವೆಯ ಸುದ್ದಿಯನ್ನು ಎತ್ತಿದ್ದೆ. ನಗುತ್ತಿದ್ದ ಅವಳು ಒಮ್ಮೆಲೇ ಗಂಭೀರಳಾಗಿದ್ದಳು. “ಯಾವುದೋ ಪೇಟೆಯ ಕೆಳಜಾತಿಯ ಹುಡುಗನೊಂದಿಗೆ ನಿನ್ನ ತಂಗಿ ಸುತ್ತುತ್ತಿದ್ದಾಳೆ, ಸ್ವಲ್ಪ ಹದ್ದುಬಸ್ತಲ್ಲಿಡೋ” ಎಂಬ ಬಿಟ್ಟಿ ಸಲಹೆಗಳು ಆಗಾಗ ದೂರವಾಣಿಯ ರೂಪದಲ್ಲಿ ನನ್ನ ಮನ ಹೊಕ್ಕಿದ್ದ ಕಾರಣ ಈ ಮದುವೆಯ ಪ್ರಸ್ತಾಪ ಅಸಮಂಜಸವೆಂದು ನನಗಂತೂ ಅನ್ನಿಸಲಿಲ್ಲ ಮತ್ತು ೨೦ ತುಂಬಿದ ಹುಡುಗಿ ಮನೆಯಲ್ಲಿ ಇಂತಹಾ ಮಾತುಗಳು ತೀರ ಸಹಜವಾದ್ದರಿಂದ ನಾನು ಅವಳ ಮುಖದಲ್ಲಿ ಮೂಡಿದ ಗಂಭೀರತೆಗೆ ಉತ್ತರ ಕೇಳುವ ತವಕದಲ್ಲಿದ್ದೆ. ಅವಳೂ ಏನೋ ಹೇಳುವುದರಲ್ಲಿದ್ದಳು ಆದರೆ ಅಷ್ಟರಲ್ಲಿ ಎದುರು ಸಿಕ್ಕಿದ ಆರುಂಬೆ ಸೀತಾರಾಮ ಭಟ್ಟರು “ಅಪ್ಪೀ ಓಟ್ ಹಾಕಕ್ಕೆ ಮನೀಗ್ ಬೈಂದ್ಯನೋ??” ಎಂದು ಮಾತು ಮುಂದುವರೆಸುತ್ತಾ, “ಕಲ್ಲಳ್ಳಿ ಶಂಬಣ್ಣ ಹೋಗ್ಬುಟ್ನಡಲಾ... ಗೊತಾತನೋ ಅಪ್ಪೀ?” ಎಂದರು. ಶಂಬಣ್ಣ ಹೋದ ಸುದ್ದಿಯನ್ನು ಕೇಳಿದ ನನ್ನ ಎರಡೂ ಹುಬ್ಬುಗಳೂ ಮೂಗ ಬಳಿಬಂದು ಕುಳಿತವು, ಎದೆ ತನ್ನ ಸ್ತಿಮಿತ ತಪ್ಪಿಸಿಕೊಂಡು ಬಡೆಯಲಾರಂಬಿಸಿತ್ತು. ತಂಗಿ ಬಾಯಿಯ ಮೇಲೆ ಕೈ ಇರಿಸಿದ್ದಳು. ಸೀತಾರಾಮ ಭಟ್ಟರು ಮಾತು ಮುಂದುವರೆಸುತ್ತಾ “ಹೌದೋ ಅಪ್ಪೀ, ಈಗ ಸುಮಾರ್ ಹತ್ಗಂಟೆ ಹೊತ್ತಿಗೆ ಮನೇಲ್ ಹೆಂಡ್ತಿ ಮಕ್ಳು ಓಟ್ ಹಾಕಕ್ಕೆ ಶಾಲೇಮನೆ ಗ್ ಹೋದಾಗ ಈ ಶಂಬಣ್ಣ ತ್ವಾಟದ ಬಾವಿಗ್ ಹಾರ್ಕಂಡ್ನಡ್ದೋ... ಚಪ್ಪಲಿ ಮೇಲೇ ಬಿಚ್ಚಿಟ್ಟ್ ಹಾರಿದ್ನಡ, ಅದ್ಕೆ ಪತ್ತೆ ಹಚ್ಚಕಾತು” ಎನ್ನುತ್ತಾ ಭಟ್ಟರು ಮುನ್ನಡೆದರು. ನಾನು ಅಲ್ಲೇ ಹತ್ತಿರದಲ್ಲಿದ್ದ ನೆಲ್ಲೀ ಮರಕ್ಕೆ ಒರಗಿ ಕುಳಿತು ಶಂಬಣ್ಣನ ನೆನಪಿನ ಮನೆಯನ್ನು ಹೊಕ್ಕಿದ್ದೆ. ನನ್ನ ತಂಗಿ ಕುಸುಮ ಕಮಲಿಯ ಭಜನೆಯಲ್ಲಿ ತೊಡಗಿದ್ದಳು.
ಶಂಬಣ್ಣ ಎಂದರೆ ನಮ್ಮ ತಾಲ್ಲೂಕಿಗೇ ಪರಿಚಿತ. ಏಕೆಂದರೆ ಅವನು ಮಾತಿನ ಮಲ್ಲ, ಚತುರ, ಸಮಯ ಸಾಧಕ, ಹುಳುಕ, ಎಲ್ಲಕ್ಕಿಂತಾ ಮಹಾನ್ ಬುದ್ದಿವಂತ. ಮಾತೊಂದಿದ್ದರೆ ಎಲ್ಲಿಬೇಕಾದರೂ ಜಯಿಸಬಹುದೆಂದು ಸದಾ ಹಲುಬಿಕೊಂಡಿದ್ದ ಈ ಶಂಬಣ್ಣ, ಯಾರೊಂದಿಗೆ ಮಾತನಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸಿ ಒಂದು ತಿಂಗಳಾಗಿದ್ದು ಎಲ್ಲರಿಗೂ ಗೊತ್ತಿದ್ದ ವಿಚಾರವೇ... ಅದಕ್ಕೆ ಕಾರಣವೂ ನನಗೆ ಗೊತ್ತಿಲ್ಲದುದ್ದೇನೂ ಆಗಿರಲಿಲ್ಲ. ‘ಮಾತೇ ಸರ್ವಸ್ವ’ವೆಂದು ಬದುಕುತ್ತಿದ್ದ ಈ ಶಂಬಣ್ಣನ ಅತಿಯಾದ ಮಾತಿಗೆ ಎದುರಿನಿಂದ ಅಲ್ಲದಿದ್ದರೂ ಹಿಂದಿನಿಂದ ಎಲ್ಲಾ ಉರಿದು ಬೀಳುವವರೇ ಆಗಿದ್ದರು. ಎಲ್ಲರ ಸಂಸಾರದಲ್ಲಿ ಮೂಗು ತೂರಿಸಿ ಬರುತ್ತಿದ್ದ ಶಂಬಣ್ಣನಿಂದ ನನಗೆ ನಷ್ಟವಾಗಿದ್ದಕಿಂತ ಲಾಭವಾದುದ್ದೇ ಹೆಚ್ಚು!! ಹೌದು ನಾನು ಪದವಿ ಮುಗಿಸಿ ಮುಂದೇನೆಂದು ದಾರಿ ತೋಚದಾದಾಗ ಅಡಿಕೆ ಮಂಡಿಯೊಂದರಲ್ಲಿ ಗುಮಾಸ್ತನಾಗಿ ಸೇರಿಸಿ ಎರೆಡು ವರ್ಷಗಳ ಕಾಲ ಇಲ್ಲೇ ಇರುವಂತೆ ಮಾಡಿದ್ದ. ಎಲೆಮರೆಯ ಕಾಯಾಗುತ್ತಿದ್ದ ಅಪ್ಪನ ಬೆತ್ತದ ಕಲಾಕುಸುರಿಯನ್ನು ಮಾಧ್ಯಮಗಳ ಮುಖಾಂತರ ಹೊರಜಗತ್ತಿಗೆ ಬಿತ್ತರಿಸಿ ಅದರಿಂದ ಕಲಾಕೃತಿಗಳ ವ್ಯಾಪಾರವೂ ಆಗುವಲ್ಲಿ ಪರೋಕ್ಷ ಪಾತ್ರ ವಹಿಸಿದ್ದ. ಎಲ್ಲಕ್ಕಿಂತಾ ಹೆಚ್ಚಾಗಿ ಎರಡು ವರ್ಷಗಳ ಹಿಂದೆ ಅಮ್ಮ ದಿಢೀರೆಂದು ಹಾಸಿಗೆ ಹಿಡಿದಾಗ ಅವಳನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ಅಪ್ಪನ ಬೆನ್ನೆಲುಬಾಗಿ ನಿಂತಿದ್ದ. ಹೀಗೆ ಹಲವು ಉಪಕಾರಗಳನ್ನು ಮಾಡಿದರೂ ನಾನು ಪ್ರೀತಿಸಿದ ಹುಡುಗಿಗೆ ನನ್ನ ಜೊತೆ ಅಕ್ರಮ ಸಂಬಂ ಧವಿತ್ತು ಎಂದು ಸುಳ್ಳು ಆರೋಪ ಹೊರಿಸಿ ಅವಳ ಮದುವೆಯನ್ನು ಮುರಿಯಲು ಪ್ರಯತ್ನಪಟ್ಟಿದ್ದನೆಂಬ ಗಾಳೀ ಸುದ್ದಿಯೊಂದೇ ನನಗೆ ಅವನ ಮೇಲೆ ತುಸು ಬೇಸರಕ್ಕೆ ಕಾರಣವಾದ ಅಂಶವಾಗಿತ್ತು. ಹಡಾಹುಡಿ ಮಾಡಿಕೊಂಡಿದ್ದ ಶಂಬಣ್ಣನ ಆತ್ಮಹತ್ಯೆಯು ನನಗೆ ವಿಚಿತ್ರವಾದ ಸಮಾಧಾನವನ್ನುತಂದಿತ್ತು.

