Click here to Download MyLang App

ಅಡ್ಡದಾರಿಯಿರದ ಹಾದಿಯಲಿ - ಬರೆದವರು : ಬಿ.ಕೆ.ಮೀನಾಕ್ಷಿ | ಸಾಮಾಜಿಕ

ರೆಕಾರ್ಡಿಂಗ್ ಮುಗಿಸಿ ಸುಮತಿ ಸರಸರನೆ ಹೊರಬಂದಳು.
ಆಗಲೇ ತಡವಾಗಿತ್ತು. ಸ್ವಲ್ಪ ತಡವಾದರೂ ಸುಮತಿ
ಉತ್ತರವನ್ನೋ ಕಾರಣವನ್ನೋ
ಹುಡುಕಿಟ್ಟುಕೊಳ್ಳಲೇಬೇಕು. ಈಗ ರೆಡಿಯಾಗಿ ಹೋಗದೆ,
ಮನೆ ತಲುಪಿದ ಮೇಲೆ ಕಾರಣ ಹುಡುಕುತ್ತೇನೆಂದರೆ
ಸಮರ್ಪಕವಾದ ಕಾರಣಗಳನ್ನು ಹುಡುಕಾಡುವುದರಲ್ಲಿ
ಅವಳ ಮನಶ್ಯಾಂತಿ ಕಳೆದುಹೋಗುತ್ತಿತ್ತು. ಇನ್ನೇನು ಗಾಡಿ
ಸ್ಟಾರ್ಟ್ ಮಾಡಬೇಕು, ಹಿಂದೆಯೇ ವಾಸು ಓಡಿಬಂದ. ಅವನ
ಧಾವಂತದ
`ಮೇಡಂ..ಮೇಡಂ’
ಈ ಉದ್ಗಾರ ಅವಳನ್ನು ಅದೆಷ್ಟು ಇರಿಟೇಟ್ ಮಾಡುತ್ತಿತ್ತೆಂದರೆ,
ಇವನೊಬ್ಬ! ದಿನವೂ ಇದೇ ಗೋಳಿವನದು,
`ಏನ್ರಿ? ಬಂದಾಗ್ಲೆಲ್ಲ ಹಿಂದೆಯೇ ಯಾಕೆ ಹೀಗೆ ಓಡಿ ಬರ್ತೀರಿ?’
ಎಷ್ಟೇ ಸೌಮ್ಯವಾಗಿ ಕೇಳಿದರೂ, ಆ ದನಿಯಲ್ಲಿ ಕಟುತ್ವ
ತಾಂಡವವಾಡುತ್ತಲೇ ಇತ್ತು.
`ಮೇಡಂ ಇವತ್ತು ನೀವು ಓದಿದ ಕತೆ ಬಹಳ ಚೆನ್ನಾಗಿತ್ತು.
ನಿಮದೇನಾ ಮೇಡಂ ಕತೆ?’
`ಅಲ್ಲಾ, ಯಾರದೋ ಕೃತಿಚೌರ್ಯ ಮಾಡಿದ್ದೇನೆ. ತಿಳೀತಾ?’
` ಹೆಹೆಹೆ… ನೀವು ಹಾಂಗೆಲ್ಲಾ ಮಾಡೋವ್ರಲ್ಲ, ಕತೆ ನಿಮ್
ಬದುಕಿನದಾ? ಎಂದೆ’
ದೇಶಾವರಿ ನಗೆಯ ಅವನನ್ನು ತಿನ್ನುವಂತೆ ನೋಡುತ್ತಾ,
`ನನ್ನ ಬದುಕಿನದಲ್ಲ, ಬೇರೆಯವರ ಬದುಕಿನದು. ದಾರಿ ಬಿಡಿ.’
`ಮೇಡಂ, ಹುಷಾರು. ಈಗ ಚಳಿಗಾಲ. ಬೇಗ ಕತ್ತಲಾಗುತ್ತೆ’
ಅವನ ಮಾತನ್ನು ಕೇಳಿದರೂ ಕೇಳಿಸಿಕೊಳ್ಳದ ಸುಮತಿ ಗಾಡಿ
ಸ್ಟಾರ್ಟ್ ಮಾಡಿ ಬರ್ರ್ ಎಂದು ಹೊರಟೇ ಬಿಟ್ಟಳು.

ಸುಮತಿ ರೆಕಾರ್ಡಿಂಗ್ ಗೆ ಬಂದಾಗಲೆಲ್ಲ ಇದೊಂದು ಸೀನ್ ಇರಲೇ
ಬೇಕು. ಸಾಲದ್ದಕ್ಕೆ ಅವನದೊಂದು ಭರವಸೆ ಕೂಡ
ಸಿಗುತ್ತಿತ್ತು,
`ಮೇಡಂ ನಾನು ನೀಟಾಗಿ ಎಡಿಟ್ ಮಾಡಿ ಕೊಡುತ್ತೇನೆ. ಕತೆ ಇನ್ನೂ
ಸುಂದರವಾಗಿ ಕೇಳಬೇಕು.’ ಸುಮತಿ ಮನಸ್ಸಿನಲ್ಲೇ ನಗುತ್ತಾ
ಹೊರಟುಬಿಡುವಳು. ಸುಮತಿ ಸರ್ಕಾರಿ ಕಛೇರಿಯೊಂದರಲ್ಲಿ
ಗುಮಾಸ್ತಹುದ್ದೆಯಲ್ಲಿದ್ದಳು. ಜೊತೆಗೆ ಅವಳಿಗೆ ಕತೆ
ಕವನಗಳ ಓದುವ ಬರೆವ ಹವ್ಯಾಸ. ಆಗಾಗ ಆಕಾಶವಾಣಿಯಲ್ಲಿ
ಇವಳ ಕತೆಗಳು ಕವನಗಳು ಬಿತ್ತರವಾಗುತ್ತಿದ್ದವು.
