Click here to Download MyLang App

ಅತಿಥಿ - ಬರೆದವರು : ಹರೀಶ ಕೃಷ್ಣಪ್ಪ

ಶ್ರೀಮತಿ ಭಾವನಾ ಭಾಸ್ಕರ್ , ತನ್ನ ಬಿಡುವಿಲ್ಲದ ಕಛೇರಿ ಕಾರ್ಯಗಳಿಂದ ಹೊರಬರಲು, ದೀರ್ಘವಾದ ರಜೆಯನ್ನು ತೆಗೆದುಕೊಂಡು,ನಗರದಿಂದ ದೂರ ತಮ್ಮದೇ ಫಾರಂ ಹೌಸ್ (ತೋಟದ ಮನೆ)ಯನ್ನು ತಲುಪಿದ್ದಳು.ಬರುವಾಗ ತನ್ನ ಪತಿಯನ್ನೂ ಮರೆಯದೆ ಜೊತೆಗೆ ಕರೆದುಕೊಂಡು ಬಂದಿದ್ದಳು. ಅದು ಚಳಿಗಾಲದ ಸಮಯ ತುಂಬಾ ಸೊಗಸಾಗಿ ಸಾಗಿತ್ತು. ಕೆಲಸದ ಒತ್ತಡದಿಂದ ವಿಮುಕ್ತಿ ಪಡೆದು, ಗಂಡನೊಂದಿಗೆ ಯಾವುದೇ ತೊಂದರೆಯಿಲ್ಲದೇ ಅವಿಚ್ಛಿನ್ನ ವಿಶ್ರಾಂತಿಯ ಅವಧಿಯನ್ನು ಕಳೆಯುತ್ತಿದ್ದಳು. ಆಗಾಗ ಪತಿ ನಗರಕ್ಕೆ ತುರ್ತು ಕೆಲಸಕ್ಕಾಗಿ ಹೋಗಿ ಬರುತ್ತಿದ್ದನು.ಆ ಸಮಯದಲ್ಲಿ ತಾನು ಬಯಸಿದ ಏಕಾಂತವನ್ನೂ ಆನಂದಿಸುತ್ತಿದ್ದಳು.

ಆ ತೋಟದ ಮನೆ ನಗರದಿಂದ ಸುಮಾರು ೮೦ ಕಿಲೋಮೀಟರುಗಳ ಅಂತರದಲ್ಲಿ, ನಗರದ ಸರಹದ್ದಿನ ಹೊರಗೆ, ಕಾಡಿಗೆ ಸಮೀಪ ಇತ್ತು.ಇವರ ತೋಟದ ನಂತರ ಯಾವುದೇ ಹಳ್ಳಿಗಳಾಗಲಿ ಇರಲಿಲ್ಲ. ಇದೊಂದು ನಗರದಿಂದ ಸಂಪೂರ್ಣ ಭಿನ್ನವಾಗಿ ಪ್ರಕೃತಿಯ ಮಡಿಲಲ್ಲಿ ಕಾಲ ಕಳೆಯಲು ತುಂಬಾ ಒಳ್ಳೆಯ ಸ್ಥಳವಾಗಿತ್ತು. ಇಲ್ಲಿ ಮೊಬೈಲ್ ಫೋನಿನ ಹಾವಳಿಯಿರಲಿಲ್ಲ. ಅದಕ್ಕೆ ಬೇಕಾದ ಸಂವಹನ ಸಂಕೇತಗಳು ಸಿಗುತ್ತಿರಲಿಲ್ಲ. ಆದ್ದರಿಂದ ಭಾಸ್ಕರ್ ಲ್ಯಾಂಡ್ ಲೈನ್ (ಸ್ಥಿರ ದೂರವಾಣಿ)ಯನ್ನು ಅಳವಡಿಸಿದ್ದನು. ಅವರ ತೋಟ ಸುಮಾರು ೪೦ ಎಕರೆ ಪ್ರದೇಶದಲ್ಲಿ ತೆಂಗು , ಮಾವಿನ ಮರಗಳಿಂದ ಕೂಡಿತ್ತು. ನಡುವಿನ ಭಾಗದಲ್ಲಿ ಸುಮಾರು ೩೦೦೦ ಚದುರ ಅಡಿಗಳಷ್ಟು ವಿಸ್ತೀರ್ಣದಲ್ಲಿ ಸೊಗಸಾಗಿ ಮನೆಯನ್ನು ಕಟ್ಟಿಸಿದ್ದರು. ತೋಟವನ್ನು ನೋಡಿಕೊಳ್ಳಲು, ಅಡಿಗೆ ಮಾಡಲೂ , ಮನೆಯನ್ನು ಸ್ವಚ್ಚಗೊಳಿಸಲು ಕೆಲಸಗಾರಿದ್ದರು. ಭಾವನಳಿಗೆ ಯಾವುದೇ ಕೆಲಸವನ್ನು ಮಾಡುವ ಪ್ರಮೇಯವಿರಲಿಲ್ಲ. ಯಾವುದೇ ಕೆಲಸಗಳಿಂದ ಸಂಪೂರ್ಣ ಸ್ವತಂತ್ರಳಾಗಿದ್ದಳು.

ಭಾವನ ಹೆಚ್ಚು ಸಮಯ ತೋಟದಲ್ಲಿ ವಿಹಾರಮಾಡುತ್ತಾ ಕಳೆಯುತ್ತಿದ್ದಳು, ಉಳಿದ ಸಮಯ ಪುಸ್ತಕ ಓದುವುದಕ್ಕೆ ಮೀಸಲು. ಹಲವು ಬಾರಿ ಭಾಸ್ಕರ್ ನಗರಕ್ಕೆ ಹೋಗಿ ಒಂದೆರಡು ದಿನಗಳ ನಂತರ ಬರುತ್ತಿದ್ದನು. ಆದರೂ ಭಾವನ ಧೈರ್ಯವಾಗಿ ಒಬ್ಬಳೇ ಆ ಮನೆಯಲ್ಲಿರುತ್ತಿದ್ದಳು.ಕೆಲಸಗಾರರು ತಮಗಾಗಿ ಪಕ್ಕದಲ್ಲೇ ಕಟ್ಟಿಸಿದ್ದ ಮನೆಗಳಲ್ಲಿ ವಾಸ ಮಾಡುತ್ತಿದ್ದರು. ಹಲವು ಬಾರಿ ತನ್ನ ಏಕಾಂತವನ್ನು ಬಹಳ ಇಷ್ಟ ಪಡುತ್ತಿದ್ದಳು. ಏಕಾಂಗಿತನ ಇಲ್ಲವೇ ತನ್ನ ಗಂಡನ ಸಾಂಗತ್ಯ ಎರಡೇ, ಯಾರೂ ಅವರ ಏಕಾಂತಕ್ಕೆ ಭಂಗ ತರುವಂತಿರಲಿಲ್ಲ. ಅವಳು ಬೆಳೆದಿದ್ದೇ ಆ ರೀತಿಯಲ್ಲಿ, ಆಗರ್ಭ ಶ್ರೀಮಂತರ ಮಗಳು, ಪೋಷಕರು ಹಣದಲ್ಲಿ ಶ್ರೀಮಂತಿಕೆ ತೋರಿಸುತ್ತಿದ್ದರೇ ಹೊರತು ಪ್ರೀತಿಯಲ್ಲಿ ತೋರುತ್ತಿರಲಿಲ್ಲ. ಆದುದರಿಂದ ಬಾಲ್ಯದಿಂದಲೇ ಅವಳ ಬೆಳವಣಿಗೆ ವಿಚಿತ್ರವಾದ ರೀತಿಯಲ್ಲಿಯೇ ನಡೆಯಿತು. ಎಂದು ಭಾಸ್ಕರ್ ಅವಳ ಜೀವನದಲ್ಲಿ ಬಂದನೋ, ಅವನು ತೋರುತ್ತಿದ್ದ ಪ್ರೀತಿಯ ಮಧ್ಯೆ ಮೂರನೆಯವರು ಬರುವ ಅವಕಾಶವೇ ಇರಲಿಲ್ಲ.

ಭಾಸ್ಕರನಿಗೆ ತಂದೆ ತಾಯಿ ಅಣ್ಣ ತಂಗಿಯಿದ್ದರೂ ಇವಳಿಗಾಗಿ ಬೇರೆಯಾಗಿದ್ದ. ಅದು ಅವನನ್ನು ಬಹಳ ಕಾಡುತ್ತಿದ್ದರೂ, ಭಾವನಾ ಮೇಲಿನ ಪ್ರೀತಿಯಿಂದ ಸುಮ್ಮನಿರುತ್ತಿದ್ದ. ಆದರೆ ಭಾಸ್ಕರ್ ತನ್ನ ಬಂಧುಗಳನ್ನು ನೋಡಿಕೊಂಡು ಬರುವುದಕ್ಕೆ ಯಾವುದೇ ನಿರ್ಬಂಧವಿರಲಿಲ್ಲ. ಆದರೆ ತಾನು ಮಾತ್ರ ಯಾರ ಮನೆಗಾಗಲಿ,ಕಡೆಯ ಪಕ್ಷ ತನ್ನ ಸ್ವಂತ ತಂದೆ ತಾಯಿಯರ ಮನೆಗಾಗಲೀ ಹೋಗುತ್ತಿರಲಿಲ್ಲ ಭಾವನಾ. ಸದಾ ತಾನು ಮತ್ತು ತನ್ನ ಗಂಡ ಇಬ್ಬರೇ ಪ್ರಪಂಚವೆಂದು ಕೊಂಡಿದ್ದಳು. ಅವಳ ವರ್ತನೆ ವಿಚಿತ್ರವೆನಿಸಿದರೂ , ಹೊರಗಡೆ ಕಠಿಣವೆನಿಸಿದರೂ ಅವಳ ಮನಸ್ಸು ಮಾತ್ರ ಮೃದುವಾಗಿತ್ತು. ಅದನ್ನು ಭಾಸ್ಕರ್ ಒಬ್ಬನೇ ಬಲ್ಲವನಾಗಿದ್ದ.

