Click here to Download MyLang App

ಅಣಬೆ ಮಾಂಸಹಾರವಾದ ಕತೆ - ಬರೆದವರು : ಪೂರ್ಣಿಮಾ ಶಿವಶಂಕರ್ | ಸಾಮಾಜಿಕ

ಒಂದಾನೊಂದು ಕಾಲದಲ್ಲಿ ಕಾನೂರು ಎಂಬ ಒಂದು ಸಣ್ಣ ಹಳ್ಳಿಯಿದ್ದಿತು. ಆ ಹಳ್ಳಿಯಲ್ಲಿ ಇಬ್ಬರು ಅತ್ತೆ ಸೊಸೆಯರಿದ್ದರು. ಅತ್ತೆಯ ಹೆಸರು ಗೌರಮ್ಮ ಹಾಗೂ ಸೊಸೆಯ ಹೆಸರು ರೂಪ. ಅತ್ತೆ ಗೌರಮ್ಮ ಬಹಳ ಜಿಪುಣಳಾಗಿದ್ದು! ಯಾರೊಂದಿಗೂ ಹೊಂದಿಕೊಳ್ಳುತ್ತಿರಲಿಲ್ಲ. ಆದರೆ ಸೊಸೆ ಹಾಗಿರಲಿಲ್ಲ.
ರೂಪಾಳು ಅವಳ ಹೆಸರಿನಂತೆಯೇ.., ಉದಾರಳು, ಗುಣವಂತಳು ಆಗಿದ್ದು, ಅಕ್ಕ ಪಕ್ಕದವರಿಂದ ಹಿಡಿದು ಎಲ್ಲರೊಂದಿಗೂ ಹೊಂದಿಕೊಂಡು ಸದಾ ಸಂತೋಷದಿಂದಿರುತ್ತಿದ್ದಳು.

ಅತ್ತೆ ಗೌರಮ್ಮ, ಮಗನ ಮದುವೆಯಾಗಿ ರೂಪ ಮನೆಗೆ ಬಂದ ದಿನದಿಂದ ಕೆಲವು ತಿಂಗಳುಗಳ ಕಾಲ ಆದಷ್ಟ್ಟು ತನ್ನ ಜಿಪುಣ ತನವನ್ನು ಮನಸ್ಸಿನಲ್ಲಿಯೇ ಹಿಡಿದಿಟ್ಟುಕೊಂಡು ಸೊಸೆಯ ಎದುರಿಗೆ ಒಳ್ಳೆಯ ರೀತಿಯಲ್ಲಿಯೇ ನಾಟಕವಾಡುತ್ತಾ, ಅವಳ ಉದಾರತೆಯನ್ನು ಹೋಗಳುತ್ತಾ ಒಳ್ಳೆಯವಳಂತೆ ನಡೆದುಕೊಳ್ಳುತ್ತಿದ್ದಳು. ಆದರೆ ಇದೆಲ್ಲವನ್ನು ಗಮನಿಸಿದ ಮಗನಿಗೆ ಹುಟ್ಟಿದಾಗಿನಿಂದಲೂ ಜಿಪುಣಳಾಗಿದ್ದ ತಾಯಿಯು ಈಗ ಹೊಸದಾಗಿ ನಡೆದುಕೊಳ್ಳುತ್ತಿದ್ದ ರೀತಿಯನ್ನು ನೋಡಿ ಸೊಸೆ ಬಂದಿದ್ದುದರಿಂದ ತಾಯಿ ಬದಲಾಗಿರಬಹುದಂದುಕೊಂಡು ಸಂತೋಷಸಿದನು ಜೊತೆಗೆ ಈಗಾಲಾದರೂ ತಾಯಿ ಬದಲಾದ ಲೆಂದುಕೊಂಡು ಸಮಾಧಾನಪಟ್ಟುಕೊಂಡನು. ಆದರೆ ರೂಪಾಳು ಮನೆಗೆ ಬರುವ ನೆಂಟರಿಷ್ಟರನ್ನು ಸತ್ಕಾರ ಮಾಡುವ ರೀತಿ, ಅಕ್ಕ ಪಕ್ಕದ ಮಕ್ಕಳಿಗೆ ಮನೆಯಲ್ಲಿರುವ ತಿಂಡಿಯನ್ನು ಹಂಚುವ ಬಗೆ ಇವೆಲ್ಲವೂ ಕೆಲವೇ ತಿಂಗಳುಗಳಲ್ಲಿ ಗೌರಮ್ಮನಿಂದ ಸಹಿಸಲು ಅಸಾಧ್ಯವಾಯಿತು.