ಸುಮಾರು ಮೂವತ್ತು ವರ್ಷಗಳ ಸುಮತಿ ಅವಿವಾಹಿತೆ. ಸರ್ಕಾರಿ
ಕೆಲಸ, ನೋಡಲೂ ಚೆನ್ನಾಗಿದ್ದಳೆಂದ ಮೇಲೆ ಇವಳ ಸುತ್ತ
ಹಾರಾಡುವ ಕೀಟಗಳಿರುವುದು ಸಾಮಾನ್ಯ ತಾನೇ? ಇವಳ ಹಿಂದೆ
ಮುಂದೆ ಸಾಕಷ್ಟು ಜನ, ಇವಳ ಜೊತೆ ಓಡಾಡಲು,
ಮದುವೆಯಾಗು ಎನ್ನಲು, ಮನೆಗೆ ಕರೆದುಕೊಂಡು ಹೋಗಿ
ತೋರಿಸಲು ಸಾಕಷ್ಟು ಹುಡುಗರಿದ್ದರು. ಆದರೆ ಸುಮತಿಯ
ಸಮ್ಮತಿ ಯಾವುದಕ್ಕೂ ಅವರಿಗೆ ಸಿಕ್ಕಿರಲಿಲ್ಲ. ಮೊದಲಾಗಿ ಅವಳಿಗೆ
ಮದುವೆಯಾಗುವ ಯಾವ ಖಯಾಲಿ ಕೂಡ ಇರಲಿಲ್ಲ.
ಮನೆಯಲ್ಲಿ ಮದುವೆಯಾಗಿ ಗಂಡನನ್ನು ಬಿಟ್ಟುಬಂದ ಅಕ್ಕ,
ಮದುವೆಯಾದ ಅಣ್ಣ, ಕಿರಿಕಿರಿಯ ಅತ್ತಿಗೆ, ನಿವೃತ್ತರಾದ ತಂದೆ,
ಮನೆಯನ್ನು ತೂಗಿಸುವ ತಾಯಿ, ಮನೆಯ ತೂಗುವಿಕೆಗೆ
ಅಡ್ಡಗಾಲಾಗುವ ಅತ್ತಿಗೆ, ಅದಕ್ಕೆ ತಲೆತೂಗುವ ಅಣ್ಣ, ಪಾಪ!
ಇವೆಲ್ಲದರ ಮಧ್ಯೆ ಏನೂ ಮಾತಾಡದ ಪರಕೀಯ ಭಾವದ ಅಕ್ಕ,
ಸುಮತಿ ಮದುವೆಗೆ ದೊಡ್ಡ ನಮಸ್ಕಾರ ಹಾಕಿ
ಸುಮ್ಮನಾಗಿಬಿಟ್ಟಿದ್ದಳು. ಆದರೂ ಅಲ್ಲೊಬ್ಬ ಇಲ್ಲೊಬ್ಬ
ಹುಡುಗರು ಇವಳ ಮನಸ್ಸಿನಲ್ಲಿ ಮದುವೆಯ ಬಗ್ಗೆ ಆಸೆ ಚಿಗುರಿಸಿ
ಹೇಗಾದರೂ ಅವಳನ್ನು ಹೊತ್ತೊಯ್ಯುವ ಪಣ ತೊಟ್ಟರೂ
ಅದಕ್ಕೆ ಸೊಪ್ಪು ಹಾಕದ ಸುಮತಿ, ತನ್ನ ದಿನಚರಿಯಲ್ಲಿ ಯಾವ
ಬದಲಾವಣೆಯನ್ನೂ ಮಾಡಿಕೊಳ್ಳದೆ, ನಿರಾಳವಾಗಿದ್ದಳು. ಆದರೆ
ಅಕ್ಕನ ಯೋಚನೆ ಇವಳ ಮನದಲ್ಲಿ ಕುಟ್ಟೆಹುಳುವಾಗಿ
ಕೊರೆಯುತ್ತಲೇ ಇತ್ತು. ಏನು ಮಾಡುವುದು ಅಕ್ಕ
ಶೃತಿಯನ್ನು? ಅವಳ ಸಮಸ್ಯೆ ಸರಾಗವಾಗಿ
ಬಗೆಹರಿಯುವುದಾಗಿರಲಿಲ್ಲ.
---

`ರೀ.....ಇದೇನ್ರಿ ಕರೀತಿದ್ರೂ ಕಿವುಡರ ತರ ಸೀದಾ ಹೋಗ್ತಾನೇ
ಇದೀರಲ್ಲಾ? ಅಥ್ವಾ ನಿಜ್ವಾಗ್ಲೂ ಕಿವುಡಾ ನಿಮಗೆ?’
ಸುಮತಿ ಹರಿಯನ್ನು ನುಂಗುವಂತೆ ನೋಡಿದಳು.
`ನೋಡಿ, ದಿನಾ ಹೀಗೆ ನಿಮ್ ಹಿಂದೆ ಅಲೆಯಕ್ಕಾಗುವುದಿಲ್ಲ. ನಿಮಗೆ
ಒಪ್ಪಿಗೆ ಇಲ್ಲಾಂದ್ರೂ ಹೇಳಿಬಿಡಿ. ನಂಗೇನೂ ಬೇಜಾರಿಲ್ಲ. ನಾನೇನು
ಕುಂಟನಲ್ಲ ಕುರೂಪಿಯಲ್ಲ. ಏನೋ ಆವತ್ತಿನಿಂದ ನೋಡಿದ್ದೀನಲ್ಲಾ
ಅನ್ನೋದಕ್ಕೆ, ನಿಮ್ಮನ್ನ ಕೇಳ್ತಿರೋದು’
ಹರಿ ಖಡಾಖಂಡಿತವಾಗಿ ಹೇಳಿದ.
`ಸರಿ ಬನ್ನಿ, ಕಾಫಿ ಕುಡೀತಾ ಮಾತಾಡೋಣ’
ಎಂದವಳ ಹಿಂದೆ ಊರಗಲ ಮುಖ ಮಾಡಿಕೊಂಡು ನಡೆದ ಹರಿ.