ಆ ದಿನ ನಗರಕ್ಕೆ ಹೋಗಿದ್ದ ಭಾಸ್ಕರ್ , ಭಾವನಾಳಿಗೆ ಕರೆ ಮಾಡಿ, ತನ್ನ ಸ್ನೇಹಿತನ ತಿಳಿಸಿ. ಬಹಳ ಗಂಭೀರವಾದ ಧ್ವನಿಯಲ್ಲಿಯೇ ಪ್ರೀತಮ್ ಕೂಡ ನನ್ನ ಜೊತೆಗೆ ಬರುತ್ತಿದ್ದಾನೆ. ನಮ್ಮ ತೋಟದ ಮನೆಯಲ್ಲಿಯೇ ಒಂದೆರಡು ದಿನಗಳು ಕಳೆಯಲು ನಾನೇ ಆಹ್ವಾನಿಸಿದ್ದೇನೆ ಎನ್ನಲು,ಭಾವನಾಗೇ ಕೋಪ ಬಂದರೂ ಅದನ್ನು ತಡೆದುಕೊಂಡು ಒಲ್ಲದ ಮನಸ್ಸಿನಿಂದಲೇ ಅಂಗೀಕಾರ ನೀಡಿದ್ದಳು. ತನ್ನ ಗಂಡ ಮನೆಗೆ ಬಂದ ಮೇಲೆ ತರಾಟೆಗೆ ತೆಗೆದುಕೊಳ್ಳುತ್ತೇನೆ ಎಂದು ಮನಸ್ಸಿನಲ್ಲಿಯೇ ಅಂದುಕೊಂಡಳು. ಭಾವನ ಪ್ರೀತಮ್ ಬಗ್ಗೆ ಕೇಳಿದ್ದಳೇ ಹೊರತು ಎಂದೂ ಆತನನ್ನು ನೋಡಿರಲಿಲ್ಲ. ಅವನು ಅವಳ ಗಂಡನ ಕಾಲೇಜು ಸ್ನೇಹಿತನಾಗಿದ್ದನು; ಅದನ್ನು ಬಿಟ್ಟರೇ ಆತ ಈಗ ಯಾವ ವೃತ್ತಿಯನ್ನು ಮಾಡುತ್ತಿದ್ದಾನೆ ಎಲ್ಲಿದ್ದಾನೆ ಎಂಬ ಯಾವ ಮಾಹಿತಿಯೂ ಇರಲಿಲ್ಲ. ಮತ್ತು ತಿಳಿದುಗೊಳ್ಳುವ ಗೋಜಿಗೂ ಹೋಗಿರಲಿಲ್ಲ.ಅವನನ್ನು ಭೇಟಿಯಾಗದೇ ಅವಳದೇ ಕೆಲವು ಕಾರಣಗಳಾಗಿದ್ದವು. ಆದರೆ ಅವಳು ತನ್ನ ಮನಃ ಪಟಲದಲ್ಲಿ ಅಪ್ರಜ್ಞಾಪೂರ್ವಕವಾಗಿ ಅವನ ಚಿತ್ರವನ್ನು ರೋಪಿಸಿದ್ದಳು. ತೆಳ್ಳಗೆ ಎತ್ತರವಾಗಿ, ಸಿಡುಕು ಮುಖ ಹೊಂದಿರುವಂತೆ ಚಿತ್ರಿಸಿಕೊಂಡು ಈ ಬಾರಿ ತನ್ನ ಮತ್ತು ಗಂಡನ ಮಧ್ಯ ಬಂದಿದ್ದಕ್ಕೆ , ಅವನ ಮೇಲೆ ವಿನಾಕಾರಣ ದ್ವೇಷವನ್ನಿಟ್ಟು ಕೊಂಡಿದ್ದಳು. ಆದರೆ ಆತ ತನ್ನ ಗಂಡನೊಡನೆ ಮನೆಗೆ ಬಂದಾಗ, ಅವಳ ಕಲ್ಪನೆಯೆಲ್ಲ ಸುಳ್ಳೆಂದು ಭಾಸವಾಯಿತು. ಅವನು ಎತ್ತರವಿದ್ದರೂ ತೆಳ್ಳಗಿರಲಿಲ್ಲ, ಮುಖ ಸಿಡುಕು ಮುಖವಾಗಿರಲಿಲ್ಲ ಸೌಮ್ಯವಾಗಿಯೇ ಇತ್ತು. ಅವನ ಮಾತಿನ ಧಾಟಿ ತುಂಬಾ ಗೌರವದಿಂದ ಕೂಡಿತ್ತು. ಭಾವನ ತನ್ನ ಕಲ್ಪನೆಯ ವಿರುದ್ಧವಾದ ವ್ಯಕ್ತಿಯನ್ನು ನೋಡಿ ತಬ್ಬಿಬ್ಬಾದಳು. ಯಾವುದಕ್ಕೂ ಪ್ರತಿಕ್ರಿಯಿಸದೇ ಒಳಕ್ಕೆ ಹೋದಳು.