ಬರು ಬರುತ್ತಾ ಅತ್ತೆ ಗೌರಮ್ಮ ಮಗ ಕೆಲಸ ಮುಗಿಸಿ ಮನೆಗೆ ಬಂದರೆ ಸಾಕು ಸೊಸೆಯ ಒಳ್ಳೆಯತನವನ್ನೇ...,,
ಕೆಟ್ಟ ಸನ್ನಿವೇಶವನ್ನಾಗಿಸಿ ಚಾಡಿ ಹೇಳಿ, ಜಗಳ ಮಾಡಿ ಸೊಸೆಯನ್ನು ದಾರಿಗೆ ತರುವಂತೆ ಒತ್ತಾಯಿಸುತ್ತಿದ್ದಳು. ಆದರೆ ಇದೆಲ್ಲವನ್ನು ಕೇಳಿಸಿಕೊಳ್ಳುತ್ತಿದ್ದ ಮಗ ರೂಪಳಾ ಗುಣವನ್ನು ಅರಿತಿದ್ದ ಜೊತೆಗೆ ಚಿಕ್ಕಂದಿನಿಂದಲೂ ತನ್ನ ತಾಯಿಯ ಬುದ್ದಿಯನ್ನು ನೋಡಿದ್ದರಿಂದ ಪ್ರತಿದಿನವೂ ತಾನು ಬರುವುದನ್ನೇ ಕಾದು ತಾಯಿ ಹೆಂಡತಿಯ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡಿದರೂ ಸಹ : ಅವನು ಯಾವುದಕ್ಕೂ ಕಿವಿಗೊಡದೆ, ಇದಯೆಲ್ಲವನ್ನು ಎಂದೂ ಹೆಂಡತಿಯ ಬಳಿಯೂ ಹೇಳದೆ ಅವಳೊಂದಿಗೆ ಪ್ರೀತಿಯಿಂದ ನಡೆದುಕೊಳ್ಳುತ್ತಿದ್ದ.

ಹೀಗೆ ತಿಂಗಳುಗಳು ಕಳೆಯುತ್ತಿದ್ದರೂ ಸಹ ಮಗ ಮತ್ತು ಸೊಸೆಯೂ ಒಂದು ದಿನವೂ ಜಗಳವಾಡದೆ ಇರುವುದನ್ನು ನೋಡಿದ ಗೌರಮ್ಮ ಮತ್ತೊಂದು ಉಪಾಯವನ್ನು ಮಾಡಿ, ತಿಂಗಳಂತ್ಯದಲ್ಲಿ ಮಗ ಮನೆಗೆಂದು ತರುತಿದ್ದ ದಿನಸಿಯನ್ನು ಮುಚ್ಚಿಡುವುದಕ್ಕೆ ಪ್ರಾರಂಭಿಸುತ್ತಾಳೆ. ಹೀಗೆ ಮಾಡಿ ಅಡುಗೆಗೆ ಕಡಿಮೆ ವಸ್ತುಗಳನ್ನು ನೀಡಿ ಸೊಸೆಗೆ ತಿನ್ನುವಾಗ ಅಡುಗೆ ಕಡಿಮೆಯಿರುವಂತೆ ಮಾಡುತ್ತಾಳೆ. ಆದರೆ ಇದ್ಯಾವುದು ತಿಳಿಯದ ರೂಪ ಕೊನೆಯಲ್ಲಿ ಊಟ ಮಾಡುವಾಗ ಗಂಡನಿಗೆ ತಿಳಿಯದೆ ಪಾತ್ರೆಯಲ್ಲಿ ಇದ್ದಷ್ಟ್ಟು ಅನ್ನವನ್ನು ತಿಂದು ಹಸಿವಿನಲ್ಲೇ ಮಲಗಿಬಿಡುತ್ತಿದ್ದಳು, ತನಗೆ ಇಲ್ಲದಾಗ ಇನ್ನೂ ಬೇರೆ ಮಕ್ಕಳು ಮನೆ ಬಾಗಿಲಿಗೆ ಬಂದರು