ಇಬ್ಬರೂ ಕಛೇರಿ ಕ್ಯಾಂಟೀನ್ ನಲ್ಲಿ ಕುಳಿತರು. ನೇರವಾಗಿ ವಿಷಯ
ತೆಗೆದ ಸುಮತಿ, ಅವನ ಮುಖವನ್ನೂ ಕಾಫಿ ಹೀರುತ್ತಾ
ತದೇಕವಾಗಿ ನೋಡುತ್ತಿದ್ದಳು.
`ನೋಡಿ, ನನಗೆ ಅಕ್ಕ ಒಬ್ಬಳಿದ್ದಾಳೆ. ಅವಳನ್ನೂ ನೀವು
ಮದುವೆಯಾಗ್ತೀರೆಂದರೆ ನಾನೂ ನಿಮ್ಮನ್ನು
ಮದುವೆಯಾಗಲು ರೆಡಿ’
ಹರಿ ಕಕ್ಕಾಬಿಕ್ಕಿಯಾಗಿ, `ರೀ.. ಇದೇನ್ರಿ ಹೀಗೆ ಮಾತಾಡ್ತೀರೀ? ಅದೇನು
ಸೇಲಾ? ಒಂದಕ್ಕೊಂದು ಫ್ರೀ ಅನ್ನುವಂತೆ ಮಾತಾಡ್ತೀರಲ್ಲಾ?’
`ಮತ್ತಿನ್ನೇನ್ರಿ? ಮನೇಲಿ ಅಕ್ಕ ಇದ್ದಾಳೆ ಅಂತ ಎಷ್ಟುಸಾರಿ ಹೇಳಿದೀನಿ!
ಅರ್ಥ ಆಗಲ್ವಾ ನಿಮ್ಗೆ?’
`ಅವರ ಗಂಡ ಬಂದು ಕರ್ಕೊಂಡ್ ಹೋಗೋವರೆಗೂ
ಕಾಯೋದಾ ಅದನ್ನಾದ್ರೂ ಹೇಳ್ರಿ?’
`ಇಲ್ಲಾರೀ , ಅವಳ ಗಂಡ ಬರೋದೂ ಇಲ್ಲ, ಕರ್ಕೊಂಡ್ ಹೋಗೋ
ಮಾತಂತೂ ಇಲ್ಲವೇ ಇಲ್ಲ. ಹಾಗಾಗಿ ನನ್ನ ಬಳಿ ಇನ್ನುಮುಂದೆ ಈ
ಪ್ರಸ್ತಾಪ ಎತ್ತಬೇಡಿ.. ನಮ್ಮಕ್ಕನ ಮಾಡ್ಕೊಳ್ತೀರಾ ಹೇಳಿ.
ನಮ್ಮಪ್ಪನ ಹತ್ತಿರ ಮಾತಾಡ್ತೀನಿ’
`ನಿಮ್ಗೇನ್ ಹುಚ್ಚಾ? ಸೆಕೆಂಡ್ ಹ್ಯಾಂಡ್....’ ಅನ್ನುತ್ತಾ ನಾಲಿಗೆ
ಕಚ್ಚಿಕೊಂಡ ಹರಿ.

`ಅಯ್ಯೋ, ಪರ್ವಾಗಿಲ್ಲಾ, ನಾನೂ ಸೆಕೆಂಡ್ ಹ್ಯಾಂಡೇ. ನಾನೂ ಗಂಡ
ಬಿಟ್ಟವಳೇ...... ನಾನಾದ್ರೆ ಆಗುತ್ತೆ ಅಕ್ಕ ಯಾಕೆ ಆಗಲ್ಲ?’
ಹರಿ ಮತ್ತೆಂದೂ ಅವಳ ಸಹವಾಸಕ್ಕೆ ಬರಲಿಲ್ಲ. ಎದುರಿಗೆ
ಕಂಡರೂ ಆಕಡೆಗೆ ಎಲ್ಲಿಂದಲೋ ಬಳಸಿ ಹೋಗತೊಡಗಿದನು.
ತನ್ನ ಹಿಂದೆ ಬಿದ್ದವರೆಲ್ಲರಿಗೂ ಸುಮತಿಯ ಬಳಿ ಛಾಟಿಯಂತಹ
ಛಾತಿ ಉತ್ತರವಿತ್ತು. ಒಮ್ಮೊಮ್ಮೆ ಅವಳಿಗೆ ತಾನೇಕೆ ಇಷ್ಟು
ಕಟುವಾಗಿ ವರ್ತಿಸುತ್ತೇನೆ ಎಂದು ತನಗೆ ತಾನೇ ಪ್ರಶ್ನೆ
ಮಾಡಿಕೊಳ್ಳುತ್ತಿದ್ದಳು. ಆದರೆ ಅವರನ್ನೆಲ್ಲ ತಡೆಯಲು
ತನ್ನ ಪಾಲಿಸಿಯೇ ಸರಿ ಎಂದು ಸುಮತಿ ತೀರ್ಮಾನಿಸಿದ್ದಳು
ಮತ್ತದು ಸರಿಯಿತ್ತು ಕೂಡ.