ಹೀಗೆ ಯೋಚನಾ ಲೋಕದಲ್ಲಿ ತೇಲುತ್ತಿದ್ದಾಗ ಬಾಯನ್ನು ನೇರಳೆ ಮಾಡಿಕೊಂಡು, ಕುನ್ನೇರಳೆ ಎಲೆಯ ಪೀಪಿಯನ್ನು ಊದುತ್ತಾ ತಂಗಿ ವಾಪಾಸ್ ಬಂದಳು. ಕಮಲಿಯ ಕುರುಹು ಮಾತ್ರಾ ಸಿಕ್ಕಿರಲಿಲ್ಲ. ಸೂರ್ಯ ತನ್ನ ಡ್ಯೂಟಿಯಲ್ಲಿ ನಿಷ್ಠೆ ತೋರಿದ್ದರಿಂದ ಎಮ್ಮೆ ಹುಡುಕುವ ಕಾರ್ಯಕ್ಕೆ ಅಲ್ಪ ವಿರಾಮ ಹಾಕಿ ಮನೆಯತ್ತ ಸಾಗಿದ್ದೆವು. ನನ್ನ ಮನ ಶಂಬಣ್ಣನ ಅಂತಿಮ ದರ್ಶನ ಮಾಡಬೇಕೆಂದು ಹೇಳುತ್ತಿದ್ದರೂ ಸಹಾ ‘ಮನೆಯಲ್ಲಿ ಅಪ್ಪ ಬದುಕಿರುವ ಮಕ್ಕಳು ಪರರ ಹೆಣವನ್ನು ನೋಡುವಂತಿಲ್ಲ’ವೆಂಬ ಮುತ್ತಜ್ಜನ ಕಾಲದ ಶಾಸ್ತ್ರ ನಮ್ಮ ಮನೆಯಲ್ಲಿ ಚಾಲ್ತಿಯಲ್ಲಿತ್ತಾದ್ದರಿಂದ ಸೀದಾ ಮನೆಯತ್ತ ಹೆಜ್ಜೆ ಹಾಕುವುದು ಅನಿವಾರ್ಯವಾಗಿತ್ತು. ಮನೆಗೆ ಬಂದವನೇ ಅಡಿಗೆ ಮನೆಯಲ್ಲಿ ಕೆಲಸದ ಯುದ್ದ ಮಾಡುತ್ತಿದ್ದ ಅಮ್ಮನಿಗೆ ತುಸು ಕೀಟಲೆ ಕೊಟ್ಟು, ಪೆಟ್ಟಿಗೆಯಲ್ಲಿಟ್ಟಿದ್ದ ಉಂಡೆಗಳನ್ನು ತಿನ್ನುತ್ತಾ ನನ್ನ ಒಂದಾನೊಂದು ಕಾಲದ ಆವಾಸ ಸ್ಥಾನವಾದ ಮೇಲ್ಮೆತ್ತಿಗೆ ನಡೆದಿದ್ದೆ. ಅಯ್ಯೋ ಒಂದೂವರೆ ವರ್ಷದ ಹಿಂದೆ ಐಶ್ವರ್ಯಾ ರೈ ನಂತೆ ಇದ್ದ ಮೇಲ್ಮೆತ್ತು, ಈಗ ನನ್ನ ಮುತ್ತಜ್ಜಿಯಂತೆ ಆಗಿಬಿಟ್ಟಿತ್ತು! ಹೌದು... ನನ್ನ ಇಲ್ಲದಿರುವಿಕೆಯಲ್ಲಿ ಮನೆಯವರು ನನ್ನ ರೂಮಿನ ಮೇಲೆ ತೋರಿದ ಭಾವ ಇದರಲ್ಲಿ ಎದ್ದು ಕಾಣುತ್ತಿತ್ತು. ಪರೀಕ್ಷೆಯ ಸಮಯಗಳಲ್ಲಿ ಎದ್ದೂ ಬಿದ್ದೂ ಓದುತ್ತಿದ್ದ ಈ ಕೋಣೆಯ ಮೂಲೆ, ಸುಂದರ ಪರಿಸರವನ್ನು ದೂರದರ್ಶನದಂತೆ ತೋರಿಸುತ್ತಿದ್ದ, ನೇಸರನ ಕಿರಣ ನೇರವಾಗಿ ತಾಕುತ್ತಿದ್ದ ಗಾಜಿನ ಕಿಟಕಿ, ಕಬ್ಬಿಣದ ಟ್ರಂಕು, ಒಂದು ಕಾಲು ಊನಾದ ಮರದ ಮಂಚ, ಅಡುಗೆ ಮನೆ ಒಲೆಯಿಂದ ಬಂದ ಹೊಗೆಯ ಕೃಪೆಯಿಂದಾಗಿ ಅಮವಾಸ್ಯೆಯ ಬಣ್ಣ ತಳೆದಿತ್ತು. ಹೀಗೆ ಪುಸ್ತಕಗಳ ದೂಳು ಹೊಡೆಯುತ್ತಿದ್ದಾಗ ಯಾವುದೋ ಪುಟದ ಮಧ್ಯದಿಂದ ಉದುರಿದ ಆ ಹಳೆಯ ಪ್ರೇಮಪತ್ರ ಒಂದುಕ್ಷಣ ನೆನೆಪಿನ ಲೋಕಕ್ಕೆ ತಳ್ಳಿ ತಳಮಳದ ನೋವನ್ನು ಕೊಟ್ಟಿತ್ತು. ಅಂದು ಈ ಪತ್ರವನ್ನು ಅವಳಿಗೆ ನೀಡುವುದು ನನ್ನಿಂದ ಶಕ್ತವಾಗಿದ್ದರೆ ಇಂದು ಹೇಗಿರುತ್ತಿದ್ದೆನೋ ಎಂದುಕೊಂಡೆ. ಅವಳ ಗಾಯನದ ಧ್ವನಿ ಒಮ್ಮೆ ನನ್ನ ಕಿವಿಯ ಹೊಕ್ಕು ಹೊರಗೆ ಓಡಿತ್ತು. ಇನ್ನೂ ಅದೆಷ್ಟು ಧೂಳು ಹಿಡಿದ ನೆನಪುಗಳು ಮೈಕೊಡವಿ ಆಚೆ ಬರುವುದರಲ್ಲಿತ್ತೇನೋ...ಅಷ್ಟರಲ್ಲಿ ಅಮ್ಮ “ಕೂ ಹೋಯ್... ಅಪ್ಪೀ...ಊಟಕ್ಕಾತು ಬಾರೋ...” ಎಂದು ಕರೆದದ್ದು ನನಗೂ ಹೊಟ್ಟೆ ಇದೆ ಎಂಬುದನ್ನು ನೆನಪಿಸಿ ಅಡುಗೆ ಮನೆಯೆಡೆಗೆ ಓಡುವಂತೆ ಮಾಡಿತ್ತು.