ಭಾಸ್ಕರ್ ಇದನ್ನು ನಿರೀಕ್ಷಿಸಿಯೇ ತನ್ನ ಸ್ನೇಹಿತನಿಗೆ ಭಾವನಾಳ ಬಗ್ಗೆ ಮೊದಲೇ ತಿಳಿಸಿದ್ದ.ತನ್ನ ಕೊಠಡಿಗೆ ಬಂದ ಭಾವನ ತಾನು ಆ ರೀತಿ ನಡೆದುಕೊಂಡದ್ದಕ್ಕೆ ತನಗೆ ತಾನೇ ಬೈದುಕೊಂಡಳು. ಅವಳ ಕಲ್ಪನೆಗೆ ವ್ಯತಿರಿಕ್ತವಾದ ವ್ಯಕ್ತಿ ಎದುರಾದಾಗ ಆ ಸನ್ನಿವೇಶವನ್ನು ಎದುರಿಸಲು ಅವಳು ಸಿದ್ಧಳಿರಲಿಲ್ಲ. ಅವಳ ಹಿಂದೆಯೇ ಬಂದ ಗಂಡನಿಗೆ ಹೇಗೆ ವಿವರಿಸುವುದೆಂದು ಅವಳಿಗೆ ಸಾಧ್ಯವಾಗಲಿಲ್ಲ. ಭಾಸ್ಕರ್ ತನ್ನ ಪತ್ನಿಯ ಪರಿಸ್ಥಿತಿಯನ್ನು ಅರಿತು , ಯಾವ ಪ್ರಶ್ನೆಯನ್ನೂ ಕೇಳಲಿಲ್ಲ. ಪ್ರೀತಮ್ ಗೆ ನಡೆದ ಸಂಘಟನೆಯೇನು ವಿಶೇಷವೆನಿಸಲಿಲ್ಲ. ಸುಮ್ಮನೆ ನಗುತ್ತಾ ಪಡಸಾಲೆಯಲ್ಲಿ ಕುಳಿತ್ತಿದ್ದನು. ಭಾಸ್ಕರ್ ಅವನೊಡನೇ ಕುಳಿತು ಮುಕ್ತವಾದ ಮಾತುಕತೆಯಲ್ಲಿ ತಲ್ಲೀನರಾದರು. ಇಬ್ಬರಿಗೂ ಚಹಾ ತಿಂಡಿಗಳನ್ನು ತಾನೇ ತೆಗೆದುಕೊಂಡು ಬಂದಳು ಭಾವನ. ಪ್ರೀತಮ್ ಬಹಳ ಸೌಜನ್ಯದಿಂದ ಅವಳ ಆತಿಥ್ಯವನ್ನು ಸ್ವೀಕರಿಸಿದ. ರುಚಿಕರವಾದ ತಿಂಡಿಯನ್ನು ಪ್ರಶಂಸಿಸಿದ. ಆದರೆ ಅವಳು ಅದನ್ನು ಕೇಳಿಯೂ ಕೇಳದ ರೀತಿಯಲ್ಲಿ ಒಳಕ್ಕೆ ಹೋದಳು. ಆದರೆ ಅವಳ ಮನದಲ್ಲಿ ಬಂದ ಅತಿಥಿಯ ಬಗ್ಗೆ ಇದ್ದ ಭಾವನೆ ಬದಲಾಗುವುದಕ್ಕೆ ಪ್ರಾರಂಭವಾಗಿತ್ತು.


ದಿನೇ ದಿನೇ ಪ್ರೀತಮ್ ವ್ಯಕ್ತಿತ್ವ ಭಾವನಾಳ ಮೇಲೆ ಪ್ರಭಾವ ಬೀರುತ್ತಾ ಬಂದಿತ್ತು.ಅದರಿಂದ ಅವಳು ಗೊಂದಲಕ್ಕೊಳಗಾಗಿದ್ದಳು.ಅವನ ಮಾತುಗಳು, ನಡೆದುಕೊಳ್ಳುವ ರೀತಿ. ಏನೋ ಒಂದು ತರಹದ ಆತ್ಮೀಯತೆ. ಆದರೆ ಅವಳಿಗೆ ಆ ಆತ್ಮೀಯ ಭಾವ ಯಾವುದೆಂದು ತಿಳಿಯದಾದಳು. ಅವನನ್ನು ಇಷ್ಟ ಪಡುತ್ತಿದ್ದಳು, ಏಕೆ ಇಷ್ಟಪಡುತ್ತಿದ್ದಳು ಎಂಬುದು ತಿಳಿದಿರಲಿಲ್ಲ.ಈ ಮನಸ್ಥಿತಿಯಲ್ಲಿ ಗೊಂದಲ ಹೆಚ್ಚಾಗುತ್ತಾ ಹೋಗುತ್ತಿತ್ತು. ಮೊದ ಮೊದಲು ಅವಳು ತನ್ನ ಪತಿ ಮತ್ತು ಅತಿಥಿಯನ್ನು ಬಹುಪಾಲು ಸಮಯ ಒಟ್ಟಿಗೆ ಬಿಟ್ಟು ಹೋಗುತ್ತಿದ್ದಳು. .ಆದರೆ ಇತ್ತೀಚಿಗೆ ಪ್ರೀತಮ್ ಜೊತೆ ವಾಯುವಿಹಾರಕ್ಕೆ ಹೋಗುತ್ತಿದ್ದಳು. ಅವನು ಅಪ್ರಜ್ಞಾಪೂರ್ವಕವಾಗಿ ಅವಳ ಮನಸ್ಸನ್ನು ಆವರಿಸಿದ್ದ. ಅವಳ ಸೀಮಿತ ವ್ಯಕ್ತಿತ್ವದ ಮೀಸಲು ಪ್ರದೇಶವನ್ನು ಭೇದಿಸಿ , ಅವಳ ಮನಸ್ಸನ್ನು ಹೊಕ್ಕಿದ್ದ. ಅವಳಿಗೆ ಅದು ಅರಿವಾಗಿ ಹಿತವೆನಿಸಸಿದರೂ ,ಮನದ ಮೂಲೆಯಲ್ಲೊಂದು ಆತಂಕ. ಅವನಿಂದ ದೂರವಿರಬೇಕು ಎನಿಸಿದರೂ ಮನ ಅವನ ಸಾನಿಧ್ಯವನ್ನು ಬಯಸುತ್ತಿದೆ. ಅವನ ದ್ವೇಷ ಮಾಡುತ್ತಿದ್ದ ಮನಸ್ಸೇ ಈಗ ಇಷ್ಟ ಪಡುತ್ತಿದೆ. ಇದು ಯಾವ ರೀತಿಯ ಆತ್ಮೀಯತೆಯ ಸಂಬಂಧ?. ಹೀಗೆಯೇ ಮುಂದುವರೆದರೇ ಮತಿಗೆಡುತ್ತದೆ.