----
ಒಂದುದಿನ ಸುಮತಿ ಮನೆಗೆ ಬರುತ್ತಿದ್ದಂತೆ , ಎಲ್ಲೆಲ್ಲಿಂದಲೋ
ಕಲ್ಲೇಟಿನಂತಾ ಮಾತುಗಳು ತೂರಿಬರತೊಡಗಿದವು. ಅಪ್ಪ
ಒಂದು ಕಡೆ ಕಿರುಚಿ ಮಾತಾಡುತ್ತಿದ್ದರೆ, ಇನ್ನೊಂದು ಕಡೆಯಿಂದ
ಅಮ್ಮ, ಇವರಿಬ್ಬರನ್ನೂ ಸಮಾಧಾನವಾಗಿ ಕುಳಿತು
ಕೇಳುತ್ತಿರುವ, ಇನ್ನೇನು ನಿವೃತ್ತಿಗೆ ಹತ್ತಿರದಲ್ಲಿರುವ
ರಾಜಾರಾಂ ಅಂಕಲ್! ತನ್ನ ಆಫೀಸಿನವರೇ! ಒಂದು ನಿಮಿಷ ಸುಮತಿ
ಎಲ್ಲವನ್ನೂ ನಿಂತು ಆಲಿಸಿದಳು. ತಿಳಿದುಹೋಯಿತು, ಇದೆಲ್ಲ ಈ ಕಿಡಿಗೇಡಿ
ರಾಜಾರಾಂ ಅಂಕಲ್ ಕಿತಾಪತಿ ಎಂದು. ತನ್ನ ಕ್ಯಾರೆಕ್ಟರ್ ಬಗ್ಗೆ
ನಾನಾವಿಧವಾದ ಸಹಸ್ರನಾಮಾರ್ಚನೆಯಾಗುತ್ತಿತ್ತು.
ತನ್ನನ್ನು ಮಾತನಾಡಿಸಿದವರೆಲ್ಲ ಅಮ್ಮನ ಬಾಯಿಂದ
ಉದುರುತ್ತಿದ್ದರು. ಅದಕ್ಕೆ ಸರಿಯಾಗಿ ಅಪ್ಪ ಬಾಯಿಗೆ ಬಂದಂತೆ
ಅವಹೇಳನಕಾರಿ ಹೇಳಿಕೆ ನೀಡುವುದು! ಅಡುಗೆಮನೆಯಲ್ಲಿದ್ದ
ಅತ್ತಿಗೆ, ತನ್ನನ್ನು ಒಂದು ನಮೂನೆಯಾಗಿ
ನೋಡುತ್ತಿರುವುದೂ ಸುಮತಿಯ ಗಮನಕ್ಕೆ ಬಂತು.
ಕೈಕಾಲು ತೊಳೆದು ಬಂದು ಕುಳಿತ ಸುಮತಿ ರಾಜಾರಾಂ ಕಡೆಗೆ
ನೋಡಿದಳು. ಅವರ ಗೆಲುವಿನ ನೋಟ ತನ್ನನ್ನು
ಸುತ್ತುವರೆದಿರುವುದು ಅವಳಿಗೆ ಭಾಸವಾಯಿತು. ಸುಮತಿ ಪೀಠಿಕೆ
ಹಾಕತೊಡಗಿದಳು. `ಅಂಕಲ್ ಎಲ್ಲೂ ಹೋಗಲಿಲ್ಲವೇ?’
`ಎಲ್ಲಿ ಹೋಗೋದಮ್ಮಾ?’ ಎನ್ನುತ್ತಾ ದೇಶಾವರಿ ನಗೆ ನಕ್ಕರು.

`ಏ..... ನೀವೇನ್ ಅಂಕಲ್..... ಪಾಪ! ಗಾಯತ್ರಿ ಆಂಟಿ ನಿಮಗಾಗಿ
ಕಾಯುತ್ತಾ ಗೇಟಲ್ಲೇ ನಿಂತಿದ್ರು.ನಾನು ಮಾತಾಡಿಸಿಕೊಂಡು ಬಂದೆ.
ಯಾಕಂಕಲ್ ಅವರ ಜೊತೆ ಇವತ್ತು ಹೋಗಿಲ್ಲ? ಅದಿರ್ಲಿ ಅಂಕಲ್,
ನಿಮ್ಮ ಮತ್ತೆ ಗಾಯತ್ರಿ ಆಂಟಿ ವಿಷಯ ರಾಜೇಶ್ವರಿ ಆಂಟಿಗೆ
ಗೊತ್ತಾ? ಪಾಪ ಅಲ್ವಾ ಅಂಕಲ್ ರಾಜೇಶ್ವರಿ ಆಂಟಿ!
ರಾಜಾರಾಂ ಅಂದಿನಿಂದ ಇಂದಿನವರೆಗೂ ಅವಳ ಮನೆ ಕಡೆ ತಲೆ
ಹಾಕಿಲ್ಲ. ಆಫೀಸಿನಲ್ಲೂ ತಲೆ ತಪ್ಪಿಸಿಕೊಂಡು ಓಡಾಡುವ ಅಭ್ಯಾಸ
ಬೆಳೆಸಿಕೊಂಡಿದ್ದಾರೆ. ಇವಳ ಮನೆಯಲ್ಲೂ ಅಪ್ಪ ಅಮ್ಮ ಅವಳ
ನೇರ ಮಾತುಗಳನ್ನಾಲಿಸಿದವರು, ಅವಳ ಬಗ್ಗೆ ಮರು
ಮಾತಾಡಲಿಲ್ಲ. ಅತ್ತಿಗೆಯೂ ಮೆಲ್ಲಗೆ
ಒಳನುಸುಳಿಕೊಂಡಿದ್ದಳು.
------
ಇಂದು ರೆಕಾರ್ಡಿಂಗ್ ಮುಗಿಯೋದೇ ತಡ, ಇವಳು ತನ್ನ ವ್ಯಾನಿಟಿ
ರೆಡಿ ಮಾಡಿಕೊಳ್ಳುವಷ್ಟರಲ್ಲಿ ವಾಸು ಅವಳ ಗಾಡಿಯ ಬಳಿ
ಹಾಜರಿದ್ದನು. ಸುಮತಿ ನುಂಗುವಂತೆ ನೋಡುವ ಮೊದಲೇ,
ಅವನೇ ಸಮಾಧಾನವಾಗಿ
`ನೋಡಿ, ನೀವು ನುಂಗುವಂತೆ ನನ್ನನ್ನು ನೋಡುವುದು
ಬೇಕಿಲ್ಲ. ನಾನು ನಿಮ್ಮ ಅಕ್ಕನ ಸಮಸ್ಯೆಗೂ ನಿಮ್ಮ ಸಮಸ್ಯೆಗೂ
ಒಂದು ಪರಿಹಾರ ಕಂಡುಹಿಡಿದಿರುವೆ.. ಅದನ್ನು ಈಗ ತಿಳಿಸುವುದಿಲ್ಲ.
