Click here to Download MyLang App

ಈಶಾ - ಬರೆದವರು : ಅಜಯ್ ಕುಮಾರ್ ಎಂ ಗುಂಬಳ್ಳಿ

ಅವಳ ಹೆಸರು ಈಶಾ. ಬೆಂಗಳೂರಿನ ಹೋಟೆಲ್ ಮಾಲೀಕನ ಮಗಳು. ಅವಳ ತಂದೆಯ ಹೋಟೆಲ್‍ನಲ್ಲಿಯೇ ಹಿತೇಶ್ ಕೆಲಸಕ್ಕಿದ್ದದ್ದು. ಆಗಾಗ ಹೋಟೆಲ್ಲಿಗೆ ಬರುತ್ತಿದ್ದಳು. ಅವಳನ್ನು ಹಿತೇಶ್ ಮೊದಲು ನೋಡಿದ್ದು ಮೋಹನ್ ಸರ್ ಫೋನಿನಲ್ಲಿ. ಆಗ ಅವನಿಗೆ ಆಶ್ಚರ್ಯವಾಗಿತ್ತು. ಓನರ್ ಅವನ ಕೈಗೆ ಫೋನನ್ನು ಕೊಟ್ಟಾಗಲೆಲ್ಲ ಅವನು ಈಶಾಳ ಫೋಟೋವನ್ನು ನೋಡುತ್ತಿರುತ್ತಿದ್ದ. ಅವನಿಗೆ ಇಷ್ಟವಾಗಿಬಿಟ್ಟಿದ್ದಳು. ಆದರೆ ಅವಳಿಗೆ ಅವನ್ಯಾರೆಂದೇ ಗೊತ್ತಿರಲಿಲ್ಲ. ಮೋಹನ್ ಸರ್ ಮನೆಯಲ್ಲಿ ‘ನಿತೇಶ್ ಒಳ್ಳೆಯ ಹುಡುಗ’ ಎಂದು ಹೇಳಿದ್ದರಂತೆ. ಅದನ್ನು ಅವನಿಗೆ ತಿಳಿಸಿದ್ದು ಬಾಲಣ್ಣ. ಹೋಟೆಲ್ ‘ಪ್ರಕೃತಿ’ ನಲ್ಲಿ ಬಾಲಣ್ಣ ಹೆಡ್‍ಕುಕ್. ಒಂದು ಭಾನವಾರ ಬಾಲಣ್ಣ, ಹಿತೇಶ್‍ನನ್ನು ಮೋಹನ್ ಸರ್ ಮನೆಗೆ ಹೋಗಲು ಕರೆದ. ಅವನು ಅತ್ಯಂತ ಖುಷಿಯಿಂದ ಹೋಗಿದ್ದ. ಈಶಾ ಹಿತೇಶ್ ಬಗ್ಗೆ ಬಾಲಣ್ಣನತ್ತಿರ ಕೇಳಿದ್ದಳಂತೆ. ಆ ವಿಷಯವನ್ನು ಅವನು ಎಣ್ಣೆ ಹೊಡೆಯುವಾಗ ನಿತೇಶ್‍ಗೆ ಹೇಳಿದ್ದ. ಅಂದು ಈಶಾ ಇಂಗ್ಲೀಷ್‍ನಲ್ಲಿ ಮಾತಾಡುತ್ತ ಬೆರಗು ಹಿಡಿಸಿದ್ದಳು. ತನಗೆ ತಿಳಿದಿದ್ದ ಅರೆಬೆಂದ ಇಂಗ್ಲೀಷಿನಲ್ಲಿ ನಿತೇಶ್ ಮಾತನಾಡಿ ನಿಟ್ಟುಸಿರು ಬಿಟ್ಟಿದ್ದ. ಅವಳು ನಿತೇಶ್ ಜೊತೆ ತುಂಬಾ ಕ್ಯಾಶುವಲ್ ಆಗಿ ಮಾತನಾಡತ್ತ, ತಾನು ಬರೆದಿದ್ದ ಚಿತ್ರಗಳನ್ನು ತೋರಿಸಿದಳು. ತನ್ನ ಸ್ಕೂಲು ಮತ್ತು ಶಿಕ್ಷಕರ ಬಗ್ಗೆಯೂ ಹೇಳಿದಳು. ಕೊನೆಗೆ ‘ಲವ್’ ಬಗ್ಗೆ ಮಾತು ಆರಂಭಿಸಿದಾಗ ನಿತೇಶ್‍ನಿಗೆ ಹೃದಯ ಬಡಿತ ಹೆಚ್ಚಾಯಿತು.