ಪ್ರೀತಮ್ ನೊಂದಿಗಿನ ಒಡನಾಟ ತನ್ನ ಪತಿಯೊಂದಿಗಿನ ಒಡನಾಟಕ್ಕೂ ಭಿನ್ನವಾಗಿತ್ತು. ಹೆಚ್ಚು ಸಮಯ ಮೌನದಲ್ಲಿ ಕಳೆಯುತ್ತಿದ್ದರೂ, ಇಬ್ಬರಿಗೂ ಅದು ಹಿತವೆನಿಸುತ್ತಿತ್ತು. ಅವನು ಮುಕ್ತವಾಗಿ ಮಾತನಾಡುತ್ತಿದ್ದನು, ಅವರ ಹಳೆಯ ಕಾಲೇಜು ದಿನಗಳ ಬಗ್ಗೆ ಮಾತನಾಡುತ್ತಿದ್ದನು. ಆದರೆ ಎಂದೂ ತನ್ನ ವೈಯಕ್ತಿಕ ಬದುಕಿನ ಬಗ್ಗೆ ಮಾತನಾಡುತ್ತಿರಲಿಲ್ಲ. ಆದರೂ ಅವನು ಮಾತನಾಡುತ್ತಿರುವಾಗ ಏನೋ ಒಂದು ಬಂಧನವಿರುವಂತೆ, ಅವನ ಮಾತನ್ನು ಕೇಳುತ್ತಲೇ ಇರಬೇಕೆನಿಸುತಿತ್ತು. ಆದರೆ ಭಾವನ ಮಾತ್ರ ಎಂದೂ ಯಾವ ವಿಷಯವನ್ನೂ ಮುಕ್ತವಾಗಿ ಮಾತನಾಡುತ್ತಿರಲಿಲ್ಲ. ಆದರೂ ಆ ವ್ಯಕ್ತಿಯಿಂದ ದೂರವಾಗಬೇಕೆಂದು ನಿಶ್ಚಯಿಸಿದ್ದಳು.

ಆ ದಿನ ಪತಿ ಭಾಸ್ಕರ್ ನನ್ನು ಕೇಳಿಯೇ ಬಿಟ್ಟಳು."ನಿನ್ನ ಗೆಳೆಯ ಯಾವಾಗ ಹೋಗುತ್ತಾನೆ?" "ಇನ್ನೂ ಸ್ವಲ್ಪ ದಿನಗಳು ಇರುತ್ತಾನೆ. ಸ್ವಲ್ಪ ಸಮಯ ತಡೆದು. ಭಾವನ !!ಒಂದು ವಿಷಯ ಅರ್ಥವಾಗುತ್ತಿಲ್ಲ; ಅವನು ನಿನಗೆ ಯಾವುದೇ ತೊಂದರೆ ಕೊಡುತ್ತಿಲ್ಲ ತಾನೇ?"ಛೆ !! ಛೆ!! ಆತ ಯಾವ ತೊಂದರೆಯನ್ನು ನೀಡುತ್ತಿಲ್ಲ. ಹಾಗೆ ಮಾಡಿದ್ದರೇ ಇಷ್ಟು ದಿನ ಇಲ್ಲಿರುತ್ತಿರಲಿಲ್ಲ. ಏನಿಲ್ಲಾ!! ಆತನಿಗೆ ಇಲ್ಲಿರುವುದು ಬೇಸರವಾದರೆ ನೀವು ಅವನ ಆನಂದಕ್ಕಾಗಿ ಬೇರೆಯೇನಾದರೂ ಯೋಜಿಸುವ ಅಗತ್ಯವಿದೆ ಎಂದೆನಿಸುತ್ತದೆ.