ಖುದ್ದಾಗಿ ನಿಮ್ಮ ಮನೆಗೆ ಬಂದೇ ಮಾತಾಡುವೆ.’
ಎಂದು ಒಂದುಕ್ಷಣ ಕೂಡ ನಿಲ್ಲದೆ ಹೊರಟುಹೋದನು. ಇಂದು
ಸುಮತಿ ಪರಿಸ್ಥಿತಿ ಹೇಗಾಯಿತೆಂದರೆ, ಅವಳೇ ಅವನನ್ನು
ಹುಡುಕಿಕೊಂಡು ಹೋಗುವಂತಾಯಿತು. ಸೆಕ್ಯೂರಿಟಿ ಬೇರೆ
ಇವಳ ಕಡೆಗೆ ವಾರೆನೋಟ ಬೀರುತ್ತಿದ್ದುದು
ಗೋಚರವಾಗುತ್ತಿತ್ತು. ಗಾಡಿ ತಿರುಗಿಸಿಕೊಂಡು ಗೇಟಿನ ಬಳಿ
ಬಂದವಳೇ,
`ನಿಮಗೆ ಅವರಿವರನ್ನು ಗಮನಿಸುವುದೇ ಆಯಿತು. ಗೇಟ್ ತೆಗೀರಿ’
ಗುರುಗುಟ್ಟಿದವಳನ್ನು ಸದ್ದಿಲ್ಲದೆ ಗೇಟು ತೆಗೆದು, ಪಕ್ಕಕ್ಕೆ
ನಿಂತ ಸೆಕ್ಯೂರಿಟಿಯನ್ನು ಬಿಸಾಕಿದಂತೆ ನೋಡಿ
ಹೊರಟುಹೋದಳು.

ಸುಮತಿಗೆ ಸಮಸ್ಯೆಗಳಾವುವು ದೊಡ್ಡದಲ್ಲ, ಆದರೆ
ಇವುಗಳನ್ನು ಹೇಗಾದರೂ ಮಾಡಿ ಸುಲಭದಲ್ಲಿ
ಪರಿಹರಿಸಿಕೊಳ್ಳಬೇಕೆನಿಸಿತು. ಅವಳಿಗೆ ಬಹುಶಃ
ಆತ್ಮೀಯರೆನಿಸಿಕೊಳ್ಳುವ ಗೆಳತಿಯರೇ ಇಲ್ಲವೇನೋ!
ಹತ್ತಿರ ಬಂದು ಮಧುರವಾಗಿ ಮಾತಾಡಿದ ಎಲ್ಲರ
ಅಂತರಂಗವನ್ನು ಕೆಲವೇ ಕ್ಷಣಗಳಲ್ಲಿ ಅಳೆದು
ಸುರಿದುಬಿಡುತ್ತಿದ್ದಳು. ಇವರು ತನ್ನ ಗೆಳೆತನಕ್ಕೆ
ತಕ್ಕವರಲ್ಲ ಎಂದುಕೊಂಡವಳೇ ಕಸಗುಡಿಸಿ ಎತ್ತಿ
ಹೊರಹಾಕುವಂತೆ ಮನಸಿನಿಂದ ತೆಗೆದೊಗೆಯುತ್ತಿದ್ದಳು.
ಈಗ ತೀರ ಇತ್ತೀಚೆಗೆ ಸುಮತಿ ಒಬ್ಬ ಆತ್ಮೀಯರಾಗಬಹುದಾದ
ಗೆಳತಿಯನ್ನು, ತನ್ನ ಮನಸ್ಸನ್ನರಿಯಬಹುದಾದ
ಸಖಿಯನ್ನು, ತನಗೆ ಉತ್ತಮ ಸಲಹೆ ನೀಡಬಹುದಾದ ಬುದ್ಧಿವಂತ
ಸ್ನೇಹಿತೆಯನ್ನು ಹುಡುಕಾಡತೊಡಗಿ, ನಿರಾಸೆ
ಅನುಭವಿಸಿದ್ದಳು. ಅವಳ ಅಂತರಂಗಕ್ಕೆ ಹತ್ತಿರವಾಗುವ ಒಬ್ಬ
ಗೆಳತಿಯೂ ಅವಳಿಗೆ ದೊರೆಯದಿದ್ದುದು ಅವಳ
ದುರಾದೃಷ್ಟವೋ ಅಥವಾ ಅವಳ ಗೆಳತಿಯರಾಗದವರ
ಅದೃಷ್ಟವೋ ಆ ದೇವರೇ ಬಲ್ಲ!
ಈಗ ಅಕ್ಕನನ್ನೇ ಮಾತಾಡಿಸುವ ಹಂಬಲವುಂಟಾಯಿತು
ಸುಮತಿಗೆ. ಒಂದೇ ಒಂದು ದಿನವಾದರೂ ತಾನು ತನ್ನಕ್ಕನ ಬಳಿ
ಕುಳಿತು, ನಿನ್ನ ಮನಸ್ಸೇನು ಎಂದು ಕೇಳಲಿಲ್ಲವಲ್ಲ ಎಂದು
ತನ್ನನ್ನು ತಾನೇ ಹಳಿದುಕೊಂಡಳು. ಮನೆಯೊಳಗೆ
ವಿಪರೀತ ಸೆಖೆಯಾದ ಕಾರಣ,
`ಅಕ್ಕ ಹೊರಗೆ ಜಗಲಿಯಲ್ಲಿ ಕೂರೋಣ ಬಾ’
ಎಂದು ರಾತ್ರಿ ಹೊರಗೆಳೆದು ತಂದಳು. ಅಪ್ಪನ
ಹೆದರಿಕೆಯಿದ್ದರೂ, ಸದ್ದಿಲ್ಲದೆ, ಇಬ್ಬರೂ ಆಚೆ ಬಂದು ಕುಳಿತರು.