‘ನಿಮ್ಗೆ ಲವ್ ಮ್ಯಾರೆಜ್ ಇಷ್ಟನಾ? ಅರೆಂಜ್ ಮ್ಯಾರೇಜಾ?’ ಪ್ರಶ್ನಿಸಿದಳು.
‘ನಂಗೆ ಲವ್ ಮ್ಯಾರೆಜ್’ ನಿತೇಶ್ ಗೊಂದಲದಲ್ಲಿದ್ದ.
‘ಯಾಕೆ? ಕಾರಣ ಕೊಡಿ’ ಅಂದಳು.
ಏನು ತಾನೇ ಹೇಳುತ್ತಾನೆ ನಿತೇಶ್. ತನಗೆ ತೋಚಿದ್ದನ್ನು ಕಂಠಪಾಠದಂತೆ ಒಪ್ಪಿಸಿದ.
ಈಶಾ ನಕ್ಕಳು. ಕೆನ್ನೆಯಲ್ಲಿ ಗುಳಿ ಎದ್ದವು.
ಒಂದೇ ದಿನಕ್ಕೆ ಬಹಳ ಪರಿಚಯ ಇರುವಂತೆ ಮಾತನಾಡುವ ಈಶಾ ಆಕರ್ಷಕ ಎನಿಸಿಬಿಟ್ಟಳು. ನಿತೇಶ್‍ಗೆ ಸಂಭ್ರಮ ಉಂಟಾಗಿತ್ತು.
ರುಕ್ಮಿಣಿ ಮೇಡಂ ತಟ್ಟೆಯಲ್ಲಿ ಮಾವಿನ ಹಣ್ಣುಗಳನ್ನು ತಂದು ‘ತಗೊಳ್ಳಿ’ ಅಂದರು.
ನಿತೇಶ್ ಅವರ ಮುಂದೆ ಕೂತಿದ್ದರಿಂದಲೇ ಪುಳಕಿತನಾಗಿದ್ದ. ಇನ್ನು ಹಣ್ಣು ತಿನ್ನುವುದು ಅವನಿಂದ ಸಾಧ್ಯವಿರಲಿಲ್ಲ. ‘ಬೇಡ ಮೇಡಂ’ ಎಂದ ಸಂಕೋಚದಿಂದ.
‘ನಿಮ್ ಬಗ್ಗೆ ಅಪ್ಪ ಹೇಳಿದಾರೆ. ಪ್ಲೀಸ್ ತಿನ್ನಿ’ ಅಂದಳು ಈಶಾ.
ರುಕ್ಮಿಣಿ ಮೇಡಂ ಸಹ ‘ನಿತೇಶ್ ತಿನ್ನು’ ಒತ್ತಾಯ ಪಡಿಸಿದರು.
ಬಾಲಣ್ಣ ‘ತಗೋ’ ಅಂದನು.
ಬರೀ ಫೋಟೋದಲ್ಲಿ ನೋಡಿದ್ದ ನಿತೇಶ್‍ಗೆ ಅವಳೊಟ್ಟಿಗೆ ನೇರವಾಗಿ ಮಾತಾಡಿ, ಹರಟಿದ್ದು ಹುಚ್ಚು ಹಿಡಿಸಿತು. ಒಂದೇ ದಿನಕ್ಕೆ ವರುಷಗಳ ಸಂಬಂದದಂತೆ ಅನುಭವವಾಯಿತು. ಈಶಾ ಯಾವಾಗಲೂ ತನ್ನೊಟ್ಟಿಗೆ ಇರಬೇಕೆಂಬ ಹೆಬ್ಬಯಕೆ ತಕ್ಷಣದಿಂದಲೇ ಅವನಲ್ಲಿ ಉಧ್ಬವಿಸಿತು.
