Click here to Download MyLang App

ಆ ಮರ - ಬರೆದವರು : ಜಯಲಕ್ಷ್ಮಿ ಭಟ್ | ಪರಿಸರ

ಕಟ್ ಕಟ್ ಕಟ್.....
ಕೊಡಲಿಯ ಒಂದೊಂದು ಏಟೂ ಬೀಳುತ್ತಿರುವುದು ಮರಕ್ಕಲ್ಲ- ತನ್ನ ಎದೆಗೆ ಎನಿಸುತ್ತಿತ್ತು ಪಾರ್ವತಿಗೆ. ಆ ಸದ್ದನ್ನು ಕೇಳಲಾಗುತ್ತಿಲ್ಲ ಅವಳಿಂದ. ಹೇಗೆ ನಿಲ್ಲಿಸಲಿ... ಆ ಹಲಸಿನ ಮರ ಕಡಿಯುವುದನ್ನು ಹೇಗೆ ನಿಲ್ಲಿಸಲಿ.... ಇನ್ನೇನು ಸ್ವಲ್ಪ ಹೊತ್ತಿನಲ್ಲೇ ಮರ ಗೆಲ್ಲುಗಳನ್ನೆಲ್ಲ ಕಳೆದುಕೊಂಡು ಬೋಳಾಗಲಿದೆ. ಆಮೇಲೆ ಬುಡದಿಂದಲೇ ಕಡಿದು ಬಿಡುತ್ತಾನೆ ಐತ್ತಪ್ಪ.

ಮನೆಯ ರಿಪೇರಿಗೆ ಮರ ಬೇಕಿತ್ತು. ಮಾಡಿನ ಪಕಾಸಿ, ರೀಪುಗಳೆಲ್ಲ ಕುಟ್ಟೆ ಹಿಡಿದು ಹಾಳಾಗಿತ್ತು. ಹಿಂದಿನ ವರ್ಷವೇ ರಿಪೇರಿಗೆಂದು ಹೊರಟ ಸಮಯದಲ್ಲೇ ಅವಳ ಗಂಡ ಹೃದಯಾಘಾತವಾಗಿ ಹೋಗಿ ಬಿಟ್ಟಿದ್ದ. ರಿಪೇರಿ ಕೆಲಸ ಮುಂದೆ ಹೋಯ್ತು.

ಇನ್ನೂ ರಿಪೇರಿ ಮಾಡದಿದ್ದರೆ ಮನೆ ಬೀಳುವುದು ಖಚಿತವೆಂದು ಗಣೇಶ ರಿಪೇರಿ ಮಾಡಿಸಲು ಹೊರಟಿದ್ದ. ತೋಟದಲ್ಲಿ ಬೇಕಾದಷ್ಟು ಮರಗಳಿದ್ದರೂ, ಅಂಗಳದ ತುದಿಯಲ್ಲಿದ್ದ ಆ ಹಲಸಿನ ಮರದಷ್ಟು ಚೆನ್ನಾಗಿರುವುದು ಯಾವುದೂ ಇರಲಿಲ್ಲ. ಎಲ್ಲಾ ಅಡ್ಡಾದಿಡ್ಡಿ ಬೆಳೆದ ಮರಗಳು. ಇದೊಂದೇ ನೇರವಾಗಿ, ಎತ್ತರವಾಗಿದ್ದುದು. ಮನೆಗೆ ಬೇಕಾದ ಅಷ್ಟೂ ಮರ ಇದರಿಂದಲೇ ಸಿಗಬಹುದೆಂದು ಇದನ್ನೇ ಆಯ್ಕೆ ಮಾಡಿದ್ದ ಗಣೇಶ.