ಸಹ ಅವಳಿಂದ ಏನನ್ನು ಕೊಡಲು ಸಾಧ್ಯವಾಗುತ್ತಿರಲಿಲ್ಲ. ಹೀಗೆಯೇ ಕಾಲ ಕಳೆಯುತ್ತಿರುವಾಗ ರೂಪಾಳು ಬಸುರಿಯಾಗುತ್ತಾಳೆ. ಈ ವಿಷಯವನ್ನು ಕೇಳಿದ ಗಂಡ ಎಲ್ಲರಿಗೂ ಸಿಹಿ ಹಂಚಿ ಸಂಭ್ರಮಿಸಿದರು ಸಹ ಗೌರಮ್ಮನಿಗೆ ಮಾತ್ರ ಮೊಮ್ಮಗು ಬರುವ ಸಂತೋಷಕ್ಕಿಂತಲು ಸಹ ದಿನಸಿಗೆ ಇನ್ನೊಬ್ಬರು ಹೆಚ್ಚಾದರಲ್ಲ ಎನ್ನುವ ಬಾವವೇ ಅಧಿಕವಾದಂತಿತ್ತು. ಅತ್ತೆ ಒಂದು ದಿನವೂ ಬಸುರಿ ಸೊಸೆಗೆ ಏನಾದರೂ" ಬಯಕೆ ಇದೆಯೇ ಎಂದು ಕೇಳಿದರೆ ಏನಾದರೂ ಕೇಳಿಬಿಡುವಳೇ ಎಂದೂ ಬಾಯಿ ತಪ್ಪಿಯು ಕೇಳಿ"ರುವುದಿಲ್ಲ. ಆದರೂ ಒಳ್ಳೆಯವಳಾಗಿದ್ದ ರೂಪ ತನ್ನ ಅತ್ತೆಯ ಬುದ್ದಿಯನ್ನು ತಿಳಿದಿದ್ದು., ತನ್ನ ಗಂಡನಲ್ಲಿಯೂ ಎಂದೂ ಏನು ಹೇಳದೆ ನಗುಮೊಗದಿಂದಲೇ ಇರುತ್ತಾಳೆ!!!!

ಒಂದು ದಿನ ಊರಿನಿಂದ ಗೌರಮ್ಮನವರ ರಕ್ತ ಸಂಬಂಧಿಕರೊಬ್ಬರ ಸಾವಿನ ಸುದ್ದಿಯೊಂದು ಬಂದಿತ್ತು.
ಖರ್ಚಿನ ನೆಪದಿಂದ ಗೌರಮ್ಮ ಎಷ್ಟೋ ಸಾವು, ಸಮಾರಂಭಗಳನ್ನು ತಪ್ಪಿಸಿಕೊಂಡಿದ್ದರು ಸಹ ಇದು ತುಂಬಾ ಆಪ್ತರ ಅಕಾಲಿಕ ಮರಣವಾಗಿದ್ದರಿಂದ ಹೋಗುವುದು ಅನಿವಾರ್ಯವಾಗಿತ್ತು. ಸೊಸೆಯನ್ನು ಕರೆದುಕೊಂಡು ಹೋಗೋಣವೆಂದರೆ ರೂಪ ಗರ್ಭಿಣಿಯಾದ ಕಾರಣಕ್ಕೆ ಸಾವಿಗೆ ಕರೆದುಕೊಂಡು ಹೋಗುವಂತಿರಲಿಲ್ಲ. ಹಾಗಾಗಿ ಇಷ್ಟವಿಲ್ಲದೆಯೇ ಮಗ ಮತ್ತು ಸೊಸೆಗೆ ಮನೆಯನ್ನು ಬಿಟ್ಟು ಎಲ್ಲೂ ಹೋಗಬೇಡಿ ಕಳ್ಳರ ಕಾಟ ಆದ್ದರಿಂದ ಮನೆಯ ಕಡೆ ಜೋಪಾನ.., ತಾನು 2 ದಿನದಲ್ಲಿಯೇ ಹಿಂತಿರುಗಿ ಬರುವೆನೆಂದು ಹೇಳಿ ಪೆಚ್ಚು ಮೊರೆ ಹಾಕಿಕೊಂಡು ಹೊರಡುತ್ತಾಳೆ.