‘ನಿಮ್ಮ ಫೇವರೇಟ್ ಹೀರೋ ಯಾರು?’ ಕೇಳಿದಳು.
ಯಾರನ್ನೇಳುವುದೆಂದು ಕನ್ಪ್ಯೂಸ್ ಆದ. ಅವಳೇ ಮುಂದುವರೆಸಿ ನನಗೆ ‘ಧನುಷ್’ ಎಂದಳು.
‘ಹೌದಾ’ ಅಂದು ತನಗೆ ಗೊತ್ತಿದ್ದ ಧನುಷ್ ಸಿನಿಮಾಗಳ ಹೆಸರುಗಳನ್ನು ಹೇಳಿದ.
ಈಶಾಗೆ ತುಂಬಾ ಖುಷಿಯಾಯಿತು. ಒಳಕ್ಕೆ ಹೋಗಿ ನೋಟ್‍ಬುಕ್ ಒಂದನ್ನು ತಂದು ‘ಪ್ಲೀಸ್ ಏನಾದ್ರು ಬರೀರಿ’ ನಿತೇಶ್‍ನ ಕೈಗಿಟ್ಟಳು.
ಇದ್ದಷ್ಟು ಗಾಬರಿಗೊಂಡ. ಕೈ ನಡುಗಲು ಶುರುವಾಯಿತು. ಸುತ್ತಲೂ ಒಂದು ರೌಂಡು ಕತ್ತು ತಿರುಗಿಸಿದ. ಏನೂ ಹೊಳೆಯಲಿಲ್ಲ.
‘ನಿಮಗಿಷ್ಟವಾದ ಯಾವುದೇ ವಾಕ್ಯ’ ಅಂದಳು. ಅವಳ ಹಲ್ಲುಗಳು ಆಕರ್ಷಕವಾಗಿದ್ದವು.
‘ಸ್ವಪ್ರಯತ್ನದಿಂದ ಸರ್ವತೋಮುಖ ಏಳಿಗೆ ಸಾಧಿಸಬಲ್ಲ ಒಬ್ಬ ವ್ಯಕ್ತಿ ಈ ಪ್ರಪಂಚದಲ್ಲಿ ಇದ್ದಾನೆ. ಆತನು ನೀನೆ’ ಎಂದು ಬರೆದ.
ಕಾಲೇಜಿನ ಪ್ರವೇಶದ್ವಾರದಲ್ಲಿದ್ದ ಈ ಸಾಲುಗಳು ಇವನ ತಲೆಯಲ್ಲಿ ಇನ್ನೂ ಉಳಿದಿತ್ತು. ಅವಳ ಪ್ರಶಂಸಗೆ ಕಾದಿದ್ದ. ನೋಟ್ಬುಕ್ ನೋಡಿದವಳು
‘ಕನ್ನಡ ನಂಗೆ ಓದೋಕೆ ಬರಲ್ಲ. ಇಂಗ್ಲೀಷ್‍ನಲ್ಲಿ ಬರೀರಿ’ ಎಂದಳು.
ನಿತೇಶ್‍ನಿಗೆ ಈಜು ಬರದವನು ಕೆರೆಗೆ ಬಿದ್ದ ಹಾಗಾಗಿತ್ತು.
ಕೊನೆಗೆ ‘ಫ್ರೆಂಡ್ಶಿಪ್ ಈಸ್ ಪ್ಯೂರೆಸ್ಟ್ ಲವ್’ ಬರೆದು ಸಂಕೋಚದಿಂದಲೇ ಕೊಟ್ಟ.
‘ವಾವ್ ಸೂಪರ್’ ಉಧ್ಗರಿಸುತ್ತ ಈಶಾ ‘ಯು ಆರ್ ಸೋ ಬ್ರಿಲಿಯಂಟ್’ ಎಂದಳು.