ಅಮ್ಮ ಪ್ರೀತಿಯಿಂದ ಮಾಡಿ ಬಡಿಸಿದ ಅಡುಗೆಯ ರುಚಿ ಯನ್ನು ತಕ್ಕಡಿಯಲ್ಲಿಟ್ಟು ತೂಗುವ ಕೆಲಸವನ್ನು ಮಾಡಿರಲಿಲ್ಲ. ಊಟ ಮಾಡಿದ್ದೇ ಮಲಗುವುದರಲ್ಲಿದ್ದ ಅಪ್ಪನನ್ನು ಮಲಗದಂತೆ ಜೋಪಾನ ವಹಿಸಿದ್ದು ನಾ ಬೆಂಗಳೂರಿನಿಂದ ತಂದ ಹೊಸ ಇಸ್ಪೀಟ್ ಪಟ್ಟಿನ ಪ್ಯಾಕೇಟ್! ಎಷ್ಟೋ ದಿನದ ಮೇಲೆ ನಾನು, ಅಪ್ಪ, ಅಮ್ಮ ತಂಗಿ ಒಟ್ಟಿಗೇ ಕುಳಿತು ಮನಬಂದಂತೆ ಹರಟುತ್ತಾ ಇಸ್ಪೀಟ್ ಆಟದಲ್ಲಿ ಬಿದ್ದಿದ್ದೆವು...”ಇಸ್ಪೀಟ್ ವಾಲೆಯಲ್ಲಿರುವ ರಾಜ ನಾನೇ” ಎಂದು ನಾನಂದ ಕೂಡಲೇ, “ರಾಣಿ ಯಾರಪ್ಪ ರಾಜ್ಕುಮಾರ??” ಎಂಬ ತರಲೆಯ ಮಾತು ತಂಗಿಯಿಂದ ಬಂದರೆ, “ನಮ್ಮನ್ನು ’ಗುಲಾಮ’ ಮಾಡದ ರಾಣಿಯಾದರೆ ಅಷ್ಟೇ ಸಾಕಿತ್ತು” ಎಂಬುದು ಅಮ್ಮನ ಮಾತಾಗಿತ್ತು... ಆದರೆ ಬಾಯಲ್ಲಿ ತುಂಬಿ ತುಳುಕಾಡುತ್ತಿದ್ದ ಕವಳದ ರಸ ಅಪ್ಪನ ಪಂಚಿಂಗ್ ಡೈಲಾಗನ್ನು ಅಲ್ಲಿಯೇ ಕಟ್ಟಿ ನಿಲ್ಲಿಸಿತ್ತು. ಅದ್ಯಾವ್ಯಾವುದೋ ಸುದ್ದಿಗಳನ್ನೆಲ್ಲಾ ಮುಗಿಸಿ ಇನ್ನೇನು ಪಕ್ಕದ ಮನೆಯ ಸುದ್ದಿಗೆ ತಲೆಹಾಕುವುದರಲ್ಲಿದ್ದೆವು. ಅಷ್ಟರಲ್ಲಿ ಸುಲೋಚನತ್ತೆಯೇ ನಮ್ಮ ಮನೆಗೆ ಆಗಮಿಸಿದ್ದರು. ನಾನು ಅವರನ್ನು ನೋಡಿದೊಡನೆಯೇ ಮುಖ ತಿರುಗಿಸಿ ಕುಳಿತೆ. ಆದರೆ ಅವರ ಮಾತಲ್ಲಿ ಮೊದಲಿನ ಪ್ರೀತಿಯೇ ಇದ್ದಿದ್ದು, ನಾನು ಮತ್ತೆ ಅವರತ್ತ ಗಮನ ನಿಡುವಂತೆ ಮಾಡಿತ್ತು. ಅವರು ಬಂದ ಉದ್ದೇಶ ಮುಗಿಸಿ ಹೊರಟರು “ಮಾಣಿ ಅಪ್ರೂಪಕ್ಕ್ ಬೈಂದೆ, ನಮ್ಮನಿಗೆ
ಹೊಕ್ಕ್ ಹೊಂಡ್ಲಾಗ್ದನಾ? ಎಂದರು. ನಾನೂ “ಹೋ... ಬತ್ತಿ ಅತ್ತೆ ಆಮೇಲೆ” ಅಂದೆ. ಅಷ್ಟರಲ್ಲಿ ಮಧ್ಯ ಬಾಯಿಹಾಕಿದ ಅತ್ತೆ “ ಸೌಂಗದ್ಯೂ ಈ ಬದಿಗೇ ಇದ್ದ...ನಿನಗೆ ಗೊತ್ತಿದ್ದಿಕ್ಕಲೋ..., ಬಂದ್ರೆ ಅವ್ಳನ್ನೂ ಮಾತಾಡಿಸಿಕ್ಯಂಡು ಹೋಗ್ಲಕ್ಕು...”ಎಂದಿದ್ದು ನನ್ನನ್ನು ಮತ್ತೆ ೨ ವರ್ಷದ ಹಿಂದೆ ಕರೆದುಕೊಂಡು ಹೋಗಿತ್ತು.