ರೂಪಾಳಿಗೆ ಮದುವೆಯಾದ ದಿನದಿಂದಲೂ ಅತ್ತೆ ಗೌರಮ್ಮ ಒಂದು ದಿನವೂ ಮಗ ಸೊಸೆಯನ್ನು ಬಿಟ್ಟು ಎಲ್ಲಿಗೂ ಹೋಗಿರಲಿಲ್ಲ. ರೂಪಾಳನ್ನು ತವರಿಗೂ ಸಹ ಯಾವುದಾದರೂ ನೆಪ ಹೇಳಿ ಕಳಿಸುತ್ತೀರಲಿಲ್ಲ. ಈ ಪರಿಸ್ಥಿಯು ಅವಳಿಗೆ ಉಸಿರು ಗಟ್ಟಿಸುವಂತಿತ್ತು. ಇದರಿಂದ ಅತ್ತೆ ಎರಡು ದಿನ ಮನೆಯಲ್ಲಿರುವುದಿಲ್ಲ ಎಂದ ತಕ್ಷಣ ಲವಲವಿಕೆಯಿಂದ ಅತ್ತೆಗೆ ಊರಿಗೆ ಹೊರಡಲು ಬೇಕಾದ ಎಲ್ಲಾ ವ್ಯವಸ್ಥೆಯನ್ನು ಬೇಗನೆ ಅತ್ತೆಗೆ ಅನುಮಾನ ಬರದ ರೀತಿಯಲ್ಲಿ ರೂಪ ಮಾಡಿಕೊಟ್ಟಿದ್ದಳು. ಆದರೆ ತನ್ನ ತಾಯಿಯ ದುರ್ಬುದ್ದಿ ತಿಳಿದಿದ್ದ ರೂಪಾಳ ಗಂಡ ತನ್ನ ತಾಯಿಗೆ ತಿಳಿಯದಂತೆ ಕೆಲವೊಂದು ಬಾರಿ ಅವಳಿಗಿಷ್ಟದ ತಿಂಡಿಯನ್ನು ಕದ್ದು ಮುಚ್ಚಿ ರೂಪಳಿಗೆ ತಂದು ಕೊಡುತ್ತಿದ್ದದ್ದು ಉಂಟು. ಅಂತೂ ಗೌರಮ್ಮ ಊರಿಗೆ ಓದ ದಿನವೆಲ್ಲ ರೂಪಳ ಗಂಡ ತನ್ನ ಕೆಲಸಕ್ಕೆ ರಜೆ ಹಾಕಿ ಹೆಂಡತಿಯನ್ನು ಊರೆಲ್ಲ ಸುತ್ತಿಸಿ, ಇಷ್ಟಪಟ್ಟಿದ್ದಾನೆಲ್ಲಾ ಕೊಡಿಸಿ ಜೋಡಿ ಹಕ್ಕಿಗಳು ಹಾರಾಡುತ್ತಿದ್ದರು. ಮಾರನೇ ದಿನ ರೂಪಾಳಿಗೆ ಜಗದೀಶ ಸಾರಿಗೆ ಏನು ಬೇಕೆಂದು ಕೇಳಿದಾಗ ರೂಪಾಳ ಬಹು ದಿನದ ಆಸೆ "ನಾಟಿ ಕೋಳಿ "ಬೇಕೆಂದು ಕೇಳುತ್ತಾಳೆ. ತಕ್ಷಣವೇ ಮಾರುಕಟ್ಟೆಗೆ ಹೋದ ಜಗದೀಶ ನಾಟಿ ಕೋಳಿಯೊಂದಿಗೆ ಬರುತ್ತಾನೆ. ರೂಪ ತನಗಿಷ್ಟವಾಗುವಂತೆ ಒಳ್ಳೆಯ ಮಸಾಲೆಯನ್ನು ರುಬ್ಬಿ ಗಮ್ ಎನ್ನುವಂತೆ ನಾಟಿ ಕೋಳಿಯ ಸಾರನ್ನು ತಯಾರಿಸಿ.., ಹೊರಗೆ ಹೋಗಿದ್ದ ಗಂಡನಿಗಾಗಿ ಬಂದರೆ ಒಟ್ಟಿಗೆ ಊಟ ಮಾಡುವುದಕ್ಕಾಗಿ ಕಾಯುತ್ತಿರುತ್ತಾಳೆ. ಆಗಲೇ ಯಾರೋ ಬಾಗಿಲು ಬಡಿದಂತೆ ಕೇಳಿಸುತ್ತದೆ. ಆದರೆ ರೂಪ ಮನಸ್ಸಿನಲ್ಲಿಯೇ ತನ್ನ ಗಂಡ ಎಂದೂ ಬಾಗಿಲು ಬಡೆಯುವುದಿಲ್ಲ ಬದಲಿಗೆ ಹೆಸರಿಡಿದು ಪ್ರೀತಿಯಿಂದ ಕರೆಯುತ್ತಾರೆ!!!! ಯಾರಿರಬಹುದು ಎಂದೂ ಕಿಟಕಿಯಿಂದ ಹೊರಗೆ ನೋಡುತ್ತಾಳೆ!!!!!!
ಕಿಟಕಿಯಲ್ಲಿ ತನ್ನ ಅತ್ತೆಯನ್ನು ನೋಡಿದ ರೂಪಾಳಿಗೆ ಆಶ್ಚರ್ಯದ ಜೊತೆ ಗಾಬರಿಯಾಗಿ ತಕ್ಷಣ ಕೋಳಿ ಸಾರಿನ ನೆನಪಾಗಿ ಅಯ್ಯೋ!?..... ದೇವರೇ ಕೋಳಿ ಸಾರಿನ ವಿಷಯ ಅತ್ತೆಗೆ ತಿಳಿದರೆ ಭೂಕಂಪವೇ ಆಗಿಬಿಡುತ್ತದೆ ಎಂದುಕೊಳ್ಳುತ್ತಾ, ರೂಪ ತಕ್ಷಣ ಅಡುಗೆ ಮನೆಗೆ ಓಡಿಹೋಗಿ ಕೋಳಿ ಸಾರಿನ ಪಾತ್ರೆಯನ್ನು ತೆಗೆದುಕೊಂಡು ಹಿತ್ತಲಿಗೆ ಓಡುತ್ತಾಳೆ!!,, ಏನು ಮಾಡುವುದೆಂದು ತೋಚದೆ.., ಬಾಳೆ ಮರವನ್ನು ನೋಡಿ ಏನೋ ನೆನಪಾಗಿ ಅದರ ಬುಡದಲ್ಲಿ ಮಣ್ಣನ್ನು ಹೊರ ತೆಗೆದು ಗುಂಡಿ ಮಾಡಿ ಅ ಗುಂಡಿಯೊಳಗೆ ಪಾತ್ರೆಯಲ್ಲಿ ಆಸೆಯಿಂದ ಮಾಡಿದ್ದ ಎಲ್ಲಾ ಕೋಳಿ ಸಾರನ್ನು ಹಾಕಿ ಮಣ್ಣು ಮುಚ್ಚಿ ನಿಟ್ಟುಸಿರು ಬಿಡುತ್ತಿರಬೇಕಾದರೆ.., ಒಂದೇ ಸಮನೆ ಬಾಗಿಲು ಬಡಿಯುತ್ತಿರುವ ಸದ್ದು ಕೇಳಿ, ಹೊರಗೆ ಬಂದು ಅತ್ತೆಗೆ ಬಾಗಿಲು ತೆಗೆಯುತ್ತಾಳೆ.?....