ಮನಸ್ಸಿಗೆ ಬಂದಿದ್ದನ್ನು ಹೇಳಿದ್ದು ಕೈ ಹಿಡಿದಿತ್ತು. ಬಾಲಣ್ಣ ಅವನಿಗೆ ಮತ್ತಷ್ಟು ಬಿಲ್ಡಪ್ ಕೊಟ್ಟು ‘ಕೆಲಸದಲ್ಲೂ ಇವನು ಗುಡ್’ ಅಂದಾಗ ಈಶಾ ಪ್ರೀತಿಯ ಇನ್ನೊಂದು ನಗೆ ಬೀರಿದಳು. ಆ ನಗೆಯಲ್ಲಿ ಗಾಢವಾದ ಲವ್ ಇತ್ತು.
‘ಸರಿ ಮೇಡಂ ನಾವಿನ್ನು ಹೋಗ್ತೀವಿ’ ಬಾಲಣ್ಣ ಹೇಳಿದಾಗ
ರುಕ್ಮಿಣಿ ಮೇಡಂ ಮತ್ತು ಈಶಾ ನಗುವಿನಿಂದ ಅವರಿಗೆ ‘ಬೈ’ ಹೇಳಿದರು.
ಬೈಕ್ ಅವರ ಮನೆಯಿಂದ ಇಪ್ಪತ್ತು ಮೀಟರ್ ದೂರಕ್ಕೆ ಬಂದಿತ್ತು. ನಿತೇಶ್‍ನಲ್ಲಿ ಸಂತಸದ ಉಸಿರು. ಬಾಲಣ್ಣ ಬಾಯ್ತೆರೆದು
‘ಏನಪ್ಪ ಹೀರೋ. ಈಶಾ ನಿನ್ನ ಜೊತೆ ತುಂಬಾ ಹೊತ್ತು ಮಾತಾಡಿದ್ಲು. ಏನ್ ಮೋಡಿ ಮಾಡ್ದೆ’ ಕೇಳಿದನು.
‘ನನಗೆ ಗೊತ್ತಿಲ್ಲ ಅಣ್ಣ’ ಅವಳ ಗುಂಗಲ್ಲೇ ಉತ್ತರಿಸಿದ.
‘ಹುಡುಗಿ ಚೆನ್ನಾಗಿದಾಳೆ’ ಅನ್ನುತ್ತ ಬಾಲಣ್ಣ ಬೈಕಿನ ಬೇಗವನ್ನು ಹೆಚ್ಚಿಸಿದ. ನಿತೇಶ್‍ಗೆ ಪ್ರೇಮದ ಅಮಲಿನ ಮುಂದೆ ಬೈಕಿನ ಸ್ಪೀಡ್ ತುಂಬಾ ಕಡಿಮೆ ಎನ್ನಿಸಿತು.
***
ಮುಂಜಾನೆಗೆ ತರಾವರಿ ತಿಂಡಿಗಳು ರೆಡಿಯಾಗಿದ್ದವು. ಇಬ್ಬರು ಹಿಂದಿ ಹುಡುಗರು ಟೇಬಲ್‍ಗಳನ್ನು ಸ್ವಚ್ಛ ಮಾಡುತ್ತಿದ್ದರು. ರಾಜಣ್ಣ ಟೀ ಕೌಂಟರ್‍ನಲ್ಲಿದ್ದ. ಬಾಲಣ್ಣ ಮತ್ತು ನಿತೇಶ್ ತಿಂಡಿಯನ್ನು ಪಾರ್ಸಲ್ ಕಟ್ಟುತ್ತಿದ್ದರು. ಹೋಂಡಾ ಆಕ್ಟೀವದಲ್ಲಿ ಬರುತ್ತಿದ್ದ ಮೋಹನ್ ಸರ್ ಹೋಟೇಲ್ಲಿಗೆ ಹತ್ತಿರಾಗುತ್ತಿದ್ದಂತೆ ಹಾರ್ನ್ ಮಾಡುತ್ತಿದ್ದರು. ಅದು ಅವರು ಬರುತ್ತಿದ್ದಾರೆಂದು ಅವರೇ ಕೆಸಲಗಾರರಿಗೆ ನೀಡುತ್ತಿದ್ದ ಸೂಚನೆ. ಹೋಟೆಲ್ಲಿಗೆ ಬಂದು ಎಲ್ಲವನ್ನು ಗಮನಿಸಿ ಶ್ರೀನಿವಾಸನಿಗೆ ಗಂಧದಕಡ್ಡಿ ಹಚ್ಚುವುದು ಅವರ ನಿತ್ಯದ ರೂಢಿ.