ಅದು ಪಾರ್ವತಿ ತವರಿನಿಂದ ಬೀಜ ತಂದು ಹಾಕಿ, ಹುಟ್ಟಿ ಬೆಳೆದ ಸಸಿ. ಕೈಯಾರೆ ನೀರುಣಿಸಿ, ಗೊಬ್ಬರ ಹಾಕಿ, ಸಾಕಿದ್ದಳು.
ಇಂದು ಹೆಮ್ಮರವಾಗಿತ್ತು. ಸಂಪಿಗೆ ಬಕ್ಕೆ ಎಂದೇ ಹೆಸರು ಅದಕ್ಕೆ. ಅದರ ತೊಳೆಗಳು ನೋಡಲು ಸಂಪಿಗೆ ಹೂವಿನಂತೆ. ಸಿಹಿಯೋ ಸಿಹಿ. ಗುಜ್ಜೆಯಿಂದಾರಂಭಿಸಿ, ಹಣ್ಣಿನ ವರೆಗೂ ಎಲ್ಲದಕ್ಕೂ ಸೈ.

ಕಾಯಿ- ದೋಸೆ, ಪಲ್ಯ, ಹುಳಿ, ಹಪ್ಪಳ , ಉಪ್ಪು ನೀರಿನಲ್ಲಿ ಹಾಕಿಡಲು ಇತ್ಯಾದಿಗಳಿಗೆ, ಹಣ್ಣು ಹಾಗೇ ತಿನ್ನಲು, ಕಡುಬಿಗೆ, ಮುಳಕಕ್ಕೆ, ಕಾಯಿಸಿಟ್ಟು ಬೇಕಾದಾಗ ಉಪಯೋಗಿಸಲು- ಎಲ್ಲದಕ್ಕೂ ಉತ್ಕೃಷ್ಟವಾಗಿತ್ತು . ಅದರ ಬೀಜದಿಂದ ಎಷ್ಟೋ ಜನ ಗಿಡ ಮಾಡಿಕೊಂಡಿದ್ದರು. ಪಾರ್ವತಿಯೂ ತೋಟದಲ್ಲಿ ಅದರ ಬೀಜಗಳಿಂದ ಹುಟ್ಟಿದ ಗಿಡಗಳನ್ನು ನೆಡಿಸಿದ್ದಳು. ಆದರೆ ಅದು ಯಾಕೋ ಇದೇ ರುಚಿ ಆ ಗಿಡಗಳ ಹಣ್ಣುಗಳಿಗೆ ಬಂದಿರಲಿಲ್ಲ.
ಅಲ್ಲದೆ ಪಾರ್ವತಿಗೆ ಆ ಮರದೊಂದಿಗೆ ಭಾವನಾತ್ಮಕ ಸಂಬಂಧವಿತ್ತು. ಅದನ್ನು ಕಡಿಯುವುದು ಬೇಡವೆಂದು ಎಷ್ಟೋ ಹೇಳಿದಳು ಮಗನಿಗೆ . ಆದರೆ ಅವನದು ಲೆಕ್ಕಾಚಾರ. ನಮ್ಮದೇ ಮರ ಇರುವಾಗ ಹೊರಗಿನಿಂದ ದುಡ್ಡು ಕೊಟ್ಟು ತರುವುದು ಯಾಕೆ ಎಂದು. ಸೊಸೆಯೂ ಅವನಿಗೇ ಸಾಥ್ ನೀಡಿದ್ದಳು.

ಮೊಮ್ಮಕ್ಕಳಿಗೆ ಆ ಮರದ ಹಣ್ಣೆಂದರೆ ಜೀವ. ಕಾಯಿಯ ಚಿಪ್ಸ್ ಮಾಡಿದರೆ, ಎಷ್ಟಿದ್ದರೂ ಕ್ಷಣದಲ್ಲಿ ಖಾಲಿಯಾಗುತ್ತಿತ್ತು. ಮಗಳು ಯಾವಾಗ ಬಾರದಿದ್ರೂ ಹಲಸು ಹಣ್ಣಾಗುವಾಗ ಬಂದೇ ಬರುತ್ತಿದ್ದಳು ಇಬ್ಬರೂ ಮಕ್ಕಳೊಂದಿಗೆ.