ಭಾಸ್ಕರ್ ಗೆ ತನ್ನ ಹೆಂಡತಿ ಸ್ನೇಹಿತನ ಬಗ್ಗೆ ತೋರಿಸುತ್ತಿರುವ ಕಾಳಜಿಯ ಬಗ್ಗೆ ಆಶ್ಚರ್ಯವಾಯಿತು.ಭಾವನ!! ನಾನು ಹಲವು ಬಾರಿ ಕೇಳಿದ್ದೇನೆ. ಅವನಿಗೆ ಇಲ್ಲಿರುವುದೇ ಆನಂದವಂತೆ. ಬೇರೆ ಎಲ್ಲಿಗೂ ಹೋಗುವ ಮನಸಿಲ್ಲವಂತೆ. ಆದರೆ ಬಡಪಾಯಿಗೆ ನಮ್ಮ ಹಾಗೆಯೇ ಅತಿಯಾದ ಕೆಲಸದಿಂದ ಸ್ವಲ್ಪ ದಿನಗಳ ಕಾಲ ಮುಕ್ತಿ ಬೇಕಿತ್ತು . ಅದಕ್ಕಾಗಿಯೇ ನಾನು ಅವನನ್ನು ಇಲ್ಲಿ ಕರೆದದ್ದು. ಸರಿ !! ಮತ್ತೊಂದು ವಿಷಯ ನಾಳೆ ನಾನು ನನ್ನ ತವರಿಗೆ ಹೋಗುತ್ತಿದ್ದೇನೆ. ಬರುವುದು ಸ್ವಲ್ಪ ದಿವಸ ಹಿಡಿಯಬಹುದು. ಅದಕ್ಕಾಗಿಯೇ ನಿಮ್ಮ ಸ್ನೇಹಿತನನ್ನು ಬೇರೆ ಸ್ಥಳಕ್ಕೆ ಕರೆದುಕೊಂಡು ಹೋಗುವ ಯೋಜನೆ ರೂಪಿಸಿ ಎಂದು ಹೇಳಿದ್ದು.

ಈ ಮಾತನ್ನು ಕೇಳಿ ಭಾಸ್ಕರ್ ಗೆ ಮತ್ತೊಮ್ಮೆ ಆಶ್ಚರ್ಯವಾಗಿತ್ತು.ನೀವು ಹೆಂಗಸರು ಕೇಳುವ ಒಂದು ಪ್ರಶ್ನೆಯ ಹಿಂದೆ ಹಲವು ಕಾರಣಗಳಿರುತ್ತವೆ ಎಂಬುದು ತಿಳಿದುಕೊಳ್ಳುವುದು ಬಹಳ ಕಷ್ಟ. ಸರಿ ಹಾಗೆಯೇ ಆಗಲಿ ಯೋಚಿಸುವೆ. ಏತಕೋ ತಿಳಿಯದು, ಅಂದು ರಾತ್ರಿ ಅವಳಿಗೆ ನಿದ್ದೆ ಬಾರದು. ಅತಿಥಿಯನ್ನು ಬಿಟ್ಟು ಹೋಗಬೇಕಾಗಿದೆ ಎಂದು ಅಲುಬುತ್ತಿದ್ದಾಳೆ. ಏತಕ್ಕೆ ಹೀಗೆ ಎಂಬುದು ಪ್ರಶ್ನಾರ್ಥಕ? ಆದರೂ ಮುಂಜಾನೆ ಪ್ರೀತಮ್ ಗೆ ಹೇಳದೆಯೇ ತನ್ನ ತವರಿಗೆ ಹೊರಟೇ ಬಿಟ್ಟಳು. ಭಾಸ್ಕರ್ ಅವಳನ್ನು ಬಸ್ಸಿನಲ್ಲಿ ಕಳಿಸಿಕೊಟ್ಟು ಬಂದಿದ್ದನು.