‘ಅಣ್ಣಾ, ಮೋಹನ್‍ಸರ್ ಬಂದ್ರು’ ನಿತೇಶ್ ಹೇಳಿದಾಗ ಕೆಲಸಗಾರರು ಚುರುಕಾದರು. ಬಾಲಣ್ಣ ಓಡಿಬಂದು ‘ಸರ್ ನಮಸ್ತೆ’ ಅಂದ. ‘ನಮಸ್ತೆ’ ಎಂದ ಓನರ್ ಎಲ್ಲರನ್ನು ಗೌರವಿಸುತ್ತಿದ್ದರು. ಅಷ್ಟೇ ನಿಷ್ಠುರವಾದಿಯೂ ಆಗಿದ್ದರು.
ಕಸ್ಟಮರ್ಸ್ ಬರತೊಡಗಿದರು. ಅವರಿಗೆ ಬೇಕಾದ್ದನ್ನು ಸಪ್ಲಯರ್ಸ್ ನೀಡುತ್ತಿದ್ದರು. ಮೋಹನ್‍ಸರ್ ಕೆಲಸಗಾರರಿಗೆ ಆಗಾಗ ಎಚ್ಚರಿಕೆ ನೀಡುತ್ತ ಬಿಲ್ ತೆಕ್ಕೊಳ್ಳುತ್ತಿದ್ದರೆ, ಬಾಲಣ್ಣ ಸುಟ್ಟ ದೋಸೆ, ಮಸಾಲೆ, ಈರುಳ್ಳಿ ದೋಸೆಗೆ ಚಟ್ನಿ, ಸಾಗು ಹಾಕಿ ನಿತೇಶ್ ಇಡುತ್ತಿದ್ದ. ಸಪ್ಲಯರ್ಸ್ ಅವುಗಳನ್ನು ಗಿರಾಕಿಗಳ ಬಳಿ ಒಯ್ಯುತ್ತಿದ್ದರು.
‘ನಿತೇಶ್ ತಿಂಡಿ ತಗೊಂಡ್ ಬಾ’ ಮೋಹನ್‍ಸರ್ ಕೂಗಿದರು.
ತಟ್ಟೆಗೆ ಎರಡು ಚಪಾತಿಯೊಟ್ಟಿಗೆ ಸ್ವಲ್ಪ ರೈಸ್‍ಬಾತ್ ಹಾಕೊಂಡು ಟೇಬಲ್ ಮೇಲಿಟ್ಟು, ನೀರು ತರಲು ಓಡಿದ. ಗಲ್ಲದ ಮೇಲಿದ್ದ ಫೋನ್ ರಿಂಗಣಿಸಿತು.
ಎತ್ತಿ ‘ಹೆಲೋ’ ಅಂದ ನಿತೇಶ್.
‘ಡ್ಯಾಡಿ ಇಲ್ವಾ’ ಈಶಾ ಕೇಳಿದಳು.
‘ತಿಂಡಿ ತಿಂತಿದಾರೆ’ ತಡವರಿಸಿದ.
‘ಓಕೆ’ ಕರೆ ಕಟ್ಟಾಯಿತು.
ನಿತೇಶನ ಹೃದಯ ಕಂಪಿಸುತ್ತಲೇ ಇತ್ತು. ಮಾಡಬೇಕಾದ ಕೆಲಸ ಬಿಟ್ಟು ಎಲ್ಲೋ ಇಳಿದಿದ್ದ.