ನಾಲ್ಕೂ ಜನ ಮೊಮ್ಮಕ್ಕಳು, ಸೊಸೆ, ಮಗಳು ಎಲ್ಲರೂ ಸೇರಿ ಹಪ್ಪಳ ಮಾಡುವುದೇನು, ಚಿಪ್ಸ್ ಮಾಡುವುದೇನು, ಹಣ್ಣಿನ ಕಡುಬು, ಮುಳಕ, ಕಾಯಿಯ ದೋಸೆ- ಹೀಗೆ ಪ್ರತಿ ದಿನ ಆ ಮರದ ಹಲಸಿಂದೇ ರಾಜ್ಯ. ಅಡಿಗೆಗೂ ಅದುವೇ. ಅದೊಂದು ರೀತಿಯ ಕಲ್ಪತರುವಿನಂತೆ, ಅಕ್ಷಯ ಪಾತ್ರೆಯಂತಿತ್ತು ಆ ಮರ. ಯಾವ ವರ್ಷವೂ ಫಸಲು ಕಡಿಮೆಯಾದುದೆಂದುದಿಲ್ಲ.

ಅದರ ಒಂದು ಗೆಲ್ಲನ್ನೂ ಕಡಿದಿರಲಿಲ್ಲ ಇದುವರೆಗೂ. ಬೇಸಿಗೆಯಲ್ಲಿ ದನಗಳಿಗೆ ಮೇವಿನ ಕೊರತೆಯಾದಾಗ ಹಲಸಿನ ಮರದ ಗೆಲ್ಲು ಕಡಿದು, ಸೊಪ್ಪನ್ನು ದನಗಳಿಗೆ ತಿನ್ನಲು ಹಾಕುತ್ತಿದ್ದರು. ತೋಟದಲ್ಲಿ, ತೋಟದಂಚಿನ ಗುಡ್ಡದಲ್ಲಿ ಇರುವ ಮರಗಳ ಗೆಲ್ಲುಗಳನ್ನಷ್ಟೇ ಕಡಿಯುತ್ತಿದ್ದುದು. ಕೆಲಸದವರು ಈ ಮರದಲ್ಲಿ ಎಳೆಯದಾದ ಸೊಪ್ಪಿದೆಯಲ್ಲಾ.. ಗೆಲ್ಲು ಕಡಿಯೋಣವೆಂದರೆ, ಗಂಡ, ಹೆಂಡತಿ ಇಬ್ಬರೂ ಬಿಟ್ಟಿರಲಿಲ್ಲ. ಆ ಮರಕ್ಕೆ ಎಂದೂ ಕತ್ತಿಯನ್ನೂ ತಾಗಿಸಲಿಲ್ಲ. ಹಲಸಿನ ಕಾಯಿ ಕುಯ್ಯಬೇಕಾದರೆ ಕೈಯಿಂದಲೋ ಅಥವಾ ಕೊಕ್ಕೆಯಿಂದಲೋ ಕುಯ್ಯುತ್ತಿದ್ದರಲ್ಲದೆ, ಕತ್ತಿ ತಾಗಿಸಿರಲಿಲ್ಲ. ಅಂಥಾದ್ದರಲ್ಲಿ ಈಗ ಮರವನ್ನೇ ಕಡಿಯುತ್ತಿದ್ದರೆ ಹೇಗೆ ಸಹಿಸಬಲ್ಲಳು?

ಆ ಮರ ಅವಳೆಲ್ಲ ನೋವು, ನಲಿವುಗಳಿಗೂ ಮೂಕ ಸಾಕ್ಷಿಯಾಗಿತ್ತು. ಮಕ್ಕಳಿಬ್ಬರ ಬೆಳವಣಿಗೆಯ ಹಂತ ಹಂತವನ್ನೂ ಆ ಮರದೊಂದಿಗೆ ಹೇಳಿಕೊಂಡರೇ ಅವಳಿಗೆ ಸಮಾಧಾನ. ಬೆಳಿಗ್ಗೆ ಎಲ್ಲರಿಗಿಂತ ಮೊದಲು ಏಳುತ್ತಿದ್ದವಳು ಮೊದಲು ಹೋಗುತ್ತಿದ್ದುದೇ ಆ ಮರದ ಬಳಿಗೆ. ಹಿಂದಿನ ದಿನದ ಸಂಪೂರ್ಣ ವರದಿಯನ್ನು ಆ ಮರಕ್ಕೆ ಒಪ್ಪಿಸಿದ ಮೇಲೇ ಮುಂದಿನ ಕೆಲಸ.