ಕಮಲಿಯನ್ನು ಹುಡುಕುವ ಜವಾಬ್ಧಾರಿ ಹೊತ್ತಿದ್ದ ನಾನು, ಆರು ಗಂಟೆಗೇ ಮನೆಯಿಂದ ಹೊರಟೆ. ಒಂದು ಬ್ಯಾಟರಿಯನ್ನು ಬಿಟ್ಟರೆ ನನ್ನ ಕೈಲಿ ಮತ್ತೇನೂ ಇರಲಿಲ್ಲ... ತೋಟದ ಎದುರಿನ ಸೊಪ್ಪಿನ ಬೆಟ್ಟದಿಂದ ಶುರುವಾದ ನನ್ನ ಅಭಿಯಾನವು ಕೆಂಜಾನಗುಡ್ಡ ಹತ್ತಿಳಿದು ಪಕ್ಕದ ಊರಾದ ಹಿರೇ ಗುಂಡಿಯನ್ನು ತಲುಪಿತ್ತು. ಮಳೆಗಾಲ ಅಲ್ಲದಿದ್ದರೂ ಜುಯ್ಂ...ಗುಡುವ ಜೀರುಂಡೆ ನನ್ನ ಹಳೆಯ ನೆನಪಿನ ಮೌನಗೀತೆಗೆ ಕೊಟ್ಟ ಹಿನ್ನೆಲೆ ಗಾಯನದಂತೆ ಭಾಸವಾಗುತ್ತಿತ್ತು. ಆ ಕೆರೆಯಲ್ಲಿ ಸ್ನೇಹಿತರೊಟ್ಟಿಗೆ ಈಜುತಿದ್ದದ್ದು, ಕಾಕತಾಳೀಯವೆಂಬಂತೆ ಅಮವಾಸ್ಯಯ ಮಧ್ಯಾಹ್ನ ಈಜಲು ಹೋದಾಗ ಸ್ನೇಹಿತ ಶಂಕರನನ್ನು ಕಳೆದುಕೊಂಡದ್ದು, ಮೀನು ಹಿಡಿಯುವ ಬೆಸ್ತ ಕುಪ್ಪನನ್ನು ಹಿಂದಿನಿಂದ ನೀರಿಗೆ ತಳ್ಳಿ ಓಡಿದ್ದು, ಕೆರೆಯ ಬದಿಯ ಕೆಸರಲ್ಲಿದ್ದ ಕಮಲದ ಹೂವು, ಕೋವೇ ಪುಷ್ಪಗಳನ್ನು ಕೊಯ್ಯಲು ಹೋದಾಗ ಕಾಲಿಗೆ ಚೇಳನ್ನು ಕಚ್ಚಿಸಿಕೊಂಡು ೨-೩ ದಿನ ಒದ್ದಾಡಿದ್ದು, ನಾನು ಈಜುವಾಗ ಬಟ್ಟೆ ತೊಳೆಯಲು ಬರುತ್ತಿದ್ದ ಈಡಿಗರ ಹುಡುಗಿಯರ ಗುಂಪಿನಲ್ಲಿದ್ದ ಕೃಷ್ಣ ಸುಂದರಿಯೊಬ್ಬಳು ಸದಾ ನನ್ನ ಹಿಡಿ(ಪೊರಕೆ) ಕಡ್ಡಿಯಂತಹಾ ಪೊಗದಸ್ತು ದೇಹದಮೇಲೆ ಕಣ್ಣು ಹಾಕುತ್ತಿದ್ದದ್ದು!! ಎಲ್ಲಾ ನೆನಪುಗಳು ತೇಲಿ ಹೋಗುತ್ತಿದ್ದಾಗ ದೂರದಲ್ಲೆಲ್ಲೊ ಕೂಗಿದ ಯಾವುದೋ ಎಮ್ಮೆಯ ಶಬ್ದ ನನ್ನನ್ನು ಮತ್ತೆ ಎಚ್ಚೆತ್ತುಕೊಳ್ಳುವಂತೆ ಮಾಡಿತ್ತು. “ಕಮಲೀ ಬಾರೇ...ವಾಯ್ಂ...ಕಮಲೀ ಬಾ...” ಎಂದು ಯಾರೂ ಜನರಿಲ್ಲದ ಜಾಗ ನೋಡಿ ಕೂಗು ಹಾಕುತ್ತಿದ್ದೆ...ಜನರ ಮುಂದೆ ಹಾಗಿರಲು ಈ ಹಾಳಾದ ನಾಚಿಕೆ ಬಿಡಬೇಕಲ್ಲ! ಸೂರ್ಯ ತನ್ನ ಕೆಲಸ ಮುಗಿಸಿ ಚಂದಿರನನ್ನು ನಿಯೋಜಿಸಿ ಹೊರಟುಹೋಗಿದ್ದ. ಹಾಲು ಬೆಳದಿಂಗಳಲ್ಲಿ ’ಈ ಸುಂದರ ಬೆಳದಿಂಗಳ...’ ಕವಿತೆ ಹಾಡುತ್ತಾ ಮಾಹಾಭಲ ಭಟ್ಟರ ಗದ್ದೆಯ ಸಂಕ ದಾಟಿ, ಕೇರಿಯ ಯಾರಾದರೂ ನೋಡಿ ಮನೆಗೆ ಕರೆದುಬಿಡುತ್ತಾರೋ ಎಂಬ ಭಯದಲ್ಲಿ ಲಗುಭಗೆಯಿಂದಲೇ ಹೆಜ್ಜೆ ಹಾಕಿದ್ದೆ. ಆದರೆ ಸ್ವಲ್ಪ ಮುಂದೆ ಹೋದವನಿಗೆ ತಗ್ಗಿನಲ್ಲಿದ್ದ ಜಾನಕಿ ಅಕ್ಕನ ಮನೆಗೆ ಹೋಗಬೇಕೆನ್ನಿಸಿತ್ತು. ಹೋದವರ್ಷ ಕ್ಯಾನ್ಸರ್ನಿಂದ ಗಂಡ ಅಚ್ಚುತಣ್ಣ ತೀರಿಕೊಂಡ ನಂತರ ಅವಳನ್ನು ಮಾತನಾಡಿಸಿರಲಿಲ್ಲವಾದ್ದರಿಂದ ಅವರ ಮನೆಯ ಉಣಗೋಲನ್ನು ತೆಗೆಯುವುದರಲ್ಲಿದ್ದೆ. ಅಷ್ಟರಲ್ಲಿ ಅವರ ಮನೆಯ ಮುಂದೆ ೨-೩ ಬೈಕ್ ನಿಂತಿರುವುದು ಕಾಣಿಸಿತು. ಅದರಲ್ಲಿ ಹಳೆ ತೊಗರು, ಚಾಲಿ ಕರೀದಿಸುವ ರುಸ್ತುಂ ಸಾಹೇಬರ ಹಳೆಯ ಎಂ-80 ಕೂಡಾ ಇದ್ದದ್ದು ನನ್ನ ಮನಸು ಇರಸುಮುರಿಸಾಗುವಂತೆ ಮಾಡಿತ್ತು. ಇಂದು ಮಧ್ಯಾಹ್ನ್ನ ಇಸ್ಪೀಟ್ ಆಡಬೇಕಾದರೆ ಅಮ್ಮ “ ಜಾನಕಿ ಈಗ ಮುಂಚಿನತರ ಇಲ್ಯೋ, ಅವ್ರ ಮನಿಗ್ ಅದ್ಯಾರ್ಯಾರೋ ಗಿರಾಕಿಗಳು ಬತ್ವಡ” ಅಂದಿದ್ದಳು. ಅದಕ್ಕೆ ನಾನು “ನಿನ್ನ ಅಡ- ಪಡಕ್ಕೆ ಬ್ರೇಕ್ ಹಾಕು, ಪ್ರತ್ಯಕ್ಷವಾಗ್ ಕಂಡಿದ್ಯಾ?” ಅಂತ ಜಾನಿಕಿಯಕ್ಕನನ್ನೇ ವಹಿಸಿಕೊಂಡು ಮಾತನಾಡಿದ್ದೆ. ಆದರೆ ಅದು ತಪ್ಪೆಂದು ಈಗ ಮನವರಿಕೆಯಾಗಿತ್ತು. ಇವರ ಮನೆಯಲ್ಲಿ ನಮ್ಮ ಕಮಲಿಗೇನು ಕೆಲಸವೆಂದು ಮನದಲ್ಲಿ ನಕ್ಕು ಮುಂದೆ ಸಾಗಿದ್ದೆ. ಈಗ ನನ್ನ ಪಯಣ ಹಿರೇಗುಂಡಿ ದಾಟಿ ಸಾಂಬಾರ್ ಕಣಿವೆಯತ್ತ ಮುಖಮಾಡಿತ್ತು. ಹೌದು, ವಾಟೆಹಳ್ಳಿಗೆ ಹೋಗಲು ಈ ಸಾಂಬಾರ್ ಕಣಿವೆಯ ಕಾಡುದಾರಿ ಹತ್ತಿರದ್ದಾಗಿತ್ತು. ಮತ್ತು ಎಮ್ಮೆ, ಕೋಣಗಳೆಲ್ಲಾ ಮೇಯುವಂತಹಾ ಜಾಗವಾದ್ದರಿಂದ ದೈರ್ಯ ಮಾಡಿ ಆ ಮೂರುಸಂಜೆಯಲ್ಲೂ ಕಾಡ ಹೊಕ್ಕಿದ್ದೆ.