ಸಂಜೆಗೆ ಮೋಹನ್ ಸರ್ ಸಕ್ಕರೆ ಇಲ್ಲದ ಟೀ ಕುಡಿಯುತ್ತ ಬಾಲಣ್ಣನೊಟ್ಟಿಗೆ ಮಾತನಾಡುತ್ತಿದ್ದರು. ವ್ಯವಹಾರದ ವಿಷಯ ಆಗಿರಲು ಸಾಧ್ಯವೇ ಇಲ್ಲ. ಯಾಕೆಂದರೆ ಇಬ್ಬರೂ ಗಹಗಹಿಸಿ ನಗುತ್ತಿದ್ದರು. ಗಿರಾಕಿಗಳು ಅತಿ ವಿರಳವಿದ್ದರಿಂದ ಹೋಟೆಲ್ ಖಾಲಿ ಖಾಲಿ ಹೊಡೀತಿತ್ತು. ಮೋಹನ್ ಸರ್ ಗಲ್ಲದ ಬಳಿ ಹೋಗಿ ಲಾಕ್ ಮಾಡಿಕೊಂಡು ಬಾಲಣ್ಣನ ಉದ್ಯಾನವನಕ್ಕೆ ಜೊತೆ ಹೊರಟರು. ಅವರ ಮೊಬೈಲ್ ಡೊನೇಷನ್ ಬಾಕ್ಸ್ ಪಕ್ಕದಲ್ಲಿತ್ತು. ವಾಹನಗಳ ದಟ್ಟನೆ ಕಿವಿಗೂ, ಕಣ್ಣಿಗೂ ಕಿರಿಕಿರಿ ಉಂಟುಮಾಡುವಷ್ಟಿತ್ತು.
ಗಲ್ಲದ ಪಕ್ಕದಲ್ಲಿ ಕೂತಿದ್ದ ನಿತೇಶ್, ನೀರು ತುಂಬಿದ ಲೋಟದೊಳಗಿದ್ದ ನಿಂಬೆ ಹಣ್ಣನ್ನು ದಿಟ್ಟಿಸುತ್ತಿದ್ದ. ಅಷ್ಟಕ್ಕೆ ಫೋನ್ ರಿಂಗಣಿಸಿತು. ರಿಸೀವ್ ಮಾಡಿ
‘ಹೆಲೋ’ ಎಂದ.
ಆ ಕಡೆಯಿಂದ ‘ಡ್ಯಾಡಿ’ ಎಂದಳು ಈಶಾ.
‘ಮೋಹನ್ ಸರ್ ವಾಕಿಂಗ್‍ಗೆ ಹೋಗಿದಾರೆ’ ಮೆಲ್ಲಗೆ ಅಂದ.
‘ಹೌದಾ. ಕಾಫಿ ಆಯ್ತ ನಿತೇಶ್’ ಅಂದಳು.
‘ಆಯ್ತು’ ಎಂದವನಲ್ಲಿ ಖುಷಿ.
ಈಶಾಳಿಂದ ಪಟಾಕಿಯಂತೆ ನಗೆ ಉಕ್ಕಿಸುವ ನುಡಿಗಳು ಹೊರಬಿದ್ದವು. ನಿತೇಶ್ ಕೂಡ ನಕ್ಕ. ತಾನು ಒಂದೆರಡು ನಗೆ ಬಾಂಬು ಇಟ್ಟ. ಅವಳು ಗಂಭೀರವಾಗಿ
‘ಅಪ್ಪನ ಫೋನ್ ನೀವ್ಯಾಕೆ ತಗೊಂಡಿದ್ದೀರಾ?’ ಅಂದಳು.
ದಿಗ್ಭ್ರಾಂತನಾಗಿ ನಿತೇಶ್ ಕರೆ ಕಟ್ಟು ಮಾಡಿದ. ಅವನೆದೆಯಲ್ಲಿ ಅವ್ಯಕ್ತ ಭಯ ಶುರುವಾಯಿತು.
ಫೋನ್ ಬಡಕೊಳ್ಳುತ್ತಲೇ ಇತ್ತು. ರಿಸೀವ್ ಮಾಡಿ ‘ಮೋಹನ್ ಸರ್ ಇಲ್ಲ’ ಕೋಪದಿಂದ ನುಡಿದ. ಆ ಕಡೆಯಿಂದ ಒಂದೇ ಸಮನೆ ನಗು. ಇವನಿಗೆ ವಿಚಿತ್ರ ಎನಿಸಿ ‘ಮೇಡಮ್ ಪ್ಲೀಸ್ ಹೆದರಿಸಬೇಡಿ’ ವಿನಂತಿಸಿದ. ನಿಲ್ಲದ ನಗುವಿನಿಂದಲೇ ‘ಐ ಲೈಕ್ ಯು’ ಅಂದಳು ಈಶಾ. ಹೆದರಿ ನಿತೇಶ್ ಫೋನಿಟ್ಟ.