ಮಾತುಗಳು ಎಲ್ಲೋ ಕದ್ದು ಕುಳಿತು ಕಣ್ಣು
ಮಿಟುಕಿಸತೊಡಗಿದವು. ಇಬ್ಬರೂ ಆಕಾಶ ನೋಡುತ್ತಾ
ಕುಳಿತರು.
`ಅಕ್ಕ, ಭಾವ ಏನಾದ್ರೂ ನಿನಗೆ ಸಿಕ್ಕಿದ್ದರಾ?’
ಅಕ್ಕ ಶೃತಿ ಉತ್ತರಿಸಲಿಲ್ಲ. ಸುಮತಿಗೆ ಅವಳ ಉತ್ತರವೇನೆಂದು
ಅರ್ಥವಾಯಿತು. ಮತ್ತೆ ಇಬ್ಬರ ನಡುವೆ ಮೌನವೇ
ಮಾತಾಡತೊಡಗಿ, ಮತ್ತೆ ಸುಮತಿ ಕೇಳಿದಳು.

`ನೋಡೇ..ಅಕ್ಕ..ಭಾವನನ್ನು ಮನಸ್ಸಿನಲ್ಲಿಟ್ಟುಕೊಂಡು
ಕೊರಗಬೇಡ. ಬಿಟ್ಟುಬಿಡು. ನಿನಗೆ ಖಂಡಿತ ನಾನು ಮದುವೆ
ಮಾಡಬೇಕೆಂದಿದ್ದೇನೆ.’
ಆ ಬೆಳದಿಂಗಳಲ್ಲಿ ಅವಳ ಮುಖದಲ್ಲಿ ಯಾವ ಭಾವ ಮೂಡಿತೋ
ತಿಳಿಯಲಿಲ್ಲ. ಆದರೆ ಅವಳ ಕಿರುನಗು ಗೋಚರಿಸಿ, ಯಾತಕ್ಕಾಗಿ ಈ
ನಗು ಎಂಬ ಪ್ರಶ್ನೆ ಸುಮತಿಯನ್ನು ಕಾಡಿತು.
------
ಬಾಗಿಲು ಬಡಿದ ಶಬ್ಧ.
`ಶೃತಿ.....ಸುಮತಿ......, ಯಾರಾದ್ರೂ ಬಾಗಿಲು ತೆಗೀರಿ’
ಪೂಜೆ ಮಾಡುತ್ತಿದ್ದ ಅಪ್ಪ ಕೂಗಿ ಹೇಳಿದಾಗ, ಹಿತ್ತಲಿನಲ್ಲಿದ್ದ
ಸುಮತಿ, ಸರಸರನೆ ಬಂದು ಬಾಗಿಲು ತೆರೆದಳು. ಎದುರಿಗೆ ವಾಸು!
ಇದೇನು ಹೇಳದೆ ಕೇಳದೆ ಪ್ರತ್ಯಕ್ಷವಾಗಿದ್ದಾನೆ? ಮನೆ ಹೇಗೆ
ಗೊತ್ತಾಯಿತು? ಆಕಾಶವಾಣಿಯಲ್ಲಿ ಬೆನ್ನು ಬಿಡದವನು
ಇಲ್ಲಿಯವರೆಗೂ ಬೆನ್ನತ್ತಿ ಬಂದಿದ್ದಾನೆ. ವಾಸು, ಅವಳನ್ನು
ಸಾವರಿಸಿಕೊಂಡು, ತಾನೇ ಒಳನುಗ್ಗಿ ಬಂದನು. ಅವನು ಒಳ
ಹೋಗುವುದನ್ನು ತಬ್ಬಿಬ್ಬಾಗಿ ನೋಡುತ್ತಾ ನಿಂತವಳನ್ನು
ಮತ್ತೆ ಅಚ್ಚರಿಗೊಳಿಸುವಂತೆ ಇನ್ನೊಬ್ಬರು ಒಳಗೆ ಬಂದರು.
ವಾಸುವಿನಂತೇ ಇದ್ದ ಅವರು ವಾಸುವಿನ ಅಣ್ಣನಿರಬೇಕೆಂದು
ಕ್ಷಣಮಾತ್ರದಲ್ಲಿ ಸುಮತಿ ಗ್ರಹಿಸಿದಳು. ವಾಸು ಮತ್ತು ಅವರಣ್ಣ
ಇಬ್ಬರೂ ದಿವಾನಕಾಟಿನ ಮೇಲೆ ಮುದುರಿ ಕುಳಿತರು. ಸುಮತಿ
ದುರುಗುಡುವುದು ನಡೆದಿದ್ದರೂ, ಅವರ ಅಣ್ಣ ಇರುವರೆಂಬ
ಸೌಜನ್ಯಕ್ಕೆ ಮುಖದಲ್ಲಿ ನಗು ತಂದುಕೊಂಡು ವಾಸುವನ್ನು
ತಿಂದುಬಿಡುವಂತೆ ನೋಡುತ್ತಲೇ ಇದ್ದಳು. ಪೂಜೆ ಮುಗಿಸಿ
ಅವರ ಅಪ್ಪ ಒಳಗಿನಿಂದ ಅವರಿಬ್ಬರನ್ನೂ ಪರಿಚಿತರಂತೆ
ನಗುಮೊಗದಿಂದ, `ಹೋ.. ಭಾನುವಾರ ಬಂದಿದ್ದೀರಾ.. ಒಳ್ಳೆ
ಕೆಲಸವಾಯಿತು.’
ಸುಮತಿ ಎಲ್ಲರಿಗೂ ತಿಂಡಿ ತಂದುಕೊಟ್ಟಳು. ಲೋಕಾಭಿರಾಮದ
ಮಾತುಗಳೊಂದಿಗೆ ಕಾಫಿ ಸೇವನೆ ಮುಗಿದೂ ಮೂವರೂ
ತಿರುಗಾಡಲು ಹೊರಟು, ಹತ್ತಿರವೇ ಇದ್ದ ದೇವಸ್ಥಾನದ
ಪೌಳಿಯೊಳಗೆ ತೆಂಗಿನ ಮರದ ಕೆಳಗೆ ಕುಳಿತುಕೊಂಡರು.