"ಎಲ್ಲಿಗೆ ಹಾಳಾಗಿ ಹೋಗಿದ್ಯೇ '? ಎಂಬ ಅತ್ತೆಯ ಧ್ವನಿಗೆ ಹೆದರಿ ಗಿಡಗಳಿಗೆ ನೀರು ಹಾಕಲು ಹಿತ್ತಲಿಗೆ ಹೋಗಿದ್ದೆ ಅತ್ತೆ, ಅದಕ್ಕೆ ಕೇಳಿಸಲಿಲ್ಲ.,ಸ್ವಲ್ಪ ತಡವಾಯಿತು ಎನ್ನುತ್ತಾಳೆ".
ಜಗದೀಶ 'ಕೋಳಿ ಸಾರನ್ನು ನೆನೆಯುತ್ತ ಇವತ್ತು ಸಹ ಹೆಂಡತಿಯ ಜೊತೆ ಕುಳಿತು ಹಾಯಾಗಿ ಊಟ ಮಾಡಬಹುದೇದುಕೊಂಡು' ಮನೆಗೆ ಬರುತ್ತಾನೆ!! ಆದರೆ ಮನೆಯಲ್ಲಿನ ಸನ್ನಿವೇಶವೇ ಬೇರೆಯಾಗಿರುತ್ತದೆ.
ಊರಿಗೆ ಹೋಗಿದ್ದ ತಾಯಿ ಹೆಂಡತಿಯ ಕೈನಿಂದ ಹಿಂದಿನ ದಿನದ ಬೆಲೆ ಸಾರನ್ನು ಬಡಿಸಿಕೊಂಡು ಊಟ ಮಾಡುತ್ತಿರುತ್ತಾಳೆ.
ರೂಪ ಜಗದೀಶನನ್ನು ಕಂಡದ್ದೆ ತಡ ಹೋಡಿ ಬಂದು ***** ಅತ್ತೆ ದಿಡೀರನೇ ಮನೆಗೆ ಬಂದಾಗಿನಿಂದ ನಡೆದದ್ದೆಲ್ಲವನ್ನು ವಿವರಿಸಿ, ಗಾಬರಿಯಲ್ಲಿ ಏನು ತೋಚದೆ ಹಾಗೇ ಮಾಡಿದೆ ದಯವಿಟ್ಟು ತನನ್ನು ಕ್ಷಮಿಸುವಂತೆ ಕೇಳಿಕೊಳ್ಳುತ್ತಾಳೆ.
ತಾಯಿಯನ್ನು ಚೆನ್ನಾಗಿ ಅರತಿದ್ದ ಜಗದೀಶ ಹೆಂಡತಿಯ ಮೇಲೆ ಕೋಪಿಸಿಕೊಳ್ಳಲಿಲ್ಲ ಬದಲಿಗೆ, ರೂಪಾಳಿಗಾಗಿ ಆಸೆಯಿಂದ ತಂದಿದ್ದ ಸಾರು ಅವಳಿಗೂ ಸಿಗದೇ ಮಣ್ಣು ಪಾಲಾಯಿತಲ್ಲ ಎಂದೂ ನೊಂದುಕೊಂಡು ಬೇಳೆಸಾರಿನಲ್ಲಿಯೇ ಊಟ ಮಾಡಿ ಮಲಗುತ್ತಾನೆ.