ಮೋಹನ್ ಸರ್, ಬಾಲಣ್ಣ ಬಂದರು. ಆಗ ಸಮಯ ಎಂಟೂ ಮೂವತ್ತು. ಹೋಟೆಲ್ ಮುಗಿಯಲು ಇನ್ನೂ ಒಂದು ಗಂಟೆ ಬೇಕಿತ್ತು.
***
ಇಂದು ನಿತೇಶ್ ಕೆಲಸ ಬಿಟ್ಟು ಊರಿಗೆ ಹೋಗಬೇಕಿತ್ತು. ಅದು ಅವನಿಗೆ ಇಷ್ಟವೇ ಇರಲಿಲ್ಲ. ಓದಿಗೆ ತಿಲಾಂಜಲಿ ಹೇಳಿಬಿಡುವ ಮನಸ್ಸು ಮಾಡಿದ್ದರೂ, ಅವ್ವ-ಅಪ್ಪರ ಒತ್ತಾಯಕ್ಕಷ್ಟೇ ಕಾಲೇಜಿಗೆ ಸೇರಿಕೊಳ್ಳಬೇಕಿತ್ತು. ಈಶಾಳ ಪ್ರೀತಿ ಬಿಟ್ಟು ಹೋಗುವುದು ಅವನಿಗೆ ಬಹಳ ದುಸ್ತರ ಎನಿಸಿತ್ತು. ದ್ವಂದ್ವದಲ್ಲಿದ್ದ. ಬೆಂಗಳೂರು ಬಿಟ್ಟು ಹೋಗಲೇ ಬೇಕಿತ್ತು. ಆದರೆ ಅವನಿಗಿದ್ದ ದೊಡ್ಡ ಚಿಂತೆ ಎಂದರೆ ಈಶಾಳೊಟ್ಟಿಗೆ ಹೇಗೆ ಸಂಪರ್ಕದಲ್ಲಿರುವುದು ಎಂದು.
ಈಶಾಳ ನೆನಪಿಂದ ಹೊರಬರಲು ನಿತೇಶ್‍ಗೆ ಸಾಧ್ಯವಾಗಿರಲಿಲ್ಲ. ಮದ್ಯಾಹ್ನದ ತನಕವೂ ಕಾದು ಮೋಹನ್ ಸರ್ ಮಲಗಿದ ಮೇಲೆ ಫೊನ್ ತೆಗೆದುಕೊಂಡ. ಕರೆ ಬಂತು. ಮಾತಿಗಿಳಿದ.
‘ಹಾಯ್ ಈಶಾ ಊಟ ಆಯ್ತ’ ಕೇಳಿದ.
‘ಆಯ್ತು ನಿಮ್ಮದು’ ಅಂದಳು.
‘ನಾನು ಇವತ್ತು ಊರಿಗೆ ಹೋಗ್ತಿನಿ’ ಅಂದ.
‘ಯಾಕೆ? ನಮ್ ಹೋಟೆಲ್ಲಿನಲ್ಲಿ ಕೆಲಸ ಮಾಡೋಕೆ ಇಷ್ಟ ಇಲ್ವಾ?’ ಪ್ರಶ್ನಿಸಿ ನಕ್ಕಳು.
‘ಹಾಗಲ್ಲ. ನಾನು ಓದ್ಬೇಕು. ಅಪ್ಪ-ಅಮ್ಮ ಕರೀತಾ ಇದಾರೆ’ ಅಂದ.
‘ಹೋ ಹೌದಾ. ಆದ್ರೂ ನೀವು ಇಲ್ಲೇ ಇರ್ಬೇಕಿತ್ತು’ ಬೇಸರದಿಂದ ಹೇಳಿದಳು.