ಕಾಡು ಹೊಕ್ಕುತ್ತಿದ್ದಂತೆಯೇ ಕಾಲಿಗೆ ಅಡರಿದ ಹಕ್ಕಿಯ ಶಿಕಾರಿಗೆ ಇಟ್ಟಿದ್ದ ಮುಳ್ಳಿನ ಬಿಲ್ಲಿನಂತಹಾ ಕಮಾನುಗಳುಗಳು ನನ್ನನ್ನು ಎಡವಿನೆಲಕ್ಕೆಬೀಳುವಂತೆಮಾಡಿತ್ತು. ಪರಿಸರ ಪ್ರೇಮ ನನ್ನ ರಕ್ತದಲ್ಲಿ ಹರಿಯುತ್ತಿದ್ದರಿಂದ ಎದುರಿಗೆ ಸಿಕ್ಕಿದ ಶಿಖಾರಿಗಳ ಪಂಗಡಕ್ಕೆ “ಈ ತರಹ ಹಕ್ಕೀನೆಲ್ಲ ಬೇಟೆ ಆಡಬೇಡಿ” ಎಂದು ಬುದ್ದಿಮಾತನ್ನು ಹೇಳುವ ವ್ಯರ್ಥ ಪ್ರಯತ್ನ ಮಾಡಿದ್ದೆ. ಅಲ್ಲಿಂದ ಮುಂದೆ ಸಿಕ್ಕಿದ ವಾಟೆಹಳ್ಳಿಯಲ್ಲಿ ಸೋಮ ಸುಂದರಣ್ಣನ ತೋಟದ ದರೆಯ ಮೇಲೆ ಹೋಗುತ್ತಿದ್ದೆ. ಅವರ ತೋಟದಲ್ಲಿ ಯಾವುದೋ ಬೆಳಕೊಂದು ಹರಿದಾಡಿದ್ದು ನೋಡಿ ನನ್ನ ಶಿಲಾಯುಗದ ಕಾಲದ್ದೇನೋ ಎನ್ನಿಸುವಂತಿದ್ದ ಸ್ಟೀಲ್ ಬ್ಯಾಟರಿಯ ಗುಂಡಿಯನ್ನು ಅದುಮಿದೆ. ಆಗ ಆಬೆಳಕಿನಲ್ಲಿ ಅಸ್ಪಷ್ಟವಾಗಿ ಕಾಣಿಸಿದ ಆ ಆಕೃತಿ ಆಚೇ ಪಕ್ಕದಮನೆಯ ರಾಮಭಟ್ಟರದ್ದು ಎಂದು ತಿಳಿದು ಹೋಗಿತ್ತು! ಸೋಮಸುಂದರಣ್ಣನ ತೋಟದಲ್ಲಿ ರಾಂಬಟ್ಟರಿಗೆ ಏನು ಕೆಲಸವೆಂದು ನೋಡಿದಾಗ ಅದೋ ದೂರದ ಚಬ್ಬೆ(ಬೆತ್ತದ ಬುಟ್ಟಿ)ಯಲ್ಲಿ ಹಳೇ ಅಡಿಕೆ, ಖೋಕೋ ಕಾಯಿಗಳು ಭರ್ತಿಯಾಗಿದ್ದು ಕಾಣಿಸಿತು. ರಾಂಬಟ್ಟರ ಮನೆಯದ್ದು ೩ಎಕರೆ ತೋಟ, ಸುಂದರಣ್ಣನದ್ದು ಪಾಪ ೧ಎಕರೆ ತೋಟ. ಹೀಗಿರುವಾಗಲೂ ರಾಂಭಟ್ಟರ ಈ ಕುಕೃತ್ಯ ನೋಡಿ ಅತಿಯಾಸೆಯ ಭೂತ ಎಂದುಕೊಂಡು ಕಾಲ ಹೆಜ್ಜೆ ಕಿತ್ತು ಮುಂದಿಟ್ಟಿದ್ದೆ.
ಈ ರಾತ್ರಿಯ ಸುತ್ತಾಟ, ಅದೂ ಎಕಾಂಗಿಯಾಗಿ, ಅದೆಷ್ಟೋ ದಿನದ ಮೇಲೆ, ಇದೇ ಮೊದಲಾಗಿತ್ತು. ದಾರಿಯಲ್ಲಿ ಓಡಾಡುವವರ ಬಳಿ ಎಲ್ಲಾ ಕಮಲಿಯ ಬಗ್ಗೆ ಹೇಳೀ, ಹೇಳಿ ನನಗೂ ಬೇಸರ ಬಂದುಬಿಟ್ಟಿತ್ತು. ಆದರೆ ಅವಳಿರಲಿ, ಎಲ್ಲಿಯೂ ಯಾವ ಎಮ್ಮೆಯ ಸಗಣಿಯೂ ಸಹಾ ಕಾಣಿಸಿರಲಿಲ್ಲ! ಹಲವರ ಮನೆಯ ಕೊಟ್ಟಿಗೆ, ಕೆರೆ ದಂಡೆ, ರಸ್ತೆ ಅಂಚು ಎಲ್ಲವೂ ನನ್ನ ಕಣ್ಣಿನಲ್ಲಿ ಸ್ಕ್ಯಾನ್ ಆದ ನಂತರವೂ ಕಮಲಿ ಸಿಗದದ್ದನ್ನು ನೆನಸಿಕೊಂಡಾಗ ಅಪ್ಪನಿಗೆ ಕೊಟ್ಟ ಮಾತು ಮುರಿದುಹೋಗುವ ಭಯ ಆವರಿಸಿತ್ತು. ವಾಪಾಸ್ ಮನೆಯತ್ತ ಬರುವಾಗ ನನ್ನ ಜೊತೆಯಾದ ತಳವಾರ ಬೈರಪ್ಪ ಮನುಷ್ಯನಿಂದ ಕಾಡಿಗಾಗುವ ನೋವುಗಳ ಕಥೆಗಳನ್ನು ನನ್ನೆದುರು ಹಂಚಿಕೊಂಡಿದ್ದ.

ನಾನು ಕಮಲಿಯೊಂದಿಗೆ ಮರಳುತ್ತೇನೆಂಬ ವಿಶ್ವಾಸದಲ್ಲಿ ಅಪ್ಪ ಕೊಟ್ಟಿಗೆಯ ಗೇಟನ್ನು ತೆಗೆದಿಟ್ಟುಕೊಂಡು ಕಾಯುತ್ತಿದ್ದರು, ಆದರೆ ನನ್ನ ಬರಿಗೈ ಅವರಿಗಿಂತ ಹೆಚ್ಚು ನನಗೆ ನಿರಾಸೆ ತಂದಿತ್ತು. ಎಮ್ಮೆ ಮತ್ತು ಹಳೆಯ ನೆನಪುಗಳ ಬೆನ್ನೇರಿ ಆಯಾಸವಾದ ನನ್ನನ್ನು ನನ್ನ ಪಾಡಿಗೆ ಇರಲು ಮನೆಯವರುಮಾಡಿದ ಮದುವೆಯ ಪ್ರಸ್ತಾಪ ಬಿಡಲಿಲ್ಲ. ವಯಸ್ಸಿಗೆ ಬಂದ ತಂಗಿ. “ಅಣ್ಣನ ಮದುವೆ ಆದ್ಮೇಲೆ ನಾ ಮಾಡ್ಕ್ಯತ್ತಿ” ಅಂತ ಹೇಳ್ತಿದ್ದ ಮಾಣಿ, ಈಗ ನೀ ಹೂಂ ಅಂದ್ರೆ ನಾವ್ ಜಾತಕ್ ಹೊರುಡುಸ್ತ್ಯ ನೋಡು”. ಅಪ್ಪ ತುಸು ಗಂಭೀರವಾಗಿ ಹೇಳಿದ ಈ ಮಾತು ಸ್ಲಾಗ್ ಓವರ್ನಲ್ಲಿ ಬರುವ ಮಾಲಿಂಗನ ಯಾರ್ಕರ್ ಬಾಲ್ನಂತೆ ಭಾಸವಾಯಿತು! “ಕುಸುಮಂಗೆ ಮೊದ್ಲು ಮದುವೆ ಮಾಡಿ, ಕುರಿ ಕೇಳಿ ಸಾಂಬಾರ್ ರೆಯ” ಎಂದು ಗಾದೆಯನ್ನು ಹೇಳಿ ತಪ್ಪಿಸಿಕೊಳ್ಳುವುದರಲ್ಲಿದ್ದೆ. ಆದರೆ ಅಮ್ಮ, “ಮಾಣಿ...ನೀ ಮೊದಾಲ್ ಮದ್ವೆ ಆಗದೇ ಸಮ, ಅವ್ಳು ಕೂಸು...ಅವ್ಳಿಗ್ ಗನಾ ಮಾಣಿನೇ ಸಿಗ್ತ, ಆದ್ರೆ ಹವ್ಯಕ್ ಮಾಣಿ ಮದ್ವೆ ಅಷ್ಟು ಸುಲುಭ ಅಲ್ಲ... ನಾವ್ ಈಗಿಂದನೇ ಟಾರ್ಚ್ ಬಿಡಕ್ ಸುರ್ಮಾಡಿರೆ ಮುಂದಿನ್ ವರ್ಷ ಅನ್ನೋವಷ್ಟು ಹೊತ್ತಿಗಾದ್ರೂ ಭಾವೀ ಸೊಸೆ ಬೆಳ್ಕಿಗ್ ಬರ್ತಿಕ್ಕು” ಎಂಬ ಭಾವನಾತ್ಮಕವಾದ ಕೆಲವು ಮಾತುಗಳು ನನ್ನನ್ನು ತ್ವರಿತಗತಿಯಲ್ಲಿ ನಿರ್ಣಯ ತೆಗೆದುಕೊಳ್ಳಬೇಕಾಗುವ ಥರ್ಡ್ ಅಂಪೈರ್ನಂತೆ ಆಗಿತ್ತು. ನಿಮ್ಮಿಷ್ಟದಂತೇ ಮಾಡಿ ಎಂದಿದ್ದೆನಾದರೂ ಆಗ ಸೌಗಂಧಿಕಳ ನೆನಪು ಕಾಡದೇ ಬಿಡಲಿಲ್ಲ!
