Click here to Download MyLang App

ಮನಸ್ಸು ಮಾಯಾವಿ - ಬರೆದವರು : ನಂದೀಶ್ ಬಂಕೇನಹಳ್ಳಿ | ಸಾಮಾಜಿಕ


ಪ್ರಥಮ್‌ಗೆ ನಡುರಾತ್ರಿ ಎಚ್ಚರವಾದಾಗ ಹೊರಗೆ ಗಾಳಿ ಮಳೆ ಸದ್ದು ಜೋರಾಗಿ ಕೇಳುತ್ತಿತ್ತು. ಅದೆಷ್ಟೊ ವರ್ಷಗಳಿಂದ ಬೆಂಗಳೂರಿನ ಸಾಪ್ಟ್ವೇರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಪ್ರಥಮ್ ಲಾಕ್‌ಡೌನ್‌ನಿಂದಾಗಿ ಪಡುಗೆರೆಗೆ ಬಂದು ಮನೆಯಿಂದಲ್ಲೆ ‘ವರ್ಕ್ ಪ್ರಂ ಹೋಮ್’ನಲ್ಲಿದ್ದ.

ಬೆಂಗಳೂರಿನ ಜೀವನಕ್ಕೆ ಒಗ್ಗಿಹೋಗಿ ಪ್ರತಿದಿನ ಮಲಗುವಾಗ ನಡುರಾತ್ರಿ ಕಳೆದಿರುತ್ತಿದ್ದರಿಂದ ಪಡುಗೆರೆಗೆ ಬಂದ ಮೇಲೆ ಮನೆಯಲ್ಲಿ ರಾತ್ರಿ ೯ ಗಂಟೆಗೆಲ್ಲಾ ಅಪ್ಪ ಅಮ್ಮ ಮಲಗಿ ಬಿಡುತ್ತಿದ್ದರು. ಪ್ರಥಮ್ ಕೂಡ ೯ ಗಂಟೆಗೆಲ್ಲಾ ತನ್ನ ಬೆಡ್‌ರೂಮ್‌ಗೆ ಹೋಗಿ ಮಲಗಿ ಎಷ್ಟು ಪ್ರಯತ್ನ ಪಟ್ಟರೂ ನಿದ್ದೆ ಹತ್ತಲಿಲ್ಲ. ಮೂವಿಯಾದರೂ ನೋಡೋಣವೆಂದು ಮೊಬೈಲ್ ತೆಗೆದರೆ ಮನೆಯೊಳಗೆ ಒಂದು ಕಡ್ಡಿ ನೆಟ್‌ವರ್ಕ್ ಸಿಗುತ್ತಿರಲಿಲ್ಲ.

ಅಪ್ಪನ ಕಿಪ್ಯಾಡ್ ಪೋನನ್ನು ಮನೆಯ ಮುಂದಿನ ಕಿಟಕಿಯ ಡಬ್ಬಿಯೊಂದರಲ್ಲಿ ನೆತ್ತು ಹಾಕಿರಬೇಕಿತ್ತು. ಅಲ್ಲಿ ಮಾತ್ರ ನೆಟ್‌ವರ್ಕ್ ಒಂದೆರಡು ಕಡ್ಡಿ ಸಿಗುತ್ತಿದ್ದರಿಂದ ಮೊಬೈಲ್ ರಿಂಗ್ ಆದೊಡನೆ ಅಲ್ಲಿಯೇ ಹೋಗಿ ಅಲುಗಾಡಿದರೆ ನೆಟ್‌ವರ್ಕ್ ಹೋಗಿ ಬಿಡಬಹುದು ಎಂಬ ಮನಸ್ಥಿತಿಯಲ್ಲಿಯೇ ಅಲುಗಾಡದಂತೆ ಮಾತನಾಡಬೇಕಿತ್ತು. ನೆಟ್‌ವರ್ಕ್ ಹೋಗುವ ಭಯದಿಂದ ಆ ಕಡೆಯಿಂದ ಮೊಬೈಲ್‌ನಲ್ಲಿ ಮಾತನಾಡುವವರೊಡನೆ ಸಹಜವಾಗಿ ಮಾತನಾಡಲು ಸಾಧ್ಯವೇ ಆಗುತ್ತಿರಲಿಲ್ಲ.

ರಾತ್ರಿ ಒಂಬತ್ತು ಗಂಟೆಗೆಲ್ಲಾ ಮಲಗಿದ್ದ ಪ್ರಥಮ್‌ಗೆ ಎಷ್ಟೊ ಹೊತ್ತಿನ ನಂತರ ನಿದ್ರೆ ಆವರಿಸಿ ಮತ್ತೆ ಎಚ್ಚರವಾದಾಗ ಹೊರಗೆ ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ಮನೆ ಮುಂದಿನ ಮಳೆ ಹೆಂಚಿನ ನೀರು ಹರಿದು ಹೋಗಲು ಹಾಕಿದ್ದ ಅಡಿಕೆ ಮರದ ದೋಣಿಯಿಂದ ನೀರು ಹರಿಯುತ್ತಿದ್ದ ಸದ್ದು ಜೋರಾಗಿ ಕೇಳುತ್ತಿತ್ತು. ಸೌದೆ ಕೊಟ್ಟಿಗೆಗೆ ಕಟ್ಟಿದ್ದ ಟಾರ್ಪಲ್ ಗಾಳಿ ಮಳೆಯ ಹೊಡೆತಕ್ಕೆ ಹೊಡೆದುಕೊಳ್ಳುತ್ತಾ ಪಟಪಟನೇ ಸದ್ದು ಮಾಡುತ್ತಿತ್ತು. ಮನೆ ಹಿಂದಿನ ಕಾಫಿ ತೋಟದಿಂದ ಮರ ಬಾಗಿ ಬಳುಕಿ ಹೊಯ್ದಾಡುವ ಚಿತ್ರ ಶಬ್ದದಿಂದಲೇ ಪ್ರಥಮ್‌ಗೆ ಅನುಭವಕ್ಕೆ ಬರುವಂತಿತ್ತು.

ಮಳೆಯ ಶಬ್ದ ಕೇಳುತ್ತಾ ಕೇಳುತ್ತಾ ಕಿಟಕಿಯ ಸಂದುಗಳಿಂದ ಮನೆಯೊಳಗೆ ನುಗ್ಗುತ್ತಿದ್ದ ಕುಳಿರ್ ಗಾಳಿಗೆ ಮೈ ಕಂಪಿಸಿದಂತಾಗಿ ಪ್ರಥಮ್ ಹೊದ್ದುಕೊಂಡಿದ್ದ ಹೊದಿಕೆಯನ್ನು ಮತ್ತಷ್ಟು ಎಳೆದುಕೊಂಡು ಮಲಗಿದ್ದ. ಮಳೆಯ ಶಬ್ದ ಕೇಳುತ್ತಾ ಕೇಳುತ್ತಾ ಆ ಶಬ್ದವೇ ಲಾಲಿ ಹಾಡಿದಂತಾಗಿ ನಿದ್ದೆ ನಿಧಾನಕ್ಕೆ ಆವರಿಸಿತ್ತು. ಪ್ರಥಮ್‌ಗೆ ಮಳೆಯಲ್ಲಿ ನೆನೆಯುತ್ತಾ ಎಲ್ಲಿಗೋ ನಡೆದು ಹೋಗುತ್ತಿರುವಂತೆ ಕನಸು.

ಮರುದಿನ ಪ್ರಥಮ್ ಎದ್ದಾಗ ಸೂರ್ಯನ ಎಳೆ ಬಿಸಿಲು ಅಂಗಳದ ಬಾಗಿಲ ರಂಗೋಲಿಯೊಂದಿಗೆ ಆಟವಾಡುತ್ತಿತ್ತು. ಪ್ರಥಮ್ ಹಾಸಿಗೆಯಿಂದ ಎದ್ದವನೇ ಕಣ್ಣುಜ್ಜಿಕೊಳ್ಳುತ್ತಾ ಜಗಲಿಯಲ್ಲಿ ಕೂತು ಎಳೆಬಿಸಿಲಿನನ್ನು ಆಸ್ವಾಧಿಸತೊಡಗಿದ. ಹಿಂದಿನ ರಾತ್ರಿ ಮಳೆ ಸುರಿದ್ದು ಬೆಳಿಗ್ಗೆ ಎಳೆ ಬಿಸಿಲು ಬಿದ್ದು ಪಡುಗೆರೆಯ ಸಕಲಕ್ಕೂ ಹೊಸತನ ತುಂಬಿತ್ತು.

ಬಿಸಿಲು ಬೀಳುತ್ತಿದ್ದರೂ ಆಗಾಗ ಮೋಡ ಮುಸುಕಿ ಬಿಸಿಲು ಮಂದವಾದಾಗ ಬಿಸಿಲಿಗೆ ಚಳಿ ಕಾಯುಸುತ್ತಿದ್ದ ಪ್ರಥಮ್‌ಗೆ ಮೈ ಕಂಪಿಸಿದಂತಾಗಿ ‘ಅಮ್ಮ ಕಾಫಿ ತಬಾರೇ’ ಎಂದು ಕೂಗಿ ಹೇಳಿದ. ಆ ವೇಳೆಗೆ ಕೆಲ ದಿನಗಳ ಹಿಂದೆಯಷ್ಟೆ ನಾಟಿ ಮಾಡಿದ ಗದ್ದೆಯ ಕಡೆಗೆ ಹೋಗಿದ್ದ ನಂಜೆಗೌಡರು ಗುದ್ದಲಿ ಹಿಡಿದುಕೊಂಡು ಬರುತ್ತಿದ್ದನ್ನು ಕಂಡು ಪ್ರಥಮ್ ‘ಅಪ್ಪ ಬಂದ್ರೂ, ಅಪ್ಪಂಗೂ ಒಂದ್ ಲೋಟ ಕಾಫಿ ತಬಾ’ ಎಂದ.

ಕತ್ತಲ್ಲೆಯೇ ಸರ್ವವ್ಯಾಪಿಯಾಗಿದ್ದ ಅಡುಗೆ ಮನೆಯಲ್ಲಿ ರೊಟ್ಟಿ ತಟ್ಟಿ ರೊಟ್ಟಿಯ ಅಂಚನ್ನು ಕೆಂಡದಲ್ಲಿ ಸುಡುವುದರಲ್ಲಿ ನಿರತರಾಗಿದ್ದ ಸೀತಮ್ಮನವರು ‘ನೀನೆ ಒಂಚೂರು ತಗೊಂಡ್ ಹೋಗಾ, ಕಾಫಿ ಹುಯ್ದು ಇಟ್ಟೀನಿ’ ಎಂದರು.

ಅಡುಗೆ ಮನೆಗೆ ಬೆಳಕು ಬೀಳಲೆಂದು ಮೇಲಿನ ಹೆಂಚಿನ ನಡುವೆ ಇಟ್ಟಿದ್ದ ಗಾಜು, ಹೊಗೆ ಹಿಡಿದು ಹಿಡಿದು ಹೆಂಚಿನ ಬಣ್ಣವೇ ಆಗಿ ಹೋಗಿತ್ತು. ಅಡುಗೆ ಮನೆಯ ಪುಟ್ಟ ಕಿಟಕಿಯಿಂದ ಕೂಡ ಕತ್ತಲೆಯೆ ಸಾಮ್ರಾಜ್ಯ ಸ್ಥಾಪಿಸಿದ್ದ ಅಡುಗೆ ಮನೆಯೊಳಗೆ ಬೆಳಕು ಒಳಬರಲು ಕೂಡ ಹಿಂದೇಟು ಹಾಕಿದಂತೆ ತೋರುತ್ತಿತ್ತು.

ಸಗಣಿ ಬಳಿದು ಹರಿಶಿಣ ಕುಂಕುಮ ಹಚ್ಚಿದ್ದ ಸೌದೆ ಒಲೆಯ ಮೂಲೆಯಲ್ಲಿ ಬೆಕ್ಕೊಂದು ಮಲಗಿ ಮೊಲೆ ಹಾಲು ಹೀರುತ್ತಿದ್ದ ಮೂರು ಮರಿಗಳನ್ನು ನೆಕ್ಕುತ್ತಿತ್ತು. ಹಾಲು ಅನ್ನ ತುಂಬಿದ್ದ ಸುತ್ತ ಚೆಲ್ಲಿದ್ದ ಹಾಲು ಅನ್ನದ ಪಾತ್ರೆಯಿಂದ ಇರುವೆ ಸಾಲೊಂದು ಹೊರಟ್ಟು ಮೇಲಿನ ಕಿಟಕಿಯಿಂದ ಆಚೆಗೆ ಸಾಗಿತ್ತು. ಕೆಲ ಇರುವೆಗಳು ಹಾಲು ಅನ್ನದ ಚೂರನ್ನು ಹೊತ್ತು ಮತ್ತೆ ಕೆಲವು ಹೊರಲು ಸಾಲಾಗಿ ಸಾಗುತ್ತಿದ್ದವು. ಒಲೆಯ ಮೇಲಿನ ತಡಿಯಲ್ಲಿ ಅಡುಗೆ ಮನೆಯ ಕತ್ತಲೆಯನ್ನು ಹೊಡೆದೊಡಿಸಲು ವಿಪಲಯತ್ನ ನಡೆಸುವಂತೆ ಚಿಮಣಿ ದೀಪವೊಂದು ಬಳಕುತ್ತಾ ಉರಿಯುತ್ತಿತ್ತು. ಅದರ ಪಕ್ಕದಲ್ಲಿ ನಂಜೆಗೌಡರ ಶಿಕಾರಿ ಟಾರ್ಚಿನ ಮೂರು ದಪ್ಪ ದಪ್ಪ ಶೆಲ್ಲುಗಳು, ಅದರ ಪಕ್ಕದಲ್ಲಿ ಒಂದಷ್ಟು ಏಲಕ್ಕಿ, ಕಲುಮೆಣಸು ಕೂಡ ಇತ್ತು. ಕೆಂಡದಲ್ಲಿ ಸುಟ್ಟ ಅಂಚು ಕಪ್ಪಾಗಿದ್ದ ತೆಂಗಿನ ಕಾಯಿಯ ಭಾಗವೂ ಅಲ್ಲಿದ್ದು ಕತ್ತಲೆಯಲ್ಲಿ ಕಾಣುವಂತಿರಲಿಲ್ಲ.

ಬೆಲ್ಲ ಹಾಕಿ ಮಾಡಿದ್ದ ಕಾಫಿಯನ್ನು ಲೋಟಕ್ಕೆ ಬಗ್ಗಿಸಿಟ್ಟು ತಣ್ಣಗಾಗುತ್ತಾ ಬಂದರೂ ಫ್ರಥಮ್ ಬಾರದೇ ಇದ್ದಾಗ ‘ಎಥ್ಲಾಕ್ ಹೋದ್ಯಾ, ಕಾಫಿ ತಗೊಂಡ್ ಹೋಗ್ ಬಾರ’ ಎಂದರು ಸೀತಮ್ಮ. ಪ್ರಥಮ್ ಬಾರದಿದ್ದಾಗ ಒಲೆಯ ಕೆಂಡವನ್ನು ಹೊರಗೆಳೆದು ಮಸಿ ಹಿಡಿದು ಕಪ್ಪಾಗಿದ್ದ ಕಾಫಿ ಪಾತ್ರೆಯನ್ನು ಇಟ್ಟು ಕಾಫಿಯನ್ನು ಮತ್ತೆ ಬಿಸಿ ಮಾಡಿ ಬಿಸಿಯಾದೊಡನೆ ಮತ್ತೆ ಲೋಟಗಳಿಗೆ ಬಗ್ಗಿಸಿ ಜಗಲಿಗೆ ತಂದರು ಸೀತಮ್ಮ.

ಅಂಗಳದ ಹಲಗೆಯ ಬೆಂಚಿನ ಮೇಲೆ ಕೂತು ಬುಸು ಬುಸು ಬೀಡಿಯ ಹೊಗೆ ಬಿಡುತ್ತಾ ಗದ್ದೆಯಲ್ಲಿ ಕಾಲಿಗತ್ತಿದ್ದ ಜಿಗಣೆಗಳನ್ನು ಒಂದೆಡೆಗೆ ಹಾಕಿ, ರಕ್ತ ಸೋರುತ್ತಿದ್ದಲ್ಲಿ ಜೇಬಿನಲ್ಲಿದ್ದ ಬೆಂಕಿ ಪೊಟ್ಟಣದ ಇಬ್ಬದಿಯ ರಂಜಕದ ಕಾಗದವನ್ನು ಹರಿದು ಅಂಟಿಸುತ್ತಾ ‘ಹಾಳ್ ಬಿದ್ ಹೋಗಕ್ಕೆ ಏನ್ ಹಿಂಗ್ ಹತ್ಯವಾ ಮಾರಾಯ’ ಎಂದರು ನಂಜೆಗೌಡ.

ಚಳಿ ಕಾಯಿಸುತ್ತಾ ಕುಳಿತ ಪ್ರಥಮ್‌ಗೆ ಹಾಗೂ ಜಿಗಣೆ ತೆಗೆಯುತ್ತಾ ಕುಳಿತಿದ್ದ ನಂಜೆಗೌಡರಿಗೆ ಕಾಫಿ ಕೊಟ್ಟು ಹೆಂಚಿನಲ್ಲಿದ್ದ ರೊಟ್ಟಿಯ ಕುಶಲ ವಿಚಾರಿಸಲು ಒಳ ಹೋದರು ಸೀತಮ್ಮನವರು. ನಂಜೇಗೌಡರು ಬಚ್ಚಲು ಮನೆಗೆ ಹೋಗಿ ಜಿಗಣೆಗಳನ್ನು ಬಚ್ಚಲು ಒಲೆಗೆ ಎಸೆದರು. ರಕ್ತ ಹೀರಿ ಕೊಬ್ಬಿ ಊದಿಕೊಂಡಿದ್ದ ಜಿಗಣೆಗಳು ಕೆಂಡ ಸೋಕಿದೊಡನೆ ಪಟಪಟನೇ ಸಿಡಿದು ಬೂದಿಯಾದವು.

ಚಳಿ ಕಾಯಿಸುತ್ತ್ತಾ ಕುಳಿತ ಪ್ರಥಮ್, ಅಂಗಳದ ಅಂಚಿನ ಹೂಗಿಡಗಳ ಸಾಲಿನಲ್ಲಿ ಸೀತಮ್ಮನವರು ತವರು ಮನೆಗೆ ಹೋಗಿ ಹಿಂದಿರುವಾಗ ತಂದಿದ್ದ ಹರಿಶಿಣ ಕೆಂಪು ಮಿಶ್ರಿತ ಸೇವಂತಿಗೆ ಹೂವಿನ ಗಿಡದಲ್ಲಿ ಬಿಟ್ಟ ಮೊದಲ ಹೂವಿನ ರಂಗನ್ನು ನೋಡುತ್ತಿದ್ದ. ನೋಡುತ್ತಿದ್ದ ಆದರೆ ಅವನ ಮನಸ್ಸು ಬೇರೆನೋ ಯೋಚಿಸುತ್ತಿತ್ತು.

ಎಲ್ಲರೂ ನನ್ನನ್ನು ಬೆರಗುಗಣ್ಣಿನಿಂದ ನೋಡುವಂತೆ ಮಾಡಿದ ಸಾವಿರಾರು ರೂ ಸಂಬಳ ನೀಡುವ ಬೆಂಗಳೂರಿನ ಕೆಲಸ, ಕೈ ತುಂಬ ಹಣ, ವೀಕ್ ಎಂಡ್‌ನಲ್ಲಿ ಗೆಳೆಯರ ಜೊತೆಗಿನ ಪಾರ್ಟಿಗಳು, ಎಲ್ಲವೂ ಇದ್ದರೂ ಪ್ರಥಮ್‌ನ ಮನಸ್ಸು ಬೇರೆ ಏನನ್ನೋ ಅರಸುತ್ತಿತ್ತು. ಆದರೆ ಅದು ಏನೆಂದು ಅವನಿಗೂ ಸ್ಪಷ್ಟವಾಗಿ ತಿಳಿದಿರುತ್ತಿರಲಿಲ್ಲ.

ಬೆಂಗಳೂರಿನಲ್ಲಿದ್ದಾಗ ಪಡುಗೆರೆಗೆ ಹೋಗಲು ಮನಸ್ಸು ತವಕಿಸುತ್ತಿತ್ತು. ಪಡುಗೆರೆಗೆ ಬಂದರೆ ಮತ್ತೆ ಬೆಂಗಳೂರಿಗೆ ಹೋಗಲು ಮನಸ್ಸು ಹೇಳುತ್ತಿತ್ತು. ನಾಳೆಯ ಬದುಕಿಗಾಗಿ ಇಂದು ದುಡಿಯುವುದೋ ಅಥವಾ ದುಡಿಮೆಯ ಜೊತೆಗೆ ಬದುಕುತ್ತಾ ಸಾಗುವುದೋ ತಿಳಿಯಲಿಲ್ಲ. ಒಟ್ಟಿನಲ್ಲಿ ಪ್ರಥಮ್‌ನ ಮನಸ್ಸಿನ ತೊಳಲಾಟ ಅವನಿಗೆ ಅರ್ಥವಾಗುತ್ತಿರಲಿಲ್ಲ. ಒಮ್ಮೊಮ್ಮೆ ಬೆಂಗಳೂರಿನ ಕೆಲಸ ಬಿಟ್ಟು ಪಡುಗೆರೆಯಲ್ಲಿ ಇಲ್ಲಿನ ಆಕಳಿನಂಥೆ, ಹೂವಿನಂತೆ, ಮರಗಿಡ ನದಿಯಂತೆ ಇದರ ಭಾಗವೇ ಆಗಿ ಬದುಕಿ ಬಿಡೋಣ ಎನಿಸಿದರೆ, ಮತ್ತೊಮ್ಮೆ ಈ ಹಾಳು ಕಗ್ಗಾಡಿನಲ್ಲಿ ಹಾಗೆ ಇದ್ದು ಬಿಡುವುದು ನನಗೆ ನಿಜವಾಗಿಯೂ ಸಾಧ್ಯವಾ ಎಂದು ಕೂಡ ಅನಿಸುತ್ತಿತ್ತು.

ಅಷ್ಟರಲ್ಲಿ ಸೀತಮ್ಮನವರು, ‘ತಿಂಡಿ ತಿನ್ ಬಾರ. ಮುಖ ತೊಳ್ಕ ಬಾ. ಕೆಸಿನ್ ಗಂಟಿನ್ ಸಾರ್ ಮಾಡೀನಿ ಇವತ್ತು’ ‘ಎಂದರು.

ಅದಾಗಲೇ ನಂಜೆಗೌಡರು ಸ್ನಾನ ಮುಗಿಸಿ ದೇವರಮನೆಯಲ್ಲಿದ್ದರು. ಗಂಟೆ ಜಾಗಟೆಯ ಸದ್ದು ದೇವರ ಮನೆಯಿಂದ ಸಶಬ್ದವಾಗಿ ಕೇಳಿ ಬರುತ್ತಿತ್ತು. ಪ್ರಥಮ್‌ಗೆ ಚಳಿಗೆ ಬಿಸಿಲಿನಿಂದ ಏಳಲು ಮನಸ್ಸಾಗದಿದ್ದರೂ ರೊಟ್ಟಿ, ಕೆಸುವಿನ ಗಂಟಿನ ಫಲ್ಯದ ಸಂಮೋಹನ್ನಕ್ಕೆ ವಶನಾಗಿ ಬಚ್ಚಲುಮನೆಗೆ ಕಡೆಗೆ ನಡೆದ.