`ಸರ್......’ ವಾಸು ಪ್ರಾರಂಭಿಸಿದ ಮಾತನ್ನು ತಡೆದು, ಸುಮತಿ
ತಂದೆ,
`ಇವರೇನಾ ನಿಮ್ಮಣ್ಣ?’ ಎಂದರು.
`ಹೌದು ಸರ್. ಏನಿದ್ದರೂ ಮಾತಾಡಿಕೊಂಡುಬಿಡೋಣ ಸರ್ ಈಗಲೇ.
ಬೇಕಾದರೆ ನೀವೂ ನಮ್ಮ ಮನೆಗೆ ಬನ್ನಿ’
ವಾಸು ಹಾರ್ದಿಕವಾಗಿ ಆಹ್ವಾನವಿತ್ತನು. `ಬರೋಣಂತೆ..ಬರೋಣಂತೆ’
ವಾಸು ಮತ್ತವನ ಅಣ್ಣ ಅಲ್ಲಿಂದ ಹಾಗೇ ಹೊರಟು ಹೋಗಿದ್ದರು.
ಅಪ್ಪನ ಬರುವಿಕೆಯನ್ನೇ ಕಾಯುತ್ತಿದ್ದ ಸುಮತಿ ಒಂದೇ ಬಾರಿಗೆ
ಅಮರಿಕೊಂಡಳು.
`ಅಪ್ಪ, ಅವರು ಬಂದದ್ದೇಕೆ? ಏನಂತೆ ವಿಷಯ? ಯಾರದು ?
ನಿಮಗೆ ಚೆನ್ನಾಗಿ ಗೊತ್ತ?’ ಸುಮತಿ ಒಬ್ಬರೇ ಬಂದ
ರಾಯರಮೇಲೆ ಪ್ರಶ್ನೆಗಳ ಮಳೆಗರೆದಳು. ರಾಯರು
ಸುಮ್ಮನೆ ನಕ್ಕು ನೀರು ಕೇಳಿದರು. ಬಿಡಿಸಿ ಆಳವಾಗಿ ಕೇಳಿ ವಿವರ
ತಿಳಿದುಕೊಳ್ಳಲು ಸುಮತಿಗೆ ಅಂಜಿಕೆಯಾಯಿತು. ಎಲ್ಲೋ
ಪರಿಚಯವಾದವನನ್ನು ಅಪ್ಪ ಕರೆದಿರಬೇಕು. ಮೇಲ್ಮಾತಿಗೆ
ಕರೆದಿದ್ದರೂ ಓಡಿಬರುವುದು ಅವನ ಜಾಯಮಾನ ತಾನೇ?
ಎಂದು ಸಮಾಧಾನ ಪಟ್ಟುಕೊಂಡಳು
ಅಂದು ಅಮ್ಮ ಬೇಗನೆ ಬರಲು ಹೇಳಿದ್ದರಿಂದ ಸಂಜೆ
ಐದುಗಂಟೆಗೆಲ್ಲ ಮನೆಗೆ ಬಂದಿದ್ದಳು. ಅಕ್ಕ
ಮದುಮಗಳಂತೆ ತಯಾರಾಗಿದ್ದಳು. ಸುಮತಿ
ಆಶ್ಚರ್ಯದಿಂದ ದಿಟ್ಟಿಸಿದಳು. ಆದರೆ ಏನನ್ನೂ ಕೇಳಲಿಲ್ಲ.
ಆರುಗಂಟೆಗೆ ಮನೆಮುಂದೆ ಕಾರೊಂದು ನಿಂತಿತು. ಅದರಿಂದ
ವಾಸು, ವಾಸು ಅಣ್ಣ, ಬಹುಶಃ ಅವರ ಅಪ್ಪ ಇರಬೇಕು. ಜೊತೆಗೆ
ತಾನು ಆಗಾಗ ರೆಕಾರ್ಡಿಂಗ್‍ಗೆ ಹೋಗುವ ಆಕಾಶವಾಣಿಯ
ಶಾಂತಲಾ ಮೇಡಂ ಕೂಡ ಬಂದಿದ್ದರು. ಕಾರು ಅವರದೇ
ಅನಿಸುತ್ತಿದೆ. ಇವಳು ತಕ್ಷಣ ಹೊರಗೆ ಹೋಗಿ, ನಗುಮುಖದಿಂದ
ಅವರನ್ನು ಆಹ್ವಾನಿಸಿದಳು. ಚಾಪೆ ಚೇರುಗಳನ್ನು
ಅನುಸರಿಸಿಕೊಂಡು ಅವರವರ ಸ್ಥಾನಕ್ಕೆ ತಕ್ಕಂತೆ
ಕುಳಿತುಕೊಂಡರು. ಸುಮತಿಗೆ ಈಗಲೂ ವಿಷಯವೇನೆಂದು
ತಿಳಿದಿಲ್ಲ. ಎಲ್ಲರನ್ನೂ ಪರೀಕ್ಷಾ ದೃಷ್ಟಿಯಿಂದ ನೋಡಿದ
ಶಾಂತಲಾರವರೇ ಮಾತು ಪ್ರಾರಂಭಿಸಿದರು.