ರಾತ್ರಿ ಮಲಗಿ ಬೆಳಗ್ಗೆ ಎದ್ದಿದ್ದೆ. ಹೊರಜಗುಲಿಗೆ ಬಂದೊಡನೆಯೇ ಮುದ್ದು ನಾಯಿಗಳು ನನ್ನ ದೇಹದ ಬಹುತೇಕ ಭಾಗಗಳನೆಲ್ಲಾ ತನ್ನ ನಾಲಿಗೆಗೆ ತಾಗಿಸಿಕೊಂಡಿತ್ತು. ಅಮ್ಮ ಕೊಟ್ಟ ಬಿಸಿ, ಬಿಸಿ ಸ್ಟ್ರಾಂಗ್ ಕಾಫಿಯನ್ನು ಹೀರುತ್ತಾ, ಇಂದು ರಾತ್ರಿ ಹೋಗುವ ಒಳಗೆ ಕಮಲಿಯನ್ನು ಎಲ್ಲಿ ಹುಡುಕುವುದೆಂದು ವಿಚಾರ ಮಾಡುತ್ತಿದ್ದೆ. ಆಗ ಹಿಂದಿನ ದಿನ ಮಧ್ಯಾಹ್ನ ಬಂದು ನನ್ನನ್ನು ತಮ್ಮ ಮನೆಗೆ ಆಮಂತ್ರಿಸಿ ಹೋದ ಸುಲೋಚನತ್ತೆಯ ನೆನಪಾಗಿ ತಟ್ಟೆಯಲ್ಲಿ ಇನ್ನೊಂದು ಗುಟುಕು ಕಾಫಿ ಉಳಿದಿದೆ ಎಂಬುದನ್ನೂ ಲೆಕ್ಕಿಸದೇ “ ಅಮ್ಮಾ ಪಕ್ಕದ್ ಮನೀಗ್ ಹೋಗ್ಬತ್ನೇ...” ಎಂದು ಹೇಳಿ ಹೊರೆಟೆ.
ಬೆಳಗ್ಗೆ, ಬೆಳಗ್ಗೆ ನಾನು ಹೋಗ ಬಾರದಿತ್ತೇನೋ ಎಂಬ ಅನುಮಾನದಲ್ಲೇ ಅವರ ಮನೆಯ ಉಣಗೋಲನ್ನು ತೆಗೆದೆ, ಸುಲೋಚನತ್ತೆ ಮನೆಯ ಅಂಗಳದಲ್ಲಿ ಹಲಸಿನ ಹಪ್ಪಳದ ಹಿಟ್ಟನ್ನು ಪ್ಲಾಸ್ಟಿಕ್ ಕವರ್ರಿನ ಬೆನ್ನಿಗೆ ಅಂಟಿಸುವುದರಲ್ಲಿ ಮಗ್ನಳಾಗಿದ್ದಳು. ನಾನೇ ನನ್ನನ್ನು ನೋಡಿದ್ದೇ, ಸುಲೋಚನತ್ತೆಯ ಮೊಗವು ಪೂರಿ ಅರಳಿದಂತೆ ಅರಳಿತ್ತು. “ಓ...ಹೋ...ಹೋ...ಹೋ...ಬಾರೋ...ಬಾರೋ...ಅಪ್ರೂಪಕ್ ಊರಿಗ್ ಬಂದ್ರೂ ಯಾವಾಗಿನಂಗೆ ಈ ಸರೀನೂ ಇಲ್ಲಿಗ್ ಹೊಕ್ ಹೊರಡ ಮನಸ್ ಮಾಡಿದ್ಯಲ್ಲೋ...ಖುಷಿ ಆತು” ಎಂದ ಅತ್ತೆ ನನ್ನನ್ನು ಒಳಗೆ ಕರೆದು ಬೆತ್ತದ ಕುರ್ಚಿಯ ಮೇಲೆ ಕೂರಲು ಹೇಳುವುದನ್ನು ಮರೆಯಲಿಲ್ಲ.
ಜಗಲಿಯಲ್ಲಿ ಕುಳಿತ ನನಗೆ ಕಾಣಿಸಿದ ‘ಸೌಗಂಧಿಕ ವೆಡ್ಸ್ ಪ್ರಕಾಶ್’ ಎಂಬ ಒಂಬತ್ತು ತಿಂಗಳ ಹಿಂದಿನ ಮದುವೆಯ ಬೋರ್ಡ್ ಎದೆಯನ್ನು ಚುಚ್ಚದೇ ಇರಲಿಲ್ಲ. ಅತ್ತೆ ಮಾತು ಮುಂದುವರೆಸದೇ ಬರಿಯೆ ಮತ್ತೇ? ಮತ್ತೇ ಎನ್ನುವುದರಲ್ಲಿದ್ದಳು. ನಾನೇ ಅಳೆದೂ ತೂಗಿ, ಕೊನೆಗೆ ಸೌ...ಸೌಗಂ...ಎಂದು ಅವಳ ಹೆಸರನ್ನೂ ಸಹಾ ಪೂರ್ತಿಮಾಡಲಾಗದೇ ಒದ್ದಾಡುತ್ತಿದ್ದೆ. ಅಷ್ಟರಲ್ಲಿ ಸುಲೋಚನತ್ತೆ, ಓ ಅವ್ಳ, ಬಾರ ಅಡುಗೇ ಮನಿಗೆ, ಅವ್ಳು ದೋಸೆ ಎರಿತಾ ಇದ್ದ ಅಲ್ಲೇ ಕುತ್ಗಂಡ್ ಮಾತಾಡ್ಲಕ್ಕು” ಎಂದವಳೇ ಮೇಲು ಧ್ವನಿಯಲ್ಲಿ ಕೂಗುತ್ತಾ ಸೌಗು...ಮಗಳೆ ಯಾರ್ ಬೈಂದ ನೋಡೇ...ನಿನ್ನ...” ಎನ್ನುತ್ತಾ ಮಾತು ನಿಲ್ಲಿಸಿದರು.