‘ನಂಗೂ ಅದೇ ಆಸೆ’ ಹೋಗಲ್ಲ ಎನ್ನುವಂತೆ ಹೇಳಿದ.
‘ಐ ಲೈಕ್ ಯು’ ಅಂದಳು ಮತ್ತೆ.
‘ಐ ಲೈಕ್ ಯು ಟೂ’ ಅಂದ.
‘ಐ ಮಿಸ್ ಯು’ ಅಂದಳು.
‘ಮಿಸ್ ಯು ಟೂ’ ಅಂದ.
‘ನಂಗೋಸ್ಕರ ನೀವು ಇಲ್ಲೇ ಇರಿ. ಐ ರಿಕ್ವೆಸ್ಟ್ ವಿತ್ ಯು’ ಅಂದಳು.
‘ಇಲ್ಲೇ ಇರ್ತಿನಿ’ ಭರವಸೆ ಕೊಟ್ಟ.
‘ಥ್ಯಾಂಕ್ಯು’ ಎಂದು ನಕ್ಕಳು.
ಮೂರುವರೆ ಸಮಯ. ಬಾಲಣ್ಣ ಸ್ವಲ್ಪ ಬೇಜಾರು ಮಾಡಿಕೊಂಡಿದ್ದ. ಅವನಿಗೆ ನಿತೇಶ್ ಹೋಗುವುದು ಇಷ್ವಿವಿರಲಿಲ್ಲ. ಮೋಹನ್ ಸರ್ ಎದ್ದವರು
‘ನಿತೇಶ್ ಇನ್ನೆರಡು ತಿಂಗಳು ಬಿಟ್ಟು ಹೋಗು’ ಅಂದರು.
‘ಕಾಲೇಜಿಗೆ ಅಪ್ಲಿಕೇಶನ್ ಹಾಕ್ಬೇಕು ಸರ್’ ಎನ್ನುತ್ತ ಅವರನ್ನು ಒಪ್ಪಿಸಿದ.
‘ಒಳ್ಳೇದಾಗ್ಲಿ’ ಎಂದು ಸಂಬಳ ನೀಡಿದರು.
ಈಸಿಕೊಂಡು ಇಡೀ ಹೋಟೆಲ್ಲನ್ನು ಒಂದು ಸುತ್ತು ಹಾಕಿದ. ಅಲ್ಲಿದ್ದವರೆಲ್ಲ ತನ್ನವರೇ ಅನ್ನಿಸಿತು ಅವನಿಗೆ. ಎಲ್ಲರನ್ನು ಮಾತಾಡಿಸಿ ‘ಬೈ’ ಹೇಳಿ ಬ್ಯಾಗ್ ತೆಗೆದುಕೊಂಡ.
ಫೋನ್ ರಿಂಗಣಿಸಿತು. ‘ಹೆಲೋ ಹೇಳು ಮಗಳೆ’ ಎನ್ನುತ್ತ ಮೋಹನ್ ಸರ್ ‘ನಿತೇಶ್ ಊರಿಗೆ ಹೊಗ್ತಾ ಇದಾನೆ’ ಎಂದು ಹೇಳಿದರು.
‘ಡ್ಯಾಡಿ ನಿತೇಶ್ ಕೈಗೆ ಫೋನು ಕೊಡಿ’ ಈಶಾ ಹೇಳಿದಳು.
‘ತಗೋ ನಿತೇಶ್’ ಮೋಹನ್ ಸರ್ ಕೊಟ್ಟರು.
‘ಹೋಗಲ್ಲ ಅಂದ್ರಲ್ಲಾ. ಯಾಕೆ?’
‘ಹೋಗ್ಲೆ ಬೇಕು’ ಅಂದ.
‘ಓಕೆ ಬ್ರೋ’ ಅಂದಳು.
‘ನಿತೇತ್ ತಿಥಿವಡೆ ರೆಡಿ ಆಗಿದೆ. ತಿನ್ಕೊಂಡು ಹೋಗು ಬಾ. ನೀನು ಇನ್ನು ಬರೋದಿಲ್ಲ’ ಎಂದು ಭಟ್ಟ ಕರೆದು ಗಹಗಹಿಸಿ ನಗುತ್ತಿದ್ದ.