ಅವಳು ತವರಿನಲ್ಲಿದ್ದರೂ ಪ್ರೀತಮ್ ಬಗ್ಗೆಯೇ ಚಿಂತಿಸುತ್ತಿದ್ದಳು. ಅವನ ಮೇಲೆ ಮೂಡುತ್ತಿರುವ ಆತ್ಮೀಯ ಭಾವದ ಸಂಬಂಧವಾದರೂ ಯಾವುದು?ಅಲ್ಲಿಯೇ ಇದ್ದಿದ್ದರೇ ಬಹುಶಃ ಮತಿಗೆಡುತ್ತಿತ್ತು. ಅವನು ಅಲ್ಲಿಂದ ಹೋದ ಮೇಲೆ ಅಲ್ಲಿಗೆ ಹೋಗೋಣವೆಂದು ನಿರ್ಧರಿಸಿದ್ದಳು.ಭಾವನ ಹಿಂದಿರುಗುವಷ್ಟರಲ್ಲಿ ಗೌರವ್ ಅಲ್ಲಿರಲಿಲ್ಲ. ಭಾಸ್ಕರ್ ಅವಳಿಗೊಂದು ಪತ್ರವನ್ನು ಕೊಟ್ಟನು. ಕೊಡುವಾಗ ಅದರಲ್ಲಿದ್ದ ಭಾವಚಿತ್ರವೊಂದು ಕೆಳಗೆ ಬಿತ್ತು. ಅದೇನೆಂದು ನೋಡಲು ಅದು ಪ್ರೀತಮ್ ಮತ್ತು ಭಾವನ ಇದ್ದ ಭಾವಚಿತ್ರ. ಅದನ್ನು ನೋಡಿ ಅವಳಿಗೆ ಆಶ್ಚರ್ಯವಾಯಿತು. ತಾನು ಎಂದೂ ಆತನೊಂದಿಗೆ ಇಷ್ಟು ಆತ್ಮೀಯವಾಗಿ ಭಾವಚಿತ್ರವನ್ನು ತೆಗೆಸಿಕೊಂಡಿರಲಿಲ್ಲ. ಅವಳು ಯೋಚನೆಯಲ್ಲಿ ಮುಳುಗಿದಳು. ಭಾಸ್ಕರ್ ಇನ್ನೂ ತನ್ನ ದೃಷ್ಟಿಯನ್ನು ಆ ಭಾವಚಿತ್ರದಿಂದ ಹೊರಗೆ ತಂದಿರಲಿಲ್ಲ. ಅವಳಿಗೆ ಒಂದು ಬಗೆಯ ಆತಂಕವುಂಟಾಗಿತ್ತು. ಇನ್ನು ಪತ್ರದಲ್ಲಿ ಏನಿದೆಯೋ? ಎಂದು ಮನಸ್ಸಿನಲ್ಲಿಯೇ ಅಂದುಕೊಳ್ಳುತ್ತಿದ್ದಳು.

ಭಾಸ್ಕರ್ ಆ ಭಾವ ಚಿತ್ರವನ್ನು ಅವಳಿಗೆ ಕೊಟ್ಟನು, ಕೊಡುವಾಗ ಅವನ ಮುಖದಲ್ಲಿ ನಗುವನ್ನು ಬಿಟ್ಟು ಬೇರೆ ಯಾವ ಭಾವನೆಯೂ ಇರಲಿಲ್ಲ. ಇದರಿಂದ ಭಾವನ ಮತ್ತೂ ಆಶ್ಚರ್ಯಗೊಂಡಳು. ಆ ಭಾವಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿದಳು. ಪ್ರೀತಮ್ ಅತ್ಯಂತ ಆತ್ಮೀಯವಾಗಿ ನಿಂತಿರುವುದು ಬಿಡಿಸಲಾಗದ ಒಗಟಾಗಿತ್ತು. ತಡಮಾಡದೇ ಆ ಪತ್ರವನ್ನು ಓದಲು ಪ್ರಾರಂಭಿಸಿದಳು.

" ಭಾವನರವರೇ, ನಿಮ್ಮ ಆತಿಥ್ಯಕ್ಕೆ ವಂದನೆಗಳು. ಇಷ್ಟು ದಿವಸ ನಿಮಗೆ ತೊಂದರೆ ಕೊಟ್ಟಿದ್ದಕ್ಕೆ ಕ್ಷಮೆ ಇರಲಿ.ಬಹುಶಃ ನನ್ನ ಸಲುವಾಗಿಯೇ ನೀವು ನಿಮ್ಮ ತವರಿಗೆ ಹೋದದ್ದು ಎನಿಸುತ್ತದೆ. ಅದು ಬಿಡಿ, ಈ ಭಾವಚಿತ್ರವನ್ನು ನೋಡಿ ನಿಮಗೆ ಆಶ್ಚರ್ಯವಾಗಿರಬಹದು ಅಲ್ಲವೇ? ಅದರಲ್ಲಿರುವ ಯುವತಿ ನಿಮ್ಮ ಹಾಗೆಯೇ ಇದ್ದಾಳಲ್ಲವೇ ? ನಿಮ್ಮ ಭಾವಚಿತ್ರವನ್ನು ಭಾಸ್ಕರ್ ತೋರಿಸಿದಾಗ.ಮೊದಲು ನನಗೂ ಆಶ್ಚರ್ಯವಾಗಿತ್ತು ಜೊತೆಗೆ ಸಂತೋಷವಾಗಿತ್ತು. ನಿಮ್ಮನ್ನು ಹತ್ತಿರದಿಂದ ನೋಡುವ ಅವಕಾಶಕ್ಕಾಗಿ ಹಾತೊರೆಯುತ್ತಿದ್ದೆ. ಅದೇ ವೇಳೆ ಭಾಸ್ಕರ್ ನನ್ನನ್ನು ಆಹ್ವಾನಿಸಿದ. ನನಗೆ ಆಗ ಆದ ಆನಂದಕ್ಕೆ ಪಾರವೇ ಇರಲಿಲ್ಲ..........."