ದೋಸೆ ಎರೆಯುತ್ತಾ ಕುಳಿತಿದ್ದ ಸೌಗಂಧಿಕ ನಕ್ಕ ಆ ನಗು, ನನ್ನಲ್ಲಿ ಅಂದಿನ ಪ್ರೀತಿಯ ಸೆಳೆ ಬತ್ತಿಲ್ಲಾ ಎಂಬ ಸತ್ಯಕ್ಕೆ ಹಂಗಿಸಿದಂತಿತ್ತು. ಏನು ಸಾಹೇಬ್ರು ನಿನ್ನೆ ಬರಲೇ ಇಲ್ಯಲ ಎಂದಳು ಸೌ..., ಅದೆಷ್ಟೋ ದಿನಗಳ ನಂತರ ಕೇಳಿದ ಅವಳ ಧ್ವನಿ ನನ್ನಲ್ಲಿ ಹೊಸ ಪುಳಕ ಹುಟ್ಟಿಸಿತ್ತು.
“ಅದು ನಿನ್ನೆ ಇಡಿ ನಾ ನಮ್ಮನೆ ಕಮಲಿ ಹುಡ್ಕದ್ರಲ್ಲೇ ಆತು, ಅದಿನ್ನೂ ಸಿಕ್ಕಲ್ಲೆ, ಈಗ ಮತ್ ಗುಡ್ಡ ಸುತ್ತಕ್ಕು...ಅದ್ರ ಬೆನ್ ಹತ್ತಕ್ಕು” ಎಂದೆ.
ಓಹ್...ಎಂದ ಸೌಗಂಧಿಕ, ನನ್ ಮ ದ್ವೆಗಂತೂ ಬರ್ಲೆ ಸಾಹೇಬ್ರು, ಈಗ ಒಂಬತ್ ತಿಂಗ್ಳಿಗೇ ಗಂಡನ್ ಮನೆ ಬಿಟ್ ಬಂದವ್ಳಿಗೆ ನಾಲ್ಕ್ ಸಮಾದಾನದ್ ಉಪದೇಶ ಮಾಡ್ಲಕ್ಕು ತಗಾ ಎಂದುಳು. ನಾನು ಬಂದದ್ದೇ ತಪ್ಪಾಯಿತೇನೋ ಎಂದುಕೊಳ್ಳುತ್ತಾ “ನೀ ಗಂಡನ್ಬಿಟ್ಟಿದ್ದುಎಲ್ಲಾಗೊತ್ತಿರ್ಲೆ ನಿಂಗ್ ಮಾತಾಡಕ್ ತ್ರಾಸಾಗದಾದ್ರೆ ನಾ ಹೊರಡ್ತಿ” ಎಂದು ಹೇಳಿ ಹೊರಡಲನುವಾದೆ. ನನ್ನನ್ನು ತಡೆದ ಸೌಗಂಧಿಕ “ನಡೆದುದೆಲ್ಲಾ ಒಂದು ಕೆಟ್ಟ ಕನಸು ಅಂದ್ಕಂಡು ಮರ್ಯಕ್ಕೆ ಪ್ರಯತ್ನಿಸ್ತಿದ್ದಿ” ಎನ್ನುತ್ತಾ ಗಂಡನ ಮನೆ ತೊರೆಯುವುದರ ಹಿಂದಿದ್ದ ಕರುಣಾಜನಕ ಕಥೆಯನ್ನು ತೋಡಿಕೊಡಳು. ನಾನು ನನಗೆತೋಚಿದಹಾಗೆಸಮಾದಾನಮಾಡಿ, ಎದ್ದು ಹಿತ್ತಲ ಕಡೆಯ ಅಂಗಳದ ಅಂಚಿನಲ್ಲಿ ಬಿಟ್ಟ ಸೂಜು ಮೆಣಸಿನ ಕಾಯಿಯನ್ನು ಕೊಯ್ದು ಕಿಸೆಗೆ ತುರುಕುತ್ತಾ, ಎರೆಡು ವರ್ಷದ ಹಿಂದೆ ಹೋಗಿದ್ದೆ...
ಮೊದಲು “ನಾನು ನಿಮ್ಮ ಮಗಳನ್ನು ಇಷ್ಟ ಪಡುತ್ತಿದ್ದೇನೆ, ಮದುವೆಯನ್ನು ಸಹಾ ಆಗಬೇಕೆಂದಿದ್ದೇನೆ” ಎಂದಾಗ ಇದೇ ಸುಲೋಚನತ್ತೆ ಬೇರೆಯಶ್ರೀಮಂತಿಕೆಯಸಂಬಂಧಕ್ಕೋಸ್ಕರ ಹತ್ತು ಹಲವು ನೆಪ ಒಡ್ಡಿ ನನ್ನನ್ನು ಅವಳ ಮುಖ ನೋಡದಂತೆ ಮಾಡಿದ್ದರು. ಸೌಗಂಧಿಕಳೂ ಸಹಾ ನನ್ನನ್ನು ಪ್ರೀತಿಸುತ್ತಿದ್ದರೂ “ಅಡ್ಡ ಗೋಡೆಯ ಮೇಲೆ ದೀಪ ಇಟ್ಟಿದ್ದಳು. ಅವಳ ಆ ನಯವಾದ ತಿರಸ್ಕಾರವನ್ನು ಮರೆಯುವುದು ನನಗೆ ಅಷ್ಟು ನಯವಾಗಿರಲಿಲ್ಲ!
ನನ್ನ ಯೋಚನಾ ಲಹರಿಗೆ ಬ್ರೇಕ್ ಹಾಕಿದ ಸೌಗಂಧಿಕ “ ನನ್ನ ಕಥೆನೆಲ್ಲಾ ಹೇಳಿದ್ದಿ, ಈಗ್ಲೂ ಕನ್ಸಲ್ಲಿ ನೀನೇ ಕಾಣ್ತಿರ್ತೆ, ಅಂದಂಗೆ ಒಂಬತ್ತಿಂಗಳು ಆಗಿದ್ದು ಮದುವೆ ಆಗಿ ಅಷ್ಟೆ...ಇನ್ನು ಮೂರ್ ತಿಂಗ್ಳೆಲ್ಲಾ ಆಗಲ್ಲೆ"ಎನ್ನುತ್ತಾ ನಾಚಿಕೊಂಡಳು. ನಾ ಕೇಳದೆಯೇ ಬಂದ ಈ ಉತ್ತರಕ್ಕೆ ತತ್ತ ಉತ್ತರದಿಂದ ಆಶ್ಚರ್ಯಕ್ಕೊಳಗಾಗಿದ್ದೆ. ಅಷ್ಟರಲ್ಲಿ ಒಳಗಿನಿಂದ ಬಂದ ಅತ್ತೆ, “ಅಪ್ಪೀ ಒಂದ್ ಕವರ್ ಒಳಗಡೆ ಹತ್ ಜೀರಿಗೆ ಮಾವಿನ್ ಹಣ್ ಹಾಕಿದ್ದಿ..., ಅದ್ರ ನೀರ್ಗೊಜ್ಜು ನಿಂಗೆ ರಾಶಿ ಇಷ್ಟ್ವಡದಲೋ...ಹೋಗಕಾರೆ ಮರೀದೆ ತಗಂಡ್ ಹೋಗು” ಎಂದರು. ನಾನು ತಲೆ ಅಲ್ಲಾಡಿಸಿದೆ. ಮಾತು ಮುಂದುವರೆಸಿದ ಸೌಗಂಧಿಕ “ ನಿಂಗೆ ಇವತ್ ರಾತ್ರೆ ಒಳಗೆ ಎಮ್ಮೆ ಸಿಗ್ತೋ ಇಲ್ಯೋ ಗೊತ್ತಿಲ್ಲೆ, ಆದ್ರೆ ನೀ ಹೂಂ ಅಂದ್ರೆ ನಾನಂತು ನಿಂಗ್ ಸಿಕ್ತಿ!! ನೀ ದೊಡ್ ಮನ್ಸ್ ಮಾಡಕ್ಕು ಅಷ್ಟೆ” ಎಂದಿದ್ದಳು. ನನಗೆ ಕೈಯಲ್ಲಿದ್ದ ಸೂಜಿ ಮೆಣಸನ್ನು ಮತ್ತೆಲ್ಲೋ ಹಾಕಿ ಉಜ್ಜಿದಂತಾಗಿತ್ತು!! ಸೌಗಂದಿಕ ಕೊಟ್ಟ ಆಫರ್. ಉಗಳಲೂ ಆಗದ, ನುಂಗಲೂ ಆಗದ ತುಪ್ಪದಂತೆ ಭಾಸವಾಗಿತ್ತು.