ಮಾರನೇ ದಿನ ಅತ್ತೆ ಬಾಳೆಗಿಡದ ಬಳಿಯಿಂದ ಒಂದೇ ಸಮನೆ ರೂಪಾಳನ್ನು ಕೂಗಿದಾಗ, ಅಡುಗೆ ಮನೆಯಲ್ಲಿದ್ದ ರೂಪಾಳು ಅತ್ತೆಯ ಕೂಗಿಗೆ ಹೆದರಿ ಅಯ್ಯೋ! ದೇವರೇ?, ತಾನು ಸಾರನ್ನು ಸರಿಯಾಗಿ ಮುಚ್ಚಲಿಲ್ಲವೇ ಕೋಳಿಯ ಮಾಂಸವೇನಾದರೂ ಅತ್ತೆಯ ಕಣ್ಣಿಗೆ ಬಿತ್ತೆ ಎಂದುಕೊಳ್ಳುತ್ತಾ ಹಿತ್ತಲಿಗೆ
ಗಾಬರಿಯಿಂದ ಇನ್ನೇನು ಕಾದಿದೆಯೋ!? ಎಂದುಕೊಳ್ಳುತ್ತಾ ಹೋದವಳಿಗೆ ಅಲ್ಲಿನ ದೃಶ್ಯವನ್ನು ನೋಡಿ ಆಶ್ಚರ್ಯವಾಗಿ ಅಲ್ಲಿಯೇ ನಿಂತುಕೊಂಡುಬಿಡುತ್ತಾಳೆ!!, ಅವಳು ಮನಸ್ಸಿನಲ್ಲಿಯೇ ತಾನು ಹಿಂದಿನ ದಿನ ಯಾವ ಬಾಳೆಯಗಿಡದ ಬುಡದ ಕೆಳಗೆ ಮಣ್ಣು ತೆಗೆದು ಗುಂಡಿ ಮಾಡಿ ಕೋಳಿ ಸಾರನ್ನು ಹಾಕಿ ಮಣ್ಣು ಮುಚ್ಚಿದ್ದೆನೋ ಅದೇ ಜಾಗದಲ್ಲಿ ಛತ್ರಿಯಾಕಾರದ ಮೆತ್ತಗಿನ ಬಿಳಿಯ ಬಣ್ಣದ ಸಣ್ಣ ಸಣ್ಣ ನೀರು ಕೊಡೆಗಳು ನೂರಾರು ಸಂಖ್ಯೆಯಲ್ಲಿ ಭೂಮಿಯಿಂದ ಮೇಲಕ್ಕೆದಿದ್ದವು. ಅಂದಿನಿಂದ ಅವುಗಳೇ ತಿನ್ನುವ ಅಣಬೆಗಳೆಂದು ಪ್ರತಿತೀಯಾಯಿತೆಂದು ನಮ್ಮ ಮನೆಯಲ್ಲಿನ ಹಿರಿಯರು ಯಾವಾಗಲೂ ಹೇಳುತ್ತಿರುತ್ತಾರೆ. ಅಷ್ಟೇ ಅಲ್ಲದೆ ಅಣಬೆಯ ಖಾದ್ಯಾವು ಸಹ ಸ್ವಲ್ಪ ಮಟ್ಟಿಗೆ ಚಿಕೆನ್ ರುಚಿಯನ್ನೇ ಹೋಲುತ್ತದೆ. ಆದ್ದರಿಂದ ನಾವೆಲ್ಲಾ ಅದನ್ನು ಇಂದಿಗೂ ಅಣಬೆಯನ್ನು ತಿನ್ನುವಾಗ ಆ ಕತೆಯನ್ನು ನೆನಸಿಕೊಳ್ಳುತ್ತೇವೆ ಎಂಬುದಂತು ಸತ್ಯ....
ಇದರಿಂದ ನಮ್ಮಲ್ಲಿ ಕೆಲವರು ಈಗಲೂ ಸಹ ಅಣಬೆಯನ್ನು ಮಾಂಸಾಹಾರಿಯಂತೆಯೇ ಭಾವಿಸಿ ವಾರದ ದಿನಗಳಲ್ಲಿ ಹಾಗೂ ಪೂಜೆಯ ಸಂದರ್ಭಗಳಲ್ಲಿ ಅಣಬೆಯನ್ನು ಸೇವಿಸುವುದಿಲ್ಲ...........

✒ಮೌನ