ಒಂದು ಕ್ಷಣ ಓದುವುದನ್ನು ನಿಲ್ಲಿಸಿದಳು. ಈ ಪ್ರೀತಮ್ ಏನನ್ನು ಹೇಳುತ್ತಿದ್ದಾನೆ. ನನ್ನ ಹಾಗೇ ಇರುವವವಳು ಈತನ ಪ್ರೇಯಸಿಯೇ? ಹೆಂಡತಿಯೇ? ಭಾಸ್ಕರ್ ಕಡೆ ನೋಡಿದರೆ. ಅದೇ ನಗು. ವಿಚಿತ್ರವೆನಿಸಿತು.ಕಣ್ಣ ಸನ್ನೆಯಿಂದಲೇ ಪತ್ರ ಓದುವುದನ್ನು ಮುಂದುವರೆಸು ಎಂದನು.

:....ನಿಮ್ಮನ್ನು ನೋಡಲು ಓಡೋಡಿ ಬಂದೆ. ಪ್ರತ್ಯಕ್ಷವಾಗಿ ನೋಡಿದಾಗ ಏನೋ ಒಂದು ವಿಶೇಷ ಅನುಭೂತಿ.ನಿಮ್ಮೊಡನೆ ಮಾತನಾಡುವುದು ಏನೋ ಹಿತವಾದ ಅನುಭವ.ನನಗಾಗಿ ದೇವರು ನಿಮ್ಮನ್ನು ಮತ್ತೆ ಸೃಷ್ಟಿಸಿದ್ದಾನೆ ಎಂದು ಅವನಿಗೆ ನಮಿಸಿದೆ...'

ಭಾವನ ಮತ್ತೂ ಗೊಂದಲಳ್ಕೊಳಗಾದಳು. ಅವಳ ಕೈ ನಡುಗುತ್ತಿತ್ತು. ಭಾಸ್ಕರ್ ಅವಳ ಭುಜದ ಮೇಲೆ ಕೈಯಿಟ್ಟು ಧೈರ್ಯ ತುಂಬಿದ. ಓದಲು ಪ್ರೇರೇಪಿಸಿದ......ನಿಮ್ಮೊಂದಿಗೆ ಕಳೆದ ಸಮಯ ನನ್ನ ಜೀವನದ ಅತ್ಯಮೂಲ್ಯ ಕ್ಷಣಗಳು, ಆದರೆ ನನ್ನ ಸಲುವಾಗಿಯೇ ನೀವು ದೂರ ಹೋದದ್ದು ಎಂಬುದು ತಿಳಿದು ಬಹಳ ಬೇಸರವಾಯಿತು. ಇನ್ನು ಮುಂದೆ ಖಂಡಿತಾ ನಿಮಗೆ ತೊಂದರೆ ನೀಡುವುದಿಲ್ಲ. ನೀವು ಆರಾಮವಾಗಿರಬಹುದು.ನಿಮ್ಮ ನಗುವಿನಲ್ಲಿ ಅಗಲಿದ ನನ್ನ ತಂಗಿಯನ್ನು ಕಾಣುತ್ತಿದ್ದೆ. ಆ ನಗು ಮುಖವೇ ಸದಾ ನನ್ನ ಮನಸ್ಸಿನಲ್ಲಿದೆ. ನಿಮಗೆ ಸಾಧ್ಯವಾದರೇ ನನ್ನನ್ನು ನಿಮ್ಮ ಸೋದರನೆಂದು ಭಾವಿಸಿ, ನನ್ನಿಂದಾದ ತೊಂದರೆಗೆ ಮತ್ತೊಮ್ಮೆ ಕ್ಷಮಿಸಿ. ..ನಿಮ್ಮ ಆತ್ಮೀಯ ಪ್ರೀತಮ್ "


ಪತ್ರವನ್ನು ಓದಿ ಮುಗಿಸುವ ಹೊತ್ತಿಗೆ ಅವಳ ಕಣ್ಣುಗಳು ನೀರಿನಿಂದ ತುಂಬಿಕೊಂಡಿತ್ತು. ಆತನ ಮೇಲೆ ಅವಳು ಹೊಂದಿದ್ದ ಭಾವನೆಗೆ ನಾಚಿಕೆಯಿಂದ ತಲೆ ತಗ್ಗಿಸಿಕೊಂಡಳು. ಕಣ್ಣೀರು ಧಾರಾಕಾರವಾಗಿ ಹರಿಯುತ್ತಲೇ ಇತ್ತು. ಅಳುತ್ತಲೇ ನಾನು ಅಣ್ಣನನ್ನು ಈಗಲೇ ನೋಡಬೇಕು ಎಂದಳು. ಎಲ್ಲವನ್ನೂ ಬಲ್ಲ ಭಾಸ್ಕರ್ ಅವಳನ್ನು ಸಮಾಧಾನಪಡಿಸುತ್ತಾ, ಪಕ್ಕದಲ್ಲಿದ್ದ ಫೋನಿನಲ್ಲಿ ಪ್ರೀತಮ್ ನ ದೂರವಾಣಿ ಸಂಖ್ಯೆಯನ್ನು ಒತ್ತಿದನು.
********