ನಾನು ಯಾವ ಉತ್ತರವನ್ನೂ ಕೊಡದೇ “ಸುಲೋಚನತ್ತೆ ನಾ ಹೋಗ್ ಬತ್ನೇ” ಎಂದು ಹೊರಡುವುದರಲ್ಲಿದ್ದೆ, ಅಷ್ಟರಲ್ಲಿ ವಾಯ್ಂ... ಎಂಬ ಕೂಗು ನನ್ನ ಕಿವಿಯನ್ನು ನೆಟ್ಟಗೆ ಮಾಡಿತ್ತು! ಹೌದು, ಕೂಗಿದ್ದು ಕಮಲಿಯೇ ಎಂದು ಕಚಿತವಾದ ನಂತರ ಅವರ ಮನೆಯ ಕೊಟ್ಟಿಗೆಯತ್ತ ಓಡಿದ್ದೆ. ಅಲ್ಲಿ ನೋಡಿದರೆ ನಮ್ಮ ಕಮಲಿ ಸೌಗಂಧಿಕಳ ಮನೆಯ ’ಗಜ್ಜು’ ಕೋಣದೊಂದಿಗೆ ಸರಸವಾಡುತ್ತಿತ್ತು. ಎರೆಡೂ ಸಹಾ ಹಲಸಿನ ಗುಜ್ಜನ್ನು ಜಗಿಯುತ್ತಿದ್ದದ್ದು ಯಾವುದೋ ಭಾಷೆಯಲ್ಲಿ ಇವು ಮಾತನಾಡಿಕೊಳ್ಳುತ್ತಿದೆ ಎಂಬಂತೆ ತೋರುತ್ತಿತ್ತು. ಕಮಲಿಯನ್ನು ನೋಡಿದ್ದೇ ನಾನದರ ಮೈ ಸವರಿ ನಿಶ್ಚಿಂತೆಯ ನಿಟ್ಟುಸಿರು ಬಿಟ್ಟೆ. ಮತ್ತೆ ಏರು ಧ್ವನಿಯಲ್ಲಿ “ ನನಗೆ ನನ್ನ ಕಮಲಿ ಸಿಕ್ಕಿದ, ನನಗಷ್ಟೇ ಸಾಕು” ಎಂದು ಹಿತ್ತಿಲ ಬಾಗಿಲ ಕಂಭಕ್ಕೆ ಒರಗಿ ನಿಂತಿದ್ದ ಸೌಗಂಧಿಕಳ ಮುಖವನ್ನುಮ್ಮೆ ನೋಡಿದೆ, ಅದು ಬಾಡಿದ್ದು ಕಾಣಿಸಿತು. ಇನ್ನೇನು ಕಮಲಿಯನ್ನು ಹೊಡೆದುಕೊಂಡು ಹೊರಡಬೇಕೆನ್ನುವಷ್ಟರಲ್ಲಿ ಬಂದ ಸುಲೋಚನತ್ತೆ “ ಅರೇ ಮಾಣಿ ಅಷ್ಟ್ ಹೇಳಿದ್ರೂ ಈ ಮಾವಿನ್ ಹಣ್ಣಿನ್ ಚೀಲ ಬಿಟ್ಟಿಕ್ ಹೊರ್ಟಿದ್ಯಲೋ... ತಗಳೋ” ಎಂದಳು. ಅದಕ್ಕೆ ನಾನು “ನಮಗೆ ದಕ್ಕಕ್ಕು ಅನ್ನುವ ಯೋಗ ಇದ್ದಿದ್ರೆ ನಮಗೆ ದಕ್ಕೇ ದಕ್ತು ಅಲ್ದಾ ಅತ್ತೆ??” ಎಂದು ವ್ಯಂಗ್ಯವಾಡುತ್ತಾ ಮತ್ತೊಮ್ಮೆ ಸೌಗಂಧಿಕಳ ಮುಖ ನೋಡಿದೆ. ಈಬಾರಿ ಅವಳ ಮುಖ ಸ್ವಲ್ಪ ಅರಳಿತ್ತು.

ಅಂತೂ ಕಮಲಿಯನ್ನು ಹೊಡೆದುಕೊಂಡು ಮನೆಯ ಕೊಟ್ಟಿಗೆಯಲ್ಲಿ ಕಟ್ಟುತ್ತಿದ್ದಂತೆಯೇ ಮನೆಯಲ್ಲಿ ಹಬ್ಬದ ವಾತಾವರಣ ಸೃಷ್ಠಿಯಾಗಿತ್ತು. ಕೊನೆಗೂ ಅಪ್ಪನ ದೃಷ್ಟಿಯಲ್ಲಿ ನಾನೊಬ್ಬ ಹೀರೋ ಆಗಿದ್ದೆ ಎಂಬುದು ಬಹಳಾ ಸಂತಸ ಕೊಟ್ಟಿತು.
ನಂತರ ಸೌಗಂಧಿಕಳ ವಿಷಯದ ಬಗ್ಗೆ ಧೀರ್ಘ ಚರ್ಚೆಗಳು ನಡೆದಿದ್ದವು. ಈಗಾಗಲೇ ಮದುವೆಯಾಗಿ ಗಂಡನನ್ನು ಬಿಟ್ಟ ಹುಡುಗಿಯನ್ನು ಮದುವೆಯಾಗುತ್ತೇನೆ ಎಂದರೆ ಯಾವ ತಂದೇ ತಾಯಿ ಒಪ್ಪುತ್ತಾರೆ ಹೇಳಿ? ಆದರೆ ಸೌಂಗಂಧಿಕಳು ನಮ್ಮ ಮನೆಗೆ ಆಪ್ತಳಾದವಳಾದ್ದರಿಂದ ಮತ್ತು ನಾವಿಬ್ಬರೂ ಒಬ್ಬರನ್ನೊಬ್ಬರು ಬಹುವಾಗಿ ಪ್ರೀತಿಸುತ್ತಿದ್ದ ವಿಷಯ ಗೊತ್ತಿದ್ದುದ್ದರಿಂದ ಅಪ್ಪ ಅಮ್ಮ ನಮ್ಮ ಮದುವೆಗೆ ಒಪ್ಪಿಗೆ ನೀಡಿದರು. ಈ ವಿಷಯವನ್ನು ನನ್ನ ತಂಗಿ ಪಕ್ಕದ ಮನೆಗೆ ಮುಟ್ಟಿಸಿ ಬಂದಿದ್ದಳು!!
ನಾನು ಅಪ್ಪ ಅಮ್ಮನ ಪಾದಕ್ಕೆ ನಮಸ್ಕರಿಸುತ್ತಾ ಸಿಂಪಲ್ಲಾಗಿ ಮದುವೆ ಆಗುವೆ ಎಂದು ಹೇಳುವುದನ್ನು ಮರೆಯದೇ, ಹೆಣಬಾರದ ಲಗೇಜನ್ನು ಅಪ್ಪನ ಬೆನ್ನಿಗೆ ಹಾಕಿ ನಾನೇ ಸ್ಕೂಟರ್ನ ಸಾರಥಿಯ ಸ್ಥಾನದಲ್ಲಿ ಕುಳಿತಿದ್ದೆ.
ಇದೇ ಭಾನುವಾರ ನಮ್ಮೂರಿನಲ್ಲೇ ನನ್ನ ಮಧುವೆಯನ್ನು ಸಿಂಪಲ್ಲಾಗಿ ಇಟ್ಟುಕೊಂಡಿದ್ದೇವೆ, ತಾವೆಲ್ಲರೂ ಕುಳಿತಲ್ಲಿಂದಲೇ ಆಶೀರ್ವಧಿಸಬೇಕಾಗಿ ವಿನಂತಿ.