`ನನಗೆ ಸುಮತಿ ಚೆನ್ನಾಗಿಯೇ ಪರಿಚಯ. ವಾಸು ನನ್ನ
ಸಹೋದ್ಯೋಗಿ. ಅದ್ಯಾವ ಶುಭಘಳಿಗೆಯಲ್ಲೋ ವಾಸುವಿಗೆ
ಸುಮತಿಯನ್ನು ಕಂಡರೆ ಅತೀವ......ಪ್ರೀತಿಯೆನ್ನಲೋ ಅಥವಾ
ಮೆಚ್ಚುಗೆಯೆನ್ನಲೋ ಗೊತ್ತಿಲ್ಲ. ಆದರೆ, ಸುಮತಿ
ಯಾವುದಕ್ಕೂ ಕೇರ್ ಮಾಡದ ಹುಡುಗಿ. ವಾಸು ನನಗೆ ತನ್ನ
ಅಂತರಂಗವನ್ನು ಹೇಳಿದ್ದರು. ಆದರೆ ಸುಮತಿ ನನಗೆ
ಆತ್ಮೀಯಳಾದ ಕಾರಣ, ತನಗೆ ಮದುವೆಯ ಬಗ್ಗೆಯಿರುವ
ತಿರಸ್ಕಾರ, ಅದಕ್ಕೆ ಕಾರಣ, ಎಲ್ಲವನ್ನೂ ಹೇಳಿಕೊಂಡಿದ್ದಳು. ವಾಸು
ಕೂಡ ನನ್ನ ಬಳಿ ಎಲ್ಲವನ್ನೂ ಹೇಳಿದ್ದರು. ವಾಸುವಿನ
ಅದೃಷ್ಟವೋ ಏನೋ, ಸುಮತಿ...... ನಿಮ್ಮಕ್ಕನ ಯಜಮಾನರು
ಅಂದರೆ ನಿಮ್ಮ ಭಾವ, ನನ್ನ ಆತ್ಮೀಯ ಗೆಳತಿಯೊಬ್ಬಳ
ಸಹೋದರನೆಂದು ನನಗೆ ತಿಳಿದು ಬಂತು. ಸನ್ಯಾಸಿಯಂತೆ
ಬದುಕುತ್ತಿರುವ, ಮದುವೆಯಾದ ದಿನದಿಂದಲೂ, ದೇವರು,
ಗುಡಿಗೋಪುರವೆಂದು ಅಲೆದಾಡಿಕೊಂಡಿರುವ ತನ್ನ ತಮ್ಮನ
ಬಗ್ಗೆ ಹೇಳಿಕೊಂಡಿದ್ದಳು. ಮೊದಲಿನಿಂದಲೂ ಮದುವೆಯೆಂದರೆ
ನಿರಾಸಕ್ತನಾದ ತಮ್ಮನಿಗೆ ತಾಯಿಯು ಎಮೋಷನಲ್ ಬ್ಲಾಕ್ಮೇಲ್
ಮಾಡಿ ಮದುವೆ ಮಾಡಿದ್ದರು. ಈಗ ಅವನು ಹಿಮಾಲಯಕ್ಕೆ
ಹೊರಟುಹೋದನಂತೆ.’
ಎಲ್ಲವನ್ನೂ ಒಂದೇ ಏಟಿಗೆ ಹೇಳಿ ಶಾಂತಲಾ ನಿಲ್ಲಿಸಿದರು. ಮುಂದೆ
ಯಾರೂ ಮಾತಾಡಲಿಲ್ಲ. ಕಾಫಿ ತಿಂಡಿಯನ್ನು ಶೃತಿ ತಂದು
ಎಲ್ಲರಿಗೂ ವಿತರಿಸಿದಳು. ಈಗ ಎಲ್ಲರೂ ಆರಾಮವಾಗಿ ಕುಳಿತರು.
ಶೃತಿ ಹಾಗೂ ಸುಮತಿಯೂ ಕುಳಿತರು. `ನಿನಗೆ ವಾಸುವಿನ ಅಣ್ಣ
ಒಪ್ಪಿಗೆಯೇ?’ ತಕ್ಷಣ ರಾಯರು ನೇರವಾಗಿ ಶೃತಿಯನ್ನು
ಕೇಳಿದರು. ಅವಳು ಕಕ್ಕಾಬಿಕ್ಕಿಯಾದಳು.
--
ಮುಂದಿನದೆಲ್ಲ ಹೂವೆತ್ತಿದಂತೆ ಸುಗಮವಾಯಿತು. ತಾನು
ಸುಮತಿಯನ್ನು ಪಡೆದುಕೊಳ್ಳುವುದಕ್ಕೆ, ವಾಸು ತನ್ನ
ಪ್ರಯತ್ನ ಮೀರಿ ಪ್ರಯತ್ನಿಸಿದ್ದ. ಯಶಸ್ವಿಯೂ ಆಗಿದ್ದ. ಇದೆಲ್ಲ
ಶಾಂತಲಾರವರ ಸಹೃದಯತೆಯಿಂದ ನೆರವೇರಬೇಕೆಂದು
ಇನ್ನಿಲ್ಲದಂತೆ ಕೇಳಿಕೊಂಡಿದ್ದನು. ವಾಸುವಿನ ಅಣ್ಣ ಮತ್ತು ಶೃತಿ,
ಹಾಗು ವಾಸು ಮತ್ತು ಸುಮತಿಯ ಜೋಡಿ ಈ ಕೊರೋನಾ
ಸಮಯದಲ್ಲಿ ಯಾವುದೇ ದುಂದುವೆಚ್ಚವಿಲ್ಲದಂತೆ
ದೇವಸ್ಥಾನವೊಂದರಲ್ಲಿ ಹಾರ ಬದಲಿಸಿಕೊಂಡು ಪತಿಪತ್ನಿಯರಾಗಿ,

ತಮ್ಮ ಮನಸ್ಸಿನ ಚಿಂತೆಯ ಭಾರವನ್ನೂ ಇಳಿಸಿಕೊಂಡು, ತಂದೆ
ತಾಯಿಯರ ಮನಸ್ಸಿನ ಮಹಾ ಚಿಂತೆಯನ್ನು ಯಾವುದೇ
ಅಡ್ಡದಾರಿ ಹಿಡಿಯದೆ ಇಳಿಸಿದ್ದರು ಎಂಬಲ್ಲಿಗೆ ಈ ಕತೆ ಮುಕ್ತಾಯವು.