ಮಕ್ಕಳ ಸಾಧನೆಗಳು, ಅವರ ಏಳು, ಬೀಳುಗಳು ಎಲ್ಲವನ್ನೂ ಹೇಳಿಕೊಳ್ಳುತ್ತಿದ್ದಳು.ಅವಳು ಮರದೊಂದಿಗೆ ಮಾತಾಡುವುದನ್ನು ಯಾರಾದರೂ ನೋಡಿದರೆ ಹುಚ್ಚಿ ಎನ್ನುತ್ತಿದ್ದರೇನೋ... ಜೀವಂತ ವ್ಯಕ್ತಿಯೊಂದಿಗೆ ನಡೆಸುವಂತೇ ಮರದೊಂದಿಗೆ ಅವಳ ವ್ಯವಹಾರವಿತ್ತು.

ಎಂದಾದರೂ ಯಾರಿಂದಲಾದರೂ ಮನಸ್ಸಿಗೆ ತೀರಾ ನೋವಾದ ದಿನ, ಮರದೊಂದಿಗೆ ಹೇಳಿಕೊಂಡು, ಎರಡು ಹನಿ ಕಣ್ಣೀರು ಹಾಕಿದಲ್ಲಿಗೆ ಸಮಾಧಾನವಾಗುತ್ತಿತ್ತು. ಮನೆಯಲ್ಲಿ ಏನಾದರೂ ವಿಶೇಷದ ತಿಂಡಿ ಮಾಡಿದ ದಿನ, ಸಣ್ಣ ಪಾಲೊಂದನ್ನು ಯಾರಿಗೂ ಕಾಣದಂತೆ ಆ ಮರದ ಬುಡದಲ್ಲಿರಿಸಿ ಬರುತ್ತಿದ್ದಳು. ಮರದಲ್ಲಿ ಮೊದಲ ಕಡಿಗೆ ಬಿಟ್ಟಾಗ ಅವಳ ಸಂಭ್ರಮ ನೋಡಬೇಕಿತ್ತು. ಸಂತೋಷದಿಂದ ಗಂಡನನ್ನಪ್ಪಿ ಅತ್ತು ಬಿಟ್ಟಿದ್ದಳು. ಅವಳ ಗಂಡನೊಬ್ಬನೇ ಅವಳ ಮನಸ್ಸನ್ನು ಅರ್ಥ ಮಾಡಿಕೊಂಡಿದ್ದವನು. ಅಂಥಾ ಮರವನ್ನು- ಅವಳ ಜೀವಕ್ಕೆ ಜೀವವಾದ ಮರವನ್ನು ಈಗ ಅವಳ ಮಗನೇ ಕಡಿಸುತ್ತಿದ್ದಾನೆ !

. ಐತ್ತಪ್ಪ ಹೇಳಿದ್ದ- ಮೊದಲು ಮರದ ತುದಿಗೆ ದಪ್ಪ ಹಗ್ಗ ಹಾಕಿ, ಗೆಲ್ಲುಗಳನ್ನೆಲ್ಲ ಕಡಿದು, ನಂತರ ಬುಡದಿಂದ ಅರ್ಧ ಕಡಿದು, ಹಗ್ಗ ಎಳೆದು ಬೇಕಾದ ಕಡೆಗೇ ಮರವನ್ನು ಬೀಳಿಸೋಣವೆಂದು. ಇಲ್ಲದಿದ್ದರೆ ಹೇಗೆ ಹೇಗೋ ಬಿದ್ದು, ಹೂವಿನ ಗಿಡಗಳಿಗೋ, ಪಕ್ಕದಲ್ಲಿರುವ ಹಟ್ಟಿಯ ಮಾಡಿಗೋ, ಆ ಕಡೆ ಇರುವ ಅಡಿಕೆ ಮರಗಳಿಗೋ ಹಾನಿಯಾಗಬಹುದಿತ್ತು. ಆದರೆ ಆ ಮರ ಕಡೆಯುವುದೇ ಬಹು ದೊಡ್ಡ ಹಾನಿ ಎಂದು ಹೇಗೆ ಅರ್ಥ ಮಾಡಿಸಲಿ ಎನ್ನುವುದೇ ಪಾರ್ವತಿಯ ಸಮಸ್ಯೆ. ಅವಳ ಗಂಡ ಇದ್ದಿದ್ದರೆ ಪಾರ್ವತಿಗೇ ಬೆಂಬಲ ನೀಡುತ್ತಿದ್ದ, ಮರ ಕಡಿಯಲು ಬಿಡುತ್ತಿರಲಿಲ್ಲ. ಈಗ ಅವಳದು ಏಕಾಂಗಿ ಹೋರಾಟ.

ಗೆಲ್ಲು ಬಿದ್ದ ಸದ್ದು ಕೇಳಿತು. ಎದೆಯ ಮೇಲೇ ಬಿದ್ದಂತಾಯ್ತು ಪಾರ್ವತಿಗೆ.
ಈಗ ಇನ್ನೊಂದು ಗೆಲ್ಲು ಕಡಿಯುತ್ತಾನೆ. ಹೇಗೆ ನಿಲ್ಲಿಸಲಿ??? ಹೇಗೆ ನಿಲ್ಲಿಸಲಿ??? ಒಂದು ಗಟ್ಟಿ ನಿರ್ಧಾರಕ್ಕೆ ಬಂದಳು.
ಸೀದಾ ಹೋಗಿ ಬೀರು ಬಾಗಿಲು ತೆರೆದಳು.

" ಗಣೇಶಾ... ಐತ್ತಪ್ಪನನ್ನು ಮರದಿಂದ ಇಳೀಲಿಕ್ಕೆ ಹೇಳು. "
" ಯಾಕಮ್ಮಾ? ಈಗ ಚಾ ಕುಡಿಯುವ ಹೊತ್ತಾಗ್ಲಿಲ್ಲ. ಗೆಲ್ಲೆಲ್ಲ ಕಡಿದಾದ ಮೇಲೆ ಚಾ ಕೊಟ್ರೆ ಸಾಕು. "

" ನೀನು ಮೊದ್ಲು ಅವನನ್ನು ಇಳೀಲಿಕ್ಕೆ ಹೇಳು. "
ತಾಯಿಯ ಸ್ವರದಲ್ಲಿದ್ದ ಕಾಠಿಣ್ಯ ಅವನಿಗೆ ಆಶ್ಚರ್ಯ ತಂದಿತು. ಐತ್ತಪ್ಪನನ್ನು ಮರದಿಂದ ಇಳಿಯಲು ಹೇಳಿದ. ಗೊಣಗುತ್ತಾ ಇಳಿದ ಐತ್ತಪ್ಪ.

ಮಗನ ಬಲಗೈಯನ್ನು ತೆಗೆದುಕೊಂಡು, ತನ್ನ ಬಲಗೈ ಮುಷ್ಟಿಯನ್ನು ಅದರ ಮೇಲಿಟ್ಟು, ಬಿಡಿಸಿದಳು. ಅಂಗೈಗೆ ಬಿದ್ದ ಸರವನ್ನು ನೋಡಿ ಬೆಚ್ಚಿದ.

" ಅಮ್ಮಾ!! ಇದು ನಿನ್ನ ಸರ! ಅಜ್ಜ ಕೊಟ್ಟದ್ದು! ಯಾಕೆ ಈಗ?" ಆಶ್ಚರ್ಯದಿಂದ ಹೇಳಿದ.
" ಹೌದು, ಇದು ನನ್ನ ಅಪ್ಪ ಕೊಟ್ಟದ್ದರಿಂದಲೇ ನನಗೆ ಇದರ ಮೇಲೆ ಪೂರಾ ಹಕ್ಕು ಇರುವುದು. ನನಗಿನ್ನು ಇದನ್ನು ಹಾಕಿಕೊಂಡು ಮೆರೆಯುವ ಆಸೆ ಇಲ್ಲ. ಮೂರು ಪವನುಂಟು ಇದರಲ್ಲಿ. ಇದನ್ನು ಮಾರುವುದೋ.. ಬ್ಯಾಂಕಿನಲ್ಲಿಡುವುದೋ.. ಏನಾದರೂ ಮಾಡು. ಆ ಹಣದಲ್ಲಿ ಮರ ತಾ. ಆದ್ರೆ ಇದನ್ನು ಕಡಿಸ್ಬೇಡ. "

" ಅಮ್ಮಾ ನಿನ್ನ ಹತ್ರ ಇರುವುದು ಇದೊಂದೇ ಸರ. ಉಳಿದ ಚೂರು ಪಾರು ಚಿನ್ನ ಇದ್ದುದನ್ನು ನೀನು ಮೊಮ್ಮಕ್ಕಳಿಗೆ ಕೊಟ್ಟಿದ್ದೀಯಾ. ಇದನ್ನು ನಾನು ಮುಟ್ಟುವುದಿಲ್ಲ. ನೀನಿರುವ ವರೆಗೂ ಅದು ನಿನ್ನ ಸ್ವಾಧೀನದಲ್ಲೇ ಇರ್ಬೆಕು. "

" ನಾನೇ ಹೇಳ್ತಾ ಇದ್ದೇನಲ್ಲಾ... ನನಗೇನೂ ಚಿನ್ನದ ಮೇಲೆ ಮೋಹ ಇಲ್ಲ ಈಗ. ನಿನ್ನ ಅಪ್ಪ ಇದ್ದಾಗಲೇ ಚಿನ್ನದ ಮೇಲೆ ಹೆಚ್ಚು ಮೋಹ ಪಟ್ಟವಳಲ್ಲ ನಾನು. ಇನ್ನು ಈಗ ಬೇಕಾ ನನ್ಗೆ? ನನಗೀಗ ಆ ಮರ ಉಳಿಸುವುದು ಮುಖ್ಯ. ತೆಕ್ಕೋ ಇದನ್ನು. "

" ಅಮ್ಮಾ.. ಅಜ್ಜ ಕೊಟ್ಟ ಚಿನ್ನಕ್ಕಿಂತ್ಲೂ ನಿನ್ಗೆ ಆ ಮರವೇ ಹೆಚ್ಚಾಯ್ತಾ? ಯಾಕಮ್ಮಾ? ತೋಟದಲ್ಲಿ ಬೇಕಾದಷ್ಟು ಹಲಸಿನ ಮರ ಉಂಟಲ್ಲ?"

" ಹೇಗೆ ಹೇಳಲೋ ಗಣೇಶಾ? ..."
ಅಷ್ಟು ಹೇಳುವಾಗ ಧ್ವನಿ ನಡುಗಿ, ಕಣ್ಣು ತುಂಬಿತ್ತು. ಈಗವಳು ಹೇಳಲೇ ಬೇಕಿತ್ತು, ಅನಿವಾರ್ಯ. ಒಡಲ ಬೆಂಕಿ ಹೊರ ಬರಲೇ ಬೇಕಿತ್ತು.
" ಆ ಮರದ ಕೆಳಗೆ.... ಮರದ ಕೆಳಗೆ... ನಿನ್ನ ಅಕ್ಕ ಇದ್ದಾಳೋ..." ಅಳುತ್ತಲೇ ಹೇಳಿದಳು.
ಶಾಕ್ ಹೊಡೆದಂತಾಯ್ತು ಗಣೇಶನಿಗೆ. ಅವನಿಗಿಂತಲೂ ಮೊದಲೇ ಒಂದು ಹೆಣ್ಣು ಮಗುವಾಗಿ, ಕೆಲವೇ ದಿನಗಳಲ್ಲಿ ತೀರಿಕೊಂಡುದು ಗೊತ್ತಿತ್ತು. ಆದರೆ ಅದನ್ನು ಮಣ್ಣು ಮಾಡಿದಲ್ಲೇ ಹಲಸಿನ ಗಿಡ ನೆಟ್ಟುದೆಂದು ಗೊತ್ತಿರಲಿಲ್ಲ. ಆ ಮಗುವಿನ ಸುದ್ದಿ ತೆಗೆದಾಗಲೆಲ್ಲ ತಾಯಿ ಅಳುವುದನ್ನು ನೋಡಿ, ಅವನು ಆ ಬಗ್ಗೆ ಕೇಳುವುದನ್ನೇ ಬಿಟ್ಟಿದ್ದ.

"ಎಲ್ಲರೂ ಸತ್ತವರನ್ನು ಹೂಳಿದ, ಅಥವಾ ಸುಟ್ಟ ಜಾಗದಲ್ಲಿ ಹೂವಿನ ಗಿಡ ನೆಡ್ತಾರೆ. ಆದರೆ ನಾನು..... ನಾನು ಹಲಸಿನ ಬೀಜ ಹಾಕಿದ್ದೆ. ಹುಟ್ಟಿದ ಮಗಳು ಅಲ್ಪಾಯುವಾದಳು. ಹೂವಿನ ಗಿಡವೂ ಅಲ್ಪಾಯು. ಮಗಳ ಮೇಲೆ ದೀರ್ಘ ಕಾಲ ಬಾಳುವ ಮರವಾದರೂ ಬೆಳೆಯಲಿ ಎಂದು ಹಲಸಿನ ಬೀಜ- ನನ್ನ ತವರಿಂದ ತಂದು ಹಾಕಿದೆ. ನನ್ನ ಅಪ್ಪ, ಅಮ್ಮ ಹೋಗಿ, ತವರು ದೂರಾದರೂ ಈ ಮರ ನನಗೆ ಮಗಳೂ, ತವರೂ ಎರಡೂ ಆಗಿದೆ ಮಗಾ...."
ಅಳುತ್ತಳುತ್ತಲೇ ಕಷ್ಟ ಪಟ್ಟು ಅಷ್ಟು ಹೇಳಿದಳು ಪಾರ್ವತಿ.


ಗಣೇಶನ ಕಣ್ಣಲ್ಲೂ ನೀರು. ಸರವನ್ನು ಮತ್ತೆ ತಾಯಿಯ ಕೈಯಲ್ಲಿಟ್ಟು -
" ಅಮ್ಮಾ ಆ ಮರ ನೇರವಾಗಿ ಇರುವ ಕಾರಣ ಅದೊಂದೇ ಮರ ಸಾಕು, ಅದನ್ನೇ ಕಡಿವಾ ಅಂತ ಹೊರಟದ್ದು. ಅಕ್ಕನ ಮೇಲೆ ಬೆಳೆದ ಮರ ನನಗೆ ಅಕ್ಕನ ಹಾಗೇ ಅಮ್ಮಾ. ಬೇರೆ ಮರ ಕಡಿಸ್ತೇನೆ. ಸಾಕಾಗದಿದ್ರೆ ಹೊರಗಿನಿಂದ ತರ್ತೇನೆ. ನನ್ನ ಕ್ಷಮಿಸಮ್ಮಾ. " ಎಂದ .

ಅಷ್ಟೂ ವರ್ಷದ ಎದೆಯ ಉಮ್ಮಳವನ್ನೆಲ್ಲಾ ಹೊರ ಹಾಕುವಂತೆ ಬಿಕ್ಕಿ ಬಿಕ್ಕಿ ಅತ್ತಳು ಪಾರ್ವತಿ ಮಗನ ಭುಜದಾಸರೆಯಲ್ಲಿ, ಮರ ಉಳಿದ ಸಮಾಧಾನದಲ್